ಲವ್ ಇನ್ ಮಂಡ್ಯ - ಸಕ್ಕರೆ ನಾಡಿನ ಸಿಹಿ ಪ್ರೇಮ ಕಥೆ

ಲವ್ ಇನ್ ಮಂಡ್ಯ - ಸಕ್ಕರೆ ನಾಡಿನ ಸಿಹಿ ಪ್ರೇಮ ಕಥೆ
ಲವ್ ಇನ್ ಮಂಡ್ಯ
ಲವ್ ಇನ್ ಮಂಡ್ಯ
Updated on

ಮಚ್ಚು-ಲಾಂಗು-ಆಕ್ಷನ್ ಇಲ್ಲದೆ ಸಿನೆಮಾ ಮಾಡುವುದೇ ಅಪಥ್ಯ ಎನ್ನುವ ಗಾಂಧಿನಗರದ ಜನರ ಮಧ್ಯೆ ಸರಳ ಕಥೆ ಹೇಳುವುದಕ್ಕೆ ಒತ್ತು ಕೊಟ್ಟಿರುವ ಈ ಉತ್ತಮ ಚಿತ್ರ ಬಂದಿರುವುದು, ಬಂಡೆಯ ಮಧ್ಯೆ ಮತ್ತೊಂದು ಗಿಡ ಚಿಗುರೊಡೆದಂತೆಯೆ! ಅರಸು ಅಂತಾರೆ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಗಮನಾರ್ಹ ಸಿನೆಮಾ ನಿರ್ದೇಶಿಸಿದ್ದಾರೆ.

ಕೇಬಲ್ ಕರ್ಣ (ನೀನಾಸಂ ಸತೀಶ್) ಅನಾಥ. ಕೇಬಲ್ ಬಸಣ್ಣನ ಶಿಷ್ಯನಾಗಿ ಕೇಬಲ್ ಆಪರೇಟರ್ ಕೆಲಸ ಮಾಡುತ್ತ ಮಂಡ್ಯದಲ್ಲಿ ಆಗ ತಾನೇ ಮನೆ ಮಾಡಿರುವ ಕುಟುಂಬದ ಎಸ್ ಎಸ್ ಎಲ್ ಸಿ ನಪಾಸಾದ ಹುಡುಗಿ ಸುಷ್ಮಾ (ಸಿಂಧು ಲೋಕನಾಥ್) ಳನ್ನು ಪ್ರೀತಿಸುತ್ತಾನೆ. ಮೊದಲಾರ್ಧದ ಇವರಿಬ್ಬರ ನವಿರು ಪ್ರೇಮ ಕಥೆಗೆ ಟ್ವಿಸ್ಟ್ ಸಿಗುವುದು ದ್ವಿತೀಯಾರ್ಧದಲ್ಲಿ. ಸುಷ್ಮಾ ಮದುವೆಯನ್ನು ಅವಳಿಗೆ ಇಷ್ಟವಿಲ್ಲದ ಹುಡುಗನ ಜೊತೆ ಅವಳ ಹೆತ್ತವರು ಗೊತ್ತು ಮಾಡುವುದರಿಂದ, ಕರ್ಣ ಮತ್ತು ಸುಷ್ಮಾ ಹೊಸೂರಿಗೆ ಓಡಿ ಹೋಗುತ್ತಾರೆ. ಹೊಸೂರಿನಲ್ಲಿ ಅವರು ನೆಮ್ಮದಿಯಿಂದ ಬದುಕಲು ಸಾಧ್ಯವೇ?

ಅರಸು ಅಂತಾರೆ ಸಿನೆಮಾಗೆ ಅತ್ಯುತ್ತಮ ಕಥೆ ಬರೆದಿದ್ದಾರೆ ಎನ್ನಲಾಗದಿದ್ದರೂ, ಅವರು ಈ ಮಾಧ್ಯಮದ ಮೂಲಕ ಒಂದು ಸರಳ ಕಥೆಯನ್ನು ತಾಜಾವಾಗಿ ಹೇಳುವ ಜಾಣ್ಮೆಗೆ ಮೆಚ್ಚಬೇಕು. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ, ಸೂಪರ್ ಸ್ಟಾರ್ ಗಳ ಮಧ್ಯೆಯೇ ನಡೆಯುವ ಗಾಂಧಿ ನಗರದ ಕಥೆಗಳಿಗೆ ವಿಭಿನ್ನವಾಗಿ, ಈ ಕಥೆ ನಡೆಯುವುದು ಮಂಡ್ಯದ ಹಳ್ಳಿಯಲ್ಲಿ ಮತ್ತು ಸಾಮಾನ್ಯ ಪಾತ್ರಗಳ ನಡುವೆ. ಅರಸು ಸಿನೆಮಾ ಸ್ಕ್ರೀನ್ ಅನ್ನು ಉಪಯೋಗಿಸಿಕೊಂಡಿರುವ ರೀತಿ ಅನನ್ಯ. ಪ್ರತಿ ಫ್ರೇಮಿನಲ್ಲು ಮುನ್ನಲೆಯಲ್ಲೋ-ಹಿನ್ನಲೆಯಲ್ಲೋ ಮಂಡ್ಯದ ಪರಿಸರವನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಎತ್ತಿನ ಗಾಡಿ ಕಾಣಿಸುತ್ತದೆ. ಮಕ್ಕಳು ಎತ್ತಿನ ನೊಗದ ಮೇಲೆ ಆಟ ಆಡುವುದು ಕಾಣಿಸುತ್ತದೆ. ಬಾವಿ, ಹುಲ್ಲಿನ ಹೊರೆಗಳು ಕಾಣಿಸುತ್ತವೆ. ನಿರ್ದೇಶಕರು ನಿರೂಪಣೆಯಲ್ಲಿ ನಮ್ಮನ್ನು ಎಲ್ಲೋ ೯೦ರ ದಶಕದ ಹಿಂದಿನ ಕಥಾ ನಿರೂಪಣೆಗೆ ಕೊಂಡೊಯ್ಯುತ್ತಿದ್ದಾರೇನೊ ಎಂದೆನಿಸುತ್ತದೆ. ಅದೇ ಸಿನೆಮಾದ ತಾಜಾತನ. ಅದೇ ಪ್ರೇಕ್ಷಕನನ್ನು ಹಿಡಿದಿಡುವುದು. ಮೊದಲಾರ್ಧದ ನವಿರು ಪ್ರೇಮ ಕಥೆ ಮತ್ತು ಲಘು ಹಾಸ್ಯ ಪ್ರೇಕ್ಷಕರಲ್ಲಿ ಮಂದಹಾಸ ಮೂಡಿಸುತ್ತದೆ. ದ್ವಿತೀಯಾರ್ಧದಲ್ಲಿ ತಿರುವು ಕಾಣುವ ಸಿನೆಮಾ ನಿರೂಪಣಾ ಶೈಲಿಯಲ್ಲೂ ಬದಲಾವಣೆ ಕಾಣುತ್ತದೆ. ಆದರೂ ಬೇಸರವೆನ್ನುವ ರೀತಿಯಲ್ಲಿ ಬದಲಾಗುವುದಿಲ್ಲ. ಇಲ್ಲಿಯವರೆಗೂ ಸಾಮಾನ್ಯ ಮನುಷ್ಯನಾಗಿದ್ದ ಕರ್ಣನಿಗೆ ಕೊನೆಗೆ ಹಿರೋಯಿಸಂ ತುಂಬುತ್ತಾರೆ. ಅದು ಗಾಂಧಿನಗರದ ಅಗತ್ಯತೆಯೇನೋ! ಹಾಗೂ ಕೊನೆಯ ಕೆಲವು ದೃಶ್ಯಗಳು ಮಲೆಯಾಳಂ ಚಲನಚಿತ್ರ "ದೃಶ್ಯಂ"ಅನ್ನು  ನೆನಪಿಗೆ ತರುತ್ತವೆ. ಹೀಗಾಗಿ ನಟನ ಹಿರೋಯಿಸಂ ಅನ್ನು ಅತಾರ್ಕಿಕವಾಗುವುದರಿಂದ ನಿರ್ದೇಶಕರು ತಪ್ಪಿಸಿದ್ದಾರೆ.

ನೀನಾಸಂ ಸತೀಶ್ ತಮ್ಮ ಅಭಿನಯವನ್ನು ಹಿಂದಿನ ಸಿನೆಮಾಗಳಿಗಿಂತ ಉತ್ತಮ ಪಡಿಸಿಕೊಂಡಿದ್ದಾರೆ. ಆರರಿಂದ ಹತ್ತು ಪ್ಯಾಕ್ ಆಕ್ಷನ್ ಹೀರೋಗಳ ಮಧ್ಯೆ ಸಾಮಾನ್ಯರೂ ಹೇಗೆ ಬದುಕಬಹುದು ಎಂಬುದನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಸಿಂಧು ಲೋಕನಾಥ್ ಕೂಡ ಸುಂದರ ಅಭಿನಯ ನೀಡಿದ್ದಾರೆ. ಹಾಗೆ ಇಲ್ಲಿಯೂ ಕೂಡ ಗ್ಲಾಮರ್ ಇಲ್ಲದೆ ಕೂಡ ನಟಿಸಬಹುದು ಎಂಬುದರ ಉದಾಹರಣೆಯಿದೆ. ಸಿನೆಮಾಗೆ ಸುಜ್ಞಾನಮೂರ್ತಿ ಅವರ ಅತ್ಯುತ್ತಮ ಛಾಯಾಗ್ರಹಣವಿದ್ದು, ಸಿನೆಮಾವನ್ನು ಎತ್ತಿ ಹಿಡಿಯುತ್ತದೆ ಹಾಗೂ ಮಂಡ್ಯ-ಹೊಸೂರುಗಳ ಪರಿಸರವನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಹಾಡುಗಳು ಸಿನೆಮಾಗಿ ಪೂರಕವಾಗಿದ್ದು, ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನ ಯಶಸ್ವಿಯಾಗಿದೆ ಎನ್ನಬಹುದು. ಬಪ್ಪಿ ಲಹರಿ ಒಂದು ಹಾಡು ಹಾಡಿದ್ದು, ಹಲವಾರು ಕನ್ನಡದ ಗಾಯಕರನ್ನು ಯತೇಚ್ಚವಾಗಿ ಬಳಸಿಕೊಂಡಿರುವುದು ಅಭಿನಂದನಾರ್ಹ. ಗೀತ ರಚನೆ ಕೂಡ ಪಡ್ಡೆಗಳನ್ನು ಹಿಡಿದಿಡಲು ಯಶಸ್ವಿಯಾಗಿದೆ. ಸತೀಶ್ ಅವನ ಶಿಷ್ಯನಾಗಿ ಹಾಗೂ ಸಿಂಧು ಲೋಕನಾಥ್ ಅವರ ತಂಗಿಯಾಗಿ ನಟಿಸಿರುವ ಬಾಲ ನಟರ ಪಾತ್ರ ಮಾಮೂಲಿ ಗಾಂಧಿ ನಗರದ ವಯಸ್ಸಿಗೆ ಮೀರಿದ ಮಕ್ಕಳ ಪಾತ್ರವಾಗಿದ್ದರೂ, ಉತ್ತಮ ಅಭಿನಯ ನೀಡಿದ್ದಾರೆ. ಉಳಿದಂತೆ ರಾಕ್ಲೈನ್ ಸುಧಾಕರ್ ತಮ್ಮ ಎಂದಿನ ಅಭಿನಯ ನೀಡಿದ್ದಾರೆ.

ಬಂಡೆ ಮಧ್ಯೆ ಚಿಗುರೊಡೆದ ಗಿಡಗಳು ಗಮನಕ್ಕೆ ಬಾರದೆ ಹೋಗಬಹುದು, ಆದರೆ ಅವೂ ದೊಡ್ಡವಾಗಿ ನೆರಳು ಕೊಡುತ್ತವೆ. ಆದರೆ ಈ ಸಿನೆಮಾ ಚಿಗುರಿನಲ್ಲಿಯೇ ಗಮನಾರ್ಹವಾಗಿದ್ದು ಪ್ರೇಕ್ಷಕರನ್ನು ತಣಿಸಬಲ್ಲದು. ಹೋಗಿ ಒಮ್ಮೆ ನೋಡಿ!

- ಗುರುಪ್ರಸಾದ್
guruprasad.n@kannadaprabha.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com