ಪ್ರಸಿದ್ಧನಾಗಲು ಸಿದ್ಧನಾಗಬೇಕು ಸಿದ್ಧಾರ್ಥ

ಪೂರ್ಣಿಮಾ ಎಂಟರ್ ಪ್ರೈಸಸ್ ನಿರ್ಮಾಣ ಸಂಸ್ಥೆ ಬಹುಷಃ ವರನಟ ಡಾ. ರಾಜಕುಮಾರ್ ಅವರಷ್ಟೇ ಜನಪ್ರಿಯ.
ಸಿದ್ಧಾರ್ಥ ಸಿನೆಮಾ ಸ್ಟಿಲ್
ಸಿದ್ಧಾರ್ಥ ಸಿನೆಮಾ ಸ್ಟಿಲ್
ಬೆಂಗಳೂರು: ಪೂರ್ಣಿಮಾ ಎಂಟರ್ ಪ್ರೈಸಸ್ ನಿರ್ಮಾಣ ಸಂಸ್ಥೆ ಬಹುಷಃ ವರನಟ ಡಾ. ರಾಜಕುಮಾರ್ ಅವರಷ್ಟೇ ಜನಪ್ರಿಯ. ಈ ನಿರ್ಮಾಣ ಸಂಸ್ಥೆಯಿಂದ ರಾಜಕುಮಾರ್ ಮನೆತನದ ಮೂರನೇ ಪೀಳಿಗೆಯ ದೊಡ್ಮನೆ ಮೊಮ್ಮೊಗನ ಪರಿಚಯ ಸಿನೆಮಾ ಸಿದ್ಧಾರ್ಥ ಇಂದು ಬಿಡುಗಡೆ ಕಂಡಿದೆ. ಅಂದರೆ ಇದು ನಟ ರಾಘವೇಂದ್ರ ರಾಜಕುಮಾರ ಅವರ ಮಗ ವಿನಯ್ ರಾಜಕುಮಾರ್ ಅವರ ಪರಿಚಯ ಚಲನಚಿತ್ರ. ರಾಜಕುಮಾರ್(ಬೇಡರ ಕಣ್ಣಪ್ಪ),  ಶಿವರಾಜ್ ಕುಮಾರ್(ಆನಂದ್), ಪುನೀತ್ ರಾಜಕುಮಾರ್(ಅಪ್ಪು) ಪೂರ್ಣ ಪ್ರಮಾಣದ ನಟರಾಗಿ ಅಭಿನಯಿಸಿದ ಮೊದಲ ಚಲನಚಿತ್ರಗಳೆಲ್ಲಾ ಹೆಸರುವಾಸಿ ಹಾಗೂ ಇತಿಹಾಸ ಬರೆದವೇ! ವಿನಯ್ ರಾಜಕುಮಾರ್ ಅವರ ಈ ಸಿನೆಮಾ ಅದೇ ಟ್ರ್ಯಾಕ್ ನಲ್ಲಿದೆಯೇ? ಅಥವಾ ತಾಳ ತಪ್ಪಿದೆಯೇ?
ಸಿದ್ಧಾರ್ಥ(ವಿನಯ್ ರಾಜಕುಮಾರ್) ಕಾಲೇಜು ಹೈಕಳು. ಗಿಟಾರಿಸ್ಟ್. ಬೀರ್ ಕುಡಿಯಲು ಪಾಕೆಟ್ ಮನಿ ಸಂಪಾದನೆ ಮಾಡುವುದರಲ್ಲಿ ಇವನಿಗೆ ಎಲ್ಲಿಲ್ಲದ ಚತುರತೆ. ಜೊತೆಗೆ ಗೆಳೆಯರು. ಇಂತಹ ಸಿದ್ದಾರ್ಥನಿಗೆ ಲವ್ವಾಗದಿರಲು ಸಾಧ್ಯವೇ? ಚಿತ್ರಕಲಾ ಪರಿಷತ್ ನ ಕಲಾ ವಿದ್ಯಾರ್ಥಿ ಖುಶಿ (ಅಪೂರ್ವಾ ಅರೋರಾ) ಕಂಡಾಕ್ಷಣ ಮೊದಲ ನೋಟದಲ್ಲೇ ಫುಲ್ ಖುಷ್ ಹಾಗೂ ಐ ಲವ್ ಯೂ! ಹುಡುಗಿಯಿಂದ ಮೊದಲು ನಿರಾಕರಣೆ ಆಮೇಲೆ ಪರಸ್ಪರ ಪ್ರೀತಿ! ಪ್ರೀತಿಯ ಉತ್ತುಂಗದಲ್ಲಿ ನಾಯಕನಿಗೆ ತಾನು ತನ್ನತನ ಕಳೆದುಕೊಳ್ಳುತ್ತಿದ್ದೇನೆ ಎಂಬ ಆತಂಕ. ತನ್ನ ಗೆಳೆಯರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಪಾಪಪ್ರಜ್ಞೆ. ಆಗಲೇ ನಾಯಕ ನಾಯಕಿಯನ್ನು ನಿವೇದಿಸಿಕೊಳ್ಳುವುದು "ಗಿವ್ ಮಿ ಎ ಬ್ರೇಕ್". (ಕನ್ನಡಲ್ಲಿ ಹೇಳುವುದದಾರೆ ಸ್ವಲ್ಪ ಸಮಯ ನನ್ನ ಪಾಡಿಗೆ ನನ್ನ ಬಿಟ್ಟುಬಿಡು). ಮಧ್ಯಂತರ. ಈ ಬ್ರೇಕ್ ಸಮಯದಲ್ಲಿ ನಾಯಕನ ಗೋವಾ ಪ್ರವಾಸ! ನಾಯಕ ನಾಯಕಿ ನಡುವೆ ನಂತರ ಹಲವಾರು ಗೊಂದಲಗಳು. ನಾಯಕಿಯೂ ಒಂದು ವರ್ಷದವರೆಗೆ 'ಗಿವ್ ಮಿ ಎ ಬ್ರೇಕ್' ಎಂದು ಇಂಗ್ಲೆಂಡ್ ಗೆ ತೆರಳುತ್ತಾಳೆ. ಒಬ್ಬಳೆ ಹಿಂದಿರುಗುತ್ತಾಳಾ? ಸಿದ್ಧಾರ್ಥ ಅಲ್ಲಿಯವರೆಗೂ ಕಾಯ್ದಿರುತ್ತಾನ? ಇಬ್ಬರೂ ಒಂದಾಗುತ್ತಾರಾ?
ಸಿದ್ಧಾರ್ಥನಾಗಿರುವ ವಿನಯ್ ರಾಜಕುಮಾರ್ ಅವರಿಗೆ ಕಾಲೇಜು ಹುಡುಗನ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸುವ ಕೊರತೆ ಎದ್ದು ಕಾಣುತ್ತದೆ. ಈ ಹಿಂದೆ ತಮ್ಮ ಕುಟುಂಬದ ಸದಸ್ಯರು ತಮ್ಮ ಮೊದಲನೇ ಸಿನೆಮಾದಲ್ಲೇ ನೀಡಿದ್ದ ಉತ್ತಮ ನಟನೆಯ ಗಂಧಗಾಳಿಯೂ ವಿನಯ್ ರಾಜ್ ಕುಮಾರ್ ಅವರನ್ನು ಸೋಕದೆ ಇರುವುದು ಸೋಜಿಗ! ನೃತ್ಯದಲ್ಲಿ ಪರವಾಗಿಲ್ಲ ಎನ್ನಬಹುದು. ತಮ್ಮ ಚಿಕ್ಕಪ್ಪನ ಸ್ಟೆಪ್ ಗಳನ್ನು ಅನುಸರಿಸಿದ್ದಾರೆ. ನಟನೆಯ ಮುಖಭಾವ ಮತ್ತು ಸಂಭಾಷಣೆಯನ್ನು ಒಪ್ಪಿಸುವುದರಲ್ಲಿ ಕೊರತೆ ಎದ್ದು ಕಾಣುತ್ತದೆ. ನಾಯಕ ನಟಿಯಾಗಿ ಅಪೂರ್ವಾ ಅರೋರಾ ಅವರ ನಟನೆ ಸುಮಾರು ಎನ್ನಬಹುದು! ಉಳಿದಂತೆ ಅಚ್ಯುತ್ ಕುಮಾರ್, ಸಾಧುಕೋಕಿಲಾ ಮತ್ತು ಇತರ ಪೋಷಕ ವರ್ಗದ ನಟನೆ ಚೊಕ್ಕವಾಗಿದೆ. ಹರಿಕೃಷ್ಣ ಅವರ ಸಂಗೀತ ಗಿಟಾರಿಸ್ಟ್ ಗೆ ತಕ್ಕಂತೆ ಸ್ವಲ್ಪ ಅಬ್ಬರ! ಒಮ್ಮೆ ಕೇಳಲು ಬೇಸರ ತರುವುದಿಲ್ಲ. ಎಲ್ಲ ಹಾಡುಗಳನ್ನು ಬರೆದಿರುವುದರಿಂದಲೋ ಏನೋ ಜಯಂತ್ ಕಾಯ್ಕಿಣಿ ಅವರ ಮ್ಯಾಜಿಕ್ ಅಷ್ಟೇನೂ ಮನಸ್ಸಿನಲ್ಲಿ ಉಳಿಯುವಂತಿಲ್ಲ. ರಘು ದೀಕ್ಷಿತ್ ಹಾಡಿರುವ 'ನಿನ್ನಿಂದ ದೂರಾಗಿ' ಹಾಡು ಅವರ ದೊಡ್ಡ ಕಂಠಕ್ಕೆ ಹೆಚ್ಚಿನ ಶಿಳ್ಳೆ ಚಪ್ಪಾಳೆ ದೊರಕಿಸಿಕೊಳ್ಳುತ್ತದೆ. ಹೊಸ ನಟನೊಬ್ಬನ ಪರಿಚಯಕ್ಕೆ ಬೇಕಾದ ಕಥೆಯಲ್ಲಿ ಇನ್ನೂ ಹೆಚ್ಚಿನದೇನೋ ಅವಶ್ಯಕತೆ ಇತ್ತು ಎಂದೆನಿಸುತ್ತದೆ. 'ಗಿವ್ ಮಿ ಎ  ಬ್ರೇಕ್' ಎಂಬ- ಮೊದಲ ಪ್ರೇಮ ಅಥವಾ ಮೊದಲ ಮದುವೆಯ ಒಂದು ಸರಳ ಕ್ರೈಸಿಸ್-ತೊಂದರೆ (ತನ್ನ ಹಳೆಯ ಗೆಳೆಯರಿಂದ ವಿಮುಖರಾಗುವುದು) ಇಟ್ಟುಕೊಂಡು ಮಿಲನ ಖ್ಯಾತಿಯ ಪ್ರಕಾಶ್ ಕಥೆಯನ್ನು ಬಹಳಷ್ಟು ಜಗ್ಗಿದ್ದಾರೆ. ಮೊದಲಾರ್ಧದಲ್ಲಂತೂ ಏನೂ ಇಲ್ಲ. ಅನಗತ್ಯ ಫೈಟ್ ಗಳು ತಲೆ ಚಿಟ್ಟು ಹಿಡಿಸುತ್ತವೆ. ಬಿಗಿ ನಿರೂಪಣೆಯಷ್ಟೇ ಪ್ರೇಕ್ಷಕನಿಗೆ ಸಮಾಧಾನ ತರುವ ಅಂಶ. ದ್ವಿತೀಯಾರ್ಧದ ಅಂತ್ಯದಲ್ಲಿ ಸಾಧುಕೋಕಿಲಾ ಅವರ ಬರುವಿಕೆಯ ನಂತರ ಸಿನೆಮಾ ಸ್ವಲ್ಪ ಚುರುಕು ಪಡೆದು, ಅಂತ್ಯ ಪ್ರೇಕ್ಷಕನಿಗೆ ಒಂದು ಚೂರು ಕಚಗುಳಿ ಇಡುವುದು ಬಿಟ್ಟರೆ ಗಮನಾರ್ಹ ಎಂಬುದಂತೂ ಏನು ಇಲ್ಲ! 
ಸಿದ್ಧಾರ್ಥ ಐತಿಹಾಸಿಕ ವ್ಯಕ್ತಿಯಾಗಲಿ ಅಥವಾ ನೊಬೆಲ್ ಪ್ರಶಸ್ತಿ ವಿಜೇತ ಹರ್ಮನ್ ಹೆಸ್ ಕಾದಂಬರಿ ಸಿದ್ಧಾರ್ಥನ ನಾಯಕನಾಗಲಿ, ಸಂಪನ್ನ ಕುಟುಂಬದಿಂದ ಬಂದ ವ್ಯಕ್ತಿ ತನ್ನನ್ನರಿಯಲು ಎಲ್ಲವನ್ನು ತ್ಯಜಿಸಿ ಜೀವನದ ಅನ್ವೇಷಣೆಯಲ್ಲಿ ತೊಡಗುತ್ತಾನೆ. ಜೀವನದ ಅನ್ವೇಷಣೆ ಇರಲಿ, ದೊಡ್ಮನೆ ಮೊಮ್ಮಗ ವಿನಯ್ ರಾಜಕುಮಾರ್ ಸಿನೆಮಾಗೆ ಬೇಕಾದ ಕನಿಷ್ಠ ಸಿದ್ಧತೆಯನ್ನು ಮಾಡಿದಂತಿಲ್ಲ. ಬುದ್ಧನಾದ ಸಿದ್ಧಾರ್ಥನಾಗಲೀ ಅಥವಾ ಹರ್ಮನ್ ಹೆಸ್ ನ ಕಾದಂಬರಿಯಾಗಲಿ ಅಥವಾ ನಟರಾಗಿ ವರನಟ ರಾಜಕುಮಾರ್ ಆಗಲಿ ಜನಮಾನಸದ ನಡುವೆ ಕ್ಲಾಸಿಕ್ ಆಗಿ, ಅಜರಾಮರರಾಗಿ ಉಳಿದಿದ್ದು ಅವರ ಪರಿಶ್ರಮ ಮತ್ತು ಸಿದ್ದತೆಯಿಂದಲೆ! ಇವರಿಂದ ಈ ಸಿದ್ಧಾರ್ಥ ಕಲಿಯುವುದು ಬಹಳಷ್ಟಿದೆ. ಈ ಸಿದ್ಧಾರ್ಥ ಮುಂದಿನ ದಿನಗಳಲ್ಲಿ ಕನ್ನಡ ಚಲನಚಿತ್ರೋದ್ಯಮದ ಬುದ್ಧನಾಗಲಿ ಎಂದು ಆಶಿಸೋಣ!

-ಗುರುಪ್ರಸಾದ್
guruprasad.n@kannadaprabha.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com