ಮಹಾ'ನದಿ ನೀರೂ ಉಪ್ಪುಪ್ಪೇ'

ಮಹಾ'ನದಿ ನೀರೂ ಉಪ್ಪುಪ್ಪೇ'
Updated on

ಕಥೆಯ ವಿಷಯದಲ್ಲಿ 'ಮಹಾನದಿ'ಯ ಮೂಲ ಹುಡುಕುತ್ತಾ ಹೊರಟರೆ ಹಾದಿ 80ರ ದಶಕಕ್ಕೆ ಹೋಗಬಹುದು. ಜೊತೆಗೆ ಇಂಥ ಚಿತ್ರ ಮಾಡಿದರೆ ಹೆಚ್ಚಿನ ಸಬ್ಸಿಡಿ, ಪ್ರಶಸ್ತಿಯ ಜೊತೆ ನಮ್ಮದು ಸದಭಿರುಚಿಯ ಚಿತ್ರ ಎಂದು ಹೇಳಿಕೊಳ್ಳುವ ಅವಕಾಶವೂ ಸಿಗುತ್ತದೆ ಎನ್ನುವ ಮನೋಭಾವವೂ ಕಾಣಬಹುದು. ಹಾಗಾಗಿ, ಉದ್ದೇಶ, ಕಥೆ, ಪ್ರಯತ್ನ ಎಲ್ಲದರಲ್ಲೂ ಹೆಚ್ಚು ಅಂಕಗಳಿಸಿದರೂ, ಇಂದಿನ ಪ್ರೇಕ್ಷಕರ ಅಭಿರುಚಿಯ ಲೆಕ್ಕದಲ್ಲಿ ನೋಡಿದರೆ ಕೃಷ್ಣಪ್ಪ ಉಪ್ಪೂರು ನಿರ್ದೇಶನದ ಮಹಾನದಿ ನೀರೂ ಉಪ್ಪುಪ್ಪೇ ಎನಿಸುವ ಸಾಧ್ಯತೆಯಿದೆ. ಹಾಗಾಗಿ ಮಹಾನದಿ ಮುಖ್ಯವಾಹಿನಿಯಲ್ಲಿ ಹರಿಯುವ ಹಾದಿಯಲ್ಲಿ ಹಲವಾರು ತೊಡಕುಗಳು.
ಮಹಾನದಿಯ ಕಥೆ ಹಿರಾಕುಡ್ ಅಣೆಕಟ್ಟಿನಷ್ಟೇ ವಿಸ್ತಾರವಾದದ್ದು. ನಮ್ಮ ಕರಾವಳಿ ತೀರದಲ್ಲಿ ವಾಸಿಸುವ ಬೆಸ್ತರ ಹುಡುಗಿಗೆ ಅರೆಕಾಸಿಗೂ ಪರದಾಡುವ ನಮ್ಮೂರ ಹುಡುಗರಿಗಿಂತ ಬಾಂಬೆ ಹುಡುಗರೇ ವಾಸಿ ಎನಿಸುತ್ತದೆ. ಹೇಳಿ, ಕೇಳಿ ಅದು ಮೀನುಗಾರಿಕೆ ನಿಷೇಧಿತ ಪ್ರದೇಶ ಅಲ್ಲವಾದ್ದರಿಂದ ಒಂದಿಬ್ಬರು ಲೋಕಲ್ ಹುಡುಗರು ಆಕೆಗೆ ಬಲೆ ಬೀಸುತ್ತಾರೆ. ಆದರೆ, ಚಿಕ್ಕಂದಿನಲ್ಲಿ ಜಾತ್ರೆಯಲ್ಲಿ ನೋಡಿದ 'ಡಬ್ಬಾ ಸಿನಿಮಾ'ದಲ್ಲಿ 'ಬಾಂಬೆ ಆಡ್ಸೋನು' ತೋರಿಸಿದ ಮಾಯಾನಗರಿ ನೋಡಿ, ಬಾಂಬೆ ಮೋಡಿಗೊಳಗಾಗಿರುವ ಕರಾವಳಿ ಕನ್ಯೆ,
ಮದುವೆಯಾಗೋಕೆ ನಂಗೆ ನನಗೆ ಮುಂಬೈ 'ಬಾಯ್‌' ಬೇಕು ಎನ್ನುತ್ತಾಳೆ. ಅಪ್ಪ, ಅಮ್ಮ ಅವಳ ಆಸೆಗೆ ಒಪ್ಪಿ ಬಾಂಬೆ ಹುಡುಗನ ಜೊತೆ ಮದುವೆ ಮಾಡಿ ಕಳಿಸುತ್ತಾರೆ. ಬಾಂಬೆ ಮಿಠಾಯಿ ಬೆನ್ನುಹತ್ತಿದ ಮಹಾನದಿ ಮುಂಬೈ ಎಂಬ ಸಾಗರ ಸೇರುತ್ತದೆ. ಅಲ್ಲಿ ಬಾಂಬೆ ಮಿಠಾಯಿಯ ನಿಜವಾದ ಬಣ್ಣ ಅರಿವಾಗತೊಡಗಿ, ಅವಳ ಮುಂಬೈ ಆಸೆ ಕೂಡ ಕ್ರಮೇಣ ಥೇಟು ಬಾಂಬೆ ಮಿಠಾಯಿಯಂತೇ ಕರಗತೊಡಗುತ್ತದೆ. ಮುಂಬೈ ಬಾಯ್‌ನ ಆಸೆಗೆ ಬಿದ್ದ ಹುಡುಗಿ ಮುಂಬೈನ 'ಭಾಯ್‌'ಗಳ ದುಷ್ಕೃತ್ಯಗಳಿಗೂ ಸಾಕ್ಷಿಯಾಗುತ್ತಾಳೆ. ಅಂಡರ್‌ವರ್ಲ್ಡ್, ವೇಶ್ಯಾವಾಟಿಕೆಗಳನ್ನು ನೋಡಿ ದಂಗಾಗುವ ಆಕೆ ಅದನ್ನು ಪ್ರತಿಭಟಿಸುವ ಪ್ರಯತ್ನ ಮಾಡುತ್ತಾಳೆ. ಗಂಡ ಮುಂಬೈನಂಥ ಊರಲ್ಲಿ 'ಬದುಕುವುದು ಹೇಗೆ' ಎಂದು ಬುದ್ಧಿವಾದ ಹೇಳುತ್ತಾನೆ.
ಆದರೆ ಮುಂಬೈ ಮಾಫಿಯಾದಲ್ಲಿ ಸಿಕ್ಕು ಅವನಿಗೆ ಗುಂಡೇಟು ಬಿದ್ದು ಬದುಕುವುದೇ ಕಷ್ಟ ಎಂದಾದಾಗ ಹಣಕ್ಕಾಗಿ ಪರದಾಡುವ ನಾಯಕಿ ಪಡಬಾರದ ಕಷ್ಟ ಪಡುತ್ತಾಳೆ. ಕೊನೆಗೆ, ನಮ್ಮೂರೇ ನಮಗೆ ಮೇಲು ಎಂದುಕೊಂಡು ವಾಪಸ್ಸು ಊರು ಸೇರಿದರೂ, ಮುಂಬೈ ಮಾಯೆ, ಅಷ್ಟು ಸುಲಭವಾಗಿ ಬಿಡುವುದಿಲ್ಲ ಎನ್ನುವಂತೆ ವಿಲನ್ ರೂಪದಲ್ಲಿ ಇಲ್ಲಿಗೂ ಹುಡುಕಿಕೊಂಡು ಬರುತ್ತದೆ. ಅವನನ್ನು ಕೊಂದು, ಮಹಾನದಿ ಹರಿದು ಸಮುದ್ರದ ಬದಲು ಜೈಲಿಗೆ ಸೇರಿದರೂ ಪಾರಾಗಿ ಬರುತ್ತದೆ ಎಂಬಲ್ಲಿಗೆ ನದಿಯ ಪಯಣಕ್ಕೊಂದು ಕೊನೆ. ಇಂದಿನ ಪ್ರೇಕ್ಷಕರಿಗೆ ಇದು ಹಳೆಯ ಕಾಲದ, ನೀರಸ ಕಥೆ ಎನಿಸಿದರೂ, ಇಂಥದೊಂದು 'ಸರಳ ಸುಂದರ ಸಾಮಾಜಿಕ' ಕಥೆಯನ್ನಿಟ್ಟುಕೊಂಡ ಮಹಾನದಿಯನ್ನು ಕೊನೆಯವರೆಗೂ 'ನೋಡುವಂತೆ' ಮಾಡಿರುವುದು ಛಾಯಾಗ್ರಾಹಕ ಸುಂದರನಾಥ್ ಸುವರ್ಣ. ಸಮುದ್ರದ ತೀರದಲ್ಲಿ ಕಪ್ಪೆಚಿಪ್ಪುಗಳು ಮಾತ್ರ ಸಿಗುತ್ತವೆ, ಮುತ್ತು ಬೇಕೆಂದರೆ ಆಳಕ್ಕೆ ಹೋಗಬೇಕು ಎನ್ನುತ್ತಾರೆ. ಆದರೆ ಸಮುದ್ರದ ತೀರದಲ್ಲೇ ಮುತ್ತಿನಂಥ ಫ್ರೇಮ್‌ಗಳನ್ನು ಜೋಡಿಸಿರುವ ಸುವರ್ಣ, ಇಡೀ ಮಹಾನದೀತೀರದಲ್ಲ್ಲಿ ಛಾಯಾಗ್ರಹಣವೇ ಅತ್ಯಂತ ಫಲವತ್ತಾದ ಪ್ರದೇಶ ಎನಿಸುವಂತೆ ಮಾಡಿದ್ದಾರೆ. ನೀಲ್ ಸಂಗೀತದ ಜುಳು ಜುಳು ನಿನಾದವೂ ಕೇಳುವಂತಿದೆ.
ಮಹಾನದಿ ಕೂಡ ಒಂಥರಾ 'ಗಂಡ ಹೆಂಡತಿ'ಯರ ಚಿತ್ರ ಆದರೂ ಆ ಥರಾ ಅಲ್ಲ. ಹಾಗಾಗಿ, ಸ್ಕೋಪ್ ಇರುವ ಪಾತ್ರವಾದರೂ ಸಂಜನಾ ಅವರದ್ದು ಪಾತ್ರವನ್ನು ಮೀರಿದ ಅಭಿನಯ. ಹಾಗಾಗಿ, ಬೆಸ್ತರ ಅಪಿಯರೆನ್ಸ್‌ನಲ್ಲಿದ್ದರೂ ಅವರದ್ದು ಬೆಸ್ಟ್ ಅಪಿಯರೆನ್ಸ್ ಎನ್ನುವುದು ಕಷ್ಟ. ಎಲ್ಲೂ ಮಿತಿ ಮೀರದೆ ಸಂಯಮ ತೋರಿರುವ ದಿಲೀಪ್‌ರಾಜ್ ಆದರೂ ಸಂಜನಾಗೆ ಸ್ಫೂರ್ತಿ ಆಗಬಹುದಿತ್ತು. ರಂಗಾಯಣ ರಘು ನಂಬರ್ ಗೇಮ್‌ನಲ್ಲಿ ಅಲ್ಲಲ್ಲಿ ಗೆದ್ದಿದ್ದಾರೆ. ಹಿರಿಯಜ್ಜನಾಗಿ ಲೋಕನಾಥ್ ಮಹಾನದಿಗೆ ಆಸರೆಯಾಗಿದ್ದಾರೆ. ಆದರೆ, ಕಾಶಿ, ಶೋಭರಾಜ್ ಪ್ರತಿಭೆಯ ಸರಿಯಾದ ಬಳಕೆಯಾಗಿಲ್ಲ. ಒಂದು ದೃಶ್ಯಕ್ಕೆ ಸತ್ಯಜಿತ್ ಅವರಂಥ ನಟ ಬೇಕಿತ್ತಾ ಎಂಬ ಪ್ರಶ್ನೆಯೂ ಕೇಳಬೇಕಾದ್ದೆ.          

- ಹರಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com