

'ಕ್ರೇಜಿಸ್ಟಾರ್' ರವಿಚಂದ್ರನ್ ಪಾಲಿಗೆ ಹೊಸ ದೆಸೆಯನ್ನು ತೋರಬಲ್ಲ ಚಿತ್ರವೇ?
ಮಗನನ್ನು ಪರಿಚಯಿಸಲು 'ಸಿಪಾಯಿ' ಹಾಕಿದ ಅಡಿಪಾಯವೇ?
ಕನಸುಗಾರನ ಕನಸಿಗೆ ಕನ್ನಡಿ ಹಿಡಿದ ಚಿತ್ರವೇ? ಅಥವಾ ಸೋಲುಗಳಿಂದ ತತ್ತರಿಸಿ ಹೋಗಿರುವ 'ರವಿಮಾಮ'ನಿಗೆ ಸಿಕ್ಕ ನಕ್ಷತ್ರವೇ?
ಎಷ್ಟೋ ಪ್ರಶ್ನೆಗಳು 'ಮೂಡಿದರೂ' ಮಾಯಗಾರ 'ರವಿಚಂದ್ರ'ನ್ ಬೆಳ್ಳಿತೆರೆಯ ಮೇಲೆ ತಮ್ಮ ಮೋಡಿ ಮುಂದುವರಿಸಿದ್ದಾರೆ.
ಮೂಲತಃ ಮಲಯಾಳಂನ 'ಟ್ರಾಫಿಕ್' ಚಿತ್ರದ ತಿರುಳನ್ನು ತೆಗೆದುಕೊಂಡು ತಮ್ಮ ಕಲಾ ಶೈಲಿಗೆ ಅಚ್ಚು ಕಟ್ಟಾಗಿ ಫ್ರೇಮ್ ಜೋಡಿಸಿದ್ದಾರೆ ರವಿಚಂದ್ರನ್. ಚಿತ್ರದಲ್ಲಿ ಹೆಚ್ಚಾಗಿ ಭಾವನಾತ್ಮ'ಕತೆ'ಗೆ ಪ್ರಾಮುಖ್ಯತೆ. ಸಿನಿಮಾ ವೃತ್ತಿ ಜೀವನಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ನಿರ್ದೇಶಕ ತನ್ನ ವೈಯಕ್ತಿಕ ಜೀವನದಿಂದ ಹೇಗೆ ವಂಚಿತನಾಗುತ್ತಾನೆ ಎನ್ನುವುದೇ ಚಿತ್ರದ ಒನ್ಲೈನ್ ಸ್ಟೋರಿ.
ಇಲ್ಲಿ ಒಂದು ಅಂಶ ಗಮನಿಸುವುದಾದರೇ ರವಿಚಂದ್ರನ್ ತಮ್ಮ ಚಿತ್ರಕ್ಕೆ 'ಕ್ರೇಜಿಸ್ಟಾರ್' ಎಂಬ ಶೀರ್ಷಿಕೆಯನ್ನು ಏತಕ್ಕಾಗಿ ಇಟ್ಟಿದ್ದಾರೆ..? ರವಿಚಂದ್ರನ್ ಈ ಚಿತ್ರದ ಮೂಲಕ ತಮ್ಮ ಖಾಸಗಿ ಬದುಕಿನ ಅನಾವರಣಕ್ಕೆ ಮುಂದಾಗಿದ್ದಾರಾ? ಎಂಬ ಅಂಶ ಪ್ರೇಕ್ಷಕನಲ್ಲಿ ಮೂಡುತ್ತದೆ. ಚಿತ್ರದಲ್ಲಿ ನಿರ್ದೇಶಕ ಕಮ್ ತಂದೆಯ ಪಾತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ವೃತ್ತಿ ಜೀವನದಲ್ಲಿ ಯಶಸ್ವಿಯಾಗುವ ನಿರ್ದೇಶಕ ಓರ್ವ ತಂದೆಯಾಗಿ ಮತ್ತು ಗಂಡನಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲನಾಗುತ್ತಾನೆ. ಕೊನೆಗೆ ಎದುರಾಗುವ ಸಮಸ್ಯೆಗಳಿಂದ ಹೇಗೆ ಹೊರಬಂದು ತನ್ನ ದ್ವಿಪಾತ್ರಕ್ಕೆ ನ್ಯಾಯ ಒದಗಿಸುತ್ತಾನೆಯೆ ಎಂಬ ಅಂಶಗಳಿಗೆ ಭಾವನಾತ್ಮಕ ಟಚ್ ನೀಡಿದ್ದು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ರವಿಚಂದ್ರನ್ ಪ್ರಯತ್ನ ಮಾಡಿದ್ದಾರೆ. ಅವರ ಅಭಿನಯವೇ ಚಿತ್ರದ ಹೈ 'ಲೈಟ್'
ಕ್ರೇಜಿಸ್ಟಾರ್ ಚಿತ್ರ ರವಿಚಂದ್ರನ್ ಅವರ ಬಹುನಿರೀಕ್ಷಿತ ಚಿತ್ರ 'ಮಂಜಿನ ಹನಿ'ಗೆ ಪೂರ್ವ ತಯಾರಿಯಂತಿದೆ. ಈ ಚಿತ್ರದ ಮೂಲಕ ತಮ್ಮ ಮಗ ವಿಕ್ರಮ್ನನ್ನು ಬೆಳ್ಳಿಪರದೆಗೆ ರವಿಚಂದ್ರನ್ ಪರಿಚಯಿಸಿದ್ದಾರೆ. ಚಿತ್ರರಂಗದ ಚಕ್ರವ್ಯೂಹವನ್ನು ವಿಕ್ರಂ ಭೇದಿಸುವಲ್ಲಿ ಉತ್ತಮ ಪ್ರಯತ್ನ ನಡೆಸಿದ್ದಾರೆ. ಗಂಡ ಸಂಸಾರದ ಕಡೆಗೆ ಹೆಚ್ಚು ಸಮಯಕೊಡದೆ ಇದ್ದರು, ಅದನ್ನು ತಾಳ್ಮೆಯಿಂದ ಸಹಿಸುವ ಸಹಧರ್ಮಿಣಿಯಾಗಿ, ಮಗಳಿಗೆ ಪ್ರೀತಿಯ ತಾಯಿಯಾಗಿ ಪ್ರಿಯಾಂಕಾ ಉಪೇಂದ್ರ ಅವರ ಪಾತ್ರ ಮನೋಜ್ಞ. ಆದರೆ 'ಮಲ್ಲ'ದಲ್ಲಿ ಆದ 'ಚಮತ್ಕಾರ' ಮತ್ತು 'ಯಮ್ಮೋ ಯಮ್ಮೋ'ಗಳನ್ನು ಯಪ್ಪೋಗಳು ನಿರೀಕ್ಷಿಸಿದರೆ ಬೆಪ್ಪರಾಗುತ್ತಾರೆ. ಇವರಿಬ್ಬರ 'ಕೆಮಿಸ್ಟ್ರಿ'ಯಲ್ಲಿ 'ಫಿಸಿಕ್ಸ್' ಇಲ್ಲ.
ಚಿತ್ರದಲ್ಲಿ ಸಣ್ಣ ಪಾತ್ರಗಳು 'ಮುಖ' ತೋರಿಸಿ ಹೋದರೂ ಆ ಪುಟ್ಟ ಪಾತ್ರಗಳು ಸಹ ಚಿತ್ರಕ್ಕೆ ಎಷ್ಟು ಪ್ರಮುಖ ಎಂಬುದು ಕೊನೆಯಲ್ಲಿ ಪ್ರೇಕ್ಷಕನಿಗೆ ಮನದಟ್ಟಾಗುತ್ತದೆ. ಹಿನ್ನೆಲೆ ಸಂಗೀತ ಚಿತ್ರದ ಗುಣಮಟ್ಟವನ್ನು ಹೆಚ್ಚಿಸಿದೆ.
ಆದರೆ ಒಂದು ಸನ್ನಿವೇಶದಲ್ಲಿ ಕ್ರೇಜಿಸ್ಟಾರ್ ಅವರ ಮಗಳು ಪ್ರಾಣಾಪಾಯದಲ್ಲಿರುವಾಗ ರವಿಚಂದ್ರನ್ ಅವರು ನೈಸ್ ರಸ್ತೆಯಲ್ಲಿ ತಮ್ಮ ಅಭಿಮಾನಿಗಳನ್ನು ಕಟ್ಟಿಕೊಂಡು ಸಂಗೀತ ಕಚೇರಿಯನ್ನೇ ಪ್ರಾರಂಭಿಸುತ್ತಾರೆ. ಈ ಸನ್ನಿವೇಶ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವಂತಿದೆ.
ಮಧ್ಯಂತರದ ನಂತರ 'ಕ್ರೇಜಿ'-ಸ್ಟಾರ್ ಅಲ್ಲಲ್ಲಿ ತೊಂದರೆ ಅನುಭವಿಸಿದರೂ ಮೊದಲರ್ಧದ ಲವಲವಿಕೆ ನಿರೀಕ್ಷೆ ಮೂಡಿಸುತ್ತದೆ. ಸದ್ದಿಲ್ಲದೆ ಬಂದ ಈ ಚಿತ್ರ 'ಸುದ್ದಿ' ಮಾಡಿದರೆ ಅದಕ್ಕೆ 'ಕ್ರೇಜಿಸ್ಟಾರ್' ಒಬ್ಬರೇ ಕಾರಣ.
- ಎಸ್. ವಿಶ್ವನಾಥ್
(ಕನ್ನಡಪ್ರಭ. ಕಾಮ್)