ರಾಕೆಟ್ ಗೆ 'ಮುಂ'ಭಾರ, ಪಾಕೆಟ್ ಗೆ ದೇವರ ಭಾರ

ನಟ ನೀನಾಸಂ ಸತೀಶ್ ನಿರ್ಮಾಪಕನಾಗಿ ಭಡ್ತಿ ಪಡೆದ ಹೆಗ್ಗಳಿಕೆಯೊಂದಿಗೆ 'ರಾಕೆಟ್' ಬಿಡುಗಡೆಯಾಗಿದೆ. ಸಹಭಾಗಿತ್ವ ಕಲೆ ಎನಿಸಿಕೊಂಡ ಸಿನೆಮಾ...
ರಾಕೆಟ್ ಸಿನೆಮಾ ವಿಮರ್ಶೆ
ರಾಕೆಟ್ ಸಿನೆಮಾ ವಿಮರ್ಶೆ

ನಟ ನೀನಾಸಂ ಸತೀಶ್ ನಿರ್ಮಾಪಕನಾಗಿ ಭಡ್ತಿ ಪಡೆದ ಹೆಗ್ಗಳಿಕೆಯೊಂದಿಗೆ 'ರಾಕೆಟ್' ಬಿಡುಗಡೆಯಾಗಿದೆ. ಸಹಭಾಗಿತ್ವ ಕಲೆ ಎನಿಸಿಕೊಂಡ ಸಿನೆಮಾ, 'ರಾಕೆಟ್' ಹಾರಿಸುವಷ್ಟೇ ಕ್ರಿಯಾಶೀಲತೆ ಬೇಡುವ ರಂಗ. ಈ 'ರಾಕೆಟ್' ಪ್ರೇಕ್ಷಕನನ್ನು ತನ್ನ ಜೊತೆ ಮತ್ತೊಂದು ಲೋಕಕ್ಕೆ ಕೊಂಡೊಯ್ಯಲಿದೆಯೇ?

ಉಡಾಳ ರಾಕೇಶ್ (ನೀನಾಸಂ ಸತೀಶ್) ಯುವಕನೊಬ್ಬನಿಗೆ ಗುದ್ದಿ ಅಪಘಾತ ಮಾಡುತ್ತಾನೆ. ಗುಂಪಿಗೆ ಹೆದರಿ ಕಾರು ನಿಲ್ಲಿಸದೆ ಮುಂದುವರೆದು ಮತ್ತೊಂದು ರಸ್ತೆ ಅಪಘಾತಕ್ಕೆ ಒಳಗಾಗಿ ಕೋಮಾಗೆ ತೆರಳುತ್ತಾನೆ. ಆದರೆ ಡಾಕ್ಟರ್ ಶ್ವೇತಾಳ (ಐಶಾನಿ ಶೆಟ್ಟಿ) ಶುಶ್ರೂಶೆಯಿಂದ ಸುಸ್ಥಿತಿಗೆ ಮರಳಿದಾಕ್ಷಣ, ಅವಳ ಕಂಡಾಕ್ಷಣ ಅವಳ ಮೇಲೆ ಪ್ರೀತಿ ಉಕ್ಕುತ್ತದೆ. ಅದನ್ನು ನಿವೇದಿಸಿಕೊಳ್ಳದೆ, ಸಿನೆಮಾ ಮಾಡುತ್ತಿರುವುದಾಗಿ ಆಕೆಗೆ ಹೇಳಿ ತನ್ನ ಪ್ರೀತಿಯ ಕಥೆಯನ್ನು ಸಿನೆಮಾದಲ್ಲಿ ಕಥೆಯಲ್ಲಿ  ಕಟ್ಟಿ ಅವಳಿಗೆ ಹೇಳುತ್ತಾ ಹೋಗುತ್ತಾನೆ. ಅವಳನ್ನು ಕೊಡಗಿಗೆ ಹಿಂಬಾಲಿಸಿದಾಗ, ಅವಳ ತನ್ನ ಮದುವೆ ಸಮಾರಂಭಕ್ಕೆ ಬಂದಿರುವುದೆಂದು ತಿಳಿಯುತ್ತದೆ. ಮದುವೆ ಗಂಡು ಯಾರು? ಶ್ವೇತಾಳ ಭಾವನೆಗಳೇನು? ತನ್ನ ಪ್ರೀತಿ ತನಗೆ ಒಲಿಯುತ್ತದೆಯೇ?

ಮೇಲಿನ ಕಥಾಹಂದರ ಓದಿದಾಗ ಯೋಗರಾಜ್ ಭಟ್  ನಿರ್ದೇಶನದ ಮುಂಗಾರು ಮಳೆ ನೆನಪಿಗೆ ಬಾರದೆ ಇರದು. ಕಥೆಯನ್ನೇ ಅನುಕರಿಸಿದ ಮೇಲೆ ಸಂಭಾಷಣೆಯೂ ವಿಭಿನ್ನವಾಗಿರುವ ಸಾಧ್ಯತೆ ಕಡಿಮೆಯೇ. ಹರಟೆಕೋರ ಸಂಭಾಷಣೆಯನ್ನೇ ಜೀವಾಳವಾಗಿರಿಸಿಕೊಂಡು, ಮುಂಗಾರು ಮಳೆಯ ಕಥೆಗೆ ಸಣ್ಣ ಟ್ವಿಸ್ಟ್ ನೀಡಿ, ಸುಖಾಂತ್ಯ ಒದಗಿಸುವ ನಿರ್ದೇಶಕನ ಜಾಣ್ಮೆ ಪ್ರೇಕ್ಷಕನಿಗೆ ಇನ್ನಿಲ್ಲದಂತೆ ಬೋರು ಹೊಡೆಸುತ್ತದೆ. ಮತ್ತದೇ ರೀತಿಯಲ್ಲಿ ವೈಭವಯುತ ಸೆಟ್ಟಿನಲ್ಲಿ ನಡೆಯುವ ಸಿನೆಮಾಗೆ ಸಂಬಂಧಿಸದ ನೃತ್ಯದಿಂದ ನಾಯಕನನ್ನು ಪರಿಚಯಿಸುವ ಕ್ಲೀಷೆಯ ತಂತ್ರ, ನಿಶ್ಯಕ್ತ ಎಶ್ಟಾಬ್ಲಿಶ್ಮೆಂಟ್ ನಿಂದ ಕೂಡಿದ ಏನು ಕೆಲಸವಿಲ್ಲದ ನಾಯಕ ನಟ ಹೀಗೆ ನಿರೀಕ್ಷಿತ ನಿರೂಪಣೆಯ ಸಿನೆಮಾಗೆ ವಿಶೇಷ ಎನ್ನುವಂತಹ ಯಾವುದೇ ಘಟನೆಗಳು ಕೂಡ ಇಲ್ಲದಿರುವುದು ನಿರಾಸೆ ಉಂಟು ಮಾಡುತ್ತದೆ. ನಾಯಕಿಯನ್ನು ಹಿಂಬಾಲಿಸುವ ನಾಯಕ ನಟ, ಬಸ್ಸು ಕೆಟ್ಟು ನಿಲ್ಲುವುದು, ಅವಳನ್ನು ನಡೆಸಿಕೊಂಡು ಹೋಗುವುದು, ಮಧ್ಯೆ ರೌಡಿಗಳು ನಾಯಕಿಯನ್ನು ಕೆಣಕುವುದು, ನಾಯಕ ನಟ ಅವರನ್ನು ಪುಡಿಗುಟ್ಟುವುದು, ಈ ನಡುವೆ ಅಸಹಜವಾಗಿ ಒಂದೆರಡು ಮದುವೆಯಲ್ಲಿ ಭಾಗಿಯಾಗುವುದು ಹೀಗೆ ಕುಂಟುತ್ತಾ ಹಾರುವ ರಾಕೆಟ್ ಪ್ರೇಕ್ಷಕನನ್ನು ನಿದ್ದೆಗೆ ಜಾರಿಸಿದರೆ, ಸಿನೆಮಾದ ಕೊನೆಯ ಭಾಗಕ್ಕೆ ನಾಯಕ ನಟನಿಗೆ ಒದಗುವ ಒಂದು ಸಂದಿಗ್ಧ ಪರಿಸ್ಥಿತಿಯಷ್ಟೇ ಪ್ರೇಕ್ಷನಿಗೆ ತುಸು ಟರ್ಬ್ಯುಲೆನ್ಸ್ ಉಂಟು ಮಾಡಿ ಎಚ್ಚರಿಸುವುದು. ಈ ಸಂದಿಗ್ಧತೆಯನ್ನು ಕೂಡ ಅತಿ ಸಿನಿಮೀಯವಾಗಿ ನಿಭಾಯಿಸಿ, ಮುಂಗಾರು ಮಳೆಗಿಂತಲೂ ತುಸು ವಿಭಿನ್ನ ತಿರುವು ನೀಡಬೇಕು ಎಂತಲೋ ಅಥವಾ ಕಥೆಯ ಅಂತ್ಯ ನಿರ್ಧರಿಸಲು ಹೆಣಗಿಯೋ ಅಥವಾ ಸುಖಾಂತ್ಯ ನೀಡಲೇಬೇಕೆಂದೋ ಅಂತ್ಯವನ್ನು ವಿಪರೀತವಾಗಿ ಜಗ್ಗಿ ಪ್ರೇಕ್ಷಕನಿಗೆ ಅನಾಯಾಸ ತಂದೊಡ್ಡುತ್ತಾರೆ.

ಸತೀಶ್ ನೀನಾಸಂ ನಟನೆಯಲ್ಲಿ ಯಾವುದೇ ಮೋಡಿ ಮಾಡಿಲ್ಲ ಹಾಗೂ ಐಶಾನಿ ಶೆಟ್ಟಿ ತಮ್ಮ 'ವಾಸ್ತುಪ್ರಕಾರದ' ನಟನೆಯನ್ನು ಮುಂದುವರೆಸಿದ್ದಾರೆ. ಸಾಮಾನ್ಯವಾಗಿ ಸಮತೋಲನದಲ್ಲಿ ನಟಿಸುವ ಅಚ್ಯುತ್ ಕುಮಾರ್ ಕೂಡ ವಿಪರೀತ ಸಂಭಾಷಣೆಯಿಂದ ಬಳಲಿದ್ದಾರೆ. ಪದ್ಮಜಾ ರಾವ್ ಇಂಗ್ಲಿಶ್ ಬಳಸದ ನಾಟಕೀಯ ಅಚ್ಚ ಕನ್ನಡದಲ್ಲಿ ಮಾತನಾಡಿ ಕಿರಿಕಿರಿ ಉಂಟುಮಾಡುತ್ತಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತದಲ್ಲಿ ಎರಡು ಮೂರು ಹಾಡುಗಳು ಹಿತವೆನಿಸುತ್ತವೆ. ಚಿತ್ರಕಥೆ-ಸ್ಕ್ರಿಪ್ಟ್ ಹಂತದಲ್ಲಿ ಸರಿಯಾದ ಚರ್ಚೆ ಇಲ್ಲದೆ, ನಿರೂಪಿಸುವಾಗಲೂ ಅಷ್ಟೇನೂ ಚಮತ್ಕಾರ ತೋರದೆ ಅತಿ ಸಾಧಾರಣ ಸಿನೆಮಾವನ್ನು ನಿರ್ದೇಶಿಸಿದ್ದಾರೆ ಶಿವ ಶಶಿ.

ನಿರ್ದೇಶಕರ ಈ ರಾಕೆಟ್ ನಿಂದ ನಿರ್ಮಾಪಕ ನಟ ನೀನಾಸಂ ಸತೀಶ್ ರ ಪಾಕೆಟ್ ತೂತಾಗುವುದು ಕನ್ನಡಿಗರ ಪಾಲಿನ ದುರಂತ. ಅದು ತಪ್ಪಾಗಲಿ ಎಂದು ಕನ್ನಡ ಚಿತ್ರಗಳ ಅಭಿಮಾನಿ ದೇವರು, ದೇವರಲ್ಲಿ ಮೊರೆಯಿಡುತ್ತಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com