
ನೃತ್ಯನಿರ್ದೇಶನದಿಂದ ನಿರ್ದೇಶನಕ್ಕೆ ಹೊರಳಿರುವ ಹರ್ಷ, ನಟ ಶಿವರಾಜ್ ಕುಮಾರ್ ಅವರೊಂದಿಗೆ ಮತ್ತೊಂದು ಸಿನೆಮಾ ನಿರ್ದೇಶಿಸಿದ್ದಾರೆ. ಈ ಜೋಡಿಯ ಹಿಂದಿನ ಚಿತ್ರ ಭಜರಂಗಿ ನಿರ್ದೇಶಕನಿಗೆ ಒಂದು ಮಟ್ಟದ ಖ್ಯಾತಿಯನ್ನು ತಂದುಕೊಟ್ಟಿದ್ದರಿಂದಲೋ ಏನೋ ಹನುಮಂತನನ್ನು ಈ ನಿರ್ದೇಶಕ ಮತ್ತು ನಟ ಕೈಬಿಟ್ಟಿಲ್ಲ. ಆದರೆ 'ಪ್ರೇಕ್ಷಕ ಹನುಮಂತ' ವಜ್ರಕಾಯನ ಕೈಹಿಡಿಯಲಿದ್ದಾನೆಯೇ?
ಸಿರಿವಂತ ಕುಟುಂಬವೊಂದರಲ್ಲಿ ಅನಾಥನಾದರೂ ಆ ಪ್ರಜ್ಞೆಯಿಲ್ಲದೆ ಮನೆಯ ದೊಡ್ಡ ಮಗನಾಗಿ ಬದುಕುತ್ತಿರುವವನು ವಿರಾಜ್ (ಶಿವರಾಜಕುಮಾರ್). ಇವನಿಗೆ ಯುವತಿಯೊಬ್ಬಳನ್ನು ಕಂಡು ಪ್ರೀತಿಯಂಕುರವಾಗುತ್ತದೆ. ಆದರೆ ಆ ಯುವತಿಯ ಅಪ್ಪನಿಗೆ ಇವನು ಅನಾಥ ಎಂದು ತಿಳಿದು ಎಲ್ಲರ ಮುಂದೆ ಜರಿಯುತ್ತಾನೆ. ಆಗ ವಿರಾಜ್ ನ ಸಾಕು ಅಪ್ಪನಿಗೆ (ಅವಿನಾಶ್) ಹೃದಯಾಘಾತವಾಗಿ ನಂತರ ಚೇತರಿಸಿಕೊಂಡು ವಿರಾಜ್ ಅನಾಥನಲ್ಲ ಅವನಿಗೆ ತಾಯಿ ಇದ್ದಾಳೆ, ಕುಟುಂಬ ಇದೆ ಎಂಬ ಸತ್ಯ ಬಿಚ್ಚಿಡುತ್ತಾನೆ. ವಿರಾಜ್ ನ ತಾಯಿ ಬೇರೆ ಕುಲದವನನ್ನು ಮದುವೆಯಾಗಿದ್ದರಿಂದ ಜಂಗಲ್ ಕಣಿವೆಯ ಅರಸ 'ಹುಜೂರ್' ತನ್ನ ಅಳಿಯನನ್ನೇ ಕೊಲ್ಲಿಸಿ ಮಗುವನ್ನು ಕೂಡ ಕೊಲ್ಲಲು ಆದೇಶಿಸಿರುತ್ತಾನೆ. ಆದರೆ ಮಗುವನ್ನು ಕೊಲ್ಲಲು ಅಪ್ಪಣೆಯಾಗಿರುವ ಹುಜೂರ್ ನ ಜೀತದಾಳು, ಮಗುವನ್ನು ರಕ್ಷಿಸಿಬಿಟ್ಟಿರುತ್ತಾನೆ. ಅವನೇ ವಿರಾಜ್ ನ ಈ ಸಾಕು ಅಪ್ಪ. ಈಗ ವಿರಾಜ್ ತನ್ನ ತಾಯಿಯನ್ನು ಹುಡುಕಿಕೊಂಡು ಭಯಾನಕ ಜಂಗಲ್ ಕಣಿವೆಯ ತನ್ನ ಕುಟುಂಬವನ್ನು ಸೇರುತ್ತಾನೆ. ಅಲ್ಲಿ ಹುಡುಗಿಯೊಬ್ಬಳನ್ನು ರಕ್ಷಿಸುತ್ತಾನೆ. ತನ್ನ ಕ್ರೂರಿ ತಾತನಿಗೂ ರಕ್ಷಣೆ ನೀಡುತ್ತಾನೆ. ಸೋದರ ಮಾವನ ಮಗಳನ್ನು ಪ್ರೀತಿಸುತ್ತಾನೆ. ಹೀಗೆಲ್ಲ ಹಾಗೆಲ್ಲಾ ಕಥೆ ಮುಂದುವರೆಯುತ್ತದೆ!
ತಮ್ಮ ಹಿಂದಿನ ಭಜರಂಗಿಯ ಸೂತ್ರವನ್ನೇ ಮುಂದುವರೆಸಿರುವ ನಿರ್ದೇಶಕರ ಈ ವಜ್ರಕಾಯ ಕಥೆಯಲ್ಲಿ, ಸಿನೆಮಾವನ್ನು ಕಾಯಬಹುದಾದ ಯಾವುದೇ ವಿಶೇಷತೆ ಇಲ್ಲ. ಶಿವರಾಜ್ ಕುಮಾರ್ ವಿರಾಜ್ ಆಗಿ ವೀರತ್ವ ಮೆರೆಯಲು ಸಿನೆಮಾ ಹಾಡಿನಿಂದಲೇ ಪ್ರಾರಂಭವಾಗುತ್ತದೆ. ಹೇಗೋ ಮೊದಾಲಾರ್ಧ ಮುಗಿದು ವಿರಾಜ್ 'ಜಂಗಲ್ ಕಣಿವೆ' ತಲುಪಿದ ಮೇಲೆ 'ಪ್ರೇಕ್ಷಕ ಹಿಂಸೆ' ಪ್ರಾರಂಭವಾಗುತ್ತದೆ. ಅನಗತ್ಯವಾದ ಪಾತ್ರಗಳು ಬಂದು ಹೋಗುತ್ತವೆ. ಹಲವಾರು ಫೈಟುಗಳು ಹಾಡುಗಳು ಸುಖಾಸುಮ್ಮನೆ ಬಂದರೂ ಕಥೆ ಮಾತ್ರ ಮುಂದುವರೆಯುವುದೇ ಇಲ್ಲ. ಶಿವಣ್ಣ ಮಾತ್ರ ತಮ್ಮ ಅಭಿಮಾನಿಗಳನ್ನು ರಂಜಿಸಲು ಪಂಚಿಂಗ್ ಡೈಲಾಗುಗಳ, ಒಳ್ಳೆಯತನ ಸಾರುವ ಸಂಭಾಷಣೆಯ ಝರಿಯನ್ನು ಹರಿಸುತ್ತಲೇ ಹೋಗುತ್ತಾರೆ. ಐದು ನಿಮಿಷಕ್ಕೂ ಹೆಚ್ಚು ಎಳೆಯಲಾಗದ ಕಥೆಯನ್ನು ಒಂದುವರೆ ಘಂಟೆಗೂ ಮೀರಿಸಿ ಪ್ರೇಕ್ಷಕನ ಶುಚಿಯಾದ ಕಾಯ-ಮನಸ್ಸಿಗೆ ಹಿಂಸೆ ನೀಡುವ ಪರಿ ನಿರ್ದೇಶಕರು ಈ ಸಿನೆಮಾಗೋಸ್ಕರ ತಮ್ಮ ಕಾಯವನ್ನು ದಂಡಿಸದೆ ಇರುವುದನ್ನು ತಿಳಿಸುತ್ತದೆ. ಬಂದು ಹೋಗುವ ಹಾಸ್ಯ ನಟರರಾದ ಚಿಕ್ಕಣ್ಣ ಮತ್ತು ಸಾಧುಕೋಕಿಲಾ ಪಾತ್ರಗಳು ಕಿರಿಕಿರಿಯುಂಟು ಮಾಡುತ್ತವೆ. ಪುರುಷರಿಗೆ ಮಹಿಳೆಯರ ವೇಷ ಹಾಕಿ ಹಲವಾರು ಹಾಡುಗಳಿಗೆ ಸಾಧುಕೋಕಿಲ ಕುಣಿಯುವುದು ಹಾಸ್ಯವೂ ಆಗದೆ, ಹಾಸ್ಯಾಸ್ಪದವೂ ಆಗದೆ, ಅಪಹಾಸ್ಯವೂ ಆಗದೆ ಅಸಹ್ಯದಂತೆ ಕಾಣುತ್ತದೆ! ಒಂದು ಐತಿಹಾಸಿಕ ಸ್ಥಳದ ಊರ ದೇವತೆ ದುರ್ಗಾ ದೇವಿಯನ್ನು ಪೆಂಡಾಲ್ ಕೆಳಗೆ ಬಣ್ಣದ ಮಣ್ಣಿನ ವಿಗ್ರಹದಂತೆ ತೋರಿಸಿರುವುದು ಹಾಸ್ಯಾಸ್ಪದವಾಗಿದೆ. ಅಲ್ಲದೆ ಇಂದಿನ ದಿನದಲ್ಲಿ ನಡೆಯುವ ಈ ಕಥೆಯಲ್ಲಿ, ಕಾನೂನು ವ್ಯವಸ್ಥೆಯನ್ನೇ ಧಿಕ್ಕರಿಸಿ ಊರ ಜನತೆಯನ್ನೇ ಜೀತದಾಳು ಮಾಡಿಕೊಳ್ಳುವ 'ಹುಜೂರ್' ಕಥೆಯನ್ನು ರಿಲೇಟ್ ಮಾಡಿಕೊಳ್ಳುವುದು ಪ್ರೇಕ್ಷಕನಿಗೆ ಕಷ್ಟವೇ! ಇಂತಹ ಜೀತದಾಳೊಬ್ಬ ಮಗುವನ್ನು ಎತ್ತಿಕೊಂಡು ಬೆಂಗಳೂರಿನಲ್ಲಿ ಸಿರಿವಂತನಾಗಿ ಹೇಗೆ ಮೆರೆಯುತ್ತಾನೆ ಎಂಬ ಲಿಂಕ್ ಕೂಡ ಮಿಸ್ ಆಗಿದ್ದು ಕಥೆ-ಪಾತ್ರಗಳ ಎಸ್ಟಾಬ್ಲಿಶ್ಮೆಂಟ್ ಬಗ್ಗೆ ಅರಿವೇ ಇಲ್ಲದೆ ನಿರ್ದೇಶಕ ಸ್ಕ್ರಿಪ್ಟ್ ಮಾಡಿರುವುದನ್ನು ತೋರಿಸುತ್ತದೆ. ಇನ್ನು ದ್ವಿತೀಯಾರ್ಧದಲ್ಲಿ ವಿರಾಜ್ ನ ಸೋದರಮಾವನ ಮಗಳಾಗಿ, ಬಜಾರಿ ಹುಡುಗಿಯಾಗಿ ಕಾಣಿಸಿಕೊಳ್ಳುವ ಪಟಾಕಿ ಪಾರ್ವತಿ (ನಭಾ ನಟೇಶ್) ಇಷ್ಟು ಹೊತ್ತಿಗೆ ಹೈರಾಣಾಗಿರುವ ಪ್ರೇಕ್ಷಕರನ್ನು ಚಿತ್ರಮಂದಿರದಿಂದ ಹೊಡೆದೋಡಿಸುವಂತಹ ನಟನೆ ನೀಡಿದ್ದಾರೆ. ಅಬ್ಬರದ ಹಿನ್ನಲೆ ಸಂಗೀತ, ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ, ಧನುಶ್ ಹಾಡಿರುವ ಹಾಡೊಂದನ್ನು ಹೊರತುಪಡಿಸಿ ಉಳಿದ ಹಾಡುಗಳು ಮುದ ನೀಡುವುದೇ ಇಲ್ಲ! ಒಟ್ಟಿನಲ್ಲೆ ತಮ್ಮದೇ ಹಿಂದಿನ ಚಿತ್ರವನ್ನು ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಮತ್ತೆ ನಿರ್ಮಿಸಲು ಹೋಗಿ ನಿರ್ದೇಶಕ ದಯನೀಯವಾಗಿ ಸೋತಿದ್ದಾರೆ.
ಹಿನ್ನಲೆಗೆ ಹೋಗುವ, ಯಾವುದೊ ಐತಿಹಾಸಿಕ(ಇದು ಕಾಲ್ಪನಿಕವಾದದ್ದೂ ಇರಬಹುದು) ಕಥೆ ಹೇಳುವ ಈ ಪೀರಿಯಡ್ ಸಿನೆಮಾಗಳ ಸಂತತಿ ಇತ್ತೀಚೆಗೆ ಹೆಚ್ಚುತ್ತಿವೆ. ಆದರೆ ಈ ಸಿನೆಮಾಗಳಲ್ಲೂ ಸಮಯ ಮತ್ತು ಸ್ಥಳದ (ದೇಶ-ಕಾಲ) ಪರಿಕಲ್ಪನೆಯ ಬಗ್ಗೆ ಸ್ಕ್ರಿಪ್ಟ್ ನಲ್ಲಿ ನಿರ್ದೇಶಕರು ಜಾಗ್ರತೆ ವಹಿಸಬೇಕು. ಸುಮ್ಮನೆ ಹಿರೋಯಿಸಂ ತೋರಿಸಲು ಇಂದಿನ ದಿನಗಳಲ್ಲಿ ನಡೆಯುವ, ಬೆಂಗಳೂರಿನಿಂದ ದ್ವಿಚಕ್ರವಾಹನದಲ್ಲಿ ತೆರಳಬಹುದಾದ ಜಾಗದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲದೆ ಜೀತದಾಳುಗಳನ್ನು ಇರಿಸಿಕೊಂಡಿರುವ ಒಬ್ಬ ಡಾನ್ ನ ಕಥೆ ಕಟ್ಟಿ, ಹೀರೋವೊಬ್ಬ ಅಲ್ಲಿಗೆ ಹೋಗಿ ತನ್ನ ಬೆರಳಿನ ಉಗುರಿನಿಂದ ಎಲ್ಲ ತೊಂದರೆಗಳನ್ನು ನಿವಾರಿಸಿಬಿಡುವ ಕಥೆ ಕಲ್ಪನೆಗೆ ಮಾಡುವ ಮೋಸವಾಗುತ್ತದೆ.
Advertisement