ಆಕ್ಟೋಪಸ್ ಸಿನೆಮಾ ವಿಮರ್ಶೆ
ಆಕ್ಟೋಪಸ್ ಸಿನೆಮಾ ವಿಮರ್ಶೆ

ಅಣ್ಣಯ್ಯನ ಮಾನವಶಾಸ್ತ್ರ ಮತ್ತು ಫಾರ್ಮಕಾಲಜಿ

ಇಂದು ಬಿಡುಗಡೆಯಾದ 'ಆಕ್ಟೋಪಸ್' ನಲ್ಲಿ ವೈದ್ಯನಾಗಿ ಕಾಣಿಸಿಕೊಂಡಿದ್ದಾರೆ. ಅಣ್ಣಯ್ಯ ನಿರ್ದೇಶನದ ಈ ಚಿತ್ರ ಜನರನ್ನು ಸಮ್ಮೋಹಿಸಲು ಸಾಧ್ಯವಾಗಿದೆಯೇ?
Published on

'ದುನಿಯಾ'ದಿಂದ ಬೆಳ್ಳಿತೆರೆಯಲ್ಲಿ ಮುನ್ನೆಲೆಗೆ ಬಂದ ನಟ ಕಿಶೋರ್ ದಕ್ಷಿಣ ಭಾರತ ಚಿತ್ರೋದ್ಯಮದಲ್ಲಿ ಉನ್ನತಿ ಕಂಡವರು. ಇತ್ತೀಚೆಗೆ ಇವರ ಸಾಲು ಸಾಲು ಸಿನೆಮಾಗಳು ಬಿಡುಗಡೆಯಾಗುತ್ತಿದ್ದು, ಇಂದು ಬಿಡುಗಡೆಯಾದ 'ಆಕ್ಟೋಪಸ್' ನಲ್ಲಿ ವೈದ್ಯನಾಗಿ ಕಾಣಿಸಿಕೊಂಡಿದ್ದಾರೆ. ಅಣ್ಣಯ್ಯ ನಿರ್ದೇಶನದ ಈ ಚಿತ್ರ ಜನರನ್ನು ಸಮ್ಮೋಹಿಸಲು ಸಾಧ್ಯವಾಗಿದೆಯೇ?

ಸಮ್ಮೋಹಿನಿ ಕಲೆ ಕರಗತ ಮಾಡಿಕೊಂಡಿರುವ ವೈದ್ಯ, ವೈದ್ಯಕೀಯ ವಿಜ್ಞಾನಿ ಯಶವಂತ್ (ಕಿಶೋರ್), ರಕ್ತನಾಳಗಳಲ್ಲಿನ ಬ್ಲಾಕ್ ಗಳನ್ನು ಅತಿ ಕಡಿಮೆ ಬೆಲೆಯಲ್ಲಿ ತೆಗೆಯುವ ಔಷಧವೊಂದನ್ನು ಸಿದ್ಧಪಡಿಸುತ್ತಿರುತ್ತಾನೆ. ಖಾಸಗಿ ಫಾರ್ಮಾ ಸಂಸ್ಥೆಯ ಪಿತೂರಿಯಿಂದ ಹೆಂಡತಿಯನ್ನು (ಯಜ್ಞಾ ಶೆಟ್ಟಿ) ಕಳೆದುಕೊಳ್ಳುವ ಯಶವಂತ್ ಸೇಡು ತೀರಿಸಿಕೊಳ್ಳಲು ನಾಯಿಯೊಂದನ್ನು ಹಿಪ್ನಟೈಸ್ ಮಾಡಿ ಫಾರ್ಮಾ ಸಂಸ್ಥೆಯ ಮಾಲೀಕನನ್ನು ಕೊಲೆ ಮಾಡಿಸುತ್ತಾನೆ. ನಂತರದ ಸಮಯದಲ್ಲಿ ಅಮೆರಿಕಾದಿಂದ ಪಿತೃತರ್ಪಣೆ ಮಾಡಲು ಬಂದ ಯುವತಿಯನ್ನು(ಅಶ್ವಿನಿ) ರೇಪಿಸ್ಟ್ ಗಳಿಂದ ರಕ್ಷಿಸುತ್ತಾನೆ. ಅವಳ ಆಸ್ತಿಯನ್ನು ಕಬಳಿಸಲು ಹೊಂಚು ಹಾಕುವ ಮೂವರು ಪಾತಕಿಗಳಿಂದ ರಕ್ಷಣೆ ನೀಡುತ್ತಾನೆ. ಆ ಯುವತಿ, ಯಶವಂತ್ ಸಂಶೋಧನೆಗೆ ಧನಸಹಾಯ ಮಾಡುವ ಭರವಸೆ ನೀಡುತ್ತಾಳೆ. ಆದರೆ ಪಾತಕಿಗಳು ಇದಕ್ಕೆ ಅವಕಾಶ ಮಾಡಿಕೊಡುವರೇ?

ಔಷಧ ಉದ್ಯಮದಲ್ಲಿರುವ ಅವ್ಯವಹಾರಗಳ ಕುರಿತ ರೋಚಕ-ಥ್ರಿಲ್ಲರ್ ಸಿನೆಮಾ ಇದು ಎಂಬ ನಿರೀಕ್ಷೆಯಲ್ಲಿ ಸಿನೆಮಾ ವೀಕ್ಷಿಸಿದರೆ ನಿರಾಸೆ ಕಟ್ಟಿಟ್ಟಬುತ್ತಿ. ಒಂದು ಸೇಡಿನ ಸಿನೆಮಾ ಆಗಿಯೂ ಕೂಡ ಪರಿಣಾಮಕಾರಿಯಾಗಿಲ್ಲ ಎಂಬುದು ನಿರಾಸೆಯನ್ನು ಇಮ್ಮಡಿಗೊಳಿಸುತ್ತದೆ! ಫಾರ್ಮಾ ಕಂಪನಿಗಳು ದುಡ್ಡು ದೋಚುವ ಸಂಸ್ಥೆಗಳು, ಅವರಿಗೆ ಜನಹಿತ ಮುಖ್ಯವಲ್ಲ ಎಂಬ ಸಣ್ಣ ಎಳೆಯಿಂದ ಹೆಣೆದಿರುವ ಕಥೆ ಅತಿ ಸಾಧಾರಣ ನಿರೂಪಣೆ ಮತ್ತು ಅಸಂಬದ್ಧ ಘಟನೆಗಳ ಸರಮಾಲೆಯಿಂದ ಇನ್ನಿಲ್ಲದಂತೆ ಬೋರು ಹೊಡೆಸುತ್ತದೆ. ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಔಷಧಿಗಳು ಮತ್ತು ಆರೋಗ್ಯ ಸೇವೆ ಸುಲಭವಾಗಿ, ಮತ್ತು ನ್ಯಾಯವಾಗಿ ಸಿಗಬೇಕೆಂಬ ಉದಾತ್ತ ಚಿಂತನೆ ಸಿನೆಮಾಗೆ ಇದ್ದರೂ ಅದನ್ನು ಪರಿಣಾಮಕಾರಿಯಾಗಿ, ಸೂಕ್ಷ್ಮ ಒಳನೋಟಗಳಿಂದ ಪ್ರೇಕ್ಷಕನಿಗೆ ಬೇಸರವಾಗದಂತೆ, ಮನಮುಟ್ಟುವಂತೆ ಚಿತ್ರಿಸಬೇಕೆಂಬ ತೀವ್ರತೆ ನಿರ್ದೇಶಕನಿಗೆ ಇಲ್ಲವಾಗಿದೆ. ಅನಗತ್ಯವಾಗಿ ತುಂಬಿದಂತಿರುವ ಘಟನೆಗಳು ಹೀರೋನನ್ನು ವೈಭವೀಕರಿಸಲು ಶತಪ್ರಯತ್ನ ಮಾಡಲಾಗಿದೆ. ಯಶವಂತ್ ಮನೆ ಆವರಣದಲ್ಲಿ ಒಂದು ಹುಡುಗಿಯ ಕೊಲೆ ಆದರೂ ಆ ಸುದ್ದಿ ಯಾರಿಗೂ ಗೊತ್ತಾಗುವುದಿಲ್ಲ ಎಂಬತಹ ವಿಚಿತ್ರ ಘಟನೆಗಳು ಸಿನೆಮಾವನ್ನು ಇನ್ನಷ್ಟು ಪೇಲವವಾಗಿಸುತ್ತವೆ. ಇತ್ತ ಬಡಜನಸೇವೆಗಾಗಿ ಔಷಧಿಯೊಂದರ ಆವಿಷ್ಕಾರ ಮಾಡುವವನು, ವೈಜ್ಞಾನಿಕವಲ್ಲದ ಸಮ್ಮೋಹಿನಿ ಕಲೆ ಬಳಸಿ ಕೊಲೆ ಮಾಡುವುದು ಅದನ್ನು ಸಮರ್ಥಿಸಿಕೊಳ್ಳುವುದು ಅತಿ ವಿಚಿತ್ರ ಮತ್ತು ವಿರೋಧಾಭಾಸ ಎಂದೆನಿಸುತ್ತದೆ. ತಾಂತ್ರಿಕವಾಗಿಯೂ ಅಷ್ಟೇನೂ ಮೋಡಿ ಮಾಡದ ಸಿನೆಮಾದಲ್ಲಿ ಯಾವ ಹಾಡುಗಳು ಮನಸ್ಸಿನಲ್ಲಿ ನಿಲ್ಲುವುದಿಲ್ಲ ಮತ್ತು ತುರುಕಲಾಗಿರುವ ಒಂದು ಐಟಮ್ ಡ್ಯಾನ್ಸ್ ಕಿರಿಕಿರಿ ಉಂಟುಮಾಡುತ್ತದೆ. ಕೆಲವು ಕಡೆ ಕಿಶೋರ್ ನಟನೆ ಉತ್ತಮ ಎನಿಸಿದರೆ ರೋಮ್ಯಾಂಟಿಕ್ ದೃಶ್ಯಗಳಲ್ಲಿ, ಭಾವನಾತ್ಮಕ ದೃಶ್ಯಗಳಲ್ಲಿ ಸಪ್ಪೆ ಎನಿಸುತ್ತಾರೆ. ಹೆಚ್ಚೇನು ಕೆಲಸವಿಲ್ಲದಿದ್ದರೂ ಯಜ್ಞಾ ಶೆಟ್ಟಿ ಪರವಾಗಿಲ್ಲ ಎನ್ನಬಹುದು ಆದರೆ ಮತ್ತೊಬ್ಬ ನಟಿ ಅಶ್ವಿನಿ ನಿರಾಸೆ ಉಂಟುಮಾಡುತ್ತಾರೆ. ಒಟ್ಟಿನಲ್ಲಿ ಜನಸೇವೆ, ಡ್ರಗ್ ಕಂಪನಿಗಳ ಮಾಫಿಯಾ ಇವುಗಳ ಬಗ್ಗೆ ಚಿತ್ರಕಥೆ ಹೆಣೆಯಲು ಹೋಗಿ ಕೊನೆಗೆ ಅದನ್ನು ಸೇಡಿನ ಕಥೆಯನ್ನಾಗಿಸಿ ಅದನ್ನು ಸಮರ್ಪಕವಾಗಿ ಚಿತ್ರಿಸದೆ ನಿರ್ದೇಶಕ ಅಣ್ಣಯ್ಯ ಸಂಪೂರ್ಣ ವಿಫಲರಾಗಿದ್ದಾರೆ.

ವಿಶ್ವ ಫುಟ್ಬಾಲ್ ಪಂದ್ಯಗಳ ಭವಿಷ್ಯ ನಿರ್ಧರಿಸುತ್ತಿದ್ದ ಆಕ್ಟೋಪಸ್ ಒಂದು ವಿಶ್ಯವಿಖ್ಯಾತವಾಗಿತ್ತು. ಅದು ಕೆಲ ವರ್ಷಗಳ ಹಿಂದೆಯಷ್ಟೇ ನಿಧನವಾಯಿತು. ಕನ್ನಡ ಪ್ರೇಕ್ಷಕನಿಗೆ ಈಗ ಹೊಸದೊಂದು ಆಕ್ಟೋಪಸ್ ಪರಿಚಯವಾಗಿದೆ. ಇದರ ಭವಿಷ್ಯ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com