ರೂಢಿ ಬಿಡದ, ಮೋಡಿ ಮಾಡದ ರಾಮ್ ಲೀಲಾ

ಗೊಂದಲಮಯ ಹಾಸ್ಯವನ್ನು ಪ್ರಧಾನವಾಗಿಟ್ಟುಕೊಂಡು ತಲೆಬುಡವಿಲ್ಲದ ಕಥೆಗಳುಳ್ಳ ಹಲವಾರು ಸಿನೆಮಾಗಳು ಭಾರತೀಯ ಚಿತ್ರರಂಗದಲ್ಲಿ ಬಂದು ಹೋಗಿವೆ.
ರಾಮ್ ಲೀಲಾ ಸಿನೆಮಾ ವಿಮರ್ಶೆ
ರಾಮ್ ಲೀಲಾ ಸಿನೆಮಾ ವಿಮರ್ಶೆ

ಗೊಂದಲಮಯ ಹಾಸ್ಯವನ್ನು ಪ್ರಧಾನವಾಗಿಟ್ಟುಕೊಂಡು ತಲೆಬುಡವಿಲ್ಲದ ಕಥೆಗಳುಳ್ಳ ಹಲವಾರು ಸಿನೆಮಾಗಳು ಭಾರತೀಯ ಚಿತ್ರರಂಗದಲ್ಲಿ ಬಂದು ಹೋಗಿವೆ. ಅವುಗಳ ಬಹುತೇಕ ಯಶಸ್ಸು ಪ್ರೇಕ್ಷಕರನ್ನು ನಕ್ಕು ನಗಿಸಬಹುದಾದ ಹಾಸ್ಯದ ಮೇಲೆಯೇ ನಿಂತಿರುತ್ತದೆ. ಚುರುಕು ಸಂಭಾಷಣೆ, ಅಸಾಧಾರಣ ನಟನೆ, ಸಂಭಾಷಣೆ ಒಪ್ಪಿಸುವುದರಲ್ಲಿನ ಟೈಮಿಂಗ್ಸ್ ಇವುಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಈ ಸಿನೆಮಾಗಳು ಜನರಲ್ಲಿ ಅಚ್ಚಳಿಯುವ ಕಥೆಯನ್ನೇನೂ ಹೇಳದೆ ಹೋದರೂ ನೋಡುವ ಅವಧಿಯಲ್ಲಿ ನೀಡುವ ಮನರಂಜನೆಗಾಗಿ ಪ್ರೇಕ್ಷಕರಿಗೆ ಇಷ್ಟವಾಗಿ ಹೋಗುವ ಸಾಧ್ಯತೆ ಹೆಚ್ಚು.. ತೆಲುಗು ಚಿತ್ರ ಲೌಕ್ಯಂ ನ ರಿಮೇಕ್ ಚಿರಂಜೀವಿ ಸರ್ಜಾ ನಟನೆಯ ರಾಮ್ ಲೀಲಾ, ಜನರನ್ನು ರಂಜಿಸುವಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆಯೇ?

ರಾಮ್ ಎಂಬ ಯುವಕ ಅಣ್ಣಾಜಿ ಎಂಬ ಮೈಸೂರಿನ ರೌಡಿಯ ತಂಗಿಗೆ ಇಷ್ಟವಿಲ್ಲದ ಮದುವೆಯನ್ನು ತಪ್ಪಿಸಲು ಅವಳನ್ನು ಅಪಹರಿಸುತ್ತಾನೆ. ಅವಳು ಇಷ್ಟ ಪಟ್ಟ ಹುಡುಗನೊಂದಿಗೆ ಮದುವೆ ಮಾಡಿಸಿ ಬೇರೆ ಊರಿನಲ್ಲಿ ತಲೆಮರೆಸಿಕೊಳ್ಳುತ್ತಾನೆ. ಅಲ್ಲಿ ಚಂದು ಎಂಬ ಯುವತಿಯನ್ನು ಕಂಡು ಮೋಹಗೊಂಡು ಅವಳನ್ನು ಪ್ರೀತಿಸುತ್ತಾನೆ. ಆದರೆ ಚಂದು ತಾನು ಅಪಹರಿಸಿದ ಹುಡುಗಿಯ ತಂಗಿ ಎಂದು ತಿಳಿಯುತ್ತದೆ. ಈ ಮಧ್ಯದಲ್ಲಿ ಅಣ್ಣಾಜಿಯ ವಿರೋಧಿ ಗ್ಯಾಂಗ್ ಚಂದು ಮೇಲೆ ದಾಳಿ ಮಾಡುತ್ತದೆ. ಅವಳನ್ನು ಕಾಪಾಡಿದರೂ ಚಂದು ತನ್ನ ಅಣ್ಣನಲ್ಲಿಗೆ ಹಿಂದಿರುಗುತ್ತಾಳೆ. ಈಗ ರಾಮ್ ಗೆ ರೌಡಿ ಅಣ್ಣಾಜಿಯ ಮನವೊಲಿಸಿ ಮದುವೆಯಾಗಲು ಸಾಧ್ಯವೇ? ರಾಮಲೀಲೆಯಿಂದ್ ಏನೆಲ್ಲಾ ಸಾಧ್ಯ?

ಅತಿ ಸಾಧಾರಣ ಮತ್ತು ಪ್ರೆಡಿಕ್ಟೆಬಲ್ ಕಥೆಯ ಈ ಸಿನೆಮಾಗೆ ದುಪ್ಪಟ್ಟು ಪೆಟ್ಟು ನೀಡಿರುವುದು ಸತ್ವವಿಲ್ಲದ ವಿಪರೀತ ಪಾತ್ರಗಳ ಪರಿಕಲ್ಪನೆ ಮತ್ತು ಸೃಷ್ಟಿ. ಯಾವುದೇ ಪಾತ್ರಕ್ಕೂ ಸರಿಯಾದ ಎಸ್ಟಾಬ್ಲಿಶ್ ಮೆಂಟ್ ಇಲ್ಲ. ಬೇಕಾಬಿಟ್ಟ್ಟಿ ಸೃಷ್ಟಿಸಲಾಗಿರುವ ಪಾತ್ರಗಳ ಸುತ್ತ ಕಥೆ ಹೆಣೆಯುತ್ತಾ ಹೋಗಲಾಗಿದ್ದು ಅಲ್ಲಲ್ಲಿ ಕಚಗುಳಿಯಿಡುವ ಕೆಲವು ಹಾಸ್ಯ ದೃಶ್ಯಗಳನ್ನು ಹೊರತುಪಡಿಸಿದರೆ ಇಡೀ ಸಿನೆಮಾ ಪ್ರೇಕ್ಷಕನಿಗೆ ಬೋರು ಹೋಡೆಸುತ್ತದೆ. ಮೊದಲಾರ್ಧವಂತೂ ಏನೂ ಘಟಿಸುತ್ತಿಲ್ಲ ಎಂದೆನಿಸಿದರೆ, ದ್ವೀತೀಯಾರ್ಧ ಹಿಂದೆ ಕಂಡರಿತ ಸಿನೆಮಾಗಳಂತೆಯೇ ಪ್ರೇಕ್ಷಕನ ಊಹೆಯಂತೆಯೇ ಮುಂದುವರೆದು ಅತಿ ಸಾಧಾರಣ ಅಂತ್ಯ ಕಾಣುತ್ತದೆ. ನಾಯಕನಟನಾಗಿರುವ ಚಿರಂಜೀವಿ ಸರ್ಜಾ ಲವಲವಿಕೆಯಿಂದ ಕೂಡಿರಬೇಕಾದ ನಟನೆ ಮೂಡಿಸುವಲ್ಲಿ ವಿಫಲರಾಗಿದ್ದಾರೆ. "ಹೆಣ್ಣು ಗಾಜಿನ ಮನೆ ಇದ್ದ ಹಾಗೆ, ತಗ್ಗಿ ಬಗ್ಗಿ ನಡೆಯಬೇಕು" ಎಂಬತಹ ಹಿಮ್ಮುಖ ಧೋರಣೆಯ ಸೆಕ್ಸಿಸ್ಟ್ ಸಂಭಾಷಣೆಯನ್ನು ಸಂಭ್ರಮಿಸಿರುವುದು ಬೇಸರ ಮೂಡಿಸುತ್ತದೆ. ಹಲವು ದಿನಗಳ ನಂತರ ಹಿಂದಿರುಗಿರುವ ರಂಗಾಯಣ ರಘು ಅತಿ ಸಪ್ಪೆಯಾಗಿ ಕಾಣಿಸುತ್ತಾರೆ. ರೌಡಿ ಪಾತ್ರಗಳಲ್ಲಿ ಶೋಭರಾಜ್ ಮತ್ತು ಆಶೀಶ್ ವಿದ್ಯಾರ್ಥಿ ಇವರುಗಳ ನಟನೆ ಸಾಧಾರಣ. ಕಾರ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧು ಕೋಕಿಲಾ ಇದ್ದುದರಲ್ಲಿ ಉಳಿದವರಿಗಿಂತಲೂ ಮೇಲು ಮತ್ತು ತಮ್ಮ ನಟನೆಯಿಂದ ಕಚಗುಳಿ ನೀಡಿ ಜನರಿಗೆ ತುಸು ನೆಮ್ಮದಿ ತರುತ್ತಾರೆ. ಅಮೂಲ್ಯ ಗ್ಲಾಮರಸ್ ಆಗಿ ನಟಿಸಲು ಪ್ರಯತ್ನಿಸಿದ್ದಾರೆ. ಅಲ್ಲಲ್ಲಿ ಧುತ್ತೆಂದು ಮೂಡವ ಹಾಡುಗಳು ಸಿನೆಮಾವನ್ನು ಅನಗತ್ಯವಾಗಿ ಲಂಬಿಸಿದ್ದರೆ, ಅನೂಪ್ ರೂಬೆನ್ಸ್ ಅವರ ಟ್ಯೂನ್ ಗಳಲ್ಲಿ ಒಂದೆರಡು ಪರವಾಗಿಲ್ಲ ಎನ್ನಬಹುದು. ಮೂಲ ಸಿನೆಮಾದಲ್ಲೇ ಅಂತಹ ಸತ್ವವಿಲ್ಲದ ಕಥೆಯುಳ್ಳ ಲೌಕ್ಯಂನನ್ನು ಕನ್ನಡಕ್ಕೆ ಭಟ್ಟಿ ಇಳಿಸಿರುವ ನಿರ್ದೇಶಕ ವಿಜಯ್ ಕಿರಣ ಅವರ ಪ್ರಯತ್ನ ಪ್ರೇಕ್ಷಕನನ್ನು ಕಾಡುವುದೂ ಇಲ್ಲ ಮನರಂಜಿಸುವುದೂ ಇಲ್ಲ.

ಕೊನೆಗೆ ಕನ್ನಡ ಪ್ರೇಕ್ಷಕನನ್ನು ಇನ್ನಿಲ್ಲದಂತೆ ಕಾಡಬಹುದಾದ ಪ್ರಶ್ನೆ ಇಂತಹ ಕಥೆಯೇ ಅಲ್ಲದ ಕಥೆಯನ್ನೂ ಬಿಡದೆ ರಿಮೇಕ್ ಮಾಡಬೇಕೇ ಎಂಬುದು!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com