ಪಾಪಿ ಸಿನಿಮಾಗಳು 'ಚಿರಾಯು'!

ಪಾಪಿ ಸಿನಿಮಾಗಳು 'ಚಿರಾಯು'! 'ಒರಟ ಐ ಲವ್ ಯು' ಸಿನೆಮಾ..
ಚಿರಾಯು ಸಿನೆಮಾ ಸ್ಟಿಲ್
ಚಿರಾಯು ಸಿನೆಮಾ ಸ್ಟಿಲ್

'ಒರಟ ಐ ಲವ್ ಯು' ಸಿನೆಮಾದ ನಾಯಕ ನಟ ಪ್ರಶಾಂತ್ ನಟನಾಗಿ ನಿರ್ದೇಶಕನಾಗಿ, ಕಥೆ-ಚಿತ್ರಕಥೆ-ಸಂಭಾಷಣಕಾರರಾಗಿ  ಈಗ ಚಿರಾಯುವಾಗಿದ್ದಾರೆ. ಸಿನೆಮಾ ನೋಡಿದ ಮೇಲೆ ಕೊನೆಗೆ ಉಳಿಯುವ ಪ್ರಶ್ನೆ ಕನ್ನಡ ಚಿತ್ರೋದ್ಯಮದಲ್ಲಿ ಈ ರೀತಿಯ ಸತ್ವವಿಲ್ಲದ ಸಿನೆಮಾದ ಕಥೆಗಳೇ ಕೊನೆಗೆ ಚಿರಾಯುವಾಗಿ ಉಳಿಯುವುದಾ ಎಂದು?

ಓಂ ಪ್ರಕಾಶ್ ರಾವ್ ಪ್ರಖ್ಯಾತ ನಿರ್ದೇಶಕ. ಅವರ ಸಿನೆಮಾ ಮೊದಲ ದಿನವೇ ಸೂಪರ್ ಹಿಟ್ ಆಗುತ್ತದೆ. ಆಗ ಮಾಧ್ಯಮದವರು ಮುಂದಿನ ಸಿನೆಮಾ ಬಗ್ಗೆ ಪ್ರಶ್ನಿಸಿದಾಗ, ಯಾವುದಾದರೂ ಸಾಮಾನ್ಯನ ನೈಜ ಕಥಾನಕವನ್ನು ಸಿನೆಮಾ ಮಾಡಬೇಕೆಂದಿದ್ದೇನೆ ಎಂದು ಮಾಧ್ಯಮದವರಿಗೆ ಉತ್ತರಿಸುತ್ತಾರೆ. ಆಗ ಮನೆಗೆ ಬಂದು ಬೀಳುವ ಬಹುಸಂಖ್ಯಾತ ಸ್ಕ್ರಿಪ್ಟ್ ಗಳಲ್ಲಿ, ಓದುತ್ತಾ ಹೋಗುವ ಒಂದು ಕಥೆಯೇ ಚಿರಾಯು ಸಿನೆಮಾ. ಸಿನೆಮಾ ಪ್ರಾರಂಭವಾಗುವುದೇ ಚಿರಾಯು(ಒರಟ ಪ್ರಶಾಂತ್) ವಿನ ಒಂದು ಫೈಟ್ ನಿಂದ. ಇಲ್ಲಿಯೂ ಒರಟನಂತೆ ಕಾಣುವ ಚಿರಾಯುವನ್ನು ನಾಯಕ ನಟಿ(ಶುಭಾ ಪೂಂಜಾ) ಭೇಟಿ ಮಾಡುತ್ತಾಳೆ. ನಾಯಕಿ ಪ್ರೀತಿಸಿ, ಮನ ಒಲಿಸಿ ಚಿರಾಯುವನ್ನು ಒಲಿಸಿಕೊಳ್ಳುತ್ತಾಳೆ. ನಂತರ ಅವನನ್ನು ದೇವಸ್ಥಾನಕ್ಕೆ ಒಂಟಿಯಾಗಿ ಕರೆದೊಯ್ದು ಮತ್ತೊಂದು ಫೈಟ್ ನಂತರ ನಟಿ ಚಿರಾಯುವನ್ನು ಶೂಟ್ ಮಾಡುತ್ತಾಳೆ. ನಟಿಯನ್ನು ಮತ್ತಿನ್ಯಾರೋ ಶೂಟ್ ಮಾಡುತ್ತಾರೆ. ಆಗ ಓಂ ಪ್ರಕಾಶ್ ರಾವ್ ಓದುತ್ತಿದ್ದ ಸ್ಕ್ರಿಪ್ಟ್ ಅಂತ್ಯವಾಗುತ್ತದೆ. ಈ ಸ್ಕ್ರಿಪ್ಟ್ ಬರೆದವರನ್ನು ಹುಡುಕಿಕೊಂಡು ಬರುವ ನಿರ್ದೇಶಕನಿಗೆ ಕಥಾ ಪಾತ್ರವೇ (ಚಿರಾಯು) ಸಿಕ್ಕಿ ಕಥೆ ವಿವರಿಸುತ್ತಾನೆ. ಇಲ್ಲಿಯವರೆಗೂ ನಡೆದಿದ್ದು ದ್ವಿತೀಯಾರ್ಧ ಎಂದು, ತನ್ನ ಪೂರ್ವ ಕಥೆಯನ್ನು ಪ್ರಾರಂಭಿಸುತ್ತಾನೆ. ತುಂಬು ಕುಟುಂಬದಲ್ಲಿ ಬದುಕುತ್ತಿರುವ ಚಿರಾಯು, ಒಬ್ಬಳು ಯುವತಿಗೆ ಸಹಾಯ ಮಾಡಲು ಹೋಗಿ ಭದ್ರಿ ಎಂಬುವ ಡಾನ್ ನ ತಮ್ಮ ಮುನಿಗೆ ಚೆನ್ನಾಗಿ ಹೊಡೆದು ಕೊನೆಗೆ ತನ್ನ ಕುಟುಂಬದವರನ್ನು ಕಳೆದುಕೊಂಡಿರುತ್ತಾನೆ. ತಮ್ಮ ತಮ್ಮ ಕೋಮಾಗೆ ಹೋಗುವುದರಿಂದ ಚಿರಾಯುವಿನ ವಿರದ್ಧ ದ್ವೇಷ ಸಾಧಿಸಲು ಭದ್ರಿ ತನ್ನ ಪಿಎ ಮಗಳಿಗೆ ಬೆದರಸಿ ಇವನ್ನು ಪ್ರೀಸಿಸುವಂತೆ ನಾಟಕ ಮಾಡಿಸಿ, ಇವನಿಗೆ ಗುಂಡು ಹಾರಿಸುವಂತೆ ಮಾಡಿಸುತ್ತಾನೆ. ಮುಂದೇನಾಗುತ್ತದೆ ಅದು ಕೈಮ್ಯಾಕ್ಸ್!

ನಾಯಕ ನಟನನ್ನು ನಾಯಕಿ ಏಕೆ ಶೂಟ್ ಮಾಡಿದಳು ಎಂಬ ಕುತೂಹಲದ ಎಳೆ ಬಿಟ್ಟರೆ ಚಲನಚಿತ್ರವನ್ನು ಎಷ್ಟು ಕೆಟ್ಟದಾಗಿ ಮಾಡಬಹುದೋ ಅಷ್ಟು ಕೆಟ್ಟದಾಗಿದೆ. ಸಂಭಾಷಣೆಯಂತೂ ಅತಿ ಅಸಂಬದ್ಧ ಹಾಗೂ ಕೆಲವು ಕಡೆ ಅಸಹ್ಯವಾಗಿದೆ. ನಾಯಕ ನಟ ನಾಯಕಿಗೆ ಪ್ರೀತಿ ಎಂಬುದರ ಬಗ್ಗೆ ಕೊಡುವ ವ್ಯಾಖ್ಯಾನ ಉಪೇಂದ್ರ 'ಎ' ಸಿನೆಮಾದಲ್ಲಿ ಕೊಡುವ ಭಾಷಣ ನೆನಪಿಸುತ್ತದೆ. ಆದರೆ ಅದರ ಅತಿ ಕೆಟ್ಟ-ಸವಕಲು ನಕಲು ಇದಾಗಿದೆ. ನಾಯಕಿಯ ಬಟ್ಟೆಯ ಮೇಲೆ ಪ್ರತಿಕ್ರಿಯಿಸಿ, ಇದರಿಂದಲೆ ಹೆಣ್ಣಿನ ಮೇಲೆ ನಡೆಯುವ  ಅಪರಾಧಗಳು ಹೆಚ್ಚುತ್ತಿರುವುದು ಎಂಬತಹ ಸಂಭಾಷಣೆಯಾಗಲಿ, ನಾಯಕ ನಟ ನಾಯಕಿಯ ಕೆನ್ನೆಗೆ ಹೊಡೆದಾಗ, ಗಂಡನಿಗೆ ಮಾತ್ರ ಹೆಣ್ಣಿಗೆ ಹೊಡೆಯುವ ಅಧಿಕಾರ ಇರುವುದು ಎಂದು ಶುಭ ಪೂಂಜಾ ಹೇಳುವ ಡೈಲಾಗ್ ಆಗಲಿ, ಗಂಡಸಿನ ಚವನಿಸ್ಟಿಕ್ ಮನೋಧರ್ಮವನ್ನು ಎತ್ತಿಹಿಡಿಯುವ ಚಾಳಿಯನ್ನು ಈ ಸಿನೆಮಾ ಮುಂದುವರೆಸುತ್ತದೆ. ಪ್ರಶಾಂತ್ ಆಗಲಿ, ಶುಭ ಪೂಂಜಾ ಆಗಲಿ ಅಥವಾ ಭದ್ರಿ ಪಾತ್ರದಲ್ಲಿ ಅವಿನಾಶ್ ಆಗಲಿ ಯಾರೂ ತಡೆದುಕೊಳ್ಳುವಂತಹ ಅಭಿನಯ ನೀಡಿಲ್ಲ. ಜಿ ಆರ್ ಶಂಕರ್ ಅವರ ಸಂಗೀತ ಹೆಚ್ಚು ಕಾಲ ಕಿವಿಯ ಮೇಲೆ ಉಳಿಯುವಂತಿಲ್ಲ. ಹಿನ್ನಲೆ ಸಂಗೀತದ ಅಬ್ಬರವೂ ಹೆಚ್ಚಾಗಿದೆ. ಮುಂದಿನ ಚಿತ್ರಕ್ಕೆ ನಿರ್ದೇಶಕರೇ ಸಂಗಿತವನ್ನೋ ನೀಡಬಹುದೇನೋ!

ಸಿನೆಮಾದಲ್ಲಿ ಕೊನೆಯ ದೃಶ್ಯ: ಚಿರಾಯು ಈ ರೌಡಿಸಂ ಇಲ್ಲಿಗೆ ಕೊನೆಗೊಳ್ಳಬೇಕೆಂದು ತನ್ನನು ಶೂಟ್ ಮಾಡಿಕೊಳ್ಳಲು ಹೊರಡುತ್ತಾನೆ. ರೌಡಿಸಂ ಕೊನೆಗೊಳ್ಳುತ್ತದೊ ಇಲ್ಲವೋ, ಈ ರೌಡಿಸಂ ಕುರಿತ ಹಳಸು ಚಿತ್ರಗಳು ಕೊನೆಗೊಳ್ಳದ ಹೊರತು ಕನ್ನಡ ಚಿತ್ರರಂಗಕ್ಕೆ ಶ್ರೇಯೋಭಿವೃದ್ಧಿಯ ಕಾಲ ಬರುವುದು ದೂರವೇ! ಆ ನಿಟ್ಟಿನಿಂದ ಸಿನೆಮಾ ಅಥವಾ ಮನರಂಜನೆ, ಕೊನೆಯ ಪಕ್ಷ ನಮ್ಮ ಸಮಾಜದ ಬಗ್ಗೆ ಕಲ್ಪನೆ ಇರದವರು ಸಿನೆಮಾ ಮಾಡುವುದರಿಂದ ದೂರ ಉಳಿಯುವುದು ಒಳಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com