ಸಿನೆಮಾವಿಡೀ ಬಾಯಿಬDK, ಪ್ರೇಕ್ಷಕನ ಚಡಪDK

ಶೋಮ್ಯಾನ್ ಪ್ರೇಮ್ ಅಭಿನಯದ 'ಡಿಕೆ' ವ್ಯಾಲೆಂಟೈನ್ ದಿನದ ಹಿಂದಿನ ದಿನವಾದ ಇಂದು ಬಿಡುಗಡೆಯಾಗಿದೆ.
DK ಸಿನೆಮಾ ಸ್ಟಿಲ್
DK ಸಿನೆಮಾ ಸ್ಟಿಲ್

ಬೆಂಗಳೂರು: ಶೋಮ್ಯಾನ್ ಪ್ರೇಮ್ ಅಭಿನಯದ 'ಡಿಕೆ' ವ್ಯಾಲೆಂಟೈನ್ ದಿನದ ಹಿಂದಿನ ದಿನವಾದ ಇಂದು ಬಿಡುಗಡೆಯಾಗಿದೆ. ಚಿತ್ರತಂಡ ಇದೊಂದು ವಿಡಂಬನಾತ್ಮಕ ಚಲನಚಿತ್ರ ಎಂದು ಹೇಳಿಕೊಂಡಿದ್ದಾರೆ. ಬಾಲಿವುಡ್ ನಟಿ 'ಸನ್ನಿ ಲಿಯೋನ್' ಐಟಮ್ ಹಾಡಿಗೆ ಕುಣಿದಿದ್ದಾರೆ ಎಂಬ ಹೆಗ್ಗಳಿಕೆಯೊಂದಿಗೇ ಬಿಡುಗಡೆಯಾಗಿರುವ ಈ ಸಿನೆಮಾ ಪ್ರೇಮಿಗಳ ದಿನಕ್ಕೆ ನೋಡಲು ಯೋಗ್ಯ ಸಿನಿಮಾನ?

ಶಿವೇಗೌಡ (ಶರತ್ ಲೋಹಿತಾಶ್ವ) ಹೆಣ್ಣು ಮಗು ಪಡೆದರೆ ರಾಜಕೀಯದಲ್ಲಿ ಯಶಸ್ಸು ಸಿಗುತ್ತದೆ ಎಂದು ಎಬಿ ಶಾಸ್ತ್ರಿ(ರಿಶಿಕುಮಾರ ಸ್ವಾಮಿ) ಭವಿಷ್ಯ ನುಡಿಯುತ್ತಾನೆ. ಮೂರು ಗಂಡುಮಕ್ಕಳನ್ನು ಪಡೆದು ಕೊನೆಗೂ ನಾಲ್ಕನೆಯ ಮಗು ಹೆಣ್ಣುಮಗುವಾಗಿ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆದು ಕೊನೆಗೆ ಎರಡು ಬಾರಿ ಲೋಕಸಭಾ ಸದಸ್ಯನೂ ಆಗುತ್ತಾನೆ. ಸುಬ್ಬುಲಕ್ಷ್ಮಿ ಸಂಗೀತ ಕೇಳುವಾಗ ಹುಟ್ಟಿದ ಈ ಹೆಣ್ಣುಮಗಳಿಗೆ ಸುಬ್ಬುಲಕ್ಷ್ಮಿ(ಚಿತ್ರಾ ಚಂದ್ರನಾಥ್) ಎಂದೇ ಹೆಸರಿಡುತ್ತಾನೆ. ಈ ಮಧ್ಯೆ ೯ ಬಾರಿ ನಪಾಸಾದ 'ಡಿಕೆ' (ಪ್ರೇಮ್) ಪ್ರತ್ಯಕ್ಷನಾಗುತ್ತಾನೆ. ಸುಬ್ಬುಲಕ್ಷ್ಮಿಯನ್ನು ಚುಡಾಯಿಸುತ್ತಾನೆ. ಅವಳನ್ನು ಪ್ರೇಮಿಸುವಂತೆ ನಟಿಸುತ್ತಾನೆ. ತಾಳಿ ಕಟ್ಟುತ್ತಾನೆ. ನಂತರ ಅವಳನ್ನು ನಿರಾಕರಿಸುತ್ತಾನೆ. ತನಗೆ ಅನ್ನ ನೀರು ಕೊಟ್ಟ ಬೆಳೆಸಿದ ಗುರುಗಳು ನೇಣು ಹಾಕಿಕೊಂಡು ಸತ್ತಾಗ, ತಾನು ಬದಲಾಗಿ ಹೆಂಡತಿಯನ್ನು ಮನೆಗೆ ತಂದಿಟ್ಟುಕೊಳ್ಳುತ್ತಾನೆ. ಮಗಳು ಮನೆಯಿಂದ ಹೊರಟುಹೋದ ಮೇಲೆ ಶಿವೇಗೌಡನ ರಾಜಕೀಯ ಭವಿಷ್ಯ ಕುಂದುತ್ತದೆಯೇ?

ಪ್ರೇಮ್ ಪೋಷಿಸಿರುವ ಪಾತ್ರದಲ್ಲಿ ಅಷ್ಟು ಸತ್ವವಿಲ್ಲ. ಆದುದರಿಂದ ತಪ್ಪು ನಿರ್ದೇಶಕರು ಸೃಷ್ಟಿಸಿರುವ ಕೆಟ್ಟ ಪಾತ್ರದ್ದೇ ಅಥವಾ ಪ್ರೇಮ್ ಅವರ ಕೆಟ್ಟ ನಟನೆಯದ್ದೋ ಎಂಬುದು ಬಿಡಿಸಿ ಹೇಳುವುದು ಕಷ್ಟ. ಎರಡೂ ಮೇಳೈಸಿ ದೃಶ್ಯಮಾಲಿನ್ಯವಾಗಿದೆ ಎಂದಷ್ಟೇ ಹೇಳಬಹುದು! ಪರದೆಯಲ್ಲಿ ಸದಾ ಕಾಲ ಕಾಣುವ ನಟಿ 'ಚಿತ್ರಾ ಚಂದ್ರನಾಥ್' ತಮ್ಮ ಕೆಟ್ಟ ನಟನೆಯಲ್ಲಿ ಪ್ರೇಮ್ ಅವರನ್ನು ಮೀರಿಸಲು ಪ್ರಯತ್ನಿಸಿದ್ದಾರೆ. ಶರತ್ ಲೋಹಿತಾಶ್ವ ಅವರನ್ನು 'ವೇಸ್ಟೆಡ್ ಟ್ಯಾಲೆಂಟ್' ಎನ್ನಬಹುದು. ಶೋಭರಾಜ್ ಮಾಟವಾದಿಯ ಪಾತ್ರದಲ್ಲಿ ಅತಿರೇಕದ ನಟನೆ. ರಿಶಿಕುಮಾರ(ಕಾಳಿ) ಸ್ವಾಮಿ ಢೋಂಗಿ ತಮಿಳುನಾಡಿನ ಸ್ವಾಮಿಯ ಪಾತ್ರದಲ್ಲಿ ಪರವಾಗಿಲ್ಲ.   

ಇಂದಿನ ರಾಜಕೀಯ ವ್ಯವಸ್ಥೆಯನ್ನು, ಢೋಂಗಿ ಸ್ವಾಮೀಜಿಗಳನ್ನು, ಮೂಢನಂಬಿಕೆಯನ್ನು ಕುಚೋದ್ಯ ಮಾಡುವ ವಿಡಂಬನಾತ್ಮಕ ಸಿನೆಮಾ ಮಾಡುವುದು ಅತಿ ಒಳ್ಳೆಯ ಆಶಯ. ಆದರೆ ಇದನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವುದರಲ್ಲಿ ಸಂಪೂರ್ಣ ಮುಗ್ಗರಿಸಿದ್ದಾರೆ ನಿರ್ದೇಶಕ ವಿಜಯ್ ಹಂಪಾಳಿ. ಮೊದಲಿಗೆ ಅವರು ಮುಗ್ಗರಿಸಿರುವುದು ಕಥೆ ಕಟ್ಟುವುದರಲ್ಲಿ. ಕಥೆಯೇ ಇಲ್ಲದೆ, ಸಿನೆಮಾವನ್ನು ಹಿಗ್ಗಾಮುಗ್ಗ ಜಗ್ಗಲು ಹರಸಾಹಸ ಪಟ್ಟಿದ್ದಾರೆ. ನಾಯಕ  ನಾಯಕನನ್ನು ಎಷ್ಟಾಬ್ಲಿಶ್ ಮಾಡಲು ಅದೇ ಹಳಸು ಮಾರ್ಗಗಳು ಬೇಸರಿಕೆ ತರುತ್ತವೆ. ನಾಯಕ ನಟ ಯಾಕೆ ಇಷ್ಟೊಂದು ಫೈಟ್ ಗಳನ್ನು ಮಾಡುತ್ತಿದ್ದಾರೆ ಎಂಬ ಸುಳಿವೇ ಪ್ರೇಕ್ಷಕರಿಗೆ ಸಿಗುವುದಿಲ್ಲ. ಇನ್ನು ವಿಡಂಬನೆ ಎಂಬ ಹಾಸ್ಯ ವಾಕರಿಕೆ ತರುತ್ತದೆ. ಸಿನೆಮಾದ ಸಂಭಾಷಣೆ ತುಂಬಾ 'ಲೌಡ್' ಆಗಿದ್ದು, ಅದನ್ನು ಮೀರಿಸುವಂತಹ ಕೆಟ್ಟ ಹಿನ್ನಲೆ ಸಂಗೀತ ದೃಶ್ಯಮಾಲಿನ್ಯದ ಜೊತೆಗೆ ಶಬ್ದಮಾಲಿನ್ಯವನ್ನು ಉಂಟುಮಾಡಿದೆ. ಸುಖಾಸುಮ್ಮನೆ ಹಾಡುಗಳನ್ನು ತುರುಕಲಾಗಿದೆ. ಅರ್ಜುನ ಜನ್ಯ ಅವರ ಸಂಗೀತ ಅತಿ ಸಾಧಾರಣ. 'ಗಂಡಸು ಎತ್ತಿಕೊಂಡು ಹೋಗಿ ರೇಪ್ ಮಾಡಿದರೆ ಶಿಕ್ಷೆ ಆಗುತ್ತದೆ ಆದರೆ ಹೆಂಗಸು ಗಂಡಸನ್ನು ಎತ್ತುಹಾಕಿಕೊಂದು ಹೋಗಿ ರೇಪ್ ಮಾಡಿದರೆ ಯಾವುದೇ ಶಿಕ್ಷೆ ಇಲ್ಲ" ಎಂಬಂತಹ ವಿಲಕ್ಷಣ-ವಿಕೃತ ಸಂಭಾಷಣೆಗಳು ಸಿನೆಮಾದಲ್ಲಿ ಬರುತ್ತವೆ. ಉತ್ತಮವಾದ ವಿಷಯವೊಂದನ್ನು ತೆಗೆದುಕೊಂಡು ಅದನ್ನು ಕಾರ್ಯರೂಪಕ್ಕೆ ತರಲು ಕಥೆಯ ಆಯ್ಕೆಯಲ್ಲಿ, ನಟರ ಆಯ್ಕೆಯಲ್ಲಿ, ಸಂಭಾಷಣೆ ಬರೆಯುವುದರಲ್ಲಿ, ಸ್ಕ್ರಿಫ್ಟಿಂಗ್ ನಲ್ಲಿ ಎಲ್ಲದರಲ್ಲೂ ನಿರ್ದೇಶಕರು ಅತಿ ಕಳಪೆ ಕೆಲಸ ಮಾಡಿದ್ದಾರೆ.

ಬರೀ ಐಟಮ್ ಡ್ಯಾನ್ಸ್ ಇದೆ ಎಂಬ ಪ್ರಚಾರದಿಂದ ಸಿನೆಮಾ ಗೆಲ್ಲುವ ಕಾಲ ಮುಗಿದಿದೆ. ಅಥವಾ ನಾನು ಸಂಪತ್ತಿಗೆ ಸವಾಲ್ ಸಿನೆಮಾದಲ್ಲಿನ ಮಂಜುಳಾ ಎಂದು ನಾಯಕ ನಟಿ, ನಾನು ಸಂಪತ್ತಿಗೆ ಸವಾಲಿನ ರಾಜಕುಮಾರ್ ಎಂದು ನಾಯಕ ನಟ ಹೇಳಿಬಿಟ್ಟಾಕ್ಷಣ ಒಂದೆರಡು ಶಿಳ್ಳೆ ಹುಟ್ಟಬಹುದಷ್ಟೆ. ಆದರೆ ಆ ಮಹಾ ನಟರಿಗೆ ಮಾಡಿದ ಅಪಮಾನವೇ ಅದು. ಸಿನೆಮಾದ ವ್ಯಾಕರಣಗಳನ್ನೆಲ್ಲಾ ಗಾಳಿಗೆ ತೂರಿ, ಸಿನೆಮಾ ಎಂದರೆ ಯಾರೋ ಒಬ್ಬನನ್ನು ವೈಭವೀಕರಿಸಿ, ವಿಲಕ್ಷಣ-ವಿಕೃತ ಸಂಭಾಷಣೆಗಳಿಂದ, ಒಂದಷ್ಟು ಪೈಟ್ಗಳು ಒಂದಷ್ಟು ಹಾಡುಗಳನ್ನು ತುಂಬಿ ಕ್ಯಾಮರಾ ಹಿಡಿದು ಶೂಟ್ ಮಾಡಿಬಿಡುವುದಲ್ಲ. ಇದು ದೃಶ್ಯಕಲೆ ಎಂಬುದರ ಮೇಲೆ ಈ ಮಾಧ್ಯಮದಲ್ಲಿ ತೊಡಗಿದವರಿಗೆ ಸ್ವಲ್ಪ ಗಮನವಿರಬೇಕು. ಇಂತಹ ಸಿನೆಮಾಗಳಿಂದ ರಕ್ಷಿಸಲು ಚಲನಚಿತ್ರ ಅಕಾಡೆಮಿಗಳು ಇಂತಹ ಸಿನೆಮಾ ಮಾಡುವವರಿಗಾಗಿ ಸಿನೆಮಾ ಗಂಜಿ ಕೇಂದ್ರಗಳನ್ನು ಸ್ಥಾಪಿಸಿ ಸ್ವಲ್ಪ ಪಾಠ ಹೇಳುವುದೊಳಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com