ಖುಷಿ ಖುಷಿಯಾಗಿ ಸಿನೆಮಾ ಸ್ಟಿಲ್
ಖುಷಿ ಖುಷಿಯಾಗಿ ಸಿನೆಮಾ ಸ್ಟಿಲ್

ಹೊಸ ವರ್ಷಕ್ಕೆ ಪೇಲವ ರಿಮೇಕ್ ಸ್ವಾಗತ

ಗಣೇಶ್ ಅಮೂಲ್ಯ ನಟನೆಯ ಮೂರನೆ ಚಿತ್ರ 'ಖುಷಿ ಖುಷಿಯಾಗಿ' ಕನ್ನಡ ಸಿನೆಮಾ ...
Published on

ಗಣೇಶ್, ಅಮೂಲ್ಯ ನಟನೆಯ ಮೂರನೆ ಚಿತ್ರ 'ಖುಷಿ ಖುಷಿಯಾಗಿ' ಕನ್ನಡ ಸಿನೆಮಾ ಪ್ರೇಕ್ಷಕರನ್ನು ಹೊಸ ವರ್ಷಕ್ಕೆ ಆಹ್ವಾನಿಸಿರುವ ಚಿತ್ರ. ಯೋಗಿ ರಾಜ್ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರ ತೆಲುಗು ಸಿನೆಮಾ ಒಂದರ ರಿಮೇಕ್.

ರಾಜ್ (ಗಣೇಶ್) ಸಿರಿವಂತ. ಹೊರದೇಶದಲ್ಲಿರುವ ಪೋಷಕರಿಂದ ದೂರ ಉಳಿದಿರುವುದು ತನ್ನ ಸ್ವಾತಂತ್ರಕ್ಕಾಗಿ. ತನ್ನ ಗೆಳೆಯ ಸಾಧು (ಸಾಧುಕೋಕಿಲಾ) ಮದುವೆಯಲ್ಲಿ ಪ್ರೀತಿ ಎಂಬ ಹುಡುಗಿಯೊಬ್ಬಳನ್ನು ಕಂಡು ಪ್ರೀತಿಸತೊಡಗುತ್ತಾನೆ. ಆದರೆ ಅವಳ ಸಂಪರ್ಕ ಸಿಗುವುದಿಲ್ಲ. ಅವಳ ಫೋನ್ ನಂಬರ್ ಸಂಗ್ರಹಿಸುವ 'ರಾಜ್' ಫೋನ್ ಕರೆಗಳ ಮೂಲಕ ಪ್ರೀತಿಸುತ್ತಾನೆ. ಆದರೆ ಆ ನಂಬರ್ ಬೇರೆ ಹುಡುಗಿ ನಂದಿನಿ(ಅಮೂಲ್ಯ) ಅವರದಾಗಿರುತ್ತದೆ. ತನ್ನನ್ನು ಎಂದೂ ಕಂಡಿರದೆ, ತನ್ನ ಮನಸ್ಸಿಗೆ ಬೆಲೆ ಕೊಟ್ಟು ಅವಳನ್ನು ಪ್ರೀತಿ ಮಾಡಬೇಕು ಎಂಬ ಫ್ಯಾಂಟಸಿ ನಂದಿನಿಗಿರುತ್ತದೆ. ಈ ಮಧ್ಯೆ ತನ್ನ ಗೆಳೆಯ ಆನಂದ್ ಗೆ ಪ್ರೀತಿಯನ್ನು ಲವ್ ಮಾಡಲು ರಾಜ್ ಸಹಾಯ ಮಾಡುತ್ತಾನೆ. ಈ ಗೊಂದಲದ ಸರಳ ಎಳೆಯನ್ನು ಎಲಾಸ್ಟಿಕ್ ನಂತೆ ಎಳೆದು ಕಟ್ಟಿದ ಪೇವಲ ಕಥೆ ಖುಷಿ ಖುಷಿಯಾಗಿ. ಕೊನೆ ಸುಖಾಂತ್ಯ ಎಂದು ಹೇಳಬೇಕಿಲ್ಲವಷ್ಟೆ!

ಎರಡು ಫೈಟ್ ಗಳು, ಒಂದೈದು ಹಾಡುಗಳು, ಗಣೇಶ್ ಅವರ ಮಾಮೂಲಿ ಸಂಭಾಷಣೆ, ವಿವಿಧ ಡಿಸೈನರ್ ಉಡುಗೆಗಳನ್ನು ತೊಟ್ಟು ಗಣೇಶ್ ಜೊತೆ ಫೋನ್ ನಲ್ಲಿ ಹರಟುವ ನಾಯಕ ನಟಿ ಅಮೂಲ್ಯ, ಇವುಗಳನ್ನು ಹೊರತುಪಡಿಸಿದರೆ ಸಿನೆಮಾದಲ್ಲಿ ಏನಿದೆ ಎಂದು ಕಣ್ಣು ಮಿಟುಕಿಸಬೇಕಷ್ಟೇ! ತಾನು ಯಾರ ಜೊತೆ ಹರಟೆ ಹೊಡೆಯುತ್ತಿದ್ದೇನೆ ಎಂದು ಗೊತ್ತಿಲದೇ ನಡೆಯುವ ಗೊಂದಲದ ಅನಾಹುತ ಬಿಟ್ಟರೆ ಕಥೆ ಎಲ್ಲಿಗೂ ಮುಂದುವರೆಯುವುದಿಲ್ಲ. ಪ್ರತ್ಯೇಕ ಕೆಲವು ಘಟನೆಗಳನ್ನು ಹೊರತುಪಡಿಸಿದರೆ ಸಿನೆಮಾ ಇಡಿಯಾಗಿ ಬೋರು ಹೊಡೆಸುತ್ತದೆ. ಕೆಲವು ಹಾಸ್ಯ ಸನ್ನಿವೇಶಗಳು ಕಚಗುಳಿಯಿಟ್ಟರೂ, ಅದದೇ ಸನ್ನಿವೇಶಗಳು ಮರುಕಳಿಸಿ ಮುಕ್ತಾಯವನ್ನು ಬೇಡುತ್ತದೆ. ಕಥೆಯ ದೃಷ್ಟಿಯಿಂದಲೂ-ಮನರಂಜನೆಯ ದೃಷ್ಟಿಯಿಂದಲೂ ಸವಕಲು ಸಿನೆಮಾ ಇದು. ಗಣೇಶ್ ಅವರ ಅಭಿನಯದಲ್ಲಿ ಏನೂ ಹೊಸತನವಿಲ್ಲ. ಎಂದಿನಂತೆ ಲೀಲಾಜಾಲವಾಗಿ ನಟಿಸಿದ್ದಾರೆ ಎಂಬುದನ್ನು ಹೊರತುಪಡಿಸಿದರೆ, ತುಂಬಾ ಪ್ರೆಡಿಕ್ಟೆಬಲ್ ಮತ್ತು ಸ್ಟೀರಿಯೋಟೈಪ್ ನಟನೆ. ಅಮೂಲ್ಯ ಅವರದ್ದೂ ಕೂಡ! ಅನೂಪ್ ರೂಬೆನ್ಸ್ ಸಂಗೀತ ಸುಮಾರಾಗಿದೆ. ಹರ್ಷ ನೃತ್ಯನಿರ್ದೇಶನದ ಡ್ಯಾನ್ಸ್ ಗಳೂ ಪರವಾಗಿಲ್ಲ. ಸಾಧುಕೋಕಿಲಾ ಸಾಧಾರಣ. ಅಚ್ಯುತ್ ಕುಮಾರ್ ಅವರದ್ದು ಸಣ್ಣ ಪಾತ್ರ. ಒಂದೆರಡು ಹಾಡುಗಳು ಎಕ್ಸಾಟಿಕ್ ಜಾಗಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ.  

ಡಬ್ಬಿಂಗ್ ನಿಷೇಧಿಸಿರುವ ಕನ್ನಡ ಚಿತ್ರರಂಗ ಹೊಸವರ್ಷವನ್ನು ಆಹ್ವಾನಿಸುತ್ತಿರುವುದು ತೆಲುಗಿನ 'ಗುಂಡೆ ಜಾರಿ ಗಲ್ಲಂತಾಯಿಂದೆ' ಸಿನೆಮಾದ ಈ ರಿಮೇಕ್ ಮೂಲಕ. ಅಷ್ಟೇನೂ ಸಶಕ್ತ ಕಥೆಯಿಲ್ಲದ, ತೆಲಗಿನಲ್ಲಿ ೧೦೦ ದಿನ ಪ್ರದರ್ಶನ ಕಂಡಿದೆ ಎಂಬುದನನ್ನು ಹೊರತುಪಡಿಸಿದರೆ, ಬೇರೆ ಇನ್ಯಾವ ಅಂಶಗಳೂ ಈ ಕಥೆಯನ್ನು ಯಥಾವತ್ತಾಗಿ ಕನ್ನಡದಲ್ಲಿ ರಿಮೇಕ್ ಮಾಡಲೇಬೇಕು ಎಂಬ ಅಂಶಕ್ಕೆ ಪುಷ್ಟಿ ನೀಡುವುದಿಲ್ಲ. ಕೊನೆಯ ಪಕ್ಷ ಸಂಗೀತವನ್ನೂ ಬದಲಾಯಿಸದೆ ತೆಲುಗಿನ ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್ ಅವರ ಟ್ಯೂನ್ ಗಳನ್ನೂ ಯಥಾವತ್ತಾಗಿ ಬಳಸಿ, ಡಬ್ಬಿಂಗ್ ಮಾಡಿದರೆ ಇಲ್ಲಿನ ತಂತ್ರಜ್ಞರ ಕೆಲಸ ಹೋಗುತ್ತದೆ ಎಂದು ಎದೆ ಬಡಿದುಕೊಳ್ಳುವ ಕನ್ನಡ ಚಿತ್ರರಂಗದ ವಿಪರ್ಯಾಸ ಇದು. ಈ ದುರದೃಷ್ಟಕರ ಸನ್ನಿವೇಶದಲ್ಲಿ ಸಿನೆಮಾ ನೋಡುತ್ತಿರುವ ಪ್ರೇಕ್ಷಕನ ಅಳಲನ್ನು ಕೇಳುವವರು ಯಾರು?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com