ಅತಾರ್ಕಿಕತೆಯ ದಕ್ಷತೆ ಮೆರೆದಿರುವ ದಕ್ಷ

ಯಾವುದೇ ಸಂಕಲನ ಇಲ್ಲದೆ ಒಂದೆ ಟೇಕ್ ನಲ್ಲಿ ಚಿತ್ರೀಕರಣ ಮಾಡಿರುವ ಸಿನೆಮಾ 'ದಕ್ಷ'ನೊಂದಿಗೆ ಎಸ್ ನಾರಾಯಣ್ ಹಿಂದಿರುಗಿದ್ದಾರೆ.
ದಕ್ಷ ಚಲನಚಿತ್ರ ವಿಮರ್ಶೆ
ದಕ್ಷ ಚಲನಚಿತ್ರ ವಿಮರ್ಶೆ

ಬೆಂಗಳೂರು: ಯಾವುದೇ ಸಂಕಲನ ಇಲ್ಲದೆ ಒಂದೆ ಟೇಕ್ ನಲ್ಲಿ ಚಿತ್ರೀಕರಣ ಮಾಡಿರುವ ಸಿನೆಮಾ 'ದಕ್ಷ'ನೊಂದಿಗೆ ಎಸ್ ನಾರಾಯಣ್ ಹಿಂದಿರುಗಿದ್ದಾರೆ. ಈ ಸಿಂಗಲ್ ಕಟ್ ಸಿನೆಮಾ ನಿಜವಾಗಿಯೂ ಸಿನೆಮಾ ನೋಡುವ ಹೊಸ ಅನುಭವವನ್ನೇನಾದರೂ ನೀಡುತ್ತದೆಯೇ? ಎಸ್ ನಾರಾಯಣ್ ಹೆಣೆದಿರುವ ಕಥೆ ಈ ಸಿಂಗಲ್ ಟೇಕ್ ಸಿನೆಮಾ ಚೌಕಟ್ಟಿಗೆ ಹೊಂದುವಂತಿದೆಯೇ? ದುನಿಯಾ ವಿಜಯ್ ಅವರ ನಟನೆ ಇದಕ್ಕೆ ಪೂರಕವಾಗಿದೆಯೇ?

ಭಯೋತ್ಪಾದನಾ ಪ್ರಕರಣವೊಂದರಲ್ಲಿ ಮುಂದಿನ ದಿನ ತೀರ್ಪು ನೀಡಬೇಕಿರುವುದರಿಂದ ನ್ಯಾಯಾಧೀಶ(ಸುಚೇಂದ್ರ ಪ್ರಸಾದ್) ಅವರ ಮನೆಯನ್ನು ಮೂರು ಪೇದೆಗಳು ಕಾವಲು ಕಾಯುತ್ತಿರುತ್ತಾರೆ. ಈ ಪೇದೆಗಳಿಗೆ ಎಂತದೋ ಸ್ಪ್ರೇ ಸಿಂಪಡಿಸಿ ನ್ಯಾಯಾಧೀಶನ ಮಗಳ (ನೇಹಾ ಪಾಟೀಲ್) ಪ್ರಿಯಕರ (ಪಂಕಜ್) ಮನೆಹೊಕ್ಕಿ ಸರಸದಲ್ಲಿರಬೇಕಾದರೆ, ಕೆಲವು ಉಗ್ರಗಾಮಿಗಳು ಆ ಪೇದೆಗಳನ್ನು ಕೊಂದು ನ್ಯಾಯಧೀಶರ ಮನೆಹೊಕ್ಕು ಜೈಲಿನಲ್ಲಿರುವ ತಮ್ಮ ಸಹಚರರ ಪರವಾಗಿ ತೀರ್ಪನ್ನು ಬದಲಿಸುವಂತೆ, ಮೇಲೆ ತಿಳಿಸಿದ ಜೋಡಿಯನ್ನು ಹೊರತುಪಡಿಸಿ ಮನೆಯವರನ್ನೆಲ್ಲಾ ಒತ್ತೆಯಿರಿಸಿಕೊಳ್ಳುತ್ತಾರೆ. ಈ ಜೋಡಿಗಳು ಒಂದು ಚೆಂಡಿನ ಮೇಲೆ 'ಸಹಾಯ ಮಾಡಿ' ಎಂದು ಬರೆದು ಹೊರಗೆ ಎಸೆಯುವುಕ್ಕೂ, ಅದನ್ನು ನೋಡಿ ಕಮ್ಯಾಂಡರ್ 'ದಕ್ಷ' (ದುನಿಯಾ ವಿಜಯ್) ಮನೆ ಹೊಕ್ಕುತ್ತಾನೆ. ದಕ್ಷ ಬಂದಮೇಲೇನಾಗುತ್ತದೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ!

ಎಸ್ ನಾರಾಯಣ್ ಬಹಳ ದಿನಗಳ ನಂತರ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಹುಷಃ ಕನ್ನಡ ಚಿತ್ರರಂಗದ ಬೇರೆ ಯಾವುದೇ ನಿರ್ದೇಶಕ ಧೈರ್ಯ ಮಾಡದ ಸಾಹಸವೊಂದಕ್ಕೆ ಮುಂದಾಗಿರುವುದು ಅಭಿನಂದನೀಯವಾದರೂ, ಸಿನೆಮಾ ಕಟ್ಟುವ ಪ್ರಕ್ರಿಯೆಯಲ್ಲಿ ಎಲ್ಲೋ ಅಥವಾ ಹಲವೆಡೆ ಎಡವಿದ್ದಾರೆ. ಈ ಹಿಂದೆ ಸಿನೆಮೋತ್ಸವದಲ್ಲಿ 'ಫಿಶ್ ಅಂಡ್ ಕ್ಯಾಟ್' ಎನ್ನುವ ಸಿಂಗಲ್ ಟೇಕ್ ಹಾರರ್ ಸಿನೆಮಾ ತೋರಿಸಿದ್ದರು. ಹಾರರ್ ಸಿನೆಮಾ ಪ್ರಾಕಾರಕ್ಕೆ ಬಹಳ ಪೂರಕವಾದದ್ದು ಈ ರೀತಿಯ ಚಿತ್ರೀಕರಣ. ಅಂದರೆ ಚಲನಚಿತ್ರ ಪ್ರೇಕ್ಷಕರಿಗೆ 'ಪ್ರೆಡಿಕ್ಟಬಲ್' ಆಗಿರುವುದಿಲ್ಲ. ಸಿನೆಮಾ ನೋಡುತ್ತಿದ್ದಂತೆ ಪ್ರೇಕ್ಷಕರಿಗೆ ಉದ್ವೇಗ ಹೆಚ್ಚಾಗುತ್ತಾ ಹೋಗಬೇಕು. ಸಂಕಲನ ಬೇರೆ ಇರುವುದಿಲ್ಲವಾದ್ದರಿಂದ ಹೆಚ್ಚಿನ ತಾಲೀಮು ಇದಕ್ಕೆ ಅವಶ್ಯಕತೆ ಇರುತ್ತದೆ ಹಾಗೂ ಎಲ್ಲರ ನಟನೆ ಪಕ್ವವಾಗಿರಬೇಕಿರುತ್ತದೆ.

ದಕ್ಷ ಸಿನೆಮಾದ ಚಿತ್ರಕತೆ ಮೊದಲಾರ್ಧ (ಸಿಂಗಲ್ ಟೇಕ್ ಆಗಿರುವುದರಿಂದ ಮಧ್ಯಂತರ ಎಂದೇನು ಇಲ್ಲ, ಮೊದಲ ಮುಕ್ಕಾಲು ಘಂಟೆ ಎಂದು ತಿಳಿದುಕೊಳ್ಳಬಹುದು) ಈ ಚಿತ್ರೀಕರಣ ಮೆಥಡ್ ಗೆ ತುಸು ಪೂರಕವಿದ್ದು, ಆ ಟೆನ್ಷನ್ ಅನ್ನು ತೆರೆಯ ಮೇಲೆ ತೋರಿಸಲು ಒಂದು ಮಟ್ಟಕ್ಕೆ ನಿರ್ದೇಶಕ ಸಫಲರಾಗಿದ್ದರು, ದುನಿಯಾ ವಿಜಯ್ ಚಲನಚಿತ್ರಕ್ಕೆ ಹೊಕ್ಕ ನಂತರ, ಸಿನೆಮಾ ಅವರ ಅತಿ ಹೀರೋಯಿಕ್ ನಟನೆಯಿಂದ ತೀರಾ ಪ್ರೆಡೀಕ್ಟೆಬಲ್ ಎನಿಸಿ, ಧೊಪ್ಪನೆ ಕೆಳಗೆ ಬೀಳುತ್ತದೆ. ಮುಂದೇನಾಗುತ್ತದೆ ಎಂಬ ಕುತೂಹಲವನ್ನು ಪ್ರೇಕ್ಷಕ ಕೈಚೆಲ್ಲಿ ಯಾವಾಗ ಮುಗಿಯುತ್ತದೆ ಎಂದು ಕಾದು ಕೂರುವಂತಾಗುತ್ತದೆ. ಬಹುಶಃ ಪೂರ್ವ ಯೋಜನೆ ಮತ್ತು ತಾಲೀಮಿನಲ್ಲಿ ಕೊರತೆಯೂ ಎದ್ದು ಕಾಣುತ್ತದೆ. ಸಿನೆಮಾದ ಪೂರ್ತಿ ಕಥಾಹಂದರದಲ್ಲಿ ಅತಾರ್ಕಿಕತೆ ಎದ್ದು ಕಾಣುತ್ತದೆ. ಒಂದು ಮಹತ್ತ್ವದ ಭಯೋತ್ಪಾದನಾ ಪ್ರಕರಣದ ನ್ಯಾಯಾಧೀಶನ ಮನೆಯ ಗೇಟಿನ ಮುಂದಷ್ಟೇ ಬರೀ ಮೂರು ಜನ ಪೇದೆಯರು ಕಾವಲು ಕಾಯುವುದು ಅವರಿಗೆ ಏನನ್ನೋ ಸಿಂಪಡಿಸಿ ಅತಿ ಸುಲಭವಾಗಿ ಮನೆಯ ಒಳಹೊಕ್ಕುವುದು, ಮನೆಯ ಕೆಲಸಗಾರನೊಬ್ಬನಿಗೆ ಗುಂಡು ಹೊಡೆದಾಗ ರಕ್ತದ ಕುರುಹೂ ಕಾಣದೆ ಇರುವದು ಇವೆಲ್ಲವೂ ಸಿನೆಮಾವನ್ನು ಹಿಂದಕ್ಕೆ ನೂಕುತ್ತವೆ. ಆದರೆ ಇವೆಲ್ಲದ್ದಕಿಂತ ಜನರನ್ನು ಆಚೆಗೆ ನೂಕುವುದು ದುನಿಯಾ ವಿಜಯ್ ಅವರ ನಟನೆ ಮತ್ತು ಸಂಭಾಷಣೆ. ಸೇನಾ ಕಮ್ಯಾಂಡರ್ ಪಾತ್ರ ಎಂದು ನೆಪಕ್ಕಿದ್ದರೂ, ವಿಜಯ್ ಅವರ ನಟನೆ ಸೇನೆಗೆ ಅಥವಾ ಪೊಲೀಸ್ ನೌಕರಿ ಸಿಗದೇ ಇದ್ದಾಗ ಬದಲಾಗುವ ಹುಚ್ಚನಂತಹ ಯುವಕನ ಪಾತ್ರವನ್ನು ನಿಭಾಯಿಸಿದ್ದಾರೇನೋ ಎಂದೆನಿಸದೆ ಇರಲಾರದು. ಅತಿರಂಜಿತ ಸಂಭಾಷಣೆ, ತಿಕ್ಕಲು ನಟನೆ ಸಿನೆಮಾದ ಎರಡನೇ ಭಾಗವನ್ನು ತಿಕ್ಕಲೆಬ್ಬಿಸಿದೆ. ಬುಲೆಟ್ ಪ್ರಕಾಶ್ ಮತ್ತು ರಂಗಾಯಣ ರಘು ಅವರ ಹಾಸ್ಯ ಸನ್ನಿವೇಶಗಳು ಕೆಲವು ಕಡೆ ಕಚಗುಳಿ ನೀಡಿದರೂ, ಸಿನೆಮಾಗೆ ಪೂರಕವಾದ ಸನ್ನಿವೇಶಗಳಲ್ಲ ಅವು. ನ್ಯಾಯಾಧೀಶನಾಗಿ ಸುಚೇಂದ್ರ ಪ್ರಸಾದ್, ಅವರ ಪತ್ನಿಯ ಪತ್ರದಲ್ಲಿ ಪದ್ಮಜಾ ರಾವ್, ನ್ಯಾಯಾಧೀಶನ ಮಗಳ ಪಾತ್ರದಲ್ಲಿ ನೇಹಾ ಪಾಟಿಲ್ ಅವರ ಪ್ರಿಯಕರನ ಪಾತ್ರದಲ್ಲಿ ಪಂಕಜ್ ಸಾಧಾರಣ ನಟನೆ ನೀಡಿದ್ದಾರೆ. ಎಸ್ ನಾರಾಯಣ್ ಅವರೇ ನೀಡಿರುವ ಸಂಗೀತ ಹಿತಕರವಾಗಿಲ್ಲ. ಸಿಂಗಲ್ ಟೇಕ್ ಗೆ ಕ್ಯಾಮರಾ ಕೆಲಸ ಪೂರಕವಾಗಿದೆ.

ಮೌಲ್ಯಗಳು, ಮಾನವೀಯತೆ, ದೇಶದ ಸಂಸ್ಕೃತಿ ಇವುಗಳನ್ನು ಗೌರವಿಸಿವುದು ರಾಷ್ಟ್ರಪ್ರೇಮ. ದೇಶದ ಬಗ್ಗೆ ಅತೀವ, ಅಂಧ, ಅತಾರ್ಕಿಕ ಅಭಿಮಾನ ಮತ್ತು ಅದರಲ್ಲಿ ಹೊರಳಾಡಿ ತಿಕ್ಕಲುತನದಿಂದ ದೇಶವನ್ನೆಲ್ಲ ಏಕರೂಪವನ್ನಾಗಿಸುವ ಧ್ಯೇಯ ರಾಷ್ಟ್ರೀಯತೆ. ಎರಡು ಒಂದೇ ರೀತಿ ಕಂಡರೂ ಅಂಧ ರಾಷ್ಟ್ರೀಯತೆ ದೇಶಕ್ಕೆ, ದೇಶದ ಏಕತೆಗೆ, ಸಂಸ್ಕೃತಿಗೆ ಮಾರಕ. ಈ ರೀತಿಯ ಅಂಧಾಭಿಮಾನವನ್ನು ಪೋಷಿಸುವಂತಹದ್ದು, ಬೆಳೆಸುವಂತಹುದ್ದು ಈ ಚಲನಚಿತ್ರದಲ್ಲಿನ ದುನಿಯಾ ವಿಜಯ್ ಅವರ ಪಾತ್ರ. ಸಂವಿಧಾನದ ವಿವಿಧ ಅಂಗಗಳಾದ ನ್ಯಾಯಾಂಗ, ಪೊಲೀಸ್ ವ್ಯವಸ್ಥೆ ಇವುಗಳನ್ನೆಲ್ಲಾ ಧಿಕ್ಕರಿಸಿ ತನ್ನ ತಿಕ್ಕಲುತನದಿಂದ ಎಲ್ಲವನ್ನು ತನ್ನ ಹೀರೋಯಿಕ್ ಹಿಂಸೆಯಿಂದ ಕೊನೆಗಾಣಿಸುತ್ತೇನೆ ಎಂಬಂತಹ ಪಾತ್ರ ದುನಿಯಾ ವಿಜಯ್ ಅವರದ್ದು. ಅವರ ಪಾತ್ರ ಇತ್ತ ನಿಷ್ಟಾವಂತ ಸಿನಿಕರಿಗೂ ನ್ಯಾಯ ಸಲ್ಲಿಸಿಲ್ಲ. ಪೊಲೀಸ್ ವ್ಯವಸ್ಥೆಯನ್ನು ಸುಖಾಸುಮ್ಮನೆ ದೂಷಿಸುವುದು, ನ್ಯಾಯಂಗವನ್ನು ದೂಷಿಸುವುದು ಸಿನೆಮಾದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಯಾರೋ ಒಬ್ಬನ ಕೈಲಿ 'ವಂದೇ ಮಾತರಂ' ಹೇಳಿಸುವ ದೃಶ್ಯಗಳು ಕೆಟ್ಟದಾಗಿ ಮೂಡಿಬಂದಿದೆ. ಅಂಧ ರಾಷ್ಟ್ರೀಯತೆಗೆಗಾಗಿ ಹಿಂಸೆಯನ್ನು ವೈಭವೀಕರಿಸುವ ಇಂತಹ ಕಲ್ಪನೆಗಳ ಬಗ್ಗೆ ನಿರ್ದೇಶಕರು ಸೂಕ್ಷ್ಮತೆಯಿಂದ, ಸಂಯಮದಿಂದ ಯೋಚಿಸಬೇಕು. ಇದರಿಂದ ನಿರ್ದೇಶಕ ಕಲಿಯಬಹುದಾದ ಸರಳ ಪಾಠ ಕಥೆ-ಚಿತ್ರಕಥೆ-ನಿರ್ದೇಶನ-ಸಂಗಿತ ಎಲ್ಲವನ್ನೂ ಒಬ್ಬನೇ ನಿರ್ವಹಿಸುವ ಅವಶ್ಯಕತೆ ಖಡಾಖಂಡಿತವಾಗಿ ಇಲ್ಲವೇ ಇಲ್ಲ!

-ಗುರುಪ್ರಸಾದ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com