ಕಥೆಯಿಲ್ಲದ ವೈಭವಕ್ಕೆ ಯ'ಸ್' ಮಾಸ್ಟರ್

ಇಂದಿನ ಕನ್ನಡ ನಟರಿಗೆ ಮರಂಜನೆ ಅಥವಾ ಸಿನೆಮಾ ಕಲೆಗಿಂತಲೂ ನಂಬರ್ ೧ ಸ್ಥಾನದ ಅಸ್ತಿತ್ವದ ಪ್ರಶ್ನೆಯೇ ದೊಡ್ಡದಾಗಿದೆ. ಇದು ಇಡೀ ಚಿತ್ರೋದ್ಯಮಕ್ಕೆ ಕ್ಯಾನ್ಸರ್ ನಂತೆ ಹಬ್ಬಿರುವುದು ಪ್ರೇಕ್ಷಕನ
ಮಾಸ್ಟರ್ ಪೀಸ್ ಸಿನೆಮಾ ವಿಮರ್ಶೆ
ಮಾಸ್ಟರ್ ಪೀಸ್ ಸಿನೆಮಾ ವಿಮರ್ಶೆ
Updated on

ಒಂದು ವರ್ಷದ ಹಿಂದೆ ಸರಳ ಮನರಂಜನಾತ್ಮಕ ಸಿನೆಮಾ ಮಿ ಅಂಡ್ ಮಿಸಸ್ ರಾಮಾಚಾರಿಯ ಯಶಸ್ಸಿನ ಬಳಿಕ ಸಾಕಷ್ಟು ಕುತೂಹಲ ಮೂಡಿಸಿದ್ದ ಯಶ್, ನಿರೀಕ್ಷೆ ಹುಟ್ಟಿಸಿದ್ದ ಮಂಜು ಮಾಂಡವ್ಯ ಅವರ ಚೊಚ್ಚಲ ನಿರ್ದೇಶನದ 'ಮಾಸ್ಟರ್ ಪೀಸ್' ಇಂದು ಬಿಡುಗಡೆ ಕಂಡಿದೆ. ನಾವೇ ಮಾಸ್ಟರ್ ಗಳು ನಾವೇ ಬ್ಲಾಸ್ಟರ್ ಗಳು ಎಂದು ಬಡಾಯಿ ಕೊಚ್ಚಿಕೊಳ್ಳುವ ಸಿನೆಮಾರಂಗಕ್ಕೆ ಸೇರ್ಪಡೆಯಾಗಿರುವ ಈ 'ಪೀಸ್' ಜನರಿಗೆ ಮನರಂಜನೆ-ಶಾಂತಿ-ಸುಖಗಳನ್ನೇನಾರೂ ನೀಡಿದೆಯೇ? ಯಶ್ ತಮ್ಮ ಯಶಸ್ಸನ್ನು ಮತ್ತೆ ಮರುಕಳಿಸಿದ್ದಾರೆಯೇ?

ಕೊನೆಯ ದೃಶ್ಯ: ಹೆತ್ತಮ್ಮನಿಂದ (ಸುಹಾಸಿನಿ) ಹಿಡಿದು ಪೊಲೀಸರವರೆಗೆ ರೌಡಿ ಶೀಟರ್ ಎಂದೇ ಗುರುತಿಸಿಕೊಂಡ ಯುವನನ್ನು (ಯಶ್) ಬಿಡುಗಡೆ ಮಾಡಬೇಕೆಂದು ರಾಜ್ಯದ ಯುವ ಜನತೆ ರೊಚ್ಚಿಗೆದ್ದು, ಬೀದಿಗೆ ಬಿದ್ದು ಪ್ರತಿಭಟಿಸುತ್ತಿದೆ. ಇದು ಹೇಗೆ ಎಂಬುದೇ ಕಥೆ. ತನ್ನ ಬಾಲ್ಯದಿಂದಲೇ ಸಿಕ್ಕ ಸಿಕ್ಕವರನ್ನೆಲ್ಲಾ ಪುಡಿಗುಟ್ಟುವ ರೌಡಿ ಎಲಿಮೆಂಟ್ ಯುವ.  'ನಿಶಾ'(ಶಾನ್ವಿ ಶ್ರೀವಾಸ್ತವ) ಎಂಬ ಹುಡುಗಿಯ ಜೊತೆ ಲವ್ವಾಗುತ್ತದೆ. ಗೆಳೆಯನಿಗೆ(ಚಿಕ್ಕಣ್ಣ) ಕಾಲೇಜು ಯೂನಿಯನ್ ಎಲೆಕ್ಷನ್ ಗೆಲ್ಲಿಸುತ್ತಾನೆ. ನೂರ್ ಅಹ್ಮದ್ (ಅಚ್ಯುತ್ ಕುಮಾರ್) ನನ್ನು ಗೆಲ್ಲಿಸಿ ಶಾಸಕನನ್ನಾಗಿಸುತ್ತಾನೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಡ್ರಗ್ ಮಾಫಿಯಾ ದೊರೆ ಬಾಸ್ (ರವಿಶಂಕರ್) ತನ್ನ ಪ್ರೇಯಸಿಗೆ ಗನ್ ಹಿಡಿದಾಗ, ಆವನನ್ನು ಯುವ ಪುಡಿಗುಟ್ಟುತ್ತಾನೆ. ಆದರೆ ಬಾಸ್ ಪಿತೂರಿಯಿಂದ, ಯುವನೇ ಡ್ರಗ್ ಮಾಫಿಯಾಗೆ ಅಧಿನಾಯಕ ಎಂಬ ಸುಳ್ಳುಸುದ್ದಿ ಎಲ್ಲೆಡೆ ಹರಿಯುತ್ತದೆ. ಕುಟುಂಬದವರಿಗೆ ಕಿರುಕುಳವಾದಾಗ-ಅನ್ಯಾಯವಾದಾಗ ಯುವ ಸುಮ್ಮನಿರುತ್ತಾನೆಯೇ?

ಸಮರ್ಥವಾದ ಕಥೆಯ ಅನುಪಸ್ಥಿತಿಯಲ್ಲೂ, ಯಾವುದೇ ಅತಿರೇಕಗಳಿಲ್ಲದೆ ಒಂದಷ್ಟು ರಂಜನೆಯ ಘಟನೆಗಳನ್ನು ಪೋಣಿಸಿ, ಹಾಡುಹಸೆ ಸೇರಿಸಿ, ಒಳ್ಳೆಯ ನಟನೆಯಿಂದ ಸರಳ ಮನರಂಜನಾತ್ಮಕ ಸಿನೆಮಾಗಳನ್ನು ಸೃಷ್ಟಿಸಿ ಗೆಲ್ಲಿಸುವ ತಂತ್ರ ಹಿಂದಿನಿಂದಲೂ ಸಿದ್ಧಿಸಿರುವ ಸಿದ್ಧ ಸೂತ್ರ. ಬಹುಷಃ ಮಿ ಅಂಡ್ ಮಿಸಸ್ ರಾಮಾಚಾರಿ ಗೆದ್ದದ್ದು ಹಾಗೆಯೇ! ಅದೇ ರಾಮಾಚಾರಿ, ಮಾಸ್ಟರ್ ಪೀಸ್ ನಲ್ಲಿ ಮುಂದುವರೆದಿದ್ದರೂ, ಹಿರೋಯಿಸಂನ ಅತಿರೇಕ ಹೆಚ್ಚಿದೆ. ದೇಶಭಕ್ತಿ, ಕ್ರಾಂತಿ ಮತ್ತು ಪುಂಡಾಟಗಳೆಲ್ಲ ಒಂದೆ ಎಂದು ಹೇಳುವ ಗೊಂದಲವಿದೆ. ಉದ್ದುದ್ದ ಭಾಷಣವಿದೆ-ಬೋಧನೆಯಿದೆ. ಒಟ್ಟಿನಲ್ಲಿ ಹೀರೋಯಿಸಂನ 'ಎಕ್ಸ್ಪೋನೆನ್ಶಿಯಲ್ ಗ್ರೋತ್' ಇದೆ.

ತಾಯಿ ಟಿವಿ ವಾಹಿನೊಂದಕ್ಕೆ ನೀಡುವ ಸಂದರ್ಶನದ ಮೂಲಕ ಯುವನ ಎಸ್ಟಾಬ್ಲಿಶ್ ಮೆಂಟ್ ಆಗುತ್ತದೆ. ಪ್ರಾಥಮಿಕ ಶಾಲೆಯಲ್ಲೇ ಶಾಲೆಯ ಮಕ್ಕಳಿಗೆ ಮತ್ತು ಮೇಷ್ಟ್ರುಗಳಿಗೆ ಚಚ್ಚುವುದನ್ನು ತಾಯಿ ವೈಭವೀಕರಿಸದಿದ್ದರೂ ನಿರ್ದೇಶಕ ಪ್ರೇಕ್ಷಕರಿಗೆ ವೈಭವೀಕರಿಸಿ ಕಟ್ಟಿಕೊಡುತ್ತಾನೆ. ಮೊದಲಾರ್ಧ 'ಅವನಿಗೆ ಹೊಡೆದ ಇವನಿಗೆ ಹೊಡೆದ' ಎಂಬ ದೃಶ್ಯಗಳನ್ನು ಬಿಟ್ಟರೆ, ತಾಯಿ ಹೇಳಿದ ಭಗತ್ ಸಿಂಗ್, ಆಜಾದ್ ಹೇಳುವ ಕಥೆಗಳನ್ನು ಕೇಳಿಸಿಕೊಂಡಿರುವ ನಾಯಕನಟ ಭಗತ್ ಸಿಂಗ್ ನಂತೆ ಕನಸನ್ನು ಮಾತ್ರ ಕಾಣುತ್ತಾನೆ! ಇಷ್ಟು ಸಾಲದು ಎಂಬಂತೆ ನಾಯಕಿಯ ಆಗಮನವಾಗಿ ಹೀರೋನನ್ನು ಪರೀಕ್ಷಿಸಿ, ಗುಣಗಾನ ಮಾಡಿ ಹಾಡುತ್ತಾಳೆ. ಹೀಗೆ ಮೊದಲಾರ್ಧ ಅತಿರಂಜನೆಯಿಂದ ಪ್ರೇಕ್ಷಕನನ್ನು ಕೆಣಕಿದರೆ ದ್ವಿತೀಯಾರ್ಧದಲ್ಲಿ ಡ್ರಗ್ ಮಾಫಿಯಾದ ದೊರೆ ಯುವ ಎಂದು ಸುಳ್ಳು ಹಬ್ಬಿಸುವ ರೌಡಿಯ ವಿರುದ್ಧ ಹೊಡೆಬಡಿದಾಡಿ, ಅದರ ವಿಡಿಯೋ ಮಾಡಿ, ಅಪ್ಲೋಡ್ ಮಾಡಿ  ಕ್ರಾಂತಿಕಾರಿ ಎನ್ನಿಸಿಕೊಂಡು ಯುವಜನತೆಯೆಲ್ಲ ಬೀದಿಗಿಳಿಯುವ ದೃಶ್ಯ ಹಾಸ್ಯಾಸ್ಪದ ಎನ್ನಿಸದೇ ಇರದು. (ಇದೇ ರೀತಿಯ ಹಾಸ್ಯಾಸ್ಪದ ದೃಶ್ಯ ದರ್ಶನ್ ಅಭಿನಯದ ಐರಾವತದಲ್ಲೂ ಇದ್ದದ್ದನ್ನು ನೆನಪಿಸಿಕೊಳ್ಳಬಹುದು) ತನ್ನ ಶತ್ರುಗಳಿಗೆ ಚೂಚಂಡು ಆಡಿಸುವ ಮೂಲಕ ವಿಕೃತ ಸುಖ ಕಾಣುವುದು, ಮತ್ತು ಈ ದೃಶ್ಯವನ್ನು ಇನ್ನಿಲ್ಲದಂತೆ ಹಿಗ್ಗಿಸಿರುವುದು ಬೇಸರ ತರಿಸುತ್ತದೆ.

ಒಂದು ಡ್ರಗ್ ಮಾಫಿಯಾ ಕಥೆಯನ್ನು ತೆಗೆದುಕೊಂಡಾಗ ಆ ಮಾಫಿಯಾ ಹೇಗೆ ಕೆಲಸ ಮಾಡುತ್ತದೆ, ಅದರಿಂದ ಜನಕ್ಕೆ ಹೇಗೆ ಅಪಾಯವೊದಗಿದೆ ಈ ಸಂಗತಿಗಳೆಲ್ಲಾ ನಿರ್ದೇಶಕನಿಗೆ ಕಾಡದೆ ಹೋಗಿರುವುದು ಸೋಜಿಗವೇನಲ್ಲ, ಆದರೆ ದುರಂತ. ಯಶ್ ತಮ್ಮ ಅತ್ಯುತ್ತಮ ರಂಜನೀಯ ಡೈಲಾಗ್ ಡೆಲಿವರಿ ಮತ್ತು ನೃತ್ಯದಿಂದ ತಮ್ಮ ಅಭಿಮಾನಿಗಳನ್ನು ರಂಜಿಸಿದರೆ, ಉಳಿದಂತೆ ನಾಯಕ ನಟಿ ಶಾನ್ವಿ, ಸುಹಾಸಿನಿ, ಅಚ್ಯುತ್ ಕುಮಾರ್, ಅವಿನಾಶ್ ಮತ್ತು ಚಿಕ್ಕಣ್ಣ ಎಂದಿನ ನಟನೆ ನೀಡಿದ್ದರೆ. ರವಿಶಂಕರ್ ಕೂಡ ತಮ್ಮ ಎಂದಿನ ಅಬ್ಬರವನ್ನು ಕಾಯ್ದುಕೊಂಡಿದ್ದಾರೆ. ಹರಿಕೃಷ್ಣ ಅವರ ಸಂಗೀತ ಆರಕ್ಕೆ ಏರದೆ ಮೂರಕ್ಕೆ ಇಳಿಯದೆ, ಯಶ್ ಅವರ ಸ್ಟೆಪ್ಸ್ ಗೆ ಸಹಕರಿಸಿದೆ. ಒಂದೆರಡು ಗೀತೆಗಳ ಸಾಹಿತ್ಯ ಓಕೆ.  ಒಟ್ಟಿನಲ್ಲಿ ಇತ್ತ ಒಳ್ಳೆಯ ರೋಚಕ ಕಥೆಯೂ ಅಲ್ಲದ, ರೊಮ್ಯಾಂಟಿಕ್ ಪ್ರೇಮ ಕಥೆಯೂ ಆಗದ, ಭಾವನಾತ್ಮಕತೆಯನ್ನು ಕೆರಳಿಸದ 'ಮಾಸ್ಟರ್ ಪೀಸ್' ಬರೆದು ನಿರ್ದೇಶಿಸಿರುವ ಮಂಜು ಮಾಂಡವ್ಯ 'ಕಥೆ' ಬರೆಯುವ-ಹೇಳುವ ಶೈಲಿಯಲ್ಲಿ ಇನ್ನೂ ಪಳಗಬೇಕಿದೆ. ಇನ್ನುಳಿದ ತಾಂತ್ರಿಕತೆಯೆಲ್ಲ ಅವರಿಗೆ ಮೈಗೂಡಿದೆ.

ಇಂದಿನ ಕನ್ನಡ ನಟರಿಗೆ ಮರಂಜನೆ ಅಥವಾ ಸಿನೆಮಾ ಕಲೆಗಿಂತಲೂ ನಂಬರ್ ೧ ಸ್ಥಾನದ ಅಸ್ತಿತ್ವದ ಪ್ರಶ್ನೆಯೇ ದೊಡ್ಡದಾಗಿದೆ. ಇದು ಇಡೀ ಚಿತ್ರೋದ್ಯಮಕ್ಕೆ ಕ್ಯಾನ್ಸರ್ ನಂತೆ ಹಬ್ಬಿರುವುದು ಪ್ರೇಕ್ಷಕನ ದುರಂತ. ನಂಬರ್ ೧ ಆಗುವುದು ತಪ್ಪಲ್ಲ ಆದರೆ ಅದೇ ಅಂತ್ಯವಲ್ಲ ಎಂಬುದು ಇಂದಿನ ನಾಯಕನಟರಿಗೆ ಮನವರಿಕೆಯಾಗಬೇಕಿದೆ. ಈ ನಂಬರ್ ೧ ಸ್ಥಾನಕ್ಕೆ ಏರಲು ತಮ್ಮ ಬಗ್ಗೆಯೇ ಸಿನೆಮಾಗಳಲ್ಲಿ ಹೊಗಳಿಕೊಳ್ಳುವ ಆತ್ಮರತಿ ಇತ್ತೀಚೆಗೆ ಇನ್ನಷ್ಟು ವಿಕೃತಿಗೆ ಏರುತ್ತಿರುವುದನ್ನು ಕನ್ನಡದ ಜಾಣ ಪ್ರೇಕ್ಷಕ ತಿರಸ್ಕರಿಸದೆ ಇರನು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com