ಬೇಲಿ ಹಾರದ ಬೆತ್ತನಗೆರೆ

ದಾಯಾದಿ ಕಲಹ; ನೆಲಮಂಗಲ-ಬೆಂಗಳೂರಿನ ಭೂಗತ ಲೋಕ; ನಿಜ ಭೂಗತ ಪಾತಕಿಗಳ ಅಟ್ಟಹಾಸ; ಎಂ ಎಲ್ ಎ ಕೊಲೆ; ಹೀಗೆ ಹತ್ತು ಹಲವು ವಿಷಯಗಳನ್ನು ಒಟ್ಟಿಗೆ ಸೇರಿಸಿ ಮತ್ತೊಂದು ಭೂಗತ ಲೋಕದ
ಬೆತ್ತನಗೆರೆ ಸಿನೆಮಾ ವಿಮರ್ಶೆ
ಬೆತ್ತನಗೆರೆ ಸಿನೆಮಾ ವಿಮರ್ಶೆ
Updated on

ದಾಯಾದಿ ಕಲಹ; ನೆಲಮಂಗಲ-ಬೆಂಗಳೂರಿನ ಭೂಗತ ಲೋಕ; ನಿಜ ಭೂಗತ ಪಾತಕಿಗಳ ಅಟ್ಟಹಾಸ; ಎಂ ಎಲ್ ಎ ಕೊಲೆ; ಹೀಗೆ ಹತ್ತು ಹಲವು ವಿಷಯಗಳನ್ನು ಒಟ್ಟಿಗೆ ಸೇರಿಸಿ ಮತ್ತೊಂದು ಭೂಗತ ಲೋಕದ ಕಥೆ ಕನ್ನಡದ ಬೆಳ್ಳಿ ತೆರೆಗೆ ಆಗಮನವಾಗಿದೆ. ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಮೋಹನ್ ಗೌಡ ಮಾಮೂಲಿಯಾಗಿ ರೌಡಿ ಸಿನೆಮಾಗಳು ಹೇಳಿವುದಕ್ಕಿಂದ ವಿಶಿಷ್ಟವಾದದ್ದೇನಾದರೂ ಹೇಳಲು ಪ್ರಯತ್ನಿಸಿದ್ದಾರಯೇ? ಅಥವಾ ಮತ್ತದೇ ಅಬ್ಬರ-ಬೊಬ್ಬರ-ವಿಜೃಂಭಣೆಯನ್ನು ಮುಂದುವರೆಸಿದ್ದಾರೆಯೇ?

ನೆಲಮಂಗಲ ಸಮೀಪದ ಬೆತ್ತನಗೆರೆ ಗ್ರಾಮದಲ್ಲಿ ಇಬ್ಬರು ಯುವಕರು ಶಿವ(ಸುಮಂತ್) ಮತ್ತು ದಾಯಾದಿ ತಮ್ಮ ಶೇಖರ(ಅಕ್ಷಯ್). ಇಟ್ಟಿಗೆ ಗೂಡಿನ ವ್ಯವಹಾರದ ಕುಟುಂಬದವರು. ಮಾತಿನ ಕಲಹದಿಂದಾಗಿ ಊರಿನ ಛೇರ್ಮನ್(ಅವಿನಾಶ್) ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವ ಶಿವ, ಛೇರ್ಮನ್ ನ ಕೆಂಗಣ್ಣಿಗೆ, ದ್ವೇಷಕ್ಕೆ ಗುರಿಯಾಗುತ್ತಾನೆ. ಸೇನೆ ಸೇರಬೇಕೆಂದಿದ್ದ ಶೇಖರ, ಛೇರ್ಮನ್ ಜೊತೆಗಿನ ಗಲಾಟೆಯೊಂದರಲ್ಲಿ ಆಕಸ್ಮಿಕವಾಗಿ ಕೊಲೆ ಮಾಡಿ ಜೈಲು ಸೇರುತ್ತಾನೆ. ಛೇರ್ಮನ್ ಪಿತೂರಿಯಿಂದ ಚಾರ್ಜ್ ಶೀಟ್ ನಲ್ಲಿ ಶಿವನ ಹೆಸರೂ ಸೇರಿ, ಶಿವ ತಲೆಮರೆಸಿಕೊಂಡು ಭೂಗತನಾಗುತ್ತಾನೆ. ಗೆಳೆಯ ಮೋಹಿತ್ ಮತ್ತು ಪುಡಾರಿ ರೆಡ್ಡಿ (ಅಚ್ಚುತ್ ಕುಮಾರ್) ಸಹಾಯದೊಂದಿಗೆ, ರಿಯಲ್ ಎಸ್ಟೇಟ್ ಮುಂತಾದ ದಂಧೆಗೆ ಇಳಿದು ಸಿರಿವಂತನಾಗುತ್ತಾ ಬೆಳೆಯುತ್ತಾನೆ. ತಮ್ಮನ ಜಾಮೀನಿಗೆ ಕುತ್ತಾಗಿರುವ ಲಾಯರ್ ನನ್ನು ನಡುರಸ್ತೆಯಲ್ಲಿ ಕೊಲ್ಲುವ ಶಿವ ನಂತರ ಪೊಲೀಸರಿಗೆ ಸರೆಂಡರ್ ಆಗುವ ಹೊತ್ತಿಗೆ ಜೈಲಿನಿಂದ ಹೊರಬರುವ ಶೇಖರ ತನ್ನಣ್ಣನ ದಂಧೆಗೆ ಇಳಿಯುತ್ತಾನೆ. ಶಿವನ ಜೈಲಿನ ಸಹಚರನ (ವಿನೋದ್ ಕಾಂಬ್ಲಿ) ಪಿತೂರಿಯಿಂದ ದಾಯಾದಿಗಳ ವೈಮನಸ್ಯಕ್ಕೆ ಕಾರಣವಾಗುತ್ತದೆ. ಅಣ್ಣ ತಮ್ಮಂದಿರೆ ಕತ್ತಿ ಮಸೆದಾಗ ಮುಂದೇನಾಗುತ್ತದೆ?

ನಿರ್ದೇಶಕ ತೆರೆಯ ಮೇಲೆ ನಡೆದ ಕ್ರೈಂಗಳನ್ನು ನಿರೂಪಿಸಲು ನಿಷ್ಟವಾಗಿದ್ದರೆ ಪ್ರೇಕ್ಷನಿಗೂ ಸಿನೆಮಾ ಇಷ್ಟವಾಗುತ್ತಿತ್ತೇನೋ, ಆದರೆ ಅಪರಾಧಿಗಳ ವಿಜೃಂಭಣೆಗೆ ನಿರ್ದೇಶಕ ಟೊಂಕ ಕಟ್ಟಿ ನಿಲ್ಲುವುದಕ್ಕೂ ಹಾಗೂ ಅವರು ಮುಗ್ಧರು ಮತ್ತವರ ನಡೆಗಳೆಲ್ಲಾ ಆಕಸ್ಮಿಕ ಎಂಬ ಅಭಿಪ್ರಾಯ ರೂಪಿಸಲು ಪ್ರಯಾಸದಾಯಕವಾಗಿ ಪ್ರಯತ್ನಿಸಿರುವುದರಿಂದ ಸಿನೆಮಾ ಮಹಾ ಬೋರು ಹೊಡೆಸುತ್ತದೆ. ಸಿಕಿಬಿದ್ದು ಎನ್ ಕೌಂಟರ್ ಆಗುವುದಕ್ಕೂ ಮುಂಚಿತವಾಗಿ ಪೊಲೀಸರಿಗೆ ತಾನು ಮತ್ತು ತನ್ನ ಸಹೋದರ ಅಮಾಯಕರು ಎಂದು ಶಿವ ಪೊಲೀಸರಿಗೆ ಹೇಳುವ ಕಥೆಯಿಂದ ಆರಂಭವಾಗುವ ಸಿನೆಮಾ ಮತ್ತೆಲ್ಲಾ ಭೂಗತ ಪಾತಕಿಗಳ ಸಿನೆಮಾಗಳಂತೆ ಸೀದಾಸಾದವಾಗಿ ಮುಂದುವರೆಯುತ್ತದೆ. ಉದ್ವೇಗದ ತೀವ್ರತೆಯನ್ನು ಹೆಚ್ಚಿಸಲೆಂದು ಟಿಲ್ಟ್  ಶಾಟ್ಗಳನ್ನು ಯಥೇಚ್ಚವಾಗಿ ಬಳಸಿದ್ದರು, ನಿರೂಪಣೆಯಲ್ಲಿ, ಕಥಾ ಪಾತ್ರದ ಪರಿಕಲ್ಪನೆಯಲ್ಲಿ, ಸಂಭಾಷಣೆಯಲ್ಲಿ ಆ ಉದ್ವಿಗ್ನತೆ ಕಳೆದು ಹೋಗಿ ನಿರೂಪಣೆ ಬೇಸರ ಮೂಡಿಸುತ್ತದೆ. ಸಿನೆಮಾದ ಮುಖ್ಯ ಪಾತ್ರಧಾರಿಗಳಾದ ಶಿವ ಮತ್ತು ಶೇಖರರನ್ನು ಅಮಾಯಕರು ಎಂದು ಮತ್ತು ಅವರ ಸಾಹಸಗಳನ್ನು ವಿಜೃಂಭಿಸಲು ಹರಸಾಹಸಪಟ್ಟಿರುವ ನಿರ್ದೇಶಕ ನೈಜತೆಯಿಂದ ದೂರವುಳಿದರೇನೋ ಎಂಬ ಅನುಮಾನ ಕಾಡುತ್ತದೆ. ಇದಕ್ಕಾಗಿ ಸುಮಂತ್ ಮತ್ತು ಅಕ್ಷಯ್ ಅವರಿಗೆ ಉದ್ದುದ್ದ ಬೋಧನೆಯ ರೀತಿಯ ಸಂಭಾಷಣೆ ಅನಗತ್ಯವಾಗಿ ಬರೆಯಲಾಗಿದೆ. ನಟನೆಯಲ್ಲಿ ಕೂಡ ಈ ಇಬ್ಬರೂ ಯಾವುದೇ ಛಾಪು ಮೂಡಿಸುವುದಿಲ್ಲ. ಪ್ರೆಡಿಕ್ಟೆಬಲ್ ಆಗಿ ಮುಂದುವರೆಯುವ ಕಥೆ ಎಂದಿನ ಭೂಗತ ಸಿನೆಮಾಗಳಂತೆ ಕೊಲೆಗಳಾಗುವುದು, ತಲೆಗಳು ಉರುಳುವುದು ಮುಂತಾದ ಸಂಗತಿಗಳನ್ನು ವಿಜೃಂಭಿಸುವ ನಿರ್ದೇಶಕ ಅವುಗಳಿಗೆ ಅಗತ್ಯವಾದ ನೆಲೆ, ಕಾರಣ, ಯೋಜನೆ ಮತ್ತು ನಂತರದ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲು ವಿಫಲರಾಗುತ್ತಾರೆ. ಗೃಹ ಮಂತ್ರಿಗಳ ಸಭೆ, ಜೈಲಿನ ಚಿತ್ರಣವನ್ನು ಅತಿ ಸಾಧಾರಾಣವಾಗಿ ಮತ್ತು ವಿಚಿತ್ರವಾಗಿ ಸೃಷ್ಟಿಸುವ ನಿರ್ದೇಶಕರಿಂದ ಇನ್ನೂ ಹೆಚ್ಚಿನ ಪರಿಶ್ರಮದ ಅಗತ್ಯವಿತ್ತು. ಅಲ್ಲಲ್ಲಿ ತುರುಕಿರುವ ಹಾಡುಗಳು ಬೇಸರವನ್ನು ಇಮ್ಮಡಿಗೊಳಿಸುತ್ತವೆ. ರಾಜೇಶ್ ರಾಮನಾಥನ್ ಸಂಗೀತದಲ್ಲಿ ಮೂಡಿಬಂದಿರುವ ಯಾವ ಹಾಡೂಗಳೂ ಮನಸ್ಸಿನಲ್ಲಿ ಉಳಿಯುವುದಿಲ್ಲ. ಹಲವಾರು ಸಿನೆಮಾಗಳ ಹಿನ್ನಲೆ ಸಂಗೀತವನ್ನು ಯತೇಚ್ಛವಾಗಿ ಬಳಸಲಾಗಿದೆ. ಎಂ ಎಲ್ ಎ ಪಾತ್ರದಲ್ಲಿ ಶೋಭರಾಜ್, ಛೇರ್ಮನ್ ಪಾತ್ರದಲ್ಲಿ ಅವಿನಾಶ್, ರೆಡ್ಡಿ ಪಾತ್ರದಲ್ಲಿ ಅಚ್ಚುತ್ ಕುಮಾರ್ ಎಂದಿನಂತೆ ನಟಿಸಿದ್ದಾರೆ. ಕ್ರಿಕೆಟಿಗನ ವಿನೋದ್ ಕಾಂಬ್ಲಿ ಪಾತ್ರದಲ್ಲಾಗಲೀ ಅವರ ನಟನೆಯಲ್ಲಾಗಲೀ ಯಾವುದೇ ಸತ್ವ ಇಲ್ಲ. ಒಟ್ಟಿನಲ್ಲಿ ನಿಜ ಭೂಗತ ಪಾತಕಿಗಳ ಕಥೆಯನ್ನು ತೆರೆಯ ಮೇಲೆ ಕಾಣಿಸಬೇಕೆಂಬ ಹಠಕ್ಕೆ ಬಿದ್ದು ನಿರ್ದೇಶಕ ಮೋಹನ್ ಗೌಡ ಅತೀ ಸಾಧಾರಣ ಸಿನೆಮಾವನ್ನು ನಿರ್ದೇಶಿಸಿ ಮುಗಿಸಿದ್ದಾರೆ.

ಅರಿವು ಮೂಡಿಸಲು ಅಥವಾ ಸುಧಾರಣೆಗಾಗಿ ಭೂಗತ ಲೋಕದ ಕ್ರೈಂಗಳು ವಿವಿಧ ಕಲಾಪ್ರಾಕಾರಗಳಲ್ಲಿ ಮೂಡುವುದು ಅತಿ ಅಗತ್ಯ. ಇದು ಸಿನೆಮಾದ ರೂಪದಲ್ಲಿ ಮೂಡಿಬಂದಾಗ ಅದು ಸಮಾಜದ ಪ್ರತಿಬಿಂಬದಂತಿರಬೇಕು, ನೈಜತೆಗೆ ಹತ್ತಿರವಾಗಿ ಪರಿಣಾಮಕಾರಿಯಾಗಿರಬೇಕು. ಈ ಸಿನೆಮಾ ಕೂಡ ಬೆತ್ತನಗೆರೆ ಸೀನ ಮತ್ತು ಶಂಕರ ಎಂಬ ಪಾತಕಿಗಳ ಜೀವನಾಧಾರಿತವಾಗಿ ರೂಪಗೊಂಡಿದೆ ಎಂದು ನಿರ್ದೇಶಕರೇ ಹಲವು ಬಾರಿ ಹೇಳಿಕೊಂಡಿದ್ದಾರೆ. ಇಂತಹ ಸಿನೆಮಾಗಳನ್ನು ಹೆಣೆಯುವಾಗ ಹೆಚ್ಚು ಸಮಾಜಮುಖಿಯಾಗುವ ಅವಶ್ಯಕತೆ ಇದೆ. ಹಿರೋಯಿಸಂ ಗೆ ಸ್ವಲ್ಪ ಬ್ರೇಕ್ ಆಗಿ, ನೈಜತೆಗೆ, ನಡೆದ ಕ್ರೈಂಗೆ ಹೆಚ್ಚು ನಿಷ್ಟವಾಗಿರುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ವಿಷಯದ ಬಗ್ಗೆ, ಸುತ್ತಮುತ್ತಲಿನ ಪರಿಸರದ ಬಗ್ಗೆ, ವ್ಯವಸ್ಥೆಯ ಬಗ್ಗೆ ಆಳವಾದ ಅಧ್ಯಯನ ಮತ್ತು ಪರಿಶ್ರಮದ ಅಗತ್ಯ ಇರುತ್ತದೆ. ಇಲ್ಲದೆ ಹೋದರೆ ಅದೇ ಹತ್ತರಲ್ಲಿ ಒಂದು ಭೂಗತ ಸಿನೆಮಾ ಆಗಿ ನೆನೆಗುದಿಗೆ ಬೀಳುವ ಅಪಾಯವೇ ಹೆಚ್ಚು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com