ಹಿಸ್ ಹೈನೆಸ್ಸ್ ರಾಜ ರಾಜೇಂದ್ರ

ಹಾಸ್ಯ ನಟನಾಗಿ ಸಿನೆಮಾ ರಂಗ ಪ್ರವೇಶಿಸಿ ಪೂರ್ಣ ಪ್ರಮಾಣದ ನಾಯಕ ನಟನಾಗುವುದು ವಿರಳ. ಅಂತಹ ಸಾಧನೆಗೈದಿರುವ ಶರಣ್
ರಾಜ ರಾಜೇಂದ್ರ ಸಿನೆಮಾ ಸ್ಟಿಲ್
ರಾಜ ರಾಜೇಂದ್ರ ಸಿನೆಮಾ ಸ್ಟಿಲ್

ಬೆಂಗಳೂರು: ಹಾಸ್ಯ ನಟನಾಗಿ ಸಿನೆಮಾ ರಂಗ ಪ್ರವೇಶಿಸಿ ಪೂರ್ಣ ಪ್ರಮಾಣದ ನಾಯಕ ನಟನಾಗುವುದು ವಿರಳ. ಅಂತಹ ಸಾಧನೆಗೈದಿರುವ ಶರಣ್ ಅಭಿನಯದ 'ರಾಜ ರಾಜೇಂದ್ರ' ಸಿನೆಮ ಇಂದು ತೆರೆ ಕಂಡಿದೆ. ಶರಣ್ ಅವರ ಹುಟ್ಟು ಹಬ್ಬದ ದಿನವೇ ಈ ಚಿತ್ರ ತೆರೆ ಕಂಡಿರುವುದು ಮತ್ತೊಂದು ವಿಶೇಷ. ಹಾಸ್ಯ, ಆಕ್ಷನ್, ದೆವ್ವ, ಕಲ್ಪಿತ ರಾಜಮನೆತನ, ಕೌಟುಂಬಿಕ ಪಿತೂರಿ-ನಾಟಕ ಇತ್ಯಾದಿಗಳನ್ನೆಲ್ಲಾ ಒಳಗೊಂಡ ಈ ಸಿನೆಮಾ ಹಾಸ್ಯ ನಟ ನಾಯಕ ನಟನಾಗುವ ಔಚಿತ್ಯದ ಪ್ರಶ್ನೆಯನ್ನಂತೂ ಎತ್ತುತ್ತದೆ.

ನಟ ರಾಮಕೃಷ್ಣ ರಾಜಮನೆತನದ ಮುಖ್ಯಸ್ಥ. ಹಾಸಿಗೆ ಹಿಡಿದಿದ್ದಾನೆ. ಆದರೆ ಸಾವು ಒದಗಿ ಬರುತ್ತಿಲ್ಲ. ಅವನ ಹೆಂಡತಿ ಗಂಡು ಮಗು ಹೆತ್ತ ದಿನವೇ ಮೃತಪಟ್ಟಿರುತ್ತಾಳೆ. ಆಗ ಹುಟ್ಟಿದ ಮಗ ನಂತರದ ವರ್ಷಗಳಲ್ಲಿ ತಪ್ಪಿಸಿಕೊಂಡಿರುತ್ತಾನೆ. ತನ್ನ ಮಗ ಮತ್ತು ಅವನ ಮಗ (ಮೊಮ್ಮಗ) ಇದ್ದಾನೆ ಎಂಬುದು ಹೇಗೋ ಈ ಮುಖ್ಯಸ್ಥನಿಗೆ ತಿಳಿದಿದೆ. ತನ್ನ ಮೊಮ್ಮಗನ ನೋಡದ ಹೊರತು ಪ್ರಾಣ ಬಿಡಬಾರದೆಂಬ ಛಲ. ಈ ಮುಖ್ಯಸ್ಥನಿಗೆ ಮೂವರು ಹೆಣ್ಣುಮಕ್ಕಳು. ತನ್ನ ಮೂವರೂ ಅಳಿಯಂದರು ಮತ್ತು ರಾಜ ಮನೆತನ ಪುರೋಹಿತ ಇವನನ್ನು ಕೊಲ್ಲಲು ಸಂಚು ಹೂಡೂತ್ತಾರೆ. ಆದರೆ ರಾಜ ಪುರೋಹಿತನ ಮಗಳು (ಇಶಿತಾ ದತ್ತ) ರಕ್ತ ಸಂಬಧವಿಲ್ಲದಿದ್ದರೂ ಈ ರಾಜಮನೆತನದ ಮುಖ್ಯಸ್ಥನಿಗೆ ಪ್ರೀತಿಯ ಮೊಮ್ಮಗಳು. ಇಂತಹ ಸಮಯದಲ್ಲಿ ಈ ಮುಖ್ಯಸ್ಥನನ್ನು ಕೊಲ್ಲಲು 'ಬಾಟೆಲ್ ಮಣಿ' (ಶರಣ್) ಎಂಬುವನನ್ನು ದೊಡ್ಡ ಡಾನ್ ಎಂದು ನಂಬಿ ಅಳಿಯಂದರು ತಮ್ಮ ಮನೆಗೆ ಕರೆತರುವ ಸಂಚು ಹೂಡುತ್ತಾರೆ. ರಾಜ ಮುಖ್ಯಸ್ಥನಿಗೆ 'ಬಾಟೆಲ್ ಮಣಿ'ಯೇ ತನ್ನ ಮೊಮ್ಮಗ ರಾಜ ರಾಜೇಂದ್ರ ಎಂದು ನಂಬಿಸುತ್ತಾರೆ. ಆದರೆ ನಿಜವಾದ ಡಾನ್ 'ಬಾಟಲ್ ಮಣಿ' ಕೂಡ ಜೈಲಿನಿಂದ ಹೊರಗೆ ಬರುತ್ತಾನೆ. ಅಳಿಯಂದಿರಿಗೆ ತಾವು ಕರೆತಂದ ಮಣಿ, ಬಾಟಲ್ ಮಣಿ ಅಲ್ಲ ಎಂಬುದ ತಿಳಿಯುತ್ತದೆ. ಆದರೆ ಮುಖ್ಯಸ್ಥನನ್ನು ರಕ್ಷಿಸಲು ಅವರ ತಂದೆಯ ಆತ್ಮ ದೆವ್ವವಾಗಿ 'ರಾಜರಾಜೇಂದ್ರ'ನ ದೇಹ ಹೊಕ್ಕುತ್ತದೆ. ಹೀಗೆ ಹತ್ತು ಹಲವು ಘಟನೆಗಳೊಂದಿಗೆ ಸಿನೆಮಾ ಮುಂದುವರೆಯುತ್ತದೆ.

'ಹಿಸ್ ಹೈನೆಸ್ಸ್ ಅಬ್ದುಲ್ಲ' ೧೯೯೦ರ ಮೋಹನ್ ಲಾಲ್ ಅಭಿನಯದ ಸಂಗೀತಮಯ ಸಿನೆಮಾ. ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡು ಹಲವಾರು ಪ್ರಶಸ್ತಿಗಳನ್ನು ಪಡೆದ, ವಿಮರ್ಶಕರ ಮೆಚ್ಚುಗೆ ಪಡೆದ ಸಿನೆಮಾ ಇದು. ಇದರ ಕಥೆಯನ್ನೇ ಸಂಪೂರ್ಣ ನಕಲು ಮಾಡದೆ ಅತಿ ಕೆಟ್ಟ ರೀತಿಯಲ್ಲಿ ಕನ್ನಡಕ್ಕೆ ಅಳವಡಿಸಿಕೊಂಡಿದ್ದಾರೆ ನಿರ್ದೇಶಕ ಪಿ ಕುಮಾರ್. ಹಾಸ್ಯ ಎಂದಾಕ್ಷಣ ಎಲ್ಲ ತರ್ಕವನ್ನು-ಎಲ್ಲ ಸಾಮಾನ್ಯ ಲೋಕ ಜ್ಞಾನವನ್ನು ತ್ಯಜಿಸಿಬಿಡಬೇಕೆಂದೇನಿಲ್ಲ. ಆದರೆ ರಾಜರಾಜೇಂದ್ರ ಸಿನೆಮಾದಲ್ಲಿ ಆ ಲೋಕಜ್ಞಾನವನ್ನು ಕಡೆಗಣಿಸಿದ್ದಾರೆ. ಮಲಯಾಳಂ ಸಿನೆಮಾದಲ್ಲಿ ರಾಜ ಮುಖ್ಯಸ್ಥನನ್ನು ಕೊಲ್ಲಲು ಕರೆದುಕೊಂಡು ಬರುವ ಯುವಕ ಅರಮನೆಯನ್ನು ಅಧ್ಯಯನ ಮಾಡುವ ನೆಪದಲ್ಲಿ ಬಂದರೆ, ನಮ್ಮ ರಾಜ ರಾಜೇಂದ್ರ ಸಿನೆಮಾದಲ್ಲಿ ಐದು ವರ್ಷದ ಮಗನಾಗಿದ್ದಾಗ ಕಳೆದುಕೊಂಡ ಮಗನ ಮಗ, ಸುಲಭವಾಗಿ ಮೊಮ್ಮಗ ಎಂದು ಹೇಳಿಕೊಂಡು ಅರಮನೆಯನ್ನು ಹೊಕ್ಕುತ್ತಾನೆ. ಹಾಸ್ಯಪ್ರಧಾನ ಸಿನೆಮಾ ಎಂದು ಹೇಳಿಕೊಂಡರೂ ಅದದೇ ಮತ್ತೆ ಮತ್ತೆ ರಿಪೀಟ್ ಆಗಿ ತಲೆ ಚಿಟ್ಟು ಹಿಡಿಸುತ್ತದೆ. ಹಾಸ್ಯ ನಟ ಪೂರ್ಣ ಪ್ರಮಾಣದ ನಾಯಕನಾಗಬೇಕೆ ಎಂಬ ಪ್ರಶ್ನೆ ತಲೆದೋರುವುದು ಆವಾಗಲೇ! ಹತ್ತು ಹಲವು ಅನಗತ್ಯ ಘಟನೆಗಳನ್ನು ತುರುಕಿ ಪ್ರೇಕ್ಷಕನನ್ನು ಹೈರಾಣ ಮಾಡಿಬಿಡುತ್ತಾರೆ ನಿರ್ದೇಶಕರು. ಬಹುಷಃ ಮೂಲ ಮಲಯಾಳಮ್ ಸಿನೆಮಾದಲ್ಲಿ ಶಾಸ್ತ್ರೀಯ ಸಂಗೀತದ ಸ್ಪರ್ಧೆ ಇತ್ತು ಎಂತಲೋ ಏನೋ, ಇಲ್ಲಿಯೂ ಕೂಡ ಆ ಒಂದು ಎಳೆಯನ್ನು ತಂದು, ಕೆಟ್ಟ ಹಾಡುಗಾರಿಕೆಯನ್ನು ಪ್ರದರ್ಶಿಸಿದ್ದಾರೆ. ಗೀತ ಸಾಹಿತ್ಯದಲ್ಲಿ ಅದಕ್ಕೆ ಕೊಟ್ಟಿರುವ ಹಾಸ್ಯದ ಟಚ್ ಅಂತೂ ಅಸಹ್ಯ! ಚಲನಚಿತ್ರದಿಡೀ ಶರಣ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಾರೆ. ಮಾಮೂಲಿ ಎನ್ನಬಹುದಾದ ನಟನೆ. ಹೊಸ ಪರಿಚಯ ಇಶಿತಾ ದತ್ತ ಪರವಾಗಿಲ್ಲ. ಸಾಧು ಕೋಕಿಲಾ, ರಾಮಕೃಷ್ಣ ಸೇರಿದಂತೆ ಪೋಷಕ ಪಾತ್ರವರ್ಗದ ನಟನೆ ಸಾಮಾನ್ಯ. ಅರ್ಜುನ್ ಜನ್ಯ ಅವರ ಸಂಗೀತ ಕನ್ನಡ ಚಿತ್ರೋದ್ಯಮದಲ್ಲಿ ಯಾರು ಬೇಕಾದರೂ ಸಂಗೀತ ನಿರ್ದೇಶಕನಾಗಬಹುದು ಎಂಬುದನ್ನು ನೆನಪಿಸುತ್ತದೆ. ಒಟ್ಟಿನಲ್ಲಿ ಸತ್ವ ಕತೆಯಿಲ್ಲದೆ, ಚುರುಕು ಹಾಸ್ಯ ಸಂಭಾಷಣೆ-ಸನ್ನಿವೇಶಗಳ ಕೊರತೆಯಿಂದ, ಕೆಟ್ಟ ಸಂಗೀತದಿಂದ ಸಿನೆಮಾ ಹಿಸ್ ಹೈನೆಸ್ಸ್ ಯಾವಾಗ ಮುಗಿಯುತ್ತಪ್ಪಾ ಎಂದೆನಿಸುತ್ತದೆ.

ಕೇರಳದಲ್ಲಿ ನೆಲೆಸಿದ ಒಂದು ಹೋಟೆಲ್ ಉದ್ಯಮಿ ಕುಟುಂಬ ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ಗೆಳೆಯರ ಮನೆಯಲ್ಲಿ ಒಬ್ಬಟ್ಟು ತಿಂದರಂತೆ. ತಮ್ಮ ಊರಿಗೆ ಮರಳಿದ ನಂತರ ಒಬ್ಬಟ್ಟಿನ ರುಚಿಗೆ ಮನಸೋತು ಈ ಖಾದ್ಯವನ್ನು ತಮ್ಮ ಹೋಟೆಲ್ ನಲ್ಲೂ ಪ್ರಸ್ತುತಪಡಿಸಬೇಕೆಂದುಕೊಂಡು ಒಬ್ಬಟ್ಟು ಮಾಡುವ ಬಗೆಯನ್ನು ಫೋನ್ ನಲ್ಲಿ ತಮ್ಮ ಗೆಳೆಯರಿಂದ ಕೇಳಿ ತಿಳಿದರಂತೆ! ಒಬ್ಬಟ್ಟು ಮಾಡುವುದು ಕಷ್ಟ! ಹಾಗೆಯೇ ಅದಕ್ಕೆ ಅಷ್ಟೊಂದು ಪದಾರ್ಥಗಳನ್ನು ಬಳಸಿದರೆ ಒಬ್ಬಟ್ಟಿನ ಬೆಲೆ ಹೆಚ್ಚಿಡಬೇಕು. ಅಯ್ಯೋ ಹೇಗೂ ಇಲ್ಲಿ ಒಬ್ಬಟ್ಟಿನ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ತೊಗರಿ ಬೇಳೆಗಿಂತಲೂ ಕಡಿಮೆ ಬೆಲೆಯ ಹೆಸರು ಬೇಳೆಯನ್ನೇ ಹಾಕಿದರಂತೆ. ಬೆಲ್ಲದ ಪಾಕದ ಜೊತೆ ಹದವಾಗಿ ಬೇಯಿಸಿ, ತೆಂಗಿನ ಕಾಯಿಯ ಜೊತೆ ಮಿಶ್ರಣ ಮಾಡಿ ಒಳಕಲ್ಲಿನಲ್ಲಿ ಅರೆದು ಹೂರಣ ಮಾಡುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ ಎಂದು ಅದರ ಬದಲು ಸಕ್ಕರೆ ಮತ್ತು ಹೆಸರು ಬೇಳೆಯನ್ನು ಚೆನ್ನಾಗಿ ಮೆತ್ತಗಾಗುವರೆಗೆ ಕುದಿಸಿ ಅದನ್ನೇ ಹೂರಣವಾಗಿಸಿ ಒಬ್ಬಟ್ಟು ಮಾಡಿ ತಮ್ಮ ಹೋಟೆಲ್ ನಲ್ಲಿ ಪರಿಚಯಿಸಿದರಂತೆ. ಯಾವುದೋ ಹೊಸ ರುಚಿ ಎಂದು ಕೇರಳದ ಜನ ಅದನ್ನು ಪ್ರಯತ್ನಿಸಿ, ಒಬ್ಬಟ್ಟು ಎಂದರೆ ಇದೇ ಇರಬೇಕು ಅಂದುಕೊಂಡು ಅದು ಚೆನ್ನಾಗಿದೆಯೋ ಇಲ್ಲವೋ ಯೋಚಿಸದೆ ತಿನ್ನುತ್ತಾ ಹೋದರಂತೆ!

ನಮ್ಮ ಕನ್ನಡ ಸಿನೆಮಾಗಳು ಈ ಕೇರಳದ ಒಬ್ಬಟ್ಟುಗಳಂತಾಗಿವೆ ಎಂದು ಮತ್ತೆ ಹೇಳಬೇಕಾಗಿಲ್ಲ ಅಲ್ಲವೇ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com