'ಕಲ್ಲು' ಸಕ್ಕರೆ

ನಮ್ಮ ಪ್ರೇಕ್ಷಕರದ್ದು ಉಪ್ಪು ಹುಳಿ ಖಾರ ತಿಂದ ದೇಹ ನಿಜ. ಫಾರ್ ಎ ಛೇಂಜ್ ಅವರಿಗೆ ಸಕ್ಕರೆ ಕೊಡೋದು ಒಳ್ಳೆಯದೇ. ಆದರೆ ಹಂಗಂತ...
'ಕಲ್ಲು' ಸಕ್ಕರೆ
Updated on: 

ನಮ್ಮ ಪ್ರೇಕ್ಷಕರದ್ದು ಉಪ್ಪು ಹುಳಿ ಖಾರ ತಿಂದ ದೇಹ ನಿಜ. ಫಾರ್ ಎ ಛೇಂಜ್ ಅವರಿಗೆ ಸಕ್ಕರೆ ಕೊಡೋದು ಒಳ್ಳೆಯದೇ. ಆದರೆ ಹಂಗಂತ ತೀರಾ ಡಯಾಬಿಟಿಸ್ ರೋಗಿಗಳಿಗೆ ಕೊಡುವಂಥ ಸಪ್ಪೆ ಊಟ ಕೊಟ್ಟರೆ ಹೇಗೆ? ಎಂಬ ಪ್ರಶ್ನೆ ಮೂಡುವುದು ಅಭಯ ಸಿಂಹ ನಿರ್ದೇಶನದ 'ಸಕ್ಕರೆ' ನೋಡಿದಾಗ. ಹಾಗಾಗಿ, ಗುಬ್ಬಚ್ಚಿಗಳು, ಶಿಕಾರಿಯಂಥ ಆರ್ಟ್ ಸಿನಿಮಾಗಳನ್ನು ಮಾಡಿದ್ದ ಅಭಯ ಸಿಂಹ ಅವರಿಗೆ ಸಕ್ಕರೆಯಂಥ ಕಮರ್ಷಿಯಲ್ ಸಿನಿಮಾ ಮಾಡುವ ಅವಕಾಶ ಸಿಕ್ಕರೆ  ಹೇಗಿರುತ್ತದೆ ಎಂಬ ಕುತೂಹಲಕ್ಕೆ ತಣ್ಣೀರಿನ ಉತ್ತರ ಸಿಕ್ಕಿದೆ. ಆರ್ಟ್ ಸಿನಿಮಾ ಮಾಡಿದವರಿಗೆ ಫೀಲ್ಡ್ ಬದಲಾಯಿಸುವಾಗ ಒಂದು ಆತಂಕ ಸಹಜ. ನಿರ್ದೇಶಕ ಅಭಯ ಸಿಂಹ ಅವರಿಗೂ ಆ ಭಯ ಕಾಡಿದಂತಿದೆ.
ಅದು ಹೋಗಲಿ, 'ಸಕ್ಕರೆ' ಅನ್ನೋದು ಗಣೇಶ್ ಸಿನಿಮಾ ಎಂದ ಮೇಲೆ ಒಂದೆರಡು ಒಳ್ಳೆಯ ಡೈಲಾಗ್ ಇರುವುದಂತೂ ಖರೆ ಎಂದುಕೊಂಡವರಿಗೂ ನಿರಾಸೆ. ಹಾಗಾಗಿ, 'ಅಲ್ರೀ, .ಯಾಕ್ರೀ, ಏನ್ರೀ' ಎನ್ನುತ್ತಲೇ ಮಾತನಾಡುವ ಗಣೇಶ್ರ ಮಾತುಗಳಲ್ಲೂ ತೀರಾ ಕಡಿಮೆ 'ಕ್ಯಾಲರಿ'. ಕಾಮಿಡಿ ಹೋಗಲಿ, 'ವಿನ್ನಿ, ವಿನ್ನರ್, ಬಾಜಿಗರ್' ಎನ್ನುತ್ತ 'ಲೆವೆಲ್' ತೋರಿಸುವ ಗಣೇಶ್ರ ರೊಮ್ಯಾಂಟಿಕ್ ಸಂಭಾಷಣೆಯಲ್ಲೂ ಲೋ ಶುಗರ್ 'ಲೆವೆಲ್'. ಗಣೇಶ್ ಚಿತ್ರದಲ್ಲಿ ಕಥೆ ಏನೇ ಇರಲಿ, ಮನರಂಜನೆ 'ಉಚಿತ' ಎಂದುಕೊಂಡವರಿಗೆ ಸಿಕ್ಕಿರುವುದು ಶುಗರ್ 'ಫ್ರೀ' ಸಿನಿಮಾ. ಇದು ರಿಮೇಕ್ ಅಲ್ಲ, ಅಶ್ಲೀಲತೆಯ ಹಾವಳಿಯಿಲ್ಲ ಎಂಬುದೇನೋ ನಿಜ. ಆದರೆ, ಒಂದು ಇಂಟರೆಸ್ಟಿಂಗ್ ಸಿನಿಮಾಗೆ ಬೇಕಾದ 'ಕಂಟೆಂಟ್' ಸಕ್ಕರೆಯಲ್ಲಿಲ್ಲ ಎಂಬುದೂ ನಿಜ.
ಚಿತ್ರದ ನಾಯಕಿ ತನ್ನನ್ನು ತಾನು ಕೊಂದುಕೊಳ್ಳಲು ಪ್ರಯತ್ನಿಸುವವಳು. ಹಾಗಾಗಿ ಅವಳು 'ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ' ಎನ್ನುವಂಥ ಕೊಲ್ಲು ಸಕ್ಕರೆ ಅಲ್ಲ. ಮನರಂಜನೆಗೆ ಕಲ್ಲು ಬಿದ್ದದ್ದನ್ನ ನೋಡಿದ ಪ್ರೇಕ್ಷಕ ಇದನ್ನು 'ಕಲ್ಲು' ಸಕ್ಕರೆ ಎಂದುಕೊಂಡರೆ ಅಭ್ಯಂತರವಿಲ್ಲ. ನಂಗೆ ಇಬ್ಬಿಬ್ರು ಹುಡುಗರು ಮೋಸ ಮಾಡಿದ್ರು ಅಂತ ನಾಯಕಿ ಆಗಾಗ ಅಳುತ್ತಿದ್ದರೆ, ಗಣೇಶ್, ಸುರೇಶ್ ಮತ್ತು ಅಭಯ ಸಿಂಹ ಅವರಲ್ಲಿ ಆ ಇಬ್ಬರು ಯಾರು ಎನ್ನುವುದು ಪ್ರೇಕ್ಷಕನ ಕುತೂಹಲ.
ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳ ಹಿನ್ನೆಲೆಯಲ್ಲಿ ಕಾಣಿಸುವ ಚಿತ್ರದ ಟೈಟಲ್ ಕಾರ್ಡ್ ಕುತೂಹಲ ಹುಟ್ಟಿಸುತ್ತದೆ. ಇಬ್ಬರು ಬಾಯ್ ಫ್ರೆಂಡ್ಗಳು ಕೈ ಕೊಟ್ರು ಎಂದು ಬೇಸರಿಸಿಕೊಂಡ ಹುಡುಗಿ ಬ್ರೇಕ್ ಅಪ್ ಆದಮೇಲೆ ಟೇಕ್ ಎ ಬ್ರೇಕ್ ಎನ್ನುತ್ತಾ ಮಡಿಕೇರಿಗೆ ಬರುತ್ತಾಳೆ. ನಂತರ, ಇಬ್ಬರ ಜೊತೆಗಿನ ಆಕೆಯ ಜಗಳ ಮೂರನೆಯವನಿಗೆ ಲಾಭ ಎಂಬಂತೆ ನಾಯಕನ ಎಂಟ್ರಿ. ಮೊದಲಾರ್ಧದಲ್ಲಿ ನಾಯಕ ವಿನ್ನಿ, ನಾಯಕಿ ನೇಹಾ ಜೊತೆ ಮಾತಿನ ಸನ್ನಿವೇಶಗಳಲ್ಲಿ ಎಲ್ಲವೂ 'ವಿನ್ನಿ'ಮಯ. ಉಳಿದ ಭಾಗ ಅವರಿಬ್ಬರ ಹೃದಯ ವಿನಿಮಯಕ್ಕೆ ವಿನಿಯೋಗವಾಗಿದೆ. ನಾಯಕಿಯ ಭಗ್ನಪ್ರೇಮ ಕಾವ್ಯ ಕೇಳಿ 'ಯಾರೇ ನೀನು ಚೆಲುವೆ, ನಿನ್ನಷ್ಟಕ್ಕೆ ನೀನೇ ಏಕೆ ಅಳುವೆ' ಎನ್ನುತ್ತ ಅವಳನ್ನು ಸಮಾಧಾನಿಸುತ್ತಾನೆ. ಅದರ ಜೊತೆಗೆ 'ನಾನಿದ್ದೆ ನಿನ್ನ ಕಾವ್ಯದಲ್ಲಿ' ಎಂದು ಕಥೆ ಕಟ್ಟುತ್ತಾನೆ. ಕೊನೆಗೆ ಇವನು ಹೇಳಿದ್ದು ಸುಳ್ಳು ಎಂದು ಗೊತ್ತಾಗಿ ಒಂದಿಷ್ಟು ಮುನಿಸಿಕೊಂಡ ನಂತರ ಎರಡು ಸಾಕು, ಮೂರನೇಯವನು ಬೇಕು ಎನ್ನುತ್ತಾ ಮೂರಕ್ಕೆ ಮುಕ್ತಾಯ ಹೇಳುತ್ತಾಳೆ ನಾಯಕಿ.  ಪ್ರೇಮದ 'ಅಮಲಿನಲ್ಲಿ' ಬಿದ್ದ ಪಾತ್ರವಾದರೂ ಗಣೇಶ್ರ ಅಭಿನಯದಲ್ಲಿ 'ಬ್ರೌನ್ ಶುಗರ್'ನ ಕಿಕ್ಕು ನಿರೀಕ್ಷಿಸುವಂತಿಲ್ಲ. ಇಲ್ಲೇನಿದ್ದರೂ ಕೇವಲ ಮೆದುಳಿಗೆ ಹುಳ ಬಿಡುವ ಬ್ರೈನ್ ಶುಗರ್ ಮಾತ್ರ ಇದೆ. ಸಕ್ಕರೆ ಗೊಂಬೆ ದೀಪಾ ಸನ್ನಿಧಿ 'ಸ್ವೀಟ್' 16 ಪಾತ್ರದಲ್ಲಿ ಸಪ್ಪೆ. ಇಳಿವಯಸ್ಸಿನಲ್ಲಿ ಒಂದಿಷ್ಟು 'ನಾಟಿ' ಆಗೋಣ ಎನ್ನುವ ಅನಂತ್ನಾಗ್, ವಿನಯಾ ಪ್ರಸಾದ್ರ ಪ್ರೀತಿಯ ನಿತ್ಯೋತ್ಸವವಾಗಲೀ, ಕೋಟಿ ವಿದ್ಯೆಗಳಲ್ಲಿ 'ನಾಟಿ' ವಿದ್ಯೆಯೇ ಮೇಲು ಎನ್ನುವ ಅಚ್ಯುತ್ ಕುಮಾರ್ ಅವರಾಗಲೀ ಸಿನಿಮಾದ ಸಹಾಯಕ್ಕೆ ಬರುವುದಿಲ್ಲ. ವಿಕ್ರಮ್ ಛಾಯಾಗ್ರಹಣದಲ್ಲೂ ಸಖತ್ ಸ್ವೀಟ್ ಮಗಾ ಎನ್ನುವಂಥ ಅಂಶಗಳು ಕಡಿಮೆ. ಹರಿಕೃಷ್ಣ ಸಂಗೀತದ ಹಾಡುಗಳು ಮಾತ್ರ ಪ್ರೇಕ್ಷಕನನ್ನು ಬದುಕಿಸಿದರೂ 'ಹೆಂಗೊ ಇದ್ವಿ ನಾವು ತಕ್ಕಮಟ್ಟಿಗೆ, ಸುತ್ತಿಗೇಲಿ ಹೊಡಕೊಂಡ್ವಿ ಹೆಲ್ಮೆಟ್ಟಿಗೆ' ಎಂಬ ಹಾಡು ಮಾತ್ರ ಸಿನಿಮಾ ಮುಗಿದ ಮೇಲೆ ಇನ್ನೂ ಹೆಚ್ಚು ಕಾಡುತ್ತದೆ. ಅಂದಹಾಗೆ, ಸಣ್ಣಪುಟ್ಟ ವಿಷಯಕ್ಕೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬ ಸಂದೇಶ ಚಿತ್ರದಲ್ಲಿದೆ. ಪ್ರೇಕ್ಷಕ ಕೂಡ ಅದನ್ನೇ ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳಬೇಕು.

- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com