ತಮ್ಮ ಕಾದಂಬರಿ ಆಧಾರಿತ ಪುಟ್ಟಣ್ಣ ಕಣಗಲ್ ನಿರ್ದೇಶನದ 'ನಾಗರಹಾವು' ಸಿನೆಮಾ ನೋಡಿದ್ದ ಕಾದಂಬರಿಕಾರ ತರಾಸು, ಇದು ನಾಗರಹಾವಲ್ಲ, ಕೆರೆಹಾವು ಎಂದು ಪ್ರತಿಕ್ರಿಯಿಸಿದ್ದು ಜನಜನಿತ. ಆದಾಗ್ಯೂ ನಾಗರಹಾವು ಸಿನೆಮಾ ಜನರ ಮಧ್ಯ ಉಳಿದುಬಿಟ್ಟದ್ದು ಈಗ ಇತಿಹಾಸ. ತರಾಸು ಏನಾದರು ನಾಗರ ಹಾವು ಚಿತ್ರದ ರಾಮಾಚಾರಿ(ವಿಷ್ಣುವರ್ಧನ್) ಪಾತ್ರದಿಂದ ಸ್ಪೂರ್ತಿ ಪಡೆದ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಸಿನೆಮಾ ನೋಡಿದ್ದರೆ, ಇದನ್ನು ಯಾವ ಸರೀಸೃಪಕ್ಕೆ ಹೋಲಿಸುತ್ತಿದ್ದರೋ! ಸದ್ಯದ ಪರಿಸ್ಥಿತಿಯಲ್ಲಿ ನಾಯಕ ನಟ ಸಿನೆಮಾದ ಡೈಲಾಗ್ ಒಂದರಲ್ಲಿ "ನಾವು ಕ್ಲಾಸ್ ಅಲ್ಲ ಮಾಸ್" ಎಂದು ಹೇಳುವಂತೆ, 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಸ್ವಲ್ಪ ಹಾಸ್ಯ, ಹೆಚ್ಚು ಆಕ್ಷನ್, ಸ್ವಲ್ಪ ಎಮೋಶನ್, ಹೆಚ್ಚು ಲವ್, ಸ್ವಲ್ಪ ಮ್ಯೂಸಿಕ್, ಹೆಚ್ಚು ಡೈಲಾಗ್ಸ್ ಇರುವ ಪಕ್ಕಾ ಮಾಸ್ ಮನರಂಜನಾ ಸಿನೆಮಾ.
ನಾಗರಹಾವು ಸಿನೆಮಾದ ನಾಯಕ ಪಾತ್ರ ರಾಮಾಚಾರಿ(ವಿಷ್ಣುವರ್ಧನ್) ಅವನನ್ನು ಆರಾಧಿಸುವ ಈ ನೂತನ ರಾಮಾಚಾರಿ (ಯಶ್), ಮೂಲ ರಾಮಾಚಾರಿಯ ಸಿಟ್ಟನ್ನು ತನ್ನಲ್ಲಿ ಅವಗಾಹಿಸಿಕೊಂಡಿರುತ್ತಾನೆ. ಅವನ ರೀತಿಯಲ್ಲೆ ಪರೀಕ್ಷೆಯಲ್ಲಿ ಕಾಪಿ ಹೊಡೆದು ಸಿಕ್ಕಿ ಬಿದ್ದು ಪ್ಯಾಂಟ್ ಬಿಚ್ಚುವ ಶಿಕ್ಷೆ ಪಡೆಯುತ್ತಾನೆ. ಆ ಸಿಟ್ಟು ಮತ್ತು ಈ ಘಟನೆ ಬಿಟ್ಟರೆ ಹಳೆಯ ರಾಮಚಾರಿಗೂ ಈ ರಾಮಾಚಾರಿಗೂ ಹೆಚ್ಚೇನೂ ಸಾಮ್ಯತೆ ಇಲ್ಲ. ಇವನ ಅಣ್ಣ ಬುದ್ಧಿವಂತ. ಓದಿನಲ್ಲಿ ಚುರುಕು. ಇವರ ಅಪ್ಪನಿಗೆ ಚುರುಕು ಮಗನ ಮೇಲೆ ವಿಶೇಷ ಪ್ರೀತಿ. ಒರಟ ಮಗನನ್ನು ಕಂಡರೆ ಪೊಲೀಸ್ ಠಾಣೆಯಲ್ಲಿ ದೂರು ಕೊಡುವಷ್ಟು ಕೋಪ. ರಾಮಾಚಾರಿಗೆ ದತ್ತು ಮತ್ತು ಚಿಕ್ಕಪ್ಪ ಆತ್ಮೀಯ ಗೆಳೆಯರು. ತಾನು ವಿರಳವಾಗಿ ಹೋಗುವ ಕಾಲೇಜಿನಲ್ಲಿ ಮೊದಲ ನೋಟದಲ್ಲೇ ನಾಯಕ ನಟಿಯನ್ನು(ರಾಧಿಕಾ ಪಂಡಿತ್) ನೋಡಿ ಲವ್ ಆಗುತ್ತದೆ. ಅವಳನ್ನು ರ್ಯಾಗಿಂಗ್ ನಿಂದ ತಪ್ಪಿಸಲು ಒಂದು ಫೈಟ್. ನಾಯಕಿ ತನ್ನ ಆತ್ಮೀಯ ಗೆಳೆಯ ದತ್ತುವಿನ ತಂಗಿ ಎಂದು ತಿಳಿದು ಕೊನೆಗೆ ಸ್ನೇಹವೇ ದೊಡ್ದದು ಎಂದು ಸುಮ್ಮನಾಗುತ್ತಾನೆ. ಆದರೆ ನಾಯಕಿ ಅಣ್ಣನನ್ನು ಒಪ್ಪಿಸಿ, ತನ್ನ ತಾಯಿಯನ್ನು(ಮಾಳವಿಕ) ಎದುರು ಹಾಕಿಕೊಂಡು ತನ್ನ ಪ್ರೀತಿಯನ್ನು ಸಮರ್ಪಿಸುತ್ತಾಳೆ. ರಾಮಾಚಾರಿ 'ಬಾಗಿನ' ಕೊಟ್ಟು ಹುಡುಗಿಯ ಹತ್ತಿರ ಪ್ರೀತಿಯನ್ನು ಸಂವೇದಿಸಿಕೊಳ್ಳುತ್ತಾನೆ. ಇವನು ರಾಮಾಚಾರಿಯಾದ ಮೇಲೆ ನಾಯಕಿಯನ್ನು "ಮಾರ್ಗರೆಟ್" ಎಂದು ನಾಮಕರಣ ಮಾಡುತ್ತಾನೆ. ಇವರ ಮಧುರ ಪ್ರೀತಿಯ ನವಿರು ಕ್ಷಣಗಳು, ಹಾಡುಗಳೊಂದಿಗೆ ಮುಂದುವರೆಯುವ ಕಥೆ, ರಾಮಾಚಾರಿಯ 'ಮಿಸ್ ಕಮ್ಮ್ಯುನಿಕೇಶನ್' ನಿಂದ ಇಬ್ಬರಲ್ಲೂ ವಿರಸ ಉಂಟಾಗುತ್ತದೆ. ಈ ಮಧ್ಯದಲ್ಲಿ ರಾಮಾಚಾರಿಯ ಅಣ್ಣನನ್ನು ಓದಿಸಿದ್ದ, ತನ್ನ ಕುಟುಂಬ ಗೆಳೆಯನ(ಶ್ರೀನಾಥ್) ಮಗಳನ್ನು ತನ್ನ ಅಣ್ಣ ವರಿಸಬೇಕಿರುತ್ತದೆ. ಆದರೆ ಅಣ್ಣ ಓಡಿ ಹೋಗುತ್ತಾನೆ. ಇದರಿಂದ ನೊಂದ ಅಪ್ಪ ಆಸ್ಪತ್ರೆ ಸೇರುತ್ತಾನೆ. ಈ ಮಧ್ಯೆದಲ್ಲಿ ಮಾರ್ಗರೆಟ್ ಳ ಹುಟ್ಟು ಹಬ್ಬಕ್ಕೆ ವಿಶ್ ಮಾಡುವುದನ್ನು ಮರೆಯುತ್ತಾನೆ. ಇವರಿಂದ ವಿರಸ ವಿಪರೀತಗೊಂಡು, ಸಂಬಂಧ ಕಡಿತಗೊಳ್ಳುತ್ತದೆ. ಮಾರ್ಗರೆಟ್ ಮತ್ತೆ ದಿವ್ಯ(ಮೂಲ ಹೆಸರು) ಆಗಿಬಿಡುತ್ತಾಳೆ. ಆಗ ತನ್ನ ಅಣ್ಣ ವರಿಸಬೇಕಿದ್ದ ಹುಡುಗಿಯನ್ನು ತನ್ನ ತಂದೆಯ(ಈಗ ಸಂಬಂಧ ಉತ್ತಮಗೊಂಡಿರುತ್ತದೆ) ಒತ್ತಡದಿಂದ ರಾಮಾಚಾರಿ ವರಿಸಲು ಒಪ್ಪಿಕೊಳ್ಳುತ್ತಾನೆ. ಅಲ್ಲಿ ಮಾರ್ಗರೆಟ್ ಗೂ ಅಮೇರಿಕಾದ ಸಂಬಂಧ(ಧ್ಯಾನ್) ಒಲಿದು ಬರುತ್ತದೆ. ಚಿತ್ರದುರ್ಗದಲ್ಲಿ ಎರಡೂ ಸಂಬಂಧಗಳ ಮದುವೆ ಒಂದೇ ದಿನ ನಿಗದಿಯಾಗುತ್ತದೆ. ಮುಂದೇನಾಗುತ್ತದೆ?
ಕಥೆಯಲ್ಲಿ ಯಾವುದೇ ಹೊಸತನ ಇಲ್ಲದೆ ಹೋದರು, ಪ್ರತಿಯೊಬ್ಬರ ಉತ್ತಮ ಅಭಿನಯ, ಅದ್ಭುತ ಅಲ್ಲದಿದ್ದರೂ ಚುರುಕು ಸಂಭಾಷಣೆ, ಬಿಗಿ ನಿರೂಪಣೆ, ಡೀಸೆಂಟ್ ಎನ್ನಬಹುದಾದ ಸಂಗೀತ, ಪಡ್ದೆಗಳಿಗೆ ರಸಸ್ವಾದ ನೀಡುವ ಫೈಟ್ಗಳು, ಪ್ರಿಡಿಕ್ಟೆಬಲ್ ಆದರೂ ಹಲವಾರು ತಿರುವುಗಳು ಎಲ್ಲೂ ಬೇಸರಿಸದೆ ಸಿನೆಮಾವನ್ನು ಸರಾಗವಾಗಿ ನೋಡುವಂತೆ ಮಾಡುತ್ತದೆ. ಯಶ್ ತಮ್ಮ ಅಭಿನಯವನ್ನು ಇನ್ನಷ್ಟು ಪಕ್ವ ಮಾಡಿಕೊಂಡಿದ್ದರೆ. ರಾಧಿಕಾ ಪಂಡಿತ್ ತಮ್ಮ ಸಹಜ ಅಭಿನಯದಿಂದ, ಕಣ್ಣಿನ ಭಾಷೆಯಿಂದ ಗೆಲ್ಲುತ್ತಾರೆ. ರಾಮಾಚಾರಿ ಅಪ್ಪನ ಪಾತ್ರದಲ್ಲಿ ಅಚ್ಯುತ್ ಕುಮಾರ್ ಅವರದ್ದು ಅತ್ಯುತ್ತಮ ಅಭಿನಯ. ಅಪ್ಪ ಮತ್ತು ಮಗನ ಸಂಬಂಧದ ಕೆಲವು ದೃಶ್ಯಗಳು ಪ್ರೇಕ್ಷಕರನ್ನು ಭಾವಪರವಶತೆಯಲ್ಲಿ ಮುಳುಗಿಸುತ್ತವೆ. ಮಾರ್ಗರೆಟ್ ತಾಯಿಯ ಪಾತ್ರದಲ್ಲಿ ಮಾಳವಿಕ ಅವರದ್ದು ಕೂಡ ಒಳ್ಳೆಯ ಅಭಿನಯ. ಕೊನೆಯಲ್ಲಿ ಬರುವ ಸಾಧುಕೋಕಿಲಾ ಅವರ ಹಾಸ್ಯ ದೃಶ್ಯಾವಳಿ ಕೂಡ ಜನರಲ್ಲಿ ಮಂದಹಾಸ ಮೂಡಿಸುತ್ತದೆ. ಹರಿಕೃಷ್ಣ ಅವರ ಸಂಗೀತ ಕೂಡ ಚಲನಚಿತ್ರಕ್ಕೆ ಮಿಳಿತವಾಗಿದೆ. ಹಿನ್ನಲೆಯಲ್ಲಿ ಆಗಾಗ ಮೂಡುವ ನಾಗರಹಾವಿನ ಹಿನ್ನಲೆ ಸಂಗೀತ ಹಿತವಾಗಿದೆ. ಒಟ್ಟಿನಲ್ಲಿ ಸಂತೋಷ್ ಆನಂದರಾಮ್ ವರ್ಷಾಂತ್ಯಕ್ಕೆ ಒಂದು ಒಳ್ಳೆಯ ಸಿನೆಮಾ ನೀಡಿದ್ದಾರೆ.
ಚಾಮಯ್ಯ ಮೇಷ್ಟ್ರು ಇರಬಹುದು, ನಾಯಕನಲ್ಲಿ ನಾಗರಹಾವಿನ ರಾಮಾಚಾರಿಯ ಆ ಮುಗ್ಧ ಸಿಟ್ಟು ಇರಬಹುದು, ಮೇಷ್ಟ್ರು ಮತ್ತು ಶಿಷ್ಯನ ನಡುವಿನ ಆ ಉಗ್ವೇದ ಇರಬಹುದು ಇಂತಹ ಯಾವುದೇ ನಿರೀಕ್ಷೆಗಳಿಲ್ಲದೆ ಈ ಸಿನೆಮಾ ನೋಡಿದರೆ ಸಿನೆಮಾ ರುಚಿಸುತ್ತದೆ. ತಂದೆ ಮಗನ ಸಂಘರ್ಷ ಬಿಟ್ಟರೆ, ನಾಗರಹಾವು ಸಿನೆಮಾದಲ್ಲಿದ್ದ ಮೇಷ್ಟ್ರು ಶಿಷ್ಯನ ಸಂಘರ್ಷ ಆಗಲಿ, ವರ್ಗ ಸಂಘರ್ಷ ಆಗಲಿ ಅಥವಾ ಧರ್ಮ ಸಂಘರ್ಷ ಆಗಲಿ ಇಲ್ಲಿ ನಿಭಾಯಿಸಿಲ್ಲ. ಮನರಂಜನೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾಡಿರುವ ಸಿನೆಮಾ ರಂಜನೆಯ ದೃಷ್ಟಿಯಿಂದ ಪ್ರೇಕ್ಷಕನ್ನು ಆಸನಕ್ಕೆ ಹಿಡಿದು ಕೂತಿರುವಂತೆ ಮಾಡುತ್ತದೆ. ಧೃವೀಕರಿಸಿದ ಸಮಾಜದಲ್ಲಿ, ಧಾರ್ಮಿಕ ಭಾವೈಕ್ಯವನ್ನು ಸಾರುವಂತಹ ಒಂದೆರಡು ಡೈಲಾಗ್ ಗಳಿದ್ದು, ಅದಕ್ಕೆ ಪ್ರೇಕ್ಷಕರ ನೀಡುವ ಶಿಳ್ಳೆಯ ಮತ್ತು ಚಪ್ಪಾಳೆಯ ಸ್ಪಂದನ ಕೂಡ ಸಿನೆಮಾದ ಧನಾತ್ಮಕ ಅಂಶಗಳಲ್ಲೊಂದು. ನಾಗರಹಾವಿನ ದುರಂತ ಅಂತ್ಯ ಇಲ್ಲಿಲ್ಲದೆ, ನೂತನ ರಾಮಾಚಾರಿ ಸುಖಾಂತ್ಯ ನೀಡುತ್ತಾನೆ.
- ಗುರುಪ್ರಸಾದ್
guruprasad.n@kannadaprabha.com
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ