ಥಿಯೇಟರ್ ನಲ್ಲಿ 'ಉಳಿದವರಿಗೆ' ಅಪಾಯ!

ಟ್ರೈಲರ್ ನಂಬಿ ಸಿನೆಮಾ ನೋಡ್ಬಾರದು ಎನ್ನು ವುದಕ್ಕೆ 'ಬೋರ್'ಗರೆಯುವ ಸಿನೆಮಾ ಸಾಕ್ಷಿ!
ಥಿಯೇಟರ್ ನಲ್ಲಿ 'ಉಳಿದವರಿಗೆ' ಅಪಾಯ!

ಟ್ರೈಲರ್ ನಂಬಿ ಸಿನೆಮಾ ನೋಡಬಾರದು ಎನ್ನುವುದಕ್ಕೆ ಈ ಮಹಾ 'ಬೋರ್'ಗರೆಯುವ ಸಿನೆಮಾ ಸಾಕ್ಷಿ! ಎಕ್ಸ್ಟ್ರಾ ಕಾಸಿದ್ದರೆ ಮಾತ್ರ ಈ ಸಿನೆಮಾ ನೋಡಬಹುದು, ಇಲ್ಲವಾದಲ್ಲಿ ಸುಮ್ಮನೆ ಮನೆಯಲ್ಲಿ ಉಳಿದುಕೊಂಡು ಬಿಡಿ!
-------------

ಈ ಚಿತ್ರ ಪ್ರಚಾರ ಮಾಧ್ಯಮಗಳಲ್ಲಿ ತೋರಿಸಿದ್ದಂತೆ ಹಾಲಿವುಡ್ ನ ಕ್ವೆಂಟಿನ್ ಟರಾಂಟಿನೋ ಚಿತ್ರಗಳ ತರಾನೂ ಇಲ್ಲ, ಬಾಲಿವುಡ್ ನ ಅನುರಾಗ್ ಕಶ್ಯಪ್ ಚಿತ್ರಗಳ ತರಾನೂ ಇಲ್ಲ, ಆದರೆ ಅವರಿಬ್ಬರನ್ನೂ ಸ್ಫೂರ್ತಿಯಾಗಿಟ್ಟುಕೊಂಡು ಮಾಡಿದ ಒಂದು ಕೆಟ್ಟ ಪ್ರಯತ್ನ, bad imitation. ಅನುರಾಗ್ ಕಶ್ಯಪ್ ಕೂಡ ಟರಾಂಟಿನೋ ಫ್ಯಾನ್ ಎಂಬುದು ಗಮನಾರ್ಹ. ಚಿತ್ರದಲ್ಲಿ ಅನೇಕ ಅಧ್ಯಾಯಗಳಿವೆ ಟರಾಂಟಿನೋನ 'Kill Bill' ನಂತೆ. ಕತೆಯಲ್ಲಿ ಬರುವ 'democracy' ಹೆಸರಿನ ಹುಡುಗನ ಪಾತ್ರ, ಮೆಣಸಿನ ಪೇಪರ್ ಹಾಡು, ರೇ ಬ್ಯಾನ್ ಗ್ಲಾಸು ತೊಡುವ ತಿಕ್ಕಲು ಸ್ವಭಾವದ ನಾಯಕ ರಿಚ್ಚೀ, ಮಂಗಳೂರಿನ ಪ್ರಾದೇಶಿಕ ಬೈಗುಳ ಎಲ್ಲವೂ ಅನುರಾಗ್ ರ 'Gangs of Wasseypur' ನೆನಪಿಸುತ್ತದೆ.

ಲಾಂಗ್ ಶಾಟ್ ನಲ್ಲಿ ಹುಡುಗನೊಬ್ಬ ಮಲ್ಪೆ ಸಮುದ್ರದ ಕಡೆ ಮುಖ ಮಾಡಿ ನಿಂತಿದ್ದಾನೆ ಸ್ಟೆಡಿ ಕ್ಯಾಮೆರ ಹುಡುಗನ ಹಿಂದಿನಿಂದ ಆತನತ್ತ ಮುನ್ನುಗ್ಗುತ್ತದೆ, ಅಕ್ಕಪಕ್ಕದಲ್ಲಿ ಕರಾವಳಿ ಮೀನುಗಾರರು ಕೆಲಸದಲ್ಲಿ ನಿರತರಾಗಿದ್ದಾರೆ, ಹಚ್ಚಿದ ಬೆಂಕಿಯೊಂದರಿಂದ ಧೂಮ ಆ ಪ್ರದೇಶವನ್ನು ನಿಧಾನಕ್ಕೆ ಆವರಿಸುತ್ತಲಿದೆ. ಹಿನ್ನಲೆಯಲ್ಲಿ ಪತ್ರಕರ್ತೆ ಶೀತಲ್ ಶೆಟ್ಟಿ ಧ್ವನಿ ಕೇಳಿಸುತ್ತಿದೆ. 'ರೆಜಿನಾ' ಶೀತಲ್ ಶೆಟ್ಟಿ ಪತ್ರಕರ್ತೆ, ಆಕೆ ಒಂದು ಘಟನೆಯ ಬಗ್ಗೆ ಪುಸ್ತಕ ಬರೆಯ ಹೊರಟಿದ್ದಾಳೆ, ಅದಕ್ಕಾಗಿ ಘಟನೆಗೆ ಸಂಬಂಧ ಪಟ್ಟ ಎಲ್ಲರನ್ನೂ ಸಂದರ್ಶಿಸಿ ನಿಜವನ್ನು ಪತ್ತೆ ಹಚ್ಚುವ ಇರಾದೆ ಅಕೆಯದು. ಮೇಲೆ ಹೇಳಿರುವ ಮೊದಲ ಶಾಟ್ ಪುಸ್ತಕದ ಆರಂಭದ ಅಧ್ಯಾಯ. 'ರಿಚ್ಚೀ' (ರಕ್ಷಿತ್), 'ರಘು' (ರಿಶಭ್), 'ಬಾಲು' (ಅಚ್ಯುತ್ ಕುಮಾರ್), 'ಮುನ್ನಾ' (ಕಿಶೋರ್), 'ಶಂಕ್ರ ಪೂಜಾರಿ' (ದಿನೇಶ್), ಪುಸ್ತಕದ ಕತೆಯಲ್ಲಿ ಮತ್ತು ಚಿತ್ರದ ಕತೆಯಲ್ಲಿ ಬರುವ ಪಾತ್ರಧಾರಿಗಳು. ಚಿತ್ರದ ನಿರೂಪಣೆಯನ್ನು ಕೆಲವೊಮ್ಮೆ ಪುಸ್ತಕ ಕೊಂಡೊಯ್ಯುತ್ತದೆ, ಕೆಲವೊಮ್ಮೆ ಪಾತ್ರಧಾರಿಗಳು ತಮ್ಮ ತಮ್ಮ ದೃಷ್ಟಿಕೋನದ ಮೂಲಕ ಕೊಂಡೊಯ್ಯುತ್ತಾರೆ.
'ರಿಚ್ಚೀ' ಚಿಕ್ಕಂದಿನಲ್ಲೇ ಗೆಳೆಯನಿಗಾಗಿ ಕೊಲೆಯೊಂದನ್ನು ಮಾಡಿ ರಿಮ್ಯಾಂಡ್ ಹೋಮ್ ನಲ್ಲಿ ಶಿಕ್ಷೆ ಅನುಭವಿಸಿ ಬಂದಿರುತ್ತಾನೆ, ಕೊಲೆ ಮಾಡುವಾಗ ಜೊತೆಯಿದ್ದ ಗೆಳೆಯ 'ರಘು' ಮನೆ ಬಿಟ್ಟು ಮುಂಬೈ ಸೇರಿಕೊಳ್ಳುತ್ತಾನೆ. ದೊಡ್ಡವರಾಗುತ್ತಿದ್ದಂತೆ ಸ್ಮಗ್ಲಿಂಗ್ ದಂಧೆಯಲ್ಲಿದ್ದ ರಘುಗೆ 'ಅದು' ಸಿಕ್ಕಿ ಒಂದೇ ಬಾರಿಗೆ ಶ್ರೀಮಂತನಾಗುತ್ತಾನೆ, ನಂತರ ತಾಯಿಯೊಡನೆ ದುಬೈಗೆ ಹೋಗುವ ಪ್ಲಾನ್ ಮಾಡಿ ತಾಯಿ ತಾರಾಳನ್ನು ಕರೆದೊಯ್ಯಲು ಊರಿಗೆ ಬರುತ್ತಾನೆ. ಆಗ ಹಳೆ ದುಶ್ಮನಿಯನ್ನು ಮರೆಯದ ರಿಚ್ಚೀ, ರಘು ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಾನೆ. ಈ ನಡುವೆ 'ಅದು' ಮೊದಲಿಗೆ ಸಿಕ್ಕಿದ್ದೇ 'ಬಾಲು' ಅಚ್ಯುತ್ ಕುಮಾರ್ ಕೈಗೆ ನಂತರ ಕೈ ಬದಲಾಗಿ ಮುಂಬೈ ತನಕ ಸಾಗಿ ಮತ್ತೆ ಮೊದಲು ಸಿಕ್ಕಿದ್ದ ಊರಿಗೆ ಬಂದಿರುತ್ತದೆ 'ಅದು'. ಹೀಗಿರುವಾಗ ರಘು ಬಳಿ ಇದ್ದ 'ಅದು' ರಿಚ್ಚೀ ಬಳಿ ಸೇರುತ್ತದೆ. 'ಅದು' ಕೋಟಿ ಕೋಟಿ ರುಪಾಯಿ ಬೆಲೆ ಬಾಳುವಂತಹದ್ದು, 'ಅದರ' ಮೇಲೆ ಬಹಳಷ್ಟು ಜನರ ಕಣ್ಣು ಬೀಳುತ್ತದೆ, ಆ ಕಾರಣದಿಂದಲೆ ಬಹಳಷ್ಟು ಕೊಲೆಗಳು ನಡೆದು ಹೋಗುತ್ತವೆ, ಕೊನೆಗೂ 'ಅದು' ಏನೆಂದು ಸರಿಯಾಗಿ ತಿಳಿಯುವುದಿಲ್ಲ!!!

ಚಿತ್ರದ ನಿರೂಪಣೆ ಬಹಳ ಕಗ್ಗಂಟಾಗಿದೆ. ಒಂದೇ ಕತೆಯನ್ನು ಹಲವಾರು ಪಾತ್ರಗಳಿಂದ ಹೇಳಿಸಿರುವುದರಿಂದ/ನಿರೂಪಿಸಿರುವುದರಿಂದ ಅವೆಲ್ಲ ಕತೆಗಳು ಒಂದರ ಮೇಲೊಂದು overlap ಆಗುತ್ತಾ ಪ್ರೇಕ್ಶಕರಲ್ಲಿ ಅನವಶ್ಯಕ ಗೊಂದಲ ಸೃಷ್ಟಿಸುತ್ತದೆ. ಹಲವು ಸೀನುಗಳು ಪುನರಾವರ್ತನೆಯಾಗುತ್ತವೆ, ಅದಕ್ಕೆ ಕಾರಣ, ಚಿತ್ರದಲ್ಲಿರುವ ಹಲವಾರು ನಿರೂಪಕರು. ಪ್ರತಿಸಲ ಸೀನುಗಳು ರಿಪೀಟ್ ಆದಾಗ ಅದು ಯಾರ ದೃಷ್ಟಿಕೋನವೆಂದು ಪತ್ತೆಹಚ್ಚುವ ಸಂಕಷ್ಟಕ್ಕೆ ಪ್ರೇಕ್ಷಕ ಗುರಿಯಾಗುತ್ತಾನೆ. ಎಷ್ಟೊ ಸಲ ತೆರೆ ಮೇಲೆ ಏನು ನಡೆಯುತ್ತಿದೆ ಎಂಬುದೇ ತಿಳಿಯುವುದಿಲ್ಲ, ಅದು ತಿಳಿಯುವುದು ಸುಮಾರು ಹೊತ್ತಿನ ನಂತರ ಮತ್ತೊಬ್ಬನ ಕಥಾ ನಿರೂಪಣೆಯಲ್ಲಿ, ಒಂದೆರಡು ಸಲವಾದರೆ ತಡೆದುಕೊಳ್ಳಬಹುದು ಆದರೆ ಹೆಚ್ಚು ಸಲ ಆಗದು, ಅದೂ ಅಲ್ಲದೆ ಅನೇಕ ನಿರೂಪಕರು ಬೇರೆ. ಇಷ್ಟು ಸಾಲದು ಅಂತ ಒಂದೆರಡು ನಿಮಿಷಗಳಲ್ಲಿ ಮುಗಿಸಬಹುದಾಗಿದ್ದ ಚಿಕ್ಕ ಚಿಕ್ಕ ಸನ್ನಿವೇಶಗಳನ್ನು ರಬ್ಬರ್ ಎಳೆದಂತೆ ಜಗ್ಗಾಡಿ ದೊಡ್ಡದು ಮಾಡಿ ಪ್ರೇಕ್ಷಕ ಆ ದೃಶ್ಯ ಬೇಗ ಮುಗಿದರೆ ಸಾಕೆನ್ನುವಂತೆ ಮಾಡಲಾಗಿದೆ, ಆಲ್ಲಿಗೆ ಚಿತ್ರಪರದೆಯೊಂದಿಗಿನ ತನ್ನ ಸಂಬಂಧವನ್ನು ಪ್ರೇಕ್ಷಕ ಕಡಿದುಕೊಳ್ಳುತ್ತಾನೆ.

ಕರಮ್ ಚಾವ್ಲಾ ಸಿನೆಮೆಟೋಗ್ರಫಿ, ಅಜನೀಶ್ ಸಂಗೀತ, ರೆಂಜಿತ್ ವಿಶ್ವನಾಥ್ ಧ್ವನಿಗ್ರಹಣ ಚಿತ್ರದ ಪ್ಲಸ್ ಪಾಯಿಂಟು. ರಕ್ಷಿತ್ ಶೆಟ್ಟಿ  ಕ್ವೆಂಟಿವ್ ರನ್ನು ಆವಾಹಿಸಿಕೊಳ್ಳಲು ಅಜನೀಶ್ ರ ಸಂಗೀತವನ್ನು ಬಳಸಿಕೊಂದಿದ್ದಾರೆ ಆದರೆ ಚಿತ್ರಕತೆಯ ವಿಷಯದಲ್ಲಿ ಎಡವಿರುವುದರಿಂದ ಚಿತ್ರಕತೆ ಬಹಳಷ್ಟು ಕಡೆಗಳಲ್ಲಿ ಸಂಗೀತದೊಂದಿಗೆ blend ಆಗಿಲ್ಲ. ಹಿನ್ನಲೆ ಸಂಗೀತ ಮತ್ತು ಹಾಡುಗಳಲ್ಲಿ ಅಲ್ಲಲ್ಲಿ ಕೆಲವು ಪರಭಾಷೆಯ ಚಿತ್ರಗಳ ಟ್ಯೂನುಗಳನ್ನು ಎರವಲು ಪಡೆದುಕೊಂಡ ಹೊರತಾಗಿಯೂ ಅಜನೀಶ್ ಕೆಲಸದಲ್ಲಿ ವಿಭಿನ್ನತೆಯನ್ನು ಗುರುತಿಸಬಹುದಾದ್ದರಿಂದ ಅವರು ಮೆಚ್ಚುಗೆಗೆ ಅರ್ಹ. Pink Panther ಶೈಲಿ ಜಾಝ್, ಸಾಫ್ಟ್ ರಾಕ್, ಡಬ್ ಸ್ಟೆಪ್, ಹುಲಿ ವೇಷದ ಸಂದರ್ಭದಲ್ಲಿ ಬರುವ ದೇಸಿ ಸಂಗೀತವಾಗಿರಬಹುದು, ಬಹುತೇಕ ಪ್ರಕಾರಗಳು ಅವರ ಸಂಗೀತದಲ್ಲಿ ಮಿಳಿತಗೊಂಡಿವೆ. ಸೌಂಡ್ ಇಂಜಿನಿಯರ್ ರೆಂಜಿತ್ ಕೆಲಸ ಎಷ್ಟು ಕರಾರುವಕ್ಕಾಗಿದೆಯೆಂದರೆ ಬಾಗಿಲು ಬಡಿದ ನಂತರ ಬರುವ ವೈಬ್ರೇಶನ್ ಸದ್ದು, ನಟ ಕಿಶೋರ್ ರ ಬುಲ್ಲೆಟ್ ಬೈಕಿನ ಸದ್ದು, ಬಂದರಿನಲ್ಲಿ ದೋಣಿ ಎಳೆಯುವಾಗಿನ ಹಗ್ಗದ ಸದ್ದು ಎಲ್ಲವೂ ಕಿವಿಯಲ್ಲಿ ಊದಿದಷ್ಟೇ ಸುಸ್ಪಷ್ಟ. ಕರಮ್ ಚಾವ್ಲಾರ ಛಾಯಾಗ್ರಹಣ ಸುಂದರ. ಕತ್ತಲು, ನೆರಳು ಮತ್ತು ನ್ಯಾಚುರಲ್ ಬೆಳಕನ್ನು ಬಹಳ ಚೆನ್ನಾಗಿ ಬಳಸಿಕೊಂಡು ಒಳ್ಳೆಯ ಚಿತ್ರಣ ಕಟ್ಟಿಕೊಟ್ಟಿದ್ದಾರೆ, ಅದಕ್ಕೆ ಸ್ಲೋ ಮೋಶನ್ ನಲ್ಲಿ ಬರುವ knock knock ಹಾಡಿನ  ಸಿನಿಮೆಟೋಗ್ರಫಿಯೇ ಸಾಕ್ಷಿ. ಟ್ರೇಯ್ಲರ್ ನಲ್ಲಿ ತೋರಿಸಿದ್ದ ಹಾಲಿವುಡ್ ನ 'sin city'ಯಿಂದ ಕಾಪಿ ಮಾಡಿದ ಚೇಸಿಂಗ್ ದೃಶ್ಯ ತನ್ನ ಮೂಲ ಚಿತ್ರಕ್ಕೆ ನ್ಯಾಯ ಒದಗಿಸಿದೆ, ಅದರ ಹಿಂದಿರುವ ಕಲರಿಸ್ಟ್ ಮತ್ತು ಎಡಿಟರ್ ಸಚಿನ್ ರ ಪರಿಶ್ರಮ ಅಲ್ಲಿ ಎದ್ದು ಕಾಣುತ್ತದೆ. ಚಿತ್ರದ ಅನೇಕ ಮೈನಸ್ ಪಾಯಿಂಟುಗಳಲ್ಲೊಂದೇನೆಂದರೆ ಚಿತ್ರಕತೆಯ ಎಳೆತ, ಧಾರಾವಾಹಿಗೇ ಕಾಂಪಿಟೀಷನ್ ಕೊಡುವ ರೇಂಜಿನಲ್ಲಿ ಅದು ವೀಕ್ಷಕರನ್ನು ಸುಸ್ತು ಮಾಡುತ್ತದೆ. ಚಿತ್ರದಲ್ಲಿ ಫಾಸ್ಟ್ ಪೇಸ್ ಸೀನುಗಳಿಲ್ಲವೆಂದಲ್ಲ, ನಾಯಕ ರಿಚ್ಚೀ ರಕ್ಷಿತ್ ರ ಎಂಟ್ರಿ ಸೀಕ್ವೆನ್ಸ್ ಆನ್ನೂ ಸೇರಿಸಿ ಎರಡೋ ಮೂರೋ ಬಾರಿ ಬರುವ ಫಾಸ್ಟ್ ಪೇಸ್ ಸೀನುಗಳು ಕಟ್ಟಾದ ಮರುಕ್ಷಣ ಕುತೂಹಲವೇ ಹುಟ್ಟಿಸದ ದೃಶ್ಯಾವಳಿಗಳು ತೆರೆಮೇಲೆ ಮೂಡುತ್ತವೆ. ಇದರಿಂದಾಗಿ ಪ್ರೇಕ್ಷಕನಿಗೆ ಗುಡ್ಡದಿಂದ ಒಮ್ಮೆಲೆ ಪ್ರಪಾತಕ್ಕೆ ಬಿದ್ದ ಅನುಭವ. ಚಿತ್ರದಲ್ಲಿ ಉಪಯೋಗಿಸಿರುವ ಮಂಗಳೂರು ಕಡೆಯ ಪ್ರಾಂತೀಯ ಕನ್ನಡ, ಕುಂದಾಪುರದ ಕುಂದಗನ್ನಡ ಅಲ್ಲದೆ ಉಡುಪಿ ಮಲ್ಪೆಯ ಹಳ್ಳಿ ಚಿತ್ರಣ, ಚಿತ್ರಕ್ಕೆ ಕಲಾತ್ಮಕತೆಯ ಸ್ಪರ್ಶವನ್ನು ನೀಡಿದೆ, ಅದಕ್ಕೆ ಚಿತ್ರಕತೆಯೂ ಕೈಜೋಡಿಸಿದೆ. ಅದಕ್ಕೇ ಈ ಚಿತ್ರ ಆರ್ಟ್ ಚಿತ್ರವೊಂದನ್ನು ನೋಡುತ್ತಿದ್ದೇವೆಂಬ ಭಾವ ಮೂಡಿಸುತ್ತದೆ. ಬಹಳಷ್ಟು ಕಡೆ ಭಾಷೆಯ ಸೊಗಡಿನ ದೆಸೆಯಿಂದಾಗಿ ತೆರೆ ಮೇಲೆ ಏನು ನಡೆಯುತ್ತಿದೆ ಎಂಬುದು ತಿಳಿಯದೆ ಹೋಗುತ್ತದೆ, ಸಬ್ ಟೈಟಲ್ ಇರುತ್ತಿದ್ದರೆ ಅನೇಕ nonಕರಾವಳಿಗರಿಗೆ ಸಹಾಯವಾಗುತ್ತಿತ್ತು. ಚಿತ್ರ ತಾಂತ್ರಿಕವಾಗಿ ಸಹ್ಯವೆನಿಸಿದರೂ ಸಾಮಾನ್ಯ ಪ್ರೇಕ್ಷಕ ಅವನ್ನೆಲ್ಲ ನೋಡುತ್ತಾನೆಯೇ, ಇಲ್ಲ. ಆ ನಿಟ್ಟಿನಲ್ಲಿ ನೋಡುವುದಾದರೆ ಪ್ರೇಕ್ಷಕ ನಿರೀಕ್ಷಿಸಿದ್ದನ್ನು ನೀಡುವುದರಲ್ಲಿ ಚಿತ್ರ ಸೋತಿದೆ.
ಟ್ರೈಲರ್ ನಂಬಿ ಸಿನೆಮಾ ನೋಡಬಾರದು ಎನ್ನುವುದಕ್ಕೆ ಈ ಮಹಾ 'ಬೋರ್'ಗರೆಯುವ ಸಿನೆಮಾ ಸಾಕ್ಷಿ! ಎಕ್ಸ್ಟ್ರಾ ಕಾಸಿದ್ದರೆ ಮಾತ್ರ ಈ ಸಿನೆಮಾ ನೋಡಬಹುದು, ಇಲ್ಲವಾದಲ್ಲಿ ಸುಮ್ಮನೆ ಮನೆಯಲ್ಲಿ ಉಳಿದುಕೊಂಡು ಬಿಡಿ!
- ಹರ್ಷವರ್ಧನ್
(ಕನ್ನಡಪ್ರಭ ಡಾಟ್ ಕಾಂ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com