ಕುಣಿಯಲಾಗದ ನೆಲ 'ಬೆಳ್ಳಿತೆರೆ'

ಈಗ ಈ ಸಾಲಿನಲ್ಲಿ ಹೊಸದಾಗಿ ಸೇರಿರುವವರು ಮತ್ತೊಬ್ಬ ಪ್ರಸಿದ್ಧ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಇವರಿಗೆ ಸಿನೆಮಾ ಕಲೆ ನಿಜವಾಗಿಯೂ ಒಲಿದಿದೆಯೇ?
'ಎಂದೆಂದಿಗೂ' ಸಿನೆಮಾ ವಿಮರ್ಶೆ
'ಎಂದೆಂದಿಗೂ' ಸಿನೆಮಾ ವಿಮರ್ಶೆ

ಬೆಂಗಳೂರು: ವಿಭಿನ್ನ ಕಲಾಪ್ರಾಕಾರಗಳ ಸಾಧಕರು ಸಿನೆಮಾಗಳನ್ನು ನಿರ್ದೇಶಿಸುವುದು ಹೊಸದೇನಲ್ಲ. ಇತ್ತೀಚಿಗೇ ಹೇಳುವುದಾದರೆ ಕಲಾವಿದರಾದ ಪ್ರಕಾಶ್ ಬಾಬು ಮತ್ತು ಮಂಸೋರೆ ಪರ್ಯಾಯ ಸಿನೆಮಾಗಳನ್ನು (ಕ್ರಮವಾಗಿ 'ಅತ್ತಿಹಣ್ಣು ಮತ್ತು ಕಣಜ' ಹಾಗೂ 'ಹರಿವು') ಮಾಡಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡವರು. ಖ್ಯಾತ ನೃತ್ಯನಿರ್ದೇಶಕ ಹರ್ಷ ಕೂಡ ಕನ್ನಡದಲ್ಲಿ ವಾಣಿಜ್ಯಾತ್ಮಕ ಚಲನಚಿತ್ರಗಳನ್ನು ಮಾಡಿ ಹೆಸರಾಗಿದ್ದಾರೆ. ಈಗ ಈ ಸಾಲಿನಲ್ಲಿ ಹೊಸದಾಗಿ ಸೇರಿರುವವರು ಮತ್ತೊಬ್ಬ ಪ್ರಸಿದ್ಧ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಇವರಿಗೆ ಸಿನೆಮಾ ಕಲೆ ನಿಜವಾಗಿಯೂ ಒಲಿದಿದೆಯೇ?

ಜ್ಯೋತಿ (ರಾಧಿಕಾ ಪಂಡಿತ್) ಮತ್ತು ಕೃಷ್ಣ (ಅಜಯ್ ರಾವ್) ಮದುವೆಯಾಗುತ್ತಾರೆ. ಜ್ಯೋತಿಷಿಯೊಬ್ಬ ಹೇಳುವಂತೆ, ಕೃಷ್ಣನ ಜಾತಕದಲ್ಲಿ ಕಂಟಕವಿದ್ದು ತಮ್ಮ ಮೊದಲರಾತ್ರಿಯನ್ನು ವಿದೇಶದಲ್ಲಿ ಆಚರಿಸಿಕೊಳ್ಳುವಂತೆ ಹೇಳಿದ್ದಕ್ಕೂ ಹಾಗೂ ಸಾಫ್ಟ್ವೇರ್ ಎಂಜಿನಿಯರ್ ಕೃಷ್ಣನಿಗೆ ಸ್ವೀಡನ್ ನಲ್ಲಿ ಉದ್ಯೋಗವೂ ಇರುವುದಕ್ಕೂ, ಜ್ಯೋತಿಯ ವಿರೋಧದ ನಡುವೆಯೂ ಸ್ವೀಡನ್ ಗೆ ತೆರಳುತ್ತಾರೆ. ಸ್ವೀಡನ್ ನಲ್ಲಿ ಮುಂದೇನಾಗುತ್ತದೆ ಎಂಬುದೇ ಕಥೆ.

ಸಿನೆಮಾ ಪ್ರಾರಂಭವಾಗುವುದೇ ನಟಿ ತನ್ನ ಕುಟುಂಬದವರನ್ನು ಪರಿಚಯಿಸುವ ಸವಕಲು ದೃಶ್ಯದಿಂದ ಹಾಗು ತಿಕ್ಕಲುತನದಿಂದ ಕೂಡಿದ-ಅರ್ಥವಿಲ್ಲದ ಸಿನೆಮಾಗೆ ಸಂಬಂಧವೇ ಇರದ ಅಜಯ್ ರಾವ್ ಅವರ ಒಂದು ಫೈಟ್ ನಿಂದ. ನಟನನ್ನು ಎಸ್ಟಾಬ್ಲಿಶ್ ಮಾಡುವ ದಟ್ಟ ದರಿದ್ರ ವಿಧಾನ ಇದು ಎಂದರೆ ಅತಿಶಯವಾಗಲಾರದು. ನಂತರ ಒಂದು ಹಾಡು. ಹೀಗೆ ಮೊದಲಾರ್ಧ ಸತುವಿಲ್ಲದ ಸಂಭಾಷಣೆಗಳಿಂದ ಅರ್ಥವಿಲ್ಲದೆ ಮುಂದುವರೆದು ಬೇಸರ ಮೂಡಿಸುತ್ತದೆ. ನಾಯಕ ನಟ ಅಜಯ್ ರಾವ್ ರೈತರ ತೊಂದರೆಗಳನ್ನು ನಿವಾರಿಸುವ, ತಾನು ಸಾಫ್ಟ್ವೇರ್ ಎಂಜಿನಿಯರ್ ಆಗಿ ಮಾಡುತ್ತಿರುವ ಒಂದು ಪ್ರಾಜೆಕ್ಟ್ ಅನ್ನು ಎಷ್ಟು ಕೆಟ್ಟದಾಗಿ ವಿವರಿಸಬಹುದೋ ಅಷ್ಟು ಕೆಟ್ಟದಾಗಿ ಬೋಧಿಸುತ್ತಾರೆ. ರೈತರ ತೊಂದರೆಗಳನ್ನು ನಿವಾರಿಸುವ ಈ ಯೋಜನೆ ರೈತರ ತೊಂದರೆಗಳ ಬಗ್ಗೆ ಸ್ವಲ್ಪೇ ಸ್ವಲ್ಪ ಅರಿವಿರುವವರಿಗೂ ಹಾಸ್ಯಾಸ್ಪದ ಎಂದೆನಿಸುತ್ತದೆ. ಒಂದು ಪಾತ್ರವನ್ನು ಸೃಷ್ಟಿಸುವಾಗ ಇರಬೇಕಾದ ಪೂರ್ವಸಿದ್ಧತೆ, ದಕ್ಷತೆ, ಮಾಧ್ಯಮದ ಮೇಲಿನ ಪ್ರಾಮಾಣಿಕತೆ ಮತ್ತು ಸಂಶೋಧನೆಯ ಕೊರತೆ ಧಾರಾಳವಾಗಿ ಎದ್ದು ಕಾಣುತ್ತದೆ. ಪ್ರತಿ ದೃಶ್ಯದಲ್ಲೂ ಬರುವ ಅಬ್ಬರದ ಹಿನ್ನಲೆ ಸಂಗೀತ (ಹಿನ್ನೆಲೆ ಸಂಗೀತ ಎಂಬುದು ತಾಂತ್ರಿಕ ಪದ ಅಷ್ಟೇ.. ಹಿನ್ನೆಲೆ ಗಲಾಟೆ ಎನ್ನಬಹುದು) ಕರ್ಣ ಕಠೋರವಾಗಿದ್ದು ತಲೆಗೆ ಸುತ್ತಿಗೆ ಬಡಿದಂತಾಗುತ್ತದೆ. ಅತಿಮಾನುಷ ಶಕ್ತಿಯ ಕಥೆಯೊಂದನ್ನು ಹೇಳಲು ಹೋಗಿ ಪ್ರೇಕ್ಷಕರಿಗೆ ಮನಮುಟ್ಟುವ ಕಥೆಯನ್ನು ಹೆಣೆಯಲು ಇಮ್ರಾನ್ ಸರ್ದಾರಿಯ ದಯನೀಯವಾಗಿ ಸೋತಿದ್ದಾರೆ. ಹಲವಾರು ದೃಶ್ಯಗಳು-ಘಟನೆಗಳು ವಿವಿಧ ರೂಪದಲ್ಲಿ ಪುನರಾವರ್ತನೆಯಾಗಿ 'ಎಂದೆಂದಿಗೂ' ಮುಗಿಯದ ಕಥೆಯಾಗುತ್ತದೇನೋ ಎಂದೆನಿಸುತ್ತದೆ. ಇದ್ದುದರಲ್ಲಿ ಸ್ವಲ್ಪ ಹಿತವೆನಿಸುವುದು ರಾಧಿಕಾ ಪಂಡಿತ್ ಅವರ ನಟನೆ. ಅವರಿಗೆ ಕನಸು ಬಿದ್ದಂತೆ, ಭಯಭೀತರಾಗುವ ದೃಶ್ಯಗಳನ್ನು ಚೆನ್ನಾಗಿ ನಟಿಸಿದ್ದಾರೆ. ಅಜಯ್ ರಾವ್ ನಟನೆ ಪರವಾಗಿಲ್ಲ. ಉಳಿದ ಪೋಷಕ ವರ್ಗಕ್ಕೆ ಹೆಚ್ಚೇನು ಕೆಲಸವಿಲ್ಲ. ಆಗಾಗ ಮಧ್ಯ ತೂರಿ ಬರುವ ಹಾಡುಗಳು ಪ್ರೇಕ್ಷಕನ್ನು ಜರ್ಝರಿತನನ್ನಾಗಿಸುತ್ತದೆ. ಸ್ವಾಭಾವಿಕ ಹರಿವಿಲ್ಲದ ಕೃತಕ ಗೀತರಚನೆ, ಅದಕ್ಕೆ ತಕ್ಕಂತಹ ವಿ ಹರಿಕೃಷ್ಣ ಅವರ ಅಹಿತಕರ ಸಂಗೀತ ಸಿನೆಮಾಗೆ ಹೆಚ್ಚು ಅಪಾಯವನ್ನು ತಂದೊಡ್ಡುತ್ತದೆ. ಒಂದು ಹಾಡನ್ನಷ್ಟೇ ಕೇಳುವಂತಿರುವುದು. ಒಟ್ಟಿನಲ್ಲಿ ಹೆಚ್ಚು ಪರಿಶ್ರಮವಿಲ್ಲದೆ, ಸಿದ್ಧತೆಯಿಲ್ಲದೆ, ದೃಶ್ಯಮಾಧ್ಯಮದ ಅಂತರಂಗವನ್ನು ಹೊಕ್ಕಲಾರದೆ ಇಮ್ರಾನ್ ಸರ್ದಾರಿಯಾ ತಮ್ಮ ಪಾತ್ರವನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ ಚೊಚ್ಚಲ ಪ್ರಯತ್ನದಲ್ಲೇ ಎಡವಿದ್ದಾರೆ.

ಸಿನೆಮಾಗಳು ವೈಚಾರಿಕತೆಯನ್ನು ಮೆರೆಯಬೇಕು ಎಂದೇನಿಲ್ಲ. ಎಲ್ಲವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ತೋರಿಸಬೇಕೆಂದೇನಿಲ್ಲ. ಹಾಗೆ ನೋಡಿದರೆ ವಾಣಿಜ್ಯ ದೃಷ್ಟಿಯಿಂದ ಮಾಡುವ ಸಿನೆಮಾಗಳಲ್ಲಿ ಹೀರೋಗಳು ಎನಿಸಿಕೊಂಡವರು ಮಾಡುವುದೆಲ್ಲವೂ ಅವೈಚಾರಿಕತನದ, ಅಸಡ್ಡೆತನದ ಪರಮಾವಧಿಯೇ. ಆದರೆ ಈ ಸಿನೆಮಾದಲ್ಲಿ ತೋರಿಸುವ ಅಂಧಾಚರಣೆ ಸ್ವಲ್ಪ ಅತಿಯಾಯಿತೇನೋ ಎಂಬ ಸಂಶಯ ಮೂಡದೆ ಇರದು. ಅಥವಾ ಆ ಅವೈಚಾರಿಕತೆಯನ್ನು ಸಮರ್ಥಿಸಿಕೊಳ್ಳುವ ಕಥೆ ಅಥವಾ ನಟನೆಯನ್ನು ನಿರ್ದೇಶಕ ತೆಗೆಯಲು ಸಾಧ್ಯವಾಗಿಲ್ಲ. ಜ್ಯೋತಿಷಿಯೊಬ್ಬ ಕಂಟಕ ಕಳೆಯಲು ಮೊದಲ ರಾತ್ರಿಗೆ ವಿದೇಶಕ್ಕೆ ಹೋಗು ಎನ್ನುವುದಾಗಲೀ, ಸ್ವೀಡನ್ ನಲ್ಲಿ ಇದ್ದುದ್ದರಿಂದ ಸಮಯದ ವ್ಯತ್ಯಾಸದಿಂದ ಕಂಟಕ ಕಳೆಯಿತು ಎನ್ನುವ ಮಾತುಗಳಾಗಲಿ ಅತೀ ಮೂರ್ಖತನದಿಂದ ಕೂಡಿದವು ಎಂದೆನಿಸುತ್ತದೆ. ಗಂಡನನ್ನು ಉಳಿಸಲು ನಾಯಕ ನಟಿ ದೇವಿಯಾಗುವುದು ಇತ್ಯಾದಿ ಎಲ್ಲೋ ಪ್ರೇಕ್ಷಕನಿಗೆ ಕೆಟ್ಟ ಸಂದೇಶ ನೀಡುತ್ತಿದೆಯೇ ಎಂದೆನಿಸದೆ ಇರದು. ಇಂತಹ ಕಂದಾಚಾರದ ಸಿನೆಮಾಗಳನ್ನು ಮಾಡಿದಾಗ ಬಹುಶಃ ಪ್ರೇಕ್ಷಕರನ್ನು ಹಿಡಿದಿಡಲು ಕುತೂಹಲ ಹುಟ್ಟಿಸುವ ಅಂಶಗಳು ಸಿನೆಮಾದಲ್ಲಿ ಇರಬೇಕು. ದ್ವಿತಿಯಾರ್ಧದಲ್ಲಿ ಒಂದರ್ಧ ಘಂಟೆ ಉಳಿಯುವ ಆ ಕುತೂಹಲ ಬಿಟ್ಟರೆ 'ಎಂದೆಂದಿಗೂ' ಸಿನೆಮಾದಲ್ಲಿ ಅಂತಹ ಕುತೂಹಲಿ ಅಂಶಗಳೇನು ಕಂಡುಬರುವುದಿಲ್ಲ. ಹಾಗೆಯೇ ನಾಯಕ ನಟ ರೈತರ ಬವಣೆಗಳನ್ನು ನಿವಾರಿಸಲು ರೈತರಿಗಾಗಿ ಸಾಮಾಜಿಕ ಅಂತರ್ಜಾಲವನ್ನು ಸೃಷ್ಟಿಸಿ ಅವರ ಕಷ್ಟಗಳನ್ನು ಪರಿಹಾರ ಮಾಡಿಬಿಡುತ್ತೇನೆ ಎಂಬಂತಹ ಮೂರ್ಖತನದ, ಅಸೂಕ್ಷ್ಮ, ಕ್ಷುಲ್ಲಕ ಮಾತುಗಳು ಕೂಡ ಬೇಜವಬ್ದಾರಿತನವನ್ನು ತೋರಿಸುತ್ತದೆ.

- ಗುರುಪ್ರಸಾದ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com