
ಕನ್ನಡ ಚಿತ್ರರಂಗದ ಲವರ್ ಬಾಯ್ ಎಂದೇ ಹೆಸರಾದ ಕೃಷ್ಣ ಅಜಯ್ ರಾವ್ ಅವರ 'ಸೆಕಂಡ್ ಹ್ಯಾಂಡ್ ಲವರ್' ಇಂದು ಬಿಡುಗಡೆಯಾಗಿದೆ. ರಾಘವ ಮರಸೂರು ನಿರ್ದೇಶನದ ಈ ಚಿತ್ರ ಹಲವಾರು ಕಾರಣಗಳಿಂದ ತಡವಾಗುತ್ತಾ ಬಂದಿತ್ತು. ತಮ್ಮದೇ ನಿರ್ಮಾಣದ ಕೃಷ್ಣಲೀಲಾ ಅಭೂತಪೂರ್ವ ಯಶಸ್ಸು ಪಡೆದ ನಂತರ ಅಜಯ್ ಅವರ ಒಂದೆರಡು ಚಲನಚಿತ್ರಗಳು ಬಿಡುಗಡೆಯಾಗಿದ್ದರು ಯಾವುದೂ ನಿರೀಕ್ಷಿತ ಮಟ್ಟದ ಸದ್ದು ಮಾಡಲಿಲ್ಲ. ಈಗ ಬಿಡುಗಡೆಯಾಗಿರುವ 'ಸೆಕಂಡ್ ಹ್ಯಾಂಡ್ ಲವರ್' ಕತೆ-ಸಿನೆಮಾ ಜನಕ್ಕೆ ಇಷ್ಟ ಆಗುತ್ತದೆಯೇ? ಅಥವಾ ಶೀರ್ಷಿಕೆಯೇ ಸೂಚಿಸಿರುವಂತೆ ಸೆಕಂಡ್ ಹ್ಯಾಂಡ್ ಕಥೆ ಎಂದು ಬದಿಗೆ ಸರಿಸಬೇಕೇ?
ಅಂಜು (ಅನಿಶಾ ಆಂಬ್ರೋಸ್) ಸದಾ ಕನಸು ಕಾಣುವ ಹುಡುಗಿ. ಈ ಕನಸಿನ ಹುಡುಗಿ ಹುಡುಗಾಟದಲ್ಲಿ, ರಾಕ್ ಸ್ಟಾರ್ ಸ್ಪರ್ಧೆಯಲ್ಲಿ ಜಯಗಳಿಸಲು ಬೆಂಗಳೂರಿಗೆ ಬಂದಿರುವ ಅಜಯ್ (ಅಜಯ್ ರಾವ್) ಕಾರಿನ ಕನ್ನಡಿಯನ್ನು ಆಕಸ್ಮಿಕವಾಗಿ ಒಡೆದು, ಆ ಸಂದರ್ಭದಲ್ಲಿ ನುಣುಚಿಕೊಳ್ಳಲು ಕುರುಡಿ ಎಂದು ಮರೆಮಾಚಿ ತಪ್ಪಿಸಿಕೊಳ್ಳುತ್ತಾಳೆ. ಆದರೆ ಸತ್ಯಾಂಶ ತಿಳಿದ ಮೇಲೆ ಅಂಜೂಳನ್ನು ಅಜಯ್ ತನ್ನ ಹುಡುಗಾಟದಲ್ಲಿ ಗೋಳು ಹೊಯ್ದುಕೊಳ್ಳಲು ಪ್ರಾರಂಭಿಸುತ್ತಾನೆ. ಮಧ್ಯೆ ಕೆಲವು ಘಟನೆಗಳು ನಡೆದು ಅಂಜುವಿನ ಮನಸ್ಸಿನಲ್ಲಿ ಅಜಯ್ ಬಗ್ಗೆ ಪ್ರೀತಿ ತಳೆಯುತ್ತದೆ. ಇದನ್ನು ನಿವೇದಿಸಿಕೊಳ್ಳುವ ವೇಳೆಗೆ ನಿರಾಕರಿಸುವ ಅಜಯ್ ತನ್ನ ಪೂರ್ವಾಶ್ರಮದಲ್ಲಿ ಸ್ವಾತಿಯನ್ನು (ಪರಿಣೀತಾ) ಪ್ರೀತಿಸುತ್ತಿದ್ದ ಕಥೆಯನ್ನು ಹೇಳುತ್ತಾನೆ. ಅವನ ಪೂರ್ವಾಶ್ರಮದ ಪ್ರೀತಿಗೆ ಏನಾಗಿತ್ತು? ಅಂಜುಗೆ ಅಜಯ್ ಒಲಿಯುತ್ತಾನೆಯೇ? ರಾಕ್ ಸ್ಟಾರ್ ಸ್ಪರ್ದೆಯಲ್ಲಿ ಅಜಯ್ ಗೆಲ್ಲುತ್ತಾನೆಯೇ?
ಸೆಕಂಡ್ ಹ್ಯಾಂಡ್ ಲವರ್ ಸಿನೆಮಾದ ಅತಿ ದೊಡ್ಡ ನಿರಾಸೆ ಎಂದರ ಸೆಕಂಡ್ ಹ್ಯಾಂಡ್ ಅಥವಾ ಪ್ರಾಚ್ಯ ಎನ್ನಬಹುದಾದ ಅತಿ ನಿರೀಕ್ಷಿತ ಕಥೆ ಹಾಗು ನಿರೀಕ್ಷಿತ ಅಂತ್ಯ. ಮೊದಲ ಪ್ರೀತಿ, ಅದರ ಅಂತ್ಯ, ನೆನಪುಗಳು, ಹೊಸ ಪರಿಚಯ, ತೊಳಲಾಟ, ತೊಳಲಾಟಕ್ಕೆ ಸುಲಭ ಅಂತ್ಯ ಹೀಗೆ ಅತಿ ಸರಳ ಸೂತ್ರವನ್ನು ಮತ್ತೆ ಹೊಸ ನಟರ ತಂಡದೊಂದಿಗೆ ರಿಪ್ಯಾಕ್ ಮಾಡಿ ನೀಡಿದ್ದಾರೆ ನಿರ್ದೇಶಕ ರಾಘವ. ಇಂತಹ ಸೆಕಂಡ್ ಹ್ಯಾಂಡ್ ಕಥೆಯಲ್ಲೂ ಕೂಡ ಮೊದಲಾರ್ಧ ಬಹುಷಃ ಅನಿಶಾ ಅವರ ಮುದ್ದಾದ, ಅಜಯ್ ಅವರ ಎಂದಿನ ಸುಲಲಿತ ನಟನೆಯಿಂದಲೋ, ಅಥವಾ ತಿಳಿ ಹಾಸ್ಯದಿಂದ ಕೂಡಿದ ಸಂಭಾಷಣೆ ಮತ್ತು ದೃಶ್ಯಗಳಿಂದಲೋ ಏನೋ ಬೇಸರ ಮೂಡಂತೆ, ಕಿರಿಕಿರಿ ಮಾಡದಂತೆ ಮುಂದುವರೆಯುತ್ತದೆ. ಇಂದು ಸಣ್ಣ ಪುಟ್ಟ ಕಾರಣಗಳಿಗೂ ಪೊಲೀಸರ ಮೊರೆ ಹೋಗುವ ಆಯ್ಕೆಯಿರುವಾಗ, ಅಂಜುಳಿಗೆ ಅಜಯ್ ವಿರುದ್ಧ ಪೊಲೀಸ್ ಮೊರೆ ಹೋಗುವಂತೆ ತನ್ನ ಗೆಳತಿ ಸಲಹೆ ನೀಡಿದರು ಕೂಡ, ಇದು ನನ್ನ ತಪ್ಪಿನಿಂದಲೇ ನಡೆದಿದ್ದು ಎನ್ನುವ ನಟಿ ಅಜಯ್ ನ ಗೋಳನ್ನು ಸಹಿಸಿಕೊಳ್ಳುತಾ ಹೋಗುವ ದೃಶ್ಯ, ಬಹುಷ ಆಧುನಿಕ ಅಸಹನೆಯ ಯುಗದಲ್ಲಿ ಹುಡುಗಾಟವನ್ನು, ಜೀವನದಲ್ಲಿ ಹಾಸ್ಯವನ್ನು ಹೇಗೆ ಗ್ರಹಿಸಬೇಕೆಂಬ ಪಾಠವನ್ನು ದೃಶ್ಯಾತ್ಮಕವಾಗಿ ನಿರ್ದೇಶಕ ಕಟ್ಟಿಕೊಡುತ್ತಾರೆ. ಆದರೆ ಈ ಇಡಿ ಉಲ್ಲಾಸವನ್ನು ದ್ವಿತೀಯಾರ್ಧ ನುಂಗಿ ಹಾಕುತ್ತದೆ. ಅದು ಪ್ರೇಕ್ಷಕ ನಿರೀಕ್ಷಿಸಿದಂತೆಯೇ ಕಥೆ ಮುಂದುವರೆಯುವುದರಿಂದಲೋ, ಅಥವಾ ದೃಶ್ಯಗಳ, ಸಂಭಾಷಣೆಗಳ ಪುನರಾವರ್ತತೆಯಿಂದಲೋ, ಧೀರ್ಘತೆಯಿಂದಲೋ ಬೋರು ಹಿಡಿಸುತ್ತಾ ಹೋಗುತ್ತದೆ. ಇತ್ತೀಚಿನ ಕೆಲವು ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವ ಅತಿರೇಕದ ಹಾಸ್ಯ ಅಷ್ಟಾಗಿ ಇಲ್ಲಿ ಬಳಕೆಯಾಗಿಲ್ಲ ಎಂಬುದಕ್ಕೆ ಸಿನೆಮಾ ಕಿರಿಕಿರಿ ಉಂಟು ಮಾಡದೆ ಹೋದರು ದ್ವಿತೀಯಾರ್ಧದ ಬೋರಿನಿಂದ ಹೊರಬರಲು ಸ್ವಲ್ಪ ಕಷ್ಟವೇ ಆಗುತ್ತದೆ. ಗುರುಕಿರಣ್ ಸಂಗೀತದ ಹಾಡುಗಳಲ್ಲಿ, ಅಲ್ಲಲ್ಲಿ ಕೆಲವು ಭಾಗಗಳು ಪರವಾಗಿಲ್ಲಪ್ಪ ಎಂದರೂ ಕೆಲವು ಭಾಗಗಳಂತೂ ಎಲ್ಲೋ ಕೇಳಿದ್ದೇವಲ್ಲ ಎಂದೆನಿಸಿ ಇನ್ನುಳಿದ ಭಾಗಗಳು ನಿರಾಸೆ ತರಿಸುತ್ತವೆ. ಆಂನಂದ ಪ್ರಿಯ ಅವರ ಸಂಭಾಷಣೆ ಚಿತ್ರಕ್ಕೆ ಕೆಲವೆಡೆ ಚೆನ್ನಾಗಿ ಕೆಲಸ ಮಾಡಿದ್ದರೂ ಕೂಡ, ನಿರ್ದೇಶಕ ರಾಘವ ಆವರಿಗೆ ತಮ್ಮ ಎಲ್ಲೆ ಮೀರಿ ಒಂದು ಹೊಸತನದ ಕಥೆ ಹೆಣೆಯುವ ಕಲೆ ಸಿದ್ಧಿಸಿದ್ದರೆ, ಸಿನೆಮಾ ಹೆಚ್ಚು ಅಪ್ಯಾಯವಾಗುತ್ತಿತ್ತೇನೋ.
ಸಾಮಾನ್ಯವಾಗಿ ಮೂರ್ತವಾದ ಸೆಕಂಡ್ ಹ್ಯಾಂಡ್ ಅಥವಾ ಪ್ರಾಚ್ಯ ವಸ್ತುಗಳಿಗೆ ದಿನ ಕಳೆದಂತೆ ಮೌಲ್ಯ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ಅಮೂರ್ತವೆನಿಸುವ ಕಥೆಗಳಲ್ಲಿ, ಪರಿಕಲ್ಪನೆಗಳಲ್ಲಿ, ಐಡಿಯಾಗಳಲ್ಲಿ ಬಹುಷಃ ಈ ತರ್ಕ ಒಪ್ಪಿತವಾಗುವುದಿಲ್ಲ. ಅದರಲ್ಲೂ ಸಿನೆಮಾದಂತಹ ಮಾಧ್ಯಮಗಳಲ್ಲಿ ಪ್ರೇಕ್ಷಕರು ಯಾವಾಗಲೂ ಹೊಸ ಕಥೆಯನ್ನೇ ಬಯಸುವುದು ಸಾಮಾನ್ಯ. ಇಲ್ಲವೇ ಹಳೆ ಕಥೆಯನ್ನು ಅಸಾಮಾನ್ಯವಾಗಿ ಹೇಳುವ ಕೌಶಲ್ಯ ಬೇಕಾಗುತ್ತದೆ. ಇವೆರಡೂ ಸಿದ್ಧಿಸದ ಹೊರತು ಹಳಸು, ಪ್ರಾಚೀನ ಎಂಬ ಕ್ಲೀಶೆಗಳಿಂದಲೇ ಜನರು ಸಿನೆಮಾಗಳನ್ನು ತಿರಸ್ಕರಿಸಿದರೆ ಆಶ್ಚರ್ಯವಿಲ್ಲ.
Advertisement