ಇದು ವಿಜಯನಗರ

ಚಿತ್ರದ ನಾಯಕ 'ಶಿವಾ ಅಂತ ಹೋಗುತಿದ್ದೆ, ಶಿವಾಜಿನಗರ ರೋಡಿನಲಿ, ರಕ್ತ ಸಿಕ್ತ ಲಾಂಗು ಇತ್ತು ಕೈಯಲ್ಲಿ', ಅಂತ ಸೈಡಿಗೆ ....
ಇದು ವಿಜಯನಗರ
Updated on: 

ಚಿತ್ರದ ನಾಯಕ 'ಶಿವಾ ಅಂತ ಹೋಗುತಿದ್ದೆ, ಶಿವಾಜಿನಗರ ರೋಡಿನಲಿ, ರಕ್ತ ಸಿಕ್ತ ಲಾಂಗು ಇತ್ತು ಕೈಯಲ್ಲಿ', ಅಂತ ಸೈಡಿಗೆ ಬಂದವರನ್ನೆಲ್ಲಾ ಶಿವನ ಪಾದ ಸೇರಿಸುವುದರಿಂದ ಈ ಚಿತ್ರದ ಶೀರ್ಷಿಕೆ ಸಾರ್ಥಕ ಎನ್ನಬಹುದು. ಚಿತ್ರದ ಹೆಸರು ಶಿವಾಜಿನಗರ ಆದರೂ ಪ್ರತಿ ಫ್ರೇಮಿನಲ್ಲೂ ನಾಯಕ ವಿಜಯ್ ವಿಜೃಂಭಿಸುವುದರಿಂದ ಇದನ್ನು 'ವಿಜಯ'ನಗರ ಎನ್ನಲೂಬಹುದು.
ಚಿತ್ರದ ಆರಂಭದಲ್ಲೇ ಖಳನಾಯಕನ ಕೊಲೆಯಾದಾಗ ಆ್ಯಕ್ಷನ್ ಪ್ರಿಯರಿಗೆ ನಿರಾಸೆ ಎನಿಸಿದರೂ ಫ್ಸ್ಯಾಷ್‌ಬ್ಯಾಕ್‌ನಲ್ಲಿ ಸ್ಟೋರಿ ತೆರೆದುಕೊಳ್ಳುತ್ತದೆ. ಬಸವನಗುಡಿಯಿಂದ ನಾಯಕನ ಮನೆ ಶಿವಾಜಿನಗರಕ್ಕೆ ಶಿಫ್ಟ್ ಆದಮೇಲೆ ಡೇ ಅಂಡ್ ನೈಟ್ ಶಿಫ್ಟ್‌ನಲ್ಲಿ ಹೆಣಗಳು ಬೀಳುತ್ತವೆ. ಅಲ್ಲಿಂದ ಅದು ಶಿವಾಜಿ ನರಕ. ಶಿವಾಜಿನಗರದ ಡಾನ್ ಜೊತೆಗಿನ ತನ್ನ ತಂದೆಯ ಕಿರಿಕ್‌ಗಾಗಿ ನಾಯಕ ರಾಂಗ್ ಆಗಿ ಲಾಂಗ್ ಎತ್ತಿಕೊಳ್ಳುತ್ತಾನೆ. ಕಣ್ಣಿಗೆ ಬಿದ್ದವರನ್ನೆಲ್ಲಾ ಕೊಂದು ಶವವಾಗಿಸುವ ಇವನು ಶವ ಮೆಚ್ಚಿದ ಕಣ್ಣಪ್ಪ. ಮಚ್ಚಿನಿಂದಾಗಲಿ, ರಿವಾಲ್ವರ್‌ನಿಂದಾಗಲಿ, ಟಿವಿ ಚಾನೆಲ್‌ನ ಒಳಗಾಗಲೀ, ಹೊರಗಾಗಲೀ, ಮರಣ ಸಂಭವಿಸಲು ಯಾವ ಅಡ್ಡಿಯೂ ಇಲ್ಲ. ಇಲ್ಲಿನ ಸಂಭಾಷಣೆಗಳಲ್ಲಿ ರೈಮಿಂಗ್ ವರ್ಡ್ಸ್‌ಗಳಿಲ್ಲ. ಇಲ್ಲೇನಿದ್ದರೂ ಕ್ರೈಮಿಂಗ್ ವರ್ಡ್ಸ್‌ಗಳದ್ದೇ ರಾಜ್ಯಭಾರ. ನಾನು ಕೊಡೋ ಒದೆಗೂ ನನ್ ಹೈಟಿಗೂ ಸಂಬಂಧನೇ ಇಲ್ಲ ಎನ್ನುತ್ತಾನೆ ನಾಯಕ. ಅದನ್ನು ಚಿತ್ರದ ಇತರ ಪಾತ್ರಗಳೂ ರಿಪೀಟ್ ಮಾಡುತ್ತವೆ. ಜೊತೆಗೆ, ಈ ದೃಶ್ಯಕ್ಕೂ ಈ ಸಂಭಾಷಣೆಗೂ ಸಂಬಂಧನೇ ಇಲ್ಲ ಅಂತ ಪ್ರೇಕ್ಷಕ ಕೂಡ ಡೈಲಾಗ್ ಹೊಡೆಯುತ್ತಾನೆ.
   ಚಿತ್ರಕಥೆ ನಿರೂಪಣೆಯಲ್ಲಿ ನಿರ್ದೇಶಕ ಸತ್ಯ ಆ್ಯಕ್ಷನ್ ಅನ್ನೇ ಅಪ್ಪಿಕೊಂಡಿದ್ದಾರೆ. ಹಾಡುಗಳು ತೆಲುಗು ಸಿನಿಮಾಗಳ ಶೈಲಿಯಲ್ಲಿ ಬೇಕಾದಾಗಲೆಲ್ಲಾ ಎಂಟ್ರಿ ಕೊಡುತ್ತವೆ. ಅದೇ ರೀತಿಯಲ್ಲಿ ಎಂಟ್ರಿ ಕೊಡುವ ನಾಯಕಿ ಹೆಸರಿಗೆ ಮಾತ್ರ ಬ್ರಾಹ್ಮಣರ ಹುಡುಗಿ. ಪುರಾಣ ಹೇಳೋಕೆ ತುಂಡು ಬಟ್ಟೆ ಹಾಕ್ಕೊಳ್ಳೋಕೆ ಎಂಬಂತ ವ್ಯಕ್ತಿತ್ವ ಅವಳದ್ದು. ಜನ ಚೇಂಜ್ ಕೇಳ್ತಾರೆ ಎನ್ನುವ ಕಾರಣಕ್ಕೋ ಏನೋ ಆಕೆ ಕಾಲೇಜಿಗೆ ಹೋದ ತಕ್ಷಣ ತನ್ನ ಲಂಗ ದಾವಣಿಯನ್ನು ಮೈಕ್ರೋ, ಮಿಡಿಗೆ ಚೇಂಜ್ ಮಾಡ್ತಾ ಇರ್ತಾಳೆ.
ಇದರ ನಡುವೆ ನಾಯಕನ ತಂದೆಯ ಮೊದಲ ಸಂಸಾರ ಮತ್ತು ಎರಡನೇ ಸಂಸಾರಗಳನ್ನು ಸೇರಿಸಿ ಶಿವಾಜಿನಗರವನ್ನು ಫುಲ್ ಫ್ಯಾಮಿಲಿ ಸಮೇತ ನೋಡುವ ಚಿತ್ರವನ್ನಾಗಿಸಲು ಪ್ರಯತ್ನ ಪಟ್ಟಿದ್ದಾರೆ. ಇಸ್ಪೀಟ್ ಆಡಿ ಸಂಸಾರವನ್ನು ಹಾಳು ಮಾಡಬೇಡಿ ಎಂಬ ಪಿ.ಎನ್. ಸತ್ಯ ಸಂದೇಶವೂ ಚಿತ್ರದಲ್ಲಿದೆ. ತನ್ನ ಅಕ್ಕನ ಮಗನಿಗೆ ಸಣ್ಣ ಗಾಯ ಮಾಡಿದವನಿಗೆ ಯದ್ವಾ ತದ್ವಾ ಚಚ್ಚಿದಾಗ, 'ಇಷ್ಟು ಸಣ್ಣ ವಿಷಯಕ್ಕೆ ಹೀಗಾ ಹೊಡೆಯೋದು?' ಎಂಬ ಪ್ರಶ್ನೆಗೆ ನಾಯಕ ನೀಡುವ 'ಅವನು ಬಿದ್ದಾಗ ಕೂಗಿದ್ದು ಅಮ್ಮಾ ಅಂತ ಅಲ್ಲ, ಮಾಮಾ ಅಂತ' ಎಂಬ ಉತ್ತರ ಕಣ್ಣುಂಬುವಂತೆ ಮಾಡಿದರೂ ಉಳಿದಂತೆ ಕಾಣುವುದು ತೆರೆಯ ತುಂಬಾ ಆವರಿಸುವ ರಕ್ತಸಾಮ್ರಾಜ್ಯ. ಸೆಂಟಿಮೆಂಟ್ ವಿಷಯದಲ್ಲಿ ಅಲ್ಲಲ್ಲಿ ಆಪ್ತವಾದರೂ ಬದುಕೋಕೆ ದಮ್ಮಿರ್‌ಬೇಕು ಎನ್ನುವ ಚಿತ್ರದ ಆ್ಯಕ್ಷನ್ ಪಾರ್ಟ್‌ನಲ್ಲಿ ದಮ್ ಕಡಿಮೆ ಎನಿಸಿದರೆ ಕಥೆಯಲ್ಲಿ ಫೋರ್ಸ್ ಇಲ್ಲದೆ ಇರುವುದು ಕಾರಣ. ಅದ್ದೂರಿತನ
ಮತ್ತು ತಾಂತ್ರಿಕತೆಯ ವಿಷಯದಲ್ಲಿ ಪ್ರತಿಯೊಂದು ಫೈಟ್ ಕೂಡ ಅದ್ಭುತ ಎನಿಸಿದರೂ ಇದು ಕಂಪ್ಲೀಟ್ ಆ್ಯಕ್ಷನ್ ಸಿನಿಮಾ ಆಗಿಲ್ಲ ಎನ್ನುವುದು ಪ್ರೇಕ್ಷಕನ ಕಂಪ್ಲೇಂಟು. ಕುಟುಂಬಕ್ಕೆ ತೊಂದರೆಯಾದಾಗ ಲಾಂಗ್ ಹಿಡಿಯುವ ಅದೇ ಹಳೆಯ ಕಥೆ ಚಿತ್ರದ ನೆಗೆಟಿವ್ ಅಂಶವಾಗಬಹುದು.
 ಸೆಲ್ವಂ ಛಾಯಾಗ್ರಹಣಕ್ಕೆ ಫುಲ್‌ಮಾರ್ಕ್ಸ್. ಜೆಸ್ಸಿ ಗಿಫ್ಟ್ ಸಂಗೀತದ ಟ್ಯೂನ್‌ಗಳಲ್ಲಿ ಧಮ್ ಇದ್ದರೂ ಸಾಹಿತ್ಯ ಸೊರಗಿದೆ. ಸಾಹಿತ್ಯದ ಹಂಗಿಲ್ಲದ ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ಈ ಆ್ಯಕ್ಷನ್ ಚಿತ್ರಕ್ಕೆ ನ್ಯಾಯ ಒದಗಿಸಿದೆ.
  ಹಿಂದೂ ಮತ್ತು ಮು'ಸ್ಲಿಮ್‌' ಗೆಟಪ್‌ನಲ್ಲಿ ಸ್ಲಿಮ್ ಅಂಡ್ ಫಿಟ್ ಆಗಿರುವ ಸ್ಲಿಂ ಬಾಲ ವಿಜಯ್, ಹೊಡೆದಾಡುವ ವಿಶ್ವವಿದ್ಯಾಲಯದಂತೆ ಕಾಣಿಸುತ್ತಾರೆ. ಪಾರುಲ್ ಯಾದವ್ ತಮ್ಮ ಪಾತ್ರವನ್ನು ಎಂಜಾಯ್ ಮಾಡಿದ್ದಾರೆ. ಆದರೆ, ವಿಶಿಷ್ಠ ಪಾತ್ರದಲ್ಲಿ ಅವಿನಾಶ್ ಹೈಲೈಟ್ ಆಗುತ್ತಾರೆ. ಕೋಟೆ ಪ್ರಭಾಕರ್ ಅವರ ಅಪಿಯರೆನ್ಸ್ ಮತ್ತು ಅವರ ಎಕೆ 47 ಚಿತ್ರದ ಪಾತ್ರ ಎರಡೂ ಬದಲಾಗಿಲ್ಲ. ಇಂಥ ಪಾತ್ರಗಳಲ್ಲಿ 'ಮಾಸ್ಟರ್‌' ಆಗಿರುವ ಆಶಿಶ್ 'ವಿದ್ಯಾರ್ಥಿ' ಇಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿ. ಡೇನಿಯಲ್ ಬಾಲಾಜಿ ಮಾತು ಕಮ್ಮಿ, ಮ್ಯಾನರಿಸಂ ಜಾಸ್ತಿ.

-ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com