ಚೆಲ್ಲಾಟವಾಡೋ ಕೃಷ್ಣನ 'ಬುಗುರಿ'!

ಗಣೇಶ್ ಮತ್ತೊಮ್ಮೆ ಫ್ಯಾಮಿಲಿ ಆಡಿಯನ್ಸ್, ಮುಖ್ಯವಾಗಿ ಹೆಂಗೆಳೆಯರಿಗೆ ಹತ್ತಿರವಾಗುವ ಎಲ್ಲಾ ಸೂಚನೆ ಈ ಚಿತ್ರದಿಂದ ಸಿಕ್ಕಿದೆ.
ಬುಗುರಿ ಚಿತ್ರ ವಿಮರ್ಶೆ
ಬುಗುರಿ ಚಿತ್ರ ವಿಮರ್ಶೆ

ಎಂ.ಡಿ ಶ್ರೀಧರ್ ನಿರ್ದೇಶನದ, ನಟ ಗಣೇಶ್ ಅಭಿನಯದ 'ಬುಗುರಿ' ಚಿತ್ರದ ಬಗ್ಗೆ ಒಂದೇ ಪೆಟ್ಟಿಗೆ ಫ್ಯಾನ್ ಭಾಷೆಯಲ್ಲಿ ಹೇಳುವುದಾದರೆ 'ಫಸ್ಟ್ ಹಾಫ್ ಓಕೆ, ಸೆಕೆಂಡ್ ಹಾಫ್ ಸೂಪರ್ರು'. ಎಂ.ಡಿ ಶ್ರೀಧರ್ ಮತ್ತು ಗಣೇಶ್ ಕಾಂಬಿನೇಶನ್ ನಲ್ಲಿ ಹಿಂದೆ ಮೂಡಿಬಂದ 'ಚೆಲ್ಲಾಟ' ಮತ್ತು 'ಕೃಷ್ಣ' ಎರಡೂ ಚಿತ್ರಗಳು ಯಶಸ್ವಿಯಾಗಿದ್ದವು. ಅಲ್ಲದೆ 'ಶ್ರಾವಣಿ ಸುಬ್ರಮಣ್ಯ'ದ ನಂತರ ಗಣೇಶ್ ಗೂ ಬ್ರೇಕ್ ಸಿಕ್ಕಿರಲಿಲ್ಲ. ಹಾಗಾಗಿ 'ಬುಗುರಿ' ಮೇಲೆ ನಿರೀಕ್ಷೆಗಳಿದ್ದುದು ಸಹಜ. 'ಚೆಲ್ಲಾಟ', 'ಕೃಷ್ಣ' ಚಿತ್ರಗಳನ್ನು ಇಷ್ಟಪಟ್ಟವರಿಗೆ ಈ ಚಿತ್ರವೂ ರುಚಿಸುವುದರಲ್ಲಿ ಸಂಶಯವಿಲ್ಲ. ರೊಮ್ಯಾಂಟಿಕ್ ಚಿತ್ರಕ್ಕೂ ಬುಗುರಿಗೂ ಎತ್ತಣದೆತ್ತ ಸಂಬಂಧ ಎಂದು ಪರಾ ಪರಾ ಕೆರೆದುಕೊಳ್ಳುವವರಿಗೆ ಉತ್ತರ, ಚಿತ್ರದಾರಂಭದಲ್ಲಿ ರಂಗು ರಂಗಾಗಿ ಬರುವ ಟೈಟಲ್ ಕಾರ್ಡ್ ಮತ್ತು 'ಈ ಭೂಮಿ ಬಣ್ಣದ ಬುಗುರಿ' ಹಳೆ ಹಾಡಿನಲ್ಲಿ ದೊರಕುತ್ತದೆ. ಎಂ.ಡಿ ಶ್ರೀಧರ್, ಗಣೇಶ್ ಬಾಯಲ್ಲಿ ತತ್ವಜ್ಞಾನವನ್ನು ಪ್ರೇಕ್ಷಕರಿಗೆ ಒಪ್ಪಿಸಿರುವುದು ಅದಕ್ಕೆ ಸಾಕ್ಷ್ಯ ಒದಗಿಸುತ್ತದೆ.

ಚಿತ್ರದ ನಾಯಕಿ ಪಾತ್ರದ ಹೆಸರು ನಂದಿನಿ, ಆದರೆ ನಾಯಕನ ಹೆಸರು ಪ್ರೀತಂ ಅಲ್ಲ. 'ಬುಗುರಿ' ನಾಯಕ ಕೂಡ ನಾಯಕಿಯನ್ನು ಪ್ರೀತಿಸುತ್ತಾನೆ ಆದರೆ ಸತ್ ಮೇಲೂ ಇಷ್ಟ ಪಡೋವಷ್ಟಲ್ಲ. 'ಮುಂಗಾರು ಮಳೆ'ಚಿತ್ರದಿಂದ ಕ್ಲೀಷೆಯುಕ್ತ ಸಂಭಾಷಣೆ ಮತ್ತು ದೃಶ್ಯಗಳನ್ನು ಈ ಚಿತ್ರದಲ್ಲಿ ಎರವಲು ಪಡೆದುಕೊಳ್ಳಲಾಗಿಲ್ಲ. ಬಹುಮುಖ್ಯವಾಗಿ ಅಲ್ಲಿನ 'ಪರಾ ಪರಾ' ಡಯಲಾಗು ಇಲ್ಲಿ ಕೇಳಿ ಬರುವುದಿಲ್ಲ. ಈ ಪೀಠಿಕೆ ಏಕೆಂದರೆ 'ಮುಂಗಾರು ಮಳೆ' ಸುರಿದು ಇಲ್ಲಿಗೆ ಒಂಭತ್ತು ವರ್ಷಗಳಾಗಿವೆ, ಆದರೂ ನಟ ಗಣೇಶ್ ಅಭಿನಯದ ಹೊಸ ಚಿತ್ರ ಬಂದಾಗಲೆಲ್ಲ ಆ ಚಿತ್ರವನ್ನು ಮುಂಗಾರು ಮಳೆಯೊಂದಿಗೆ ಹೋಲಿಸುವುದು ನಿಂತಿಲ್ಲ. ಹೆಸರು, ಖ್ಯಾತಿ, ಸಂಪತ್ತು ಎಲ್ಲವನ್ನೂ ಕೊಟ್ಟ ಚಿತ್ರದ ಅತಿ ಎನಿಸುವಂತಹ ಜನಪ್ರಿಯತೆಯೇ ಶಾಪವಾಗುವುದು ಹೀಗೆ. 'ಬರ್ಡ್ ಮ್ಯಾನ್' ಎನ್ನುವ ಆಸ್ಕರ್ ವಿಜೇತ ಚಿತ್ರವೊಂದಿದೆ, ಅದರ ಕತೆಯೂ ಇದೇ. ಹಳೆಯ ಜಮಾನಾದಲ್ಲಿ 'ಸೂಪರ್ ಹೀರೋ' ಚಿತ್ರವೊಂದರಲ್ಲಿ ನಟಿಸಿ ಹೆಸರು ಮಾಡಿದ ನಾಯಕನೊಬ್ಬ ಹೇಗೆ ಅದರ ಖ್ಯಾತಿಯ ನೆರಳಿನಲ್ಲಿ ನರಳುತ್ತಾನೆ ಎನ್ನುವುದು ಆ ಚಿತ್ರದ ಕಥಾವಸ್ತು.

ಚಿತ್ರದ ನಾಯಕ ಕೃಷ್ಣ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್. ಕಷ್ಟಪಟ್ಟು ಓತ್ಲಾ ಹೊಡೆದು ಪದವಿ ಪಡೆದಿದ್ದರೂ ಶಬ್ದ ತರಂಗಗಳಿಂದ ಮೊಬೈಲ್ ಚಾರ್ಜ್ ಆಗುವ ತಂತ್ರಜ್ಞಾನವನ್ನು ಆವಿಷ್ಕರಿಸುವಷ್ಟು ಛಲ ಇರುವಾತ. ಅದರಿಂದಾಗಿ ಮಧ್ಯಮ ವರ್ಗದಿಂದ ಶ್ರೀಮಂತ ವರ್ಗಕ್ಕೆ ಬಡ್ತಿ ಪಡೆಯುತ್ತಾನೆ, ಸಿಂಗಾಪುರ್ ನಲ್ಲಿ ಸ್ವಂತ ಕಂಪನಿ ತೆರೆಯುತ್ತಾನೆ. ಈಗ ಕೃಷ್ಣನ ಬಳಿ ಸಕಲ ಸೌಕರ್ಯವೂ ಇದೆ. ತಾಯಿ ಮತ್ತು ಸಹೋದರಿಗೆ ಈತನಿಗೆ ಹೆಣ್ಣು ನೋಡುವುದೊಂದೇ ಗುರಿ. ಕೊನೆಗೂ ಅವರು ಹೆಣ್ಣು ನೋಡಿ ನಿಶ್ಚಿತಾರ್ಥವನ್ನೂ ಮುಗಿಸಿಬಿಡುತ್ತಾರೆ ಎನ್ನಿ. ಆ ಹುಡುಗಿಯೇ ಈಶಾನ್ಯೆ(ಎರಿಕಾ ಫೆರ್ನಾಂಡಿಸ್). ಕೃಷ್ಣನನ್ನು ಯಾವುದೋ ಹಳೆಯ ನೆನಪು ಬಾಧಿಸುತ್ತಿರುವುದು ಅವಳ ಗಮನಕ್ಕೆ ಬರುತ್ತದೆ. ಅವನಿಂದ ಬಾಯಿ ಬಿಡಿಸಿದಾಗ ಅಲ್ಲೊಂದು ನಂದಿನಿ(ರಿಚಾ ಪನೈ) ಎನ್ನುವ ಹುಡುಗಿಯೊಂದಿಗಿನ ಲವ್ ಸ್ಟೋರಿಯ ಅನಾವರಣ. ಆ ಲವ್ ಸ್ಟೋರಿ ಕೆಲ ಕಾರಣಗಳಿಂದ ಇಬ್ಬರ ಒಪ್ಪಿಗೆಯಿಂದಲೇ ಮುರಿದುಬಿದ್ದಿರುತ್ತದೆ.

ಕೃಷ್ಣನಿಗೆ ಹಳೆ ಪ್ರಿಯತಮೆಯ ನೆನಪು ಮಾಸಿರುವುದಿಲ್ಲ. ಈಶಾನ್ಯೆ ತಾನೇ ಕೃಷ್ಣನಿಗೆ ನಂದಿನಿಯನ್ನು ಸೇರಲು ಪ್ರೋತ್ಸಾಹಿಸುತ್ತಾಳೆ. ಅದರ ಹಿಂದೆಯೇ ಆಕೆ ಸಿಗದಿದ್ದರೆ ತನ್ನ ಬಳಿಗೆ ವಾಪಸ್ಸಾಗಬೇಕೆಂಬ ಶರತ್ತನ್ನೂ ಹಾಕಿರುತ್ತಾಳೆ. ನಾಲ್ಕೈದು ವರ್ಷಗಳ ನಂತರ ನಂದಿನಿಯನ್ನು ಸಂಧಿಸಲು ನಾಯಕ ತನ್ನ ಗೆಳೆಯ(ಸಾಧು ಕೋಕಿಲ)ನೊಂದಿಗೆ ಭಾರತಕ್ಕೆ ಬರುತ್ತಾನೆ. ಎಷ್ಟು ಪ್ರಯತ್ನ ಪಟ್ಟರೂ ನಂದಿನಿಯ ಸುಳಿವು ಸಿಗುವುದಿಲ್ಲ. ಅಮೇಲೇನಾಗುತ್ತದೆ, ನಂದಿನಿ ಸಿಗುವಳೇ? ದೂರದೇಶದಲ್ಲಿ ಕಾಯುತ್ತಿರುವ ಈಶಾನ್ಯೆ ಕಥೆಯೇನು? ಕೃಷ್ಣ ಮದುವೆಯಾಗುವುದು ಯಾರನ್ನು? ಚಿತ್ರ ನೋಡಿ.

ಫ್ಲ್ಯಾಷ್ ಬ್ಯಾಕಿನಲ್ಲಿ ತೆರೆದುಕೊಳ್ಳುವ ಕಾಲೇಜ್ ಸ್ಟೋರಿಯಲ್ಲಿ ತೆಲುಗಿನ ಆರ್ಯ ಮತ್ತು ಹ್ಯಾಪಿ ಡೇಸ್ ಚಿತ್ರಗಳ ಪ್ರಭಾವ ಕಾಣಿಸುತ್ತದೆ. 'ಹ್ಯಾಪಿ ಡೇಸ್'ಗೆ ಸಂಗೀತ ನೀಡಿದ್ದ ಮಿಕ್ಕಿ ಜೆ. ಮೇಯರ್ 'ಬುಗುರಿ' ಚಿತ್ರಕ್ಕೂ ಸಂಗೀತ ನಿರ್ದೇಶಕ. ಹಾಡುಗಳ ಬಗೆಗೆ ಹೇಳುವುದಾದರೆ 'ನೀನೇನೇ' ಹಾಡು ಬಿಟ್ಟರೆ ಉಳಿದವೆಲ್ಲವೂ ನೆನಪಲ್ಲುಳಿಯುವುದು ಕಷ್ಟ. ಆದರೆ ಹಿನ್ನೆಲೆ ಸಂಗೀತದಲ್ಲಿ ಮಿಕ್ಕಿಯವರು ಕರಾಮತ್ತು ಪ್ರದರ್ಶಿಸಿದ್ದಾರೆ. ಗಣೇಶ್ ಮತ್ತೊಮ್ಮೆ ಫ್ಯಾಮಿಲಿ ಆಡಿಯನ್ಸ್, ಮುಖ್ಯವಾಗಿ ಹೆಂಗೆಳೆಯರಿಗೆ ಹತ್ತಿರವಾಗುವ ಎಲ್ಲಾ ಸೂಚನೆ ಈ ಚಿತ್ರದಿಂದ ಸಿಕ್ಕಿದೆ. ಇಲ್ಲವರು ಮಾಸ್ ಡಯಲಾಗುಗಳಿಂದ ಭೋರ್ಗರೆಯದೆ, ನವಿರು ಭಾವನೆಯನ್ನು ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ. ನಾಯಕಿಯರಾಗಿ ಎರಿಕಾ ಮತ್ತು ರಿಚಾ ಅಭಿನಯದಲ್ಲಿ ವಿಶೇಷವಿಲ್ಲ. ಎಲ್ಲಾ ಆಮದು ನಟಿಯರಿಗೂ ಇರುವಂತೆ ಇವರಿಗೂ ಇರುವ ಏಕೈಕ ಕೊರತೆಯೆಂದರೆ ತೆರೆ ಮೇಲೆ ಲಿಪ್ ಸಿಂಕ್ ಆಗದಿರುವುದು. ಅದು ಬಿಟ್ಟರೆ ಕಾಮಿಡಿಗಾಗಿ ಸಾಧು ಕೋಕಿಲ ಇರುವಾಗ ಇನ್ನೇನು ಚಿಂತೆ. ಚಿತ್ರದಲ್ಲಿ ಪ್ರೇಕ್ಷಕ ಮಹಾಶಯನ ತಾಳ್ಮೆಯನ್ನು ಪರೀಕ್ಷೆಗೊಡ್ಡುವುದು ಚಿತ್ರದ ಹಾಡುಗಳು. ಒಂದು ಹಂತದಲ್ಲಿ ನಾಯಕಿಯರನ್ನು ತೆರೆ ಮೇಲೆ ತೋರಿಸಲೆಂದೇ ಹಾಡುಗಳನ್ನು ಸೃಷ್ಟಿಸಿದ್ದಾರೆ ಎಂದನುಮಾನವೂ ಬರುತ್ತದೆ. ಆ ಮಟ್ಟಿಗೆ ಹಾಡುಗಳು ಕಿರಿಕಿರಿ ಉಂಟು ಮಾಡುತ್ತವೆ. 'ಅಯ್ಯೋ ಮತ್ತೆ ಹಾಡಾ' ಎಂಬ ಡಯಲಾಗು ಕೇಳಿಬಂದರೆ ತೆರೆಮೇಲೆ ನೋಡದಿರಿ, ಅದು ನಿಮ್ಮ ಅಕ್ಕಪಕ್ಕದಿಂದಲೇ ಬಂದಿರುತ್ತದೆ. ಕೊನೆಯದಾಗಿ, ಸುಮ್ಮ ಸುಮ್ಮನೆಯೇ ಹುಳ ಬಿಟ್ಟು ತಲೆ ಕೆಡಿಸುವ ಚಿತ್ರವನ್ನು ನೋಡುವ ಇರಾದೆ ಇಲ್ಲದವರು ಒಮ್ಮೆ 'ಬುಗುರಿ'ಯತ್ತ ಕಣ್ಣು ಹಾಯಿಸಬಹುದು.
- ಹರ್ಷವರ್ಧನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com