
ನಟ ಶರಣ್ ಅವರಿಗೆ ಒಂದು ಸಾಲಿನ ಕಥೆ ಹೊಳೆದಿತ್ತಂತೆ. ಅದನ್ನು ಅವರ ಸಹನಟಿಗೆ ಹೇಳಿದಾಗ ಅವರು ಅದ್ಭುತ ಎಂದರಂತೆ. ನಿರ್ಮಾಪಕರಂತೂ ಆ ಸಾಲು ಕೇಳಿ ಅತ್ಯದ್ಭುತ ಅಂದರಂತೆ. ಆಗ ನಿರ್ದೇಶಕ ಜಯತೀರ್ಥ ತಂಡ ಸೇರಿ ಕಥೆ ಕಟ್ಟುತ್ತಾ ಹೋಗಿ 'ಬುಲೆಟ್ ಬಸ್ಯಾ'ನನ್ನು ಬೆಳೆಸುತ್ತಾ ಹೋದರಂತೆ. ಹೀಗೆ ನಿರ್ಮಾಣಗೊಂಡಿರುವ 'ಬುಲೆಟ್ ಬಸ್ಯಾ' ಹಾಸ್ಯ ಸಿನೆಮಾ ಎಂದು ಬೊಬ್ಬೆಹೊಡೆದುಕೊಂಡು, ಹಾಸ್ಯಸಾರ್ವಭೌಮ ನರಸಿಂಹರಾಜು ಅವರ ಜನ್ಮದಿನಕ್ಕೆ ಬಿಡುಗಡೆಯಾಗಿದೆ. ಪ್ರೇಕ್ಷಕರನ್ನು ನಗಿಸಲು ಶರಣ್ ಸಫಲರಾಗಿದ್ದಾರೆಯೇ? ಶರಣ್ ಅವರ ಒಂದು ಸಾಲಿನ ಕಥೆಗೆ ಜಯತೀರ್ಥ ಜೀವ ತುಂಬಿ ಪ್ರೇಕ್ಷರನ್ನು ಎರಡೂವರೆ ಗಂಟೆ ಸಿನೆಮಾಮಂದಿರದಲ್ಲಿ ಕೂರಲು ಸಹಕರಿಸಿದ್ದಾರೆಯೇ?
'ಬ' ಸಿಂಗಾಪೂರಿನ ಸಿರಿವಂತ ಮನೆತನದ ಕುಡಿ. ಆ ಮನೆತನ ಒಣ ಗಂಡು ಪ್ರತಿಷ್ಠೆಗೆ, ಹರುಕು ಕಚ್ಚೆಗೆ ಹೆಸರುವಾಸಿ. ಅದೇ ಊರಿನಲ್ಲಿ 'ಮ' ಎಂಬ ಒಬ್ಬ ಸಾಧು ಯುವಕ. 'ಕ' ಅವನ ಸೋದರತ್ತೆಯ ಮಗಳು. 'ಕ' ಅನಾಥೆ ಆದರೆ 'ಮ' ಜೊತೆಗೆ ನಿಶ್ಚಿತಾರ್ಥವಾಗಿರುತ್ತದೆ. ಆದರೆ 'ಬ' ಗೆ 'ಕ' ಮೇಲೆ ಮೋಹವುಂಟಾಗಿ ತನ್ನತ್ತ ಒಲಿಸಿಕೊಳ್ಳಲು 'ಮ'ನನ್ನು ಅಪಹರಿಸಿ, ಕೂಡಿಹಾಕಿ ಅವನು ಮೃತನಾಗಿದ್ದಾನೆ ಎಂಬ ಸುಳ್ಳುಸುದ್ದಿಯನ್ನು ಹಬ್ಬಿಸುತ್ತಾನೆ. 'ಕ' ಈಗ 'ಬ'ನಿಗೆ ಸುಲಭವಾಗಿ ಒಲಿಯುತ್ತಾಳೆಯೇ? 'ಬ' ಎಂಬುದು ಬುಲೆಟ್ ಬಸ್ಯನ ಪಾತ್ರವಾಗಿ 'ಮ' ಎಂಬುದು ಮುತ್ತನ ಪಾತ್ರವಾಗಿ ಶರಣ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದರೆ, 'ಕ' ಎಂಬುದು ಕಾವೇರಿಯಾಗಿ ಹರಿಪ್ರಿಯ ಕಾಣಿಕೊಂಡಿದ್ದಾರೆ.
ಹಲವಾರು ಬಾರಿ ಬಳಸಿದ ಈಗಾಗಲೇ ಹಳಸಿದ ಈ ಕಥಾಹಂದರವನ್ನು ಹಿಡಿದು ಹಿಗ್ಗಿಸಲು ಅಹಿತಕರವಾದ ಹಲವಾರು ಘಟನೆಗಳನ್ನು ತುರುಕಿ, ಸಣ್ಣ ವಿಭಿನ್ನತೆಯನ್ನೂ ತೋರದೆ ಮಾಡಿರುವ ಸಿನೆಮ 'ಬುಲೆಟ್ ಬಸ್ಯಾ'. ಒಂದು ಕುಸ್ತಿಯಲ್ಲಿ ಭಾಗಿಯಾಗಿ ನಾಯಕ ನಟ ಗೆಲ್ಲುವ ದೃಶ್ಯದ ಕ್ಲೀಶೆಯಿಂದ ಪ್ರಾರಂಭವಾಗುವ ಸಿನೆಮಾ ಕೂಡಲೆ ಒಂದು ಐಟಮ್ ಹಾಡಿಗೆ ಜಾರುತ್ತದೆ. ನಂತರ ಶರಣ್ ಅವರ ಅಬ್ಬರದ-ಆರ್ಭಟದ ನಟನೆಯೊಂದಿಗೆ ಹತ್ತು ಹಲವು ಘಟನೆಗಳನ್ನು ಬಲಂತವಾಗಿ ತುರುಕಿ, ಗಲಾಟೆ ಹಿನ್ನಲೆ ಸಂಗೀತದ ಜೊತೆ ಉಸಿರುಕಟ್ಟುವ ವಾತಾವರಣವನ್ನು ಸಿನೆಮಾ ನಿರ್ಮಿಸುತ್ತದೆ. ದೊಡ್ಡ ಮನೆತನದ ಕಚ್ಚೆ ಹರುಕುತನವನ್ನು ವೈಭವೀಕರಿಸುವ ಬಗೆ ಮತ್ತು ಅದರ ಸುತ್ತ ಹೆಣೆದಿರುವ ಸಂಭಾಷಣೆಗಳು ವಾಕರಿಕೆ ತರುತ್ತವೆ. 'ಬುಲೆಟ್' ಸಿನೆಮಾ ಶೀರ್ಷಿಕೆಯಲ್ಲಿ ಮತ್ತು ತೆರೆಯ ಮೇಲೆ ಒಂದೆರಡು ಬಾರಿ ಕಾಣಿಸಿಕೊಳ್ಳುವುದು ಬಿಟ್ಟರೆ ಅದಕ್ಕೂ ಸಿನೆಮಾಕಥೆಗೆ ಯಾವುದೇ ಸಂಬಂಧ ಇಲ್ಲ. ಅರ್ಜುನ್ ಜನ್ಯ ನೀಡಿರುವ ಸಂಗೀತ ಕೆಲವೊಮ್ಮೆ ಎಲ್ಲೋ ಕೇಳಿದ ಹಾಗೆನ್ನಿಸಿದರೆ ಇನ್ನು ಕೆಲವೊಮ್ಮೆ ಕೇಳಬೇಕೆನಿಸುವುದಿಲ್ಲ. ಬಹುತೇಕ ಹಾಡುಗಳ ಗೀತ ರಚನೆಯಂತೂ, ಮೂರನೆ ತರಗತಿಯ ಮಕ್ಕಳು ಸೃಷ್ಟಿಸಬಲ್ಲ ಗೀತೆಗಳಿಗಿಂತಲೂ ಕಳಪೆಯಾಗಿವೆ. ಹರಿಪ್ರಿಯ ಅವರ ನಟನೆ ಇದ್ದುದರಲ್ಲಿ ಪರವಾಗಿಲ್ಲ ಎನ್ನಬಹುದು. ಉಳಿದಂತೆ ರಂಗಾಯಣ ರಘು, ಸಾಧುಕೋಕಿಲಾ ಇವರೆಲ್ಲ ಸುಖಾಸುಮ್ಮನೆ ಬಂದುಹೋಗುವ ಪಾತ್ರಗಳು. ಒಟ್ಟಿನಲ್ಲಿ ಸಿನೆಮಾವಿಡೀ ಶರಣ್ ಅವರ ಅಬ್ಬರವೇ ರಾಚಿ ರಾಡಿ ಮಾಡುತ್ತದೆ. ಜಯತೀರ್ಥ ಅವರ ಯಾವುದೇ ಕೈಚಳಕ ಇಲ್ಲಿ ಕಾಣದೆಹೋಗಿ, ತಲೆಚಿಟ್ಟುಹಿಡಿಸಬಲ್ಲ ಪರಿಣಾಮಕಾರಿ ಸಿನೆಮಾವಾಗಿ ಮೂಡಿಬಂದಿದೆ.
ಹಾಸ್ಯ ಪ್ರಧಾನ ಸಿನೆಮಾಗಳ ಪರಿಕಲ್ಪನೆಯೇ ಇವೊತ್ತಿಗೆ ಬದಲಾಗಿರುವುದು ಅತ್ಯಂತ ವಿಷಾದಕರ ಸಂಗತಿ. ಅಬ್ಬರದ ನಟನೆ, ಕಿರುಚಾಟ, ಡಬಲ್ ಮೀನಿಂಗ್-ದ್ವಂದ್ವಾರ್ಥದ ಸಂಭಾಷಣೆ, ಮಹಿಳೆಯನ್ನು ಅಣಕಿಸುವುದೇ ಇಂದು ಪ್ರಧಾನವಾಗಿ ಹಾಸ್ಯ ಎಂದು ಕರೆಯಲ್ಪಡುವ ಸಂಗತಿಗಳು. ಹಾಸ್ಯ ಸನ್ನಿವೇಶಗಳಂತೂ ಸಿನೆಮಾಗಳಿಂದ ಕಾಣೆಯಾಗಿವೆ. ನರಸಿಂಹರಾಜು, ಬಾಲಕೃಷ್ಣ ಇಂತಹ ಮೇರುನಟರ ಸಿನೆಮಾ ಡಿವಿಡಿಗಳನ್ನು ಕೊಂಡು ಇಂದಿನ ಹಾಸ್ಯ ನಟರು-ನಿರ್ದೇಶಕರು ಮತ್ತೆ ಮತ್ತೆ ನೋಡಬೇಕು. ಬೀಚಿ, ನಾ ಕಸ್ತೂರಿ, ದಾಶರಥಿ ದೀಕ್ಷಿತ್, ಪಾ ವೆಂ ಆಚಾರ್ಯ ಇವರುಗಳನ್ನು ಓದುವುದು ಕೂಡ ಸ್ವಲ್ಪ ಸಹಾಯವಾಗಬಹುದು. ಕನ್ನಡ ಪ್ರೇಕ್ಷಕನಲ್ಲಿ ಬತ್ತಿಹೋಗಿರುವ ನಗುವನ್ನು ಮತ್ತೆ ಮೂಡಿಸಲು ಸಾರ್ಥಕವಾಗಬಹುದು!
-ಗುರುಪ್ರಸಾದ್
guruprasad.n@kannadaprabha.com
Advertisement