ಮಾಮ ಮಾಮ ಸ್ಟೂಡೆಂಟ್ ಮಾಮ, ಬೇಡ ಬೇಡ ವಾಸ್ಕೋಡಿಗಾಮ

ಅಥವಾ ಕಡೆಯ ಪಕ್ಷ ಟೀಕೆ ಮಾಡುತ್ತಿರುವ ವ್ಯವಸ್ಥೆಯ ಬಗ್ಗೆಯಾದರೂ ಆಳವಾದ ಅಧ್ಯಯನ ಇರಬೇಕು. ಇವುಗಳಲ್ಲಿ ಯಾವುದೂ ಇಲ್ಲವಾದರೆ ಆ ಟೀಕೆ, ವಿಮರ್ಶೆಯೇ ಹಾಸ್ಯಾಸ್ಪದವಾಗುತ್ತದೆ.
ವಾಸ್ಕೋಡಿಗಾಮ ಸಿನೆಮಾ ವಿಮರ್ಶೆ
ವಾಸ್ಕೋಡಿಗಾಮ ಸಿನೆಮಾ ವಿಮರ್ಶೆ
Updated on

ಇಂದಿನ ಶಿಕ್ಷಣ ವ್ಯವಸ್ಥೆಯ ಟೀಕೆಯಾಗಿ ಸಿನೆಮಾ ಮಾಡುವಾಗ, ಟೀಕೆ ಮಾಡಲು ಬಳಸುತ್ತಿರುವ ಮಾಧ್ಯಮವನ್ನು ಸಶಕ್ತವಾಗಿ ಬಳಸಿಕೊಳ್ಳುವುದು ಅಗತ್ಯ. ಆ ಮಾಧ್ಯಮದ ಪರಿಣಿತಿಯಿರಬೇಕು, ಸೃಜನಶೀಲತೆಯಿರಬೇಕು ಮತ್ತು ಮಾಧ್ಯಮದ ಬಗ್ಗೆ ಅಪಾರ ಪ್ರೀತಿ-ಕಾಳಜಿ ಇರಬೇಕು. ಅಥವಾ ಕಡೆಯ ಪಕ್ಷ ಟೀಕೆ ಮಾಡುತ್ತಿರುವ ವ್ಯವಸ್ಥೆಯ ಬಗ್ಗೆಯಾದರೂ ಆಳವಾದ ಅಧ್ಯಯನ ಇರಬೇಕು. ಇವುಗಳಲ್ಲಿ ಯಾವುದೂ ಇಲ್ಲವಾದರೆ ಆ ಟೀಕೆ, ವಿಮರ್ಶೆಯೇ ಹಾಸ್ಯಾಸ್ಪದವಾಗುತ್ತದೆ. ಶಿಕ್ಷಣ ವ್ಯವಸ್ಥೆಯನ್ನು ವಿಮರ್ಶೆ ಮಾಡಲು ಹೊರಟಿರುವ ಮಧುಚಂದ್ರ ನಿರ್ದೇಶನದ 'ವಾಸ್ಕೋಡಿಗಾಮ' ಸಿನೆಮಾದ್ದು ಕೂಡ ಇದೇ ಅವಸ್ಥೆ!

ಮದ್ಯ ಮತ್ತು ಸಿಗರೆಟ್ ಪ್ರಿಯ, ತರಗತಿಗಳಲ್ಲಿ ಸ್ಪೈಡರ್ ಮ್ಯಾನ್ ಸಿನೆಮಾದ ಕಥೆಗಳನ್ನು ಹೇಳುವ ಕನ್ನಡ ಮೇಷ್ಟ್ರು ವಾಸು ಡಿ ಗಾಮನಹಳ್ಳಿ ಅಲಿಯಾಸ್ ವಾಸ್ಕೋಡಿಗಾಮನೆಂದರೆ (ಕಿಶೋರ್) ಕೆಲವು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಹೆಣ್ಣು ಎಂದರೆ ವಿಷಕನ್ಯೆ ಎಂದು ತನ್ನ ಅಚ್ಚುಮೆಚ್ಚಿನ ಶಿಷ್ಯಂದಿರಿಗೆ ಪಾಠ ಹೇಳುವಾಗ, ಹೊಸ ಇಂಗ್ಲಿಶ್ ಅಧ್ಯಾಪಕಿ ಶಾಂತಿಯ (ಪಾರ್ವತಿ ನಾಯರ್) ಆಗಮನವಾಗುತ್ತದೆ. ಆಕೆಯನ್ನು ಕಂಡಾಕ್ಷಣ ಅವಳ ಮೋಹಕ್ಕೆ ಬೀಳುವ ವಾಸ್ಕೋಡಿಗಾಮನಿಗೆ ಅವನ ಶಿಷ್ಯರೇ 'ಪ್ರೀತಿ'ಗೆ ನೆರವಾಗುತ್ತಾರೆ. ಆದರೆ ಕಾಲೇಜಿನಲ್ಲಿ ಒಂದು ಅಚಾತುರ್ಯವಾಗಿ ಕಾಲೇಜು ಮುಚ್ಚುವ ನಿರ್ಧಾರ ಕೈಗೊಳ್ಳಲು ನಿರ್ಧರಿಸುವ ಒಡೆಯನಲ್ಲಿ ಮನವಿ ಮಾಡಿ, ಪ್ರಿನ್ಸಿಪಾಲ್ ಹುದ್ದೆಗೆ ಬರುವ ಶಾಂತಿ, ಕಾಲೇಜನ್ನು ಹದ್ದುಬಸ್ತಿಗೆ ತರುವಲ್ಲಿ ಯಶಸ್ವಿಯಾಗುತ್ತಾಳಾ? ಇದಕ್ಕೆ ವಾಸ್ಕೋಡಿಗಾಮ ಸಹಕರಿಸುತ್ತಾನಾ?

ವಾಸ್ಕೋಡಿಗಾಮ ಎಂಬ ಅಧ್ಯಾಪಕ ವಿದ್ಯಾರ್ಥಿಗಳನ್ನು ಅಪಹರಿಸಿದ್ದಾನೆ ಎಂದು ಮಾಧ್ಯಮಗಳು ಅರುಚಾಡುವುದರೊಂದಿಗೆ ಪ್ರಾರಂಭವಾಗುವ ಸಿನೆಮಾ ಪ್ರೇಕ್ಷಕನನ್ನು ಒಂದು ಕ್ಷಣ ಕುತೂಹಲಕ್ಕೆ ನೂಕಿದರೂ ಆ ಕುತೂಹಲ ೧೫ ನಿಮಿಷಗಳಲ್ಲಿ ಕಳಚಿಗೋಗುವಂತಹ ಕಥೆಯ ನಿರೂಪಣೆ ಪ್ರಾರಂಭವಾಗುತ್ತದೆ. ಈ ಮಾದ್ಯಮಗಳ ಅರುಚಾಟ, ಕಾಲೇಜಿನ, ಅಧ್ಯಾಪಕರ, ಮತ್ತು ವಿದ್ಯಾರ್ಥಿಗಳ ಪರಿಚಯದ ನಿರೂಪಣೆ ದೀರ್ಘ ಕಾಲದವರೆಗೆ ಮುಂದುವರೆದು ಬೋರು ಹೊಡೆಸುವುದಷ್ಟೇ ಅಲ್ಲ, ಸಿನೆಮಾವನ್ನು ಒಂದು ಸಾಧಾರಣ ಟ್ರ್ಯಾಕ್ ಗೆ ಹೊರಳಿಸುತ್ತದೆ. ಕಥೆ ಚರ್ಚಿಸಬೇಕೆಂದಿರುವ ಉದಾತ್ತ ವಿಷಯಕ್ಕೂ, ಆದರೆ ಕಥೆ ನಡೆಯುವ ಹಾದಿಗೂ ಬಾದರಾಯಣ ಸಂಬಂಧ. ಹಾಜರಾತಿ ಎಂದರೆ ಕಬ್ಬಿಣದ ಕಾಚ ಎಂದು ಶಿಷ್ಯರಿಗೆ ಅರಚುವ ಮೂಲಕ ಬೋಧನೆ ಹೇಳುವುದು, ಗುರುವಿನ ಲವ್ ಗೆ ಸಹಾಯ ಮಾಡಲು ಸ್ಪೈಡರ್ ಮ್ಯಾನ್, ಐರನ್ ಮ್ಯಾನ್, ಸೂಪರ್ಮ್ಯಾನ್ ಮುಂತಾದ ವೇಷಗಳನ್ನು ಹಾಕಿಕೊಂಡು ಹೊಡೆದಾಡುವ ದೃಶ್ಯಗಳು ಚೈಲ್ಡಿಶ್ ಎನ್ನಲು ಆಗದಷ್ಟು ಹಾಸ್ಯಾಸ್ಪದವಾಗಿವೆ. ಇತರ ಅಧ್ಯಾಪಕರನ್ನು ಪರಿಚಯಿಸಲು ಬಳಸಿರುವ ಪೋಲಿ ಸಂಭಾಷಣೆ, ದ್ವಂದ್ವಾರ್ಥದ ಲೈಂಗಿಕ ಜೋಕುಗಳು ಅಸಹ್ಯ ಹುಟ್ಟಿಸುತ್ತವೆ. ಒಂದು ಕಾಲೇಜು ವಾತಾವರಣವನ್ನಾಗಲೀ, ವಿದ್ಯಾರ್ಥಿ ಅಥವಾ ಅಧ್ಯಾಪಕ ವರ್ಗದ ಜೀವನವನ್ನಾಗಲೀ ಕಟ್ಟಿಕೊಡಲು ಸಂಪೂರ್ಣವಾಗಿ ವಿಫಲವಾಗಿರುವ ನಿರ್ದೇಶಕ ಮಧುಚಂದ್ರ ಇತ್ತ ಮನರಂಜನಾತ್ಮಕ ಘಟನೆಗಳನ್ನು ಕೂಡ ಹೆಣೆಯಲಾಗದೆ ಪ್ರೇಕ್ಷಕರನ್ನು ಹೈರಾಣಾಗಿಸುತ್ತಾರೆ. ಮಧ್ಯಂತರ ವಿರಾಮ ನೀಡಲೆಂದೇ ತುರುಕಿದಂತಹ ಅಚಾತುರ್ಯದ ಘಟನೆ ಹಾಗೂ ನಂತರದಲ್ಲಿ ಕೂಡ ಯಾವುದೇ ಗಟ್ಟಿತನದ ಪೋಷಣೆಯಿಲ್ಲದೆ ಕೆಟ್ಟವರೆಲ್ಲಾ ಅತಿ ಸರಳವಾಗಿ ಒಳ್ಳೆಯವರಾಗಿ ಬದಲಾಗಿ ಹೋಗುವುದು ಸ್ಕ್ರಿಪ್ಟ್ ನಲ್ಲಿರುವ ಭೋಳೆತನವನ್ನು ನಿರೂಪಿಸುತ್ತಾ ಹೋಗುತ್ತದೆ. ಎಲ್ಲೆಲ್ಲೋ ತುರುಕಿರುವ ಹಾಡುಗಳು, ಯಾವುದೋ ಒಂದು ಕೆಲಸಕ್ಕೆ ಬಾರದ ಐಟಮ್ ಡ್ಯಾನ್ಸ್ (ಇದು ಯಾವುದೋ ಕಾಂಪಿಟಿಶನ್ ನಲ್ಲಿ ನಡೆಯುತ್ತಿರುವುದು ಎಂದು ತೋರಿಸಿದರೂ, ಅಲ್ಲಿ ಪ್ರೇಕ್ಷಕರನ್ನು ತೋರಿಸಬೇಕು ಎನ್ನುವ ಸಾಮಾನ್ಯಜ್ಞಾನವೂ ಇಲ್ಲದ ನಿರ್ದೇಶನ-ಸಂಕಲನ) ಪ್ರೇಕ್ಷಕನ ಬುದ್ಧಿವಂತಿಕೆಯನ್ನು ಅಣಕಿಸಿ, ತಾಳ್ಮೆಯನ್ನು ಪರೀಕ್ಷಿಸುತ್ತದೆ. ಇನ್ನು ಕೈಮ್ಯಾಕ್ಸ್ ನಲ್ಲಿ ನೀಡಿರುವ ಸುದೀರ್ಘ ಬೋಧನೆ ಸಿನೆಮಾ ತಂಡ ಮಾತಿನ ಚಟಕ್ಕೆ ಬಿದ್ದಿರುವುದನ್ನು ತೋರಿಸುತ್ತದೆ! ಕಿಶೋರ್ ಆಗಲೀ, ಪಾರ್ವತಿ ನಾಯರ್ ಆಗಲೀ ನಟನೆಯಲ್ಲಿ ಎಲ್ಲಿಯೂ ಕನ್ವಿನ್ಸಿಂಗ್ ಎನಿಸುವುದಿಲ್ಲ. ಹೊಸ ಪರಿಚಯವಾಗಿ ಕಾಣಿಸಿಕೊಂಡಿರುವ ನಿರ್ಮಾಪಕ ಕಂ ನಟ ಅಶ್ವಿನ್ ಮನೆ ಕಟ್ಟುವಾಗ ನಿಲ್ಲಿಸುವ ದೃಷ್ಟಿ ಬೊಂಬೆಯಂತಿದ್ದಾರೆ. ಕಟ್ಟುವ ಮನೆಯೆಲ್ಲವೂ ಚೆನ್ನಾಗಿರುವುದಿಲ್ಲ ನೆನಪಿರಲಿ. ದೃಶ್ಯಗಳಿಂದ ದೃಶ್ಯಗಳಿಗೆ ಕೊಂಡಿಗಳು ಕಳಚಿರುವಂತೆ ಸಂಕಲನ ಮಾಡಲಾಗಿದೆ. ಕನ್ನಡ ಚಿತ್ರರಂಗದಲ್ಲೇ ಘಟಾನುಘಟಿ ಸಿನೆಮ್ಯಾಟೋಗ್ರಾಫರ್ ಗಳು ಇರುವಾಗ, ಇಂತಹ ಛಾಯಾಗ್ರಹಣಕ್ಕೆ ಮುಂಬೈನಿಂದ ಕರಂ ಚಾವ್ಲಾ ಎಂಬವರನ್ನು ಕರೆಸಿರುವುದೇಕೆ ಎಂಬ ಪ್ರಶ್ನೆ ಅಚ್ಚಳಿಯದೆ ನಿಲ್ಲುತ್ತದೆ. ಶೇಖರ್ ಚಂದ್ರ, ಸುಜ್ಞಾನ್, ಸತ್ಯ ಹೆಗಡೆ, ಕೃಷ್ಣ, ಅಶೋಕ್ ವಿ ರಾಮನ್, ರಾಕೇಶ್ ಮುಂತಾದ  ಅಚ್ಚ ಕನ್ನಡದ ಛಾಯಾಗ್ರಾಹಕರು ಕನ್ನಡದಲ್ಲಿರುವುದು ಕನ್ನಡದ್ದೇ ನಿರ್ದೇಶಕರಿಗೆ ಕಾಣಿಸುವುದಿಲ್ಲವೇ? ಇದ್ದುದರಲ್ಲಿ ತುಸು ಹಿತವೆನಿಸುವುದು ಪೂರ್ಣಚಂದ್ರ ತೇಜಸ್ವಿಯವರ ಟ್ಯೂನ್ ಗಳು. ಇದನ್ನು ಹೊರತುಪಡಿಸಿದರೆ ಮಧುಚಂದ್ರ ಅವರ ಈ ಕ್ರಿಯೇಶನ್ ಕಿರಿಕಿರಿಯಷ್ಟೇ.

ಇತ್ತೀಚಿಗೆ ಬೋಧನಪ್ರಧಾನ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಹೆಚ್ಚುತ್ತಿರುವುದನ್ನು ಗಮನಿಸುತ್ತಾ ಹೋದರೆ, ಈ ಸಿನೆಮಾದ ಹಾಡೊಂದರ ಸಾಲುಗಳಂತೆ 'ಗೋಲಿ ಹೊಡಿ ಚೋರ್ ಗುರುಗೆ, ಬೀಗ ಜಡಿ ಕಾಲೇಜಿಗೆ' ಎಂಬುದನ್ನು ಕನ್ನಡ ಪ್ರೇಕ್ಷಕ ಸ್ವಲ ತಿರುಚಿ 'ಗೋಲಿ ಹೋಗಿ ಸಿನೆಮಾ ಪ್ರೀಚಿಂಗಿಗೆ, ಬೀಗ ಜಡಿ ತಲೆಕೆಟ್ಟ ಸಿನೆಮಾಗಳಿಗೆ' ಎಂದು ಗಟ್ಟಿಯಾಗಿ ಹಾಡಿಕೊಂಡು ಇಂತಹ ಸಿನೆಮಾಗಳನ್ನು ತಿರಸ್ಕರಿಸುವ ದಿನಗಳು ದೂರವಿಲ್ಲ. ಶಿಕ್ಷಣ ಶಿಕ್ಷೆ ಎಂದು ಹೇಳಹೋಗಿ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಕನ್ನಡ ಪ್ರೇಕ್ಷಕರಿಗೆ ಸಿನೆಮಾ ಬಗ್ಗೆ ಸಿಟ್ಟು-ತಲೆಚಿಟ್ಟು ತರಿಸುವ ಇಂತಹ ಸಿನೆಮಾಗಳನ್ನು ನಿರ್ಮಿಸುವುದಕ್ಕೂ ಮೊದಲು ಒಳ್ಳೆಯ ಸಿನೆಮಾ ಶಿಕ್ಷಣದ ಮೊರೆ ಹೋಗುವುದು ಒಳಿತು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com