ಭಂಗಿ ಮಾಸ್ಟರ್ ನ ವೀಡ್, ವಿಕ್ಷಿಪ್ತತೆ, ವಿಜೃಂಭಣೆ

ಒಬ್ಬ ವಿಕ್ಷಿಪ್ತ ಮನುಷ್ಯ ಯಾವುದೇ ತರ್ಕವಿಲ್ಲದ, ತೂಕವಿಲ್ಲದ, ಅಬ್ಬರದ, ಒಂದಕ್ಕೊಂದು ಸಂಬಧವಿಲ್ಲದ ಮಾತುಗಳಲ್ಲಿ ಬೆದರಿಕೆ ಮೂಲಕ ಯುವಕರನ್ನು ತಿದ್ದಲು ಸಾಧ್ಯ ಎನ್ನುವುದು ಮೂರ್ಖತನದ ಪರಮಾವಧಿಯೇ!
'ರಿಂಗ್ ಮಾಸ್ಟರ್' ಸಿನೆಮಾ ವಿಮರ್ಶೆ
'ರಿಂಗ್ ಮಾಸ್ಟರ್' ಸಿನೆಮಾ ವಿಮರ್ಶೆ
Updated on

ಅಗಾಥ ಕ್ರಿಸ್ಟಿ ಅವರ 'ಅಂಡ್ ದೆನ್ ಡೇರ್ ವರ್ ನನ್' ಕಾದಂಬರಿ ಆಧಾರಿತ ಇತ್ತೀಚೆಗಷ್ಟೇ ಬಿಡುಗಡೆಯಾದ ಕನ್ನಡ ಸಿನೆಮಾ 'ಆಟಗಾರ'ದಲ್ಲಿ, ತಪ್ಪು ಮಾಡಿ ಕಾನೂನಿನ ಕಣ್ಣಿಂದ ತಪ್ಪಿಸಿಕೊಂಡ ಕೆಲವರನ್ನು, ರಿಯಾಲಿಟಿ ಶೋ ನೆಪದಲ್ಲಿ ನಿರ್ಜನ ದ್ವೀಪವೊಂದಕ್ಕೆ ಕರೆದೊಯ್ದು, ಅವರೆಲ್ಲರನ್ನು ನಿವೃತ್ತ ನ್ಯಾಯಾಧೀಶನೊಬ್ಬ ವಿಕ್ಷಿಪ್ತವಾಗಿ ಕೊಲ್ಲುವ ಕಥೆ ಹೊಂದಿತ್ತು. ಇಂತಹ ಸಮಾನಾಂತರ ವ್ಯವಸ್ಥೆ ಉಳ್ಳ ಸಿನೆಮಾಗಳ ಸಾಲಿಗೆ ಸೇರಿಸಬಹುದಾದ, ಅದರ ಜೊತೆಗೆ ನೈತಿಕ ಪೊಲೀಸ್ ಗಿರಿಯನ್ನು ವಿಜೃಂಭಿಸುವ ಪ್ರತಿಗಾಮಿ ಸಿನೆಮಾವಾಗಿ ತೆರೆ ಕಂಡಿದೆ 'ರಿಂಗ್ ಮಾಸ್ಟರ್'.

ವಸತಿ ಸಮುಚ್ಚಯದ ಪ್ರತ್ಯೇಕ ಮನೆಯೊಂದರಲ್ಲೇ ನಡೆಯುವ ಕಥೆಯುಳ್ಳ ಈ ಸಿನೆಮಾದಲ್ಲಿ, ಬಹುತೇಕ ಸಮಯ ತೆರೆಯ ಮೇಲೆ ಸದಾ ಕಾಣಿಸಿಕೊಳ್ಳುವ ಸಕಲ ಕಲಾವಲ್ಲಭ ಅರುಣ್ ಸಾಗರ್ ಅವರ ಸಕಲ ಕಲೆಗಳನ್ನು ಪ್ರೇಕ್ಷಕ ಸಹಿಸಿಕೊಳ್ಳಬೇಕಷ್ಟೇ! ಅವರ ಎಲ್ಲ ಕಲೆಗಳ ಸಾಮಾನ್ಯ ಅಂಶ ಆರ್ಭಟ. ಇಂತಹ ಆರ್ಭಟ ಮೊಳಗಿಸುವಲ್ಲಿ ಅವರು ಸಫಲರಾಗಿದ್ದರೂ, ಚಿತ್ರಕಥೆ ಸದ್ದೇ ಮಾಡುವುದಿಲ್ಲ. ರಾಕಿ (ಶೃಂಗ) , ಮಧು (ಅನುಶ್ರೀ) ಲಿವ್-ಇನ್ ಸಂಬಂಧದಲ್ಲಿ ಬದುಕುತ್ತಿರುವವರು. ಸ್ವೇಚ್ಚೆಯಿಂದ ಬದುಕುತ್ತಿರುವ ಗೆಳತಿ ವೇದಾಳ (ಶ್ವೇತಾ) ಜೊತೆಗೂಡಿ ಹೊಸವರ್ಷದ ಹಿಂದಿನ ರಾತ್ರಿ ಪಾರ್ಟಿ ಮಾಡಲು ನಿಶ್ಚಯಿಸಿ, ಗಾಂಜಾ ಡೀಲರ್ ಭಂಗಿರಂಗನಿಗೆ (ಅರುಣ್ ಸಾಗರ್) ಕರೆ ಮಾಡುತ್ತಾರೆ. ಹೀಗೆ ನಾಲ್ಕೂ ಜನ ಸೇರಿ ವಿವಿಧ ರೀತಿಯ ವೀಡ್ (ಗಾಂಜಾಕ್ಕೆ ಅನಧಿಕೃತ ಹೆಸರು) ಗಳನ್ನು, ವಿವಿಧ ಭಂಗಿಗಳಲ್ಲಿ ಹೊಡೆದುಕೊಂಡು ಕಿರುಚಾಡುತ್ತಾ ಅರಚಾಡುತ್ತಾ, ಕೆಲವೊಮ್ಮೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಹೇಳುತ್ತಾ, ಇನ್ನೂ ಕೆಲವೊಮ್ಮೆ ಇಂಗ್ಲಿಶ್ ರೈಮ್ ಗಳನ್ನು ಹಾಡುತ್ತಾ, ರಾಜರತ್ನಂ ಅವರ ನಾಯಿ ನಾಯಿ ಮರಿ ಪದ್ಯವನ್ನೂ ಹೇಳಿಕೊಳ್ಳುತ್ತಾ ಔತಣ ಕೂಟ ನಡೆಸುತ್ತಾರೆ. ಇದೇನಪ್ಪ, ಏನು ನಡೆಯುತ್ತಿದೆ ಎಂದು ಪ್ರೇಕ್ಷಕನ ತಾಳ್ಮೆ ಕಟ್ಟೆಯೊಡೆಯುವುದಲ್ಲಿ, ನಿಜವಾದ ಆಟ ಈಗ ಶುರುವಾಗುತ್ತದೆ ಎಂಬ ಬರಹದೊಂದಿಗೆ ಮಧ್ಯಂತರ ವಿರಾಮ ದೊರೆಯುತ್ತದೆ. ಎರಡನೇ ಭಾಗದಲ್ಲಿ ರಾಂಗ್ ಆಗುವ ರಿಂಗ್ ಮಾಸ್ಟರ್ ಇಲ್ಲಿಯವರೆಗೆ ಹೇಳುತ್ತಿದ್ದ ಪದ್ಯಗಳಿಗೆ ಸ್ವಲ್ಪ ವಿರಾಮ ಕೊಟ್ಟು, ಉಳಿದ ಮೂವರಿಗೆ ಚಿತ್ರಹಿಂಸೆ ನೀಡಲು ಪ್ರಾರಂಭಿಸುತ್ತಾನೆ. ಮಿಮಿಕ್ರಿ ಕಲಾವಿದನಾಗಿ ಆರ್ಭಟಿಸುವ ಅರುಣ್ ಸಾಗರ್, ನಟನಾಗುವುದು ಯಾವಾಗ ಎಂಬ ಪ್ರಶ್ನೆ ಪ್ರೇಕ್ಷಕನ ತಲೆಗೆ ತೂರಿ ಹೋಗುವುದರೊಳಗೆ, ಮೂವರನ್ನು ಒಂದು ಬಾತ್ ಟಬ್ಬಿನಲ್ಲಿ ಕೂಡಿಹಾಕುವ ರಿಂಗ್ ಮಾಸ್ಟರ್, ಅವರ ಪಾಪಗಳನ್ನು ಒಪ್ಪಿಕೊಳ್ಳುವಂತೆ ಬೆದರಿಕೆ ಹಾಕುತ್ತಾನೆ. ಇಲ್ಲಿಯವರೆಗೂ ಕಿರಿಕಿರಿಯಾಗುತ್ತಿದ್ದ ಸಿನೆಮಾ ಇದ್ದಕ್ಕಿದ್ದಂತೆ ಸಹಿಸಲಾರದ ಯಾತನೆಗೆ ದೂಕುತ್ತದೆ. ತಪ್ಪೊಪ್ಪಿಗೆ ಮಾಡದೆ ಹೋದರೆ ಸ್ವರ್ಗ ಸಿಗುವುದಿಲ್ಲ ಎಂದು ಮೂವರಿಗೂ ಹೇಳುವಾಗ, ಪ್ರೇಕ್ಷಕನಿಗೆ ನರಕಯಾತನೆಯ ಅನುಭವವಾಗುತ್ತದೆ. ವೇದಾಳ ನಡತೆಯ ಬಗ್ಗೆ ಪಾಠ ಹೇಳುವ ರಿಂಗ್ ಮಾಸ್ಟರ್, ಮೈತುಂಬಾ ಬಟ್ಟೆ ಇರದ ಕಾರಣವೇ ರೇಪ್ ಗಳಿಗೆ ಕಾರಣ ಎಂಬ ಪಾಚ್ಯ ಮನಸ್ಥಿತಿಯ ಮೂಲಭೂತವಾದಿಯ ವಾದವನ್ನು ಮಂಡಿಸುತ್ತಾನೆ. ಗನ್ ತೆಗೆದು ಇಬ್ಬರನ್ನು ಶೂಟ್ ಮಾಡುತ್ತಾನೆ. ಹೀಗೆ ಸಿನೆಮಾ ಇನ್ನೇನು ಅಂತ್ಯ ಕಂಡಿತಪ್ಪಾ ಎಂದು ನಿಟ್ಟುಸಿರು ಬಿಡುವಾಗ 'ರಿಂಗ್ ಗಾಂಜಾ ಮಾಸ್ಟರ್' ಪ್ರತ್ಯಕ್ಷವಾಗಿದ್ದ ದೇವರು ಎಂಬ ಅಭಿಪ್ರಾಯದಲ್ಲಿ ಪೆದ್ದುತನದ ಅಂತ್ಯ ಕಾಣುತ್ತದೆ.

ವಿದೇಶಿ ಸಿನೆಮಾ ಒಂದರಿಂದ ಸ್ಫೂರ್ತಿ ಪಡೆದು, ಬಹಳ ಸಾಮಾನ್ಯವಾದ ಕಥೆ ಹೆಣೆದು, ಅರುಣ್ ಸಾಗರ್ ಅವರ ಆರ್ಭಟವನ್ನೇ ವಿಜೃಂಭಿಸಿ, ವಿಕ್ಷಿಪ್ತ ನೈತಿಕತೆಯನ್ನು ಮುಂದುಮಾಡಿ, ಅಬ್ಬರದ ಹಿನ್ನಲೆಸಂಗೀತದೊಂದಿಗೆ, ಅಸಂಬದ್ಧ ಸಂಭಾಷಣೆಯೊಂದಿಗೆ, ಇದ್ದುದರಲ್ಲಿ ಕೇಳಬಹುದು ಎಂಬ ಹಾಡೊಂದ ಸೇರಿಸಿ ವಿಶ್ರುತ್ ನಾಯಕ್ ನಿರ್ದೇಶಿಸಿರುವ ಈ ಸಿನೆಮಾ ಯಾವ ಕಾರಣಕ್ಕೆ ನೋಡಬೇಕು ಎಂದು ಸಿನೆಮಾದಲ್ಲಿ ರಿಂಗ್ ಮಾಸ್ಟರ್ ಮಧುಳಿಗೆ 'ನಿನಗೆ ಬದುಕಲು ಕಾರಣ ಏನು' ಎಂದು ಕೇಳುವ ಧಾಟಿಯಲ್ಲೇ ಕೇಳಿಕೊಂಡರೆ ಉತ್ತರ ಸಿಗುವುದು ಕಷ್ಟ! ರವಿ ಬಸ್ರೂರು ಅವರ ಸಂಗೀತ, ಸಿನಿಟೆಕ್ ಸೂರಿ ಅವರ ಛಾಯಾಗ್ರಹಣ ಮತ್ತು ಹರೀಶ್ ಗಿರಿಗೌಡ ಅವರ ಸಂಕಲನ ಸಿನೆಮಾಗಿದ್ದರೂ ನಿರ್ದೇಶಕನಿಂದ ಹಿಡಿದು ಯಾರೂ ಸವಾಲುಗಳನ್ನು ಮೈಮೇಲೆ ಎಳೆದುಕೊಳ್ಳದೆ ಸಾಧಾರಣ ಸಿನೆಮಾ ಮಾಡಿ ಮುಗಿಸಿದ್ದಾರೆ.

ಯುವಕರು ತಪ್ಪು ಹೆಜ್ಜೆ ಇಡದೆ, ಒಳ್ಳೆಯ ರೀತಿಯಲ್ಲಿ, ಕಷ್ಟ ಪಟ್ಟು ದುಡಿದು ಬದುಕಬೇಕು ಎಂಬ ಆಶಯ ಇರುವುದು ಉದಾತ್ತವಾದದ್ದೇ! ಒಬ್ಬ ವಿಕ್ಷಿಪ್ತ ಮನುಷ್ಯ ಯಾವುದೇ ತರ್ಕವಿಲ್ಲದ, ತೂಕವಿಲ್ಲದ, ಅಬ್ಬರದ, ಒಂದಕ್ಕೊಂದು ಸಂಬಧವಿಲ್ಲದ ಮಾತುಗಳಲ್ಲಿ ಬೆದರಿಕೆ ಮೂಲಕ ಯುವಕರನ್ನು ತಿದ್ದಲು ಸಾಧ್ಯ ಎನ್ನುವುದು ಮೂರ್ಖತನದ ಪರಮಾವಧಿಯೇ! ಚಿತ್ರಕಥೆ ಹೆಣೆಯುವ ಹಂತದಲ್ಲಿ ಒಂದಿಬ್ಬರು ವಿಮರ್ಶಾತ್ಮಕವಾಗಿ ತಿದ್ದುವ ಮಾರ್ಗದರ್ಶಕರು ಚಿತ್ರತಂಡದಲ್ಲಿ ಇಲ್ಲದೆ ಹೋದಾಗ ಹುಟ್ಟುವ ಕಥೆಗಳಿವು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com