ಮಗ್ಗಿ ಕಲಿಯಲಾಗದೆ ತೂಕಡಿಸಿ ತೂಕಡಿಸಿ ಬೀಳುವ ಪ್ರೇಕ್ಷಕ

ತಪ್ಪಿದ ಮಗ್ಗಿಯ ಶೀರ್ಷಿಕೆಯಿದ್ದರೂ ಸಿನೆಮಾದ ಕಾಗುಣಿತ-ವ್ಯಾಕರಣ ದೋಷವಿಲ್ಲದೆ ಮೂಡಿದೆಯೇ? ಅಥವಾ ಯೋಗರಾಜ್ ವಿತರಣೆಗೆ ಸಾಹಸ ಮಾಡಿದ್ದಾರೆಂದರೆ ಮಾತಿನ ಬಂಡಿ ಎಗ್ಗಿಲ್ಲದೆ ಓಡಿದೆಯೇ?
'Eradondla Mooru' Kannada Movie review
'Eradondla Mooru' Kannada Movie review
Updated on

ಬೆಂಗಳೂರು: ಮಗ್ಗಿ ತಪ್ಪಿದ್ದರು 'ಲೆಕ್ಕ ಫುಲ್ ಪಕ್ಕಾ' ಎಂಬ ಅಡಿ ಶೀರ್ಷಿಕೆಯೊಂದಿಗೆ ಕುಮಾರ್ ದತ್ತ ನಿರ್ದೇಶನದ ಸಿನೆಮಾ ಬಿಡುಗಡೆಯಾಗಿದೆ. ಈ ಮಗ್ಗಿ ತಪ್ಪಿರುವ ಶೀರ್ಷಿಕೆಯುಳ್ಳ 'ಎರಡೊಂದ್ಲಾ ಮೂರೂ' ಯೋಗರಾಜ್ ಭಟ್ ಲಾಂಛನದಡಿ ಮೊದಲ ಸಿನೆಮಾ ಆಗಿ ವಿತರಣೆ ಆಗುತ್ತಿದೆ ಎಂದು ಕೂಡ ಪ್ರಚಾರ ಪಡೆದಿದೆ. ಯೋಗರಾಜ್ ಭಟ್ ಸಿನೆಮಾ ಸ್ಕೂಲಿನಲ್ಲಿ ಮಗ್ಗಿ ಕಲಿಯದೇ ಹೋದರೂ ಯೋಗರಾಜ್ ಅವರನ್ನು ಈ ಸಿನೆಮಾದ ನಿರ್ದೇಶಕ ದ್ರೋಣಾಚಾರ್ಯನಂತೆ ನೋಡಿರಬಹುದೇ? ತಪ್ಪಿದ ಮಗ್ಗಿಯ ಶೀರ್ಷಿಕೆಯಿದ್ದರೂ ಸಿನೆಮಾದ ಕಾಗುಣಿತ-ವ್ಯಾಕರಣ ದೋಷವಿಲ್ಲದೆ ಮೂಡಿದೆಯೇ? ಅಥವಾ ಯೋಗರಾಜ್ ವಿತರಣೆಗೆ ಸಾಹಸ ಮಾಡಿದ್ದಾರೆಂದರೆ ಮಾತಿನ ಬಂಡಿ ಎಗ್ಗಿಲ್ಲದೆ ಓಡಿದೆಯೇ?

ಪ್ರೇಮ್ (ಚಂದನ್) ಎದುರು ಮನೆಯ ಹುಡುಗಿ ಪ್ರೀತಿ (ಶೋಭಿತಾ) ಹಾಡುತ್ತಿದ್ದಾಗ ನೋಡಿ ಒಮ್ಮೆಲೇ ಲವ್ವಲ್ಲಿ ಬಿದ್ದಿರುತ್ತಾನೆ. ಇವರಿಬ್ಬರ ಪ್ರೀತಿಯನ್ನು ನಿರ್ದೇಶಿಸುವವಳು (ಇವಳು ರಂಗ ನಿರ್ದೇಶಕಿಯೂ ಕೂಡ) ಸ್ನೇಹಾ (ಶ್ವೇತಾ ಪಂಡಿತ್). ಪ್ರೀತಿಗೆ ಈಗಾಗಲೇ ನಿಶ್ಚಿತಾರ್ಥವಾಗಿದೆ, ವರ ವಿದೇಶಿಗ ಹೀಗೆ ಹೇಳುತ್ತಾ ಸ್ನೇಹಾ, ಪ್ರೇಮ್ ನ ಪ್ರೀತಿಯನ್ನು ಪರೀಕ್ಷೆ ಮಾಡುತ್ತಲೇ ಹೋಗುತ್ತಾಳೆ. ಆದರೆ ಬಹಳ ಒಳ್ಳೆಯ ಹುಡುಗ-ಆದರ್ಶವಾದಿ ಪ್ರೇಮ್ ಪರೀಕ್ಷೆಯಲ್ಲಿ ಎಲ್ಲೂ ಸೋಲುವುದೇ ಇಲ್ಲ. ಆದುದರಿಂದ ಸ್ನೇಹಳಿಗೂ ಪ್ರೇಮ್ ಮೇಲೆ ಉತ್ಕಟ ಪ್ರೀತಿ ಉಂಟಾಗುತ್ತದೆ. ಆದರೆ ತನ್ನ ಗೆಳತಿಯ ಬಗ್ಗೆ ಅನುಕಂಪದಿಂದ ತನ್ನ ಪ್ರೀತಿಯನ್ನು ವ್ಯಕ್ತ ಪಡಿಸಲು ಸಾಧ್ಯವಿಲ್ಲ. ಅನುಕಂಪ ಏಕೆಂದರೆ ತನ್ನ ಗೆಳತಿ ಕುರುಡಿ. ಈ ವಿಷಯ ಪ್ರೇಮ್ ಗೆ ತಿಳಿದಿರುವುದಿಲ್ಲ. ಹೀಗೆ ಮೊದಲಾರ್ಧ ನಡೆಯುವ ಕಥನ, ದ್ವಿತೀಯಾರ್ಧದಲ್ಲಿ ಇಲ್ಲಿಯವರೆಗೆ ನಡೆದ ಕಥೆಯನ್ನು ರಂಗನಿರ್ದೇಶನ ಮಾಡಲು ನಾಯಕಿ ತೊಡಗುತ್ತಾಳೆ. ಈ ತ್ರಿಕೋನ ಪ್ರೇಮಕ್ಕೆ ರಂಗಮಂಚದ ಮೇಲೆಯೇ ಅಂತ್ಯ ನೀಡುತ್ತಾಳೆ! ಏನೀ ಅಂತ್ಯ ಎಂಬುದೇ ಸಿನೆಮಾ.

ಟೈಟಲ್ ಕಾರ್ಡ್ ಓಡುವಾಗಲೇ ಯೋಗರಾಜ್ ಭಟ್ ಧ್ವನಿಯ ಅಸಂಬದ್ಧ ಪ್ರಲಾಪದಿಂದಲೇ(ಮೋನೋಲಾಗ್) ಸಿನೆಮಾ ಪ್ರಾರಂಭವಾಗುವುದರಿಂದ, ಇದು ಮತ್ತೊಂದು 'ವಿಪರೀತ ಮಾತಿನ ಸಿನೆಮಾ' ಎಂದು ಪ್ರೇಕ್ಷಕ ನಿರ್ಧರಿಸಿದರೆ, ಇದಕ್ಕೆ ಒಂಚೂರೂ ಮೋಸವೆಸಗದ ನಿರ್ದೇಶಕರು ಚಿತ್ರದ ಪ್ರತಮಾರ್ಧವಿಡೀ ಚಂದನ್ ಮತ್ತು ಶ್ವೇತಾ ಪಂಡಿತ್ ನಡುವಿನ ಸುಧೀರ್ಘ ಸಂಭಾಷಣೆಯಲ್ಲಿ ಅಸಂಬದ್ಧ, ತಲಹರಟೆ, ದ್ವಂದ್ವಾರ್ಥ, ಸೆಕ್ಸಿಸ್ಟ್, ಅತಾರ್ಕಿಕ ಮಾತುಗಳಿಂದ ತುಂಬಿ ಪ್ರೇಕ್ಷಕರಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಾರೆ. ಇದು ಸಾಲದೆಂಬಂತೆ ಒಂದು ಕಾಮಿಡಿ ಟ್ರ್ಯಾಕ್ ಕೂಡ ಸೃಷ್ಟಿಸಿ ಕಳ್ಳ-ಪೋಲಿಸ್ ಇತ್ಯಾದಿ ಪಾತ್ರಗಳನ್ನು ತುರುಕಿ ನರಕದಲ್ಲಿ ಪಾಪಿಗಳು ಅನುಭವಿಸಬಹುದಾದ ವಿವಿಧ ಯಾತನೆಗಳನ್ನು ಪ್ರೇಕ್ಷಕನಿಗೆ ಉಣಬಡಿಸುತ್ತಾರೆ. ಅನಾಥ ನಾಯಕಿ ಪಾತ್ರದಲ್ಲಿರುವ ಶ್ವೇತಾ ಪಂಡಿತ್ ತಮ್ಮ ತಂದೆ ತಾಯಿ ಸ್ವರ್ಗ ಸೇರಿದ್ದಾರೆ ಎನ್ನುವುದಕ್ಕೂ, ನಾಯಕ ತನ್ನ ತಾಯಿ ಸ್ವರ್ಗದಲ್ಲಿದ್ದಾರೆ ಎನ್ನುವುದಕ್ಕೂ ಸಿನೆಮಾ ನೋಡುವುವವನು ನರಕಯಾತನೆ ಅನುಭವಿಸುವುದಕ್ಕೂ ಸಮಯ ಸರಿಹೊಂದುತ್ತದೆ. ಲೀನಿಯರ್ ನಿರೂಪಣೆಗೆ ಒಗ್ಗುವ ಕಥೆಯನ್ನು ನಿರ್ದೇಶಕ ಸುಖಾಸುಮ್ಮನೆ ಹಿಂದೆ ಮುಂದೆ ಜಗ್ಗಾಡಿ ತೆರೆ ಮೇಲೆ ಸಮಯ, ತಿಂಗಳುಗಳನ್ನು ತೋರಿಸಿ ಸಲ್ಲದ ಸರ್ಕಸ್ ಮಾಡಿದ್ದಾರೆ. ಈ ಮೊದಲಾರ್ಧ ಮಗ್ಗಿ ಕಲಿಯಲಾಗದೆ ತೂಕಡಿಸಿ ಬೀಳುವ ಪ್ರೇಕ್ಷಕ ದ್ವಿತಿಯಾರ್ಧದಲ್ಲಿ ಸ್ವಲ್ಪ ಎಚ್ಚೆತ್ತು ಕೂರುವಂತೆ ಕಥೆಯಲ್ಲಿ ತುಸು ಉದ್ವೇಗ ಹುಟ್ಟುತ್ತದೆ. ಇಲ್ಲಿಯವರೆಗೂ ನಡೆದಿರುವ ಕಥೆಯನ್ನು ರಂಗಮಂಚಕ್ಕೆ ತರಲು ನಾಟಕಕ್ಕೆ ಸ್ಕ್ರಿಪ್ಟ್ ಬರೆಯುವ ಶ್ವೇತಾ ಪಂಡಿತ್ ಅವರ ಕೆಲಸವನ್ನು ತಿದ್ದಲು ಅವರ ಗುರು ಪೂರ್ಣಚಂದ್ರ ತೇಜಸ್ವಿ(ಶ್ರೀಧರ್) ಆಗಮನವಾಗುತ್ತದೆ. ಆಗ ಶ್ವೇತಾಳನ್ನು ಪ್ರಶ್ನಿಸುತ್ತ ಹೋಗುವ ತೇಜಸ್ವಿ ಮೊದಲಾರ್ಧ ನಡೆದ ಪ್ರೀತಿ ಪ್ರೇಮವನ್ನು ಮತ್ತೆ ಬಿಡಿಸುತ್ತ ಹೋಗುತ್ತಾರೆ. ದ್ವಿತೀಯಾರ್ಧದಲ್ಲೂ ಜಳ್ಳು ಸಂಬಾಷಣೆ ಇಲ್ಲವೆಂದೇನಿಲ್ಲ. ಹೇಗೋ ಕೊನೆಗೆ ಸಿನೆಮಾ ಮುಗಿದಾಕ್ಷಣ ವಿದ್ಯಾರ್ಥಿ ಮೇಷ್ಟರಿಗೆ ಮಗ್ಗಿ ಒಪ್ಪಿಸಿ ನಿಟ್ಟುಸಿರು ಬಿಡುವ ಹಾಗೆ ಪ್ರೇಕ್ಷಕ ನಿರಾಳನಾಗುತ್ತಾನೆ.

ಈ ಹಿಂದೆಯೂ ಇದೇ ಜಾಗದಲ್ಲಿ ಹಲವಾರು ಬಾರಿ ಚರ್ಚಿಸಿರುವಂತೆ ಸಿನೆಮಾ ಮಾಧ್ಯಮದ ಮೂಲಮಂತ್ರ 'ದೃಶ್ಯ'ಕ್ಕೆ ನಿರ್ದೇಶಕ ಬದ್ಧನಾಗಿರಬೇಕು. ಒಂದು ಪಕ್ಷ ವಾಚಾಳಿತನ ಇದ್ದರೆ ಅದು ಸಿನೆಮಾ ಕಥೆ ಪೂರಕವಾಗಿರಬೇಕು. ಕಥೆಯ ಬಹು ಭಾಗವನ್ನು ಭಾವನೆಗಳ ಮೂಲಕ ವ್ಯಕ್ತಪಡಿಸಬೇಕು. ಸುಮ್ಮನೆ ಅರ್ಥವಿಲ್ಲದ ಮಾತಿನ ಝರಿ ಹರಿಸುವುದು ಹುಸಿ ಸೃಜನಶೀಲತೆ. ಈ ಸಿನೆಮಾದಲ್ಲಿ ಕೂಡ ಮೂಡುವ ಪ್ರೀತಿ-ಪ್ರೇಮದ ಸನ್ನಿವೇಶಗಳು ಬರೀ ಮಾತಿನ ಮೂಲಕವೇ ವ್ಯಕ್ತವಾಗಿವೆಯೇ ಹೊರತು ನಟರ ಭಾವನೆಗಳಲ್ಲಿ ಹೊರಬಂದಿರುವುದು ಅತ್ಯಲ್ಪ. ಚಂದನ್ ಮತ್ತು ಶ್ವೇತಾ ಪಂಡಿತ್ ಅತಿ ಸಾಧಾರಣ ನಟನೆ ನೀಡಿದ್ದಾರೆ. ಎ ಎಂ ನೀಲ್ ಅವರ ಸಂಗೀತದಲ್ಲಿ ವಿಶೇಷತೆಯೇನು ಇಲ್ಲ. ಒಟ್ಟಿನಲ್ಲಿ ನಿರ್ದೇಶಕರು ಮಾತು-ಸಂಭಾಷಣೆಯ ಮೇಲಿನ ತಮ್ಮ ನಿಷ್ಠೆಯನ್ನು ಒಳ್ಳೆಯ ಸ್ಕ್ರಿಪ್ಟ್ ಮೂಲಕ, ಒಳ್ಳೆಯ ನಿರೂಪಣೆಯ ಮೂಲಕ ಉತ್ತಮ ದೃಶ್ಯಗಳನ್ನು, ಭಾವನೆಗಳನ್ನು ಹೆಣೆಯುವುದರಲ್ಲಿ ಸಫಲರಾಗಿದ್ದಾರೆ ಲೆಕ್ಕ ಸರಿಬರುತ್ತಿತ್ತೇನೋ!

ಇತ್ತೀಚಿನ ಕನ್ನಡ ಸಿನೆಮಾಗಳನ್ನು ನೀವು ನಿರಂತರವಾಗಿ ನೋಡುತ್ತಿದ್ದೀರಾದರೆ ಅತಿ ಹೆಚ್ಚು ಸೆಕ್ಸಿಸ್ಟ್ ಸಂಭಾಷಣೆ, ಅತಿ ಪುರುಷಾಭಿಮಾನದ (ಚವನಿಸ್ಟ್) ಸಂಭಾಷಣೆಗಳನ್ನು ನಿರಂತರವಾಗಿ ಕೇಳಿರುತ್ತೀರಿ. ಹುಡುಗಿಯರೆಲ್ಲಾ ಅವಕಾಶವಾದಿಗಳು. ಪ್ರೀತಿಯಲ್ಲಿ ಯಾವಾಗಲು ಕೈಕೊಡುವವಳು ಹುಡುಗಿ. ಪ್ರೀತಿಯಲ್ಲಿ ಮೋಸವೆಸೆಗಿಸಿಕೊಂಡು ಸ್ಮಶಾಣವೆಲ್ಲಾ ತಿರಸ್ಕೃತ ಪುರುಷರಿಂದಲೇ ತುಂಬಿದೆ. ಇಂತಹ ಮಾತುಗಳು ಸರ್ವೇಸಾಮಾನ್ಯವಾಗಿಬಿಟ್ಟಿವೆ. ಈ ಸಿನೆಮಾ ಕೂಡ ಇದಕ್ಕೆ ಹೊರತಲ್ಲ. ಇಂತಹ ಪೂರ್ವಾಗ್ರಹಪೀಡೀತ, ಅರ್ಥವಿಲ್ಲದ, ಅಸಂಬದ್ಧ ಚಿಂತನೆಗಳಿಂದ ಹಲವು ನಿರ್ದೇಶಕರು ಹೊರಬರಬೇಕಿದೆ. ಮನರಂಜನೆ ಯಾವತ್ತೂ ಉದಾತ್ತವಾದದ್ದಾಗಿರಬೇಕು. ಕೀಳು ಅಭಿರುಚಿಯನ್ನು ಬಿತ್ತುವುದಲ್ಲ. ಮೇಲಿನ ಚವನಿಸ್ಟ್ ಹೇಳಿಕೆಗಳಿಗೆ ಯಾವುದೇ ಸಮಾಜವಾದದ ಸಿದ್ಧಾಂತಗಳಾಗಳಿ ಸಂಶೋಧನೆಗಳಾಗಲಿ ಪೂರಕವಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com