ಚಡ್ಡಿ, ಚಿಕನ್, ಸ್ಕಾಚು, ದೆವ್ವ, ಪ್ರೀತಿ-ಡ್ಯಾನ್ಸು-ರೋಮ್ಯಾನ್ಸು ಇತ್ಯಾದಿ!

ನಾಯಕ ಸೋಡಾಬುಡ್ಡಿ(ಉತ್ಪಲ್) ತನ್ನ ಕುಂಡಿಯನ್ನು ಮೇಲಕ್ಕೆ ಮಾಡಿ ಮಲಗಿರುತ್ತಾನೆ. ಅವನ ಅಪ್ಪ (ರಂಗಾಯಣ ರಘು) ಕೊಠಡಿಯೊಳಗೆ ಬಂದು ನಿನ್ನ ಎರಡೂ ಚೊಂಬು ಆಕಾಶಕ್ಕೆ ತೋರಿಸಿ
ದಿ ಗ್ರೇಟ್ ಸ್ಟೋರಿ ಆಫ್ ಸೊಡಾಬುಡ್ಡಿ ಸಿನೆಮಾ ವಿಮರ್ಶೆ
ದಿ ಗ್ರೇಟ್ ಸ್ಟೋರಿ ಆಫ್ ಸೊಡಾಬುಡ್ಡಿ ಸಿನೆಮಾ ವಿಮರ್ಶೆ
Updated on: 

ನಾಯಕ ಸೋಡಾಬುಡ್ಡಿ(ಉತ್ಪಲ್) ತನ್ನ ಕುಂಡಿಯನ್ನು ಮೇಲಕ್ಕೆ ಮಾಡಿ ಮಲಗಿರುತ್ತಾನೆ. ಅವನ ಅಪ್ಪ (ರಂಗಾಯಣ ರಘು) ಕೊಠಡಿಯೊಳಗೆ ಬಂದು ನಿನ್ನ ಎರಡೂ ಚೊಂಬು ಆಕಾಶಕ್ಕೆ ತೋರಿಸಿ ಮಲಗಬೇಡ ಎಂದು ರಂಪ ಮಾಡುತ್ತಾನೆ. ಭೂಮಿಗೆ ತೋರಿಸಿ ಮಲಗಿದರೆ ಪೈಲ್ಸ್ ಬರುತ್ತದೆ ಎಂದು ನನ್ನ ಟೀಚರ್ ಹೇಳಿದ್ದಾರೆ ಎಂದು ಮಗನ ಮಾರುತ್ತರ. ಈ ಪ್ರಸಂಗ ದ್ವಿತೀಯಾರ್ಧದಲ್ಲಿ ಹಲವು ನಿಮಿಷಗಳ ಕಾಲ ಮುಂದುವರೆಯುತ್ತದೆ. ಇಂತಹ ಪ್ರಸಂಗಗಳು ಯತೇಚ್ಛವಾಗಿರುವ, ಬಹುತೇಕ ಎಲ್ಲ ಹೊಸಬರೇ ಕೂಡಿ ಮೂಡಿಸಿರುವ ಈ ಸಿನೆಮಾದಲ್ಲಿ ಹೊಸತೇನಾದರೂ ಇದೆಯೇ?

ಮನೆಯಲ್ಲಿ ಸಸ್ಯಾಹಾರಿಯಾದರೂ, ಚಿಕನ್ ಪ್ರಿಯ, ಬಾರ್ ಮಾಲೀಕನ ಮಗಳು ಪೊರಕೆ ಕಡ್ಡಿ (ಖುಷಿ) ಮತ್ತು ಸ್ಕಾಚ್ ಹೊಡೆದರಷ್ಟೇ ಧೈರ್ಯ ಮೂಡುವ ಸೋಡಾ ಬುಡ್ಡಿಯ(ಉತ್ಪಲ್) ನಡುವೆ ಚಿಕನ್-ಸ್ಕಾಚ್ ಅನುಕೂಲಸಿಂಧು ಪ್ರೇಮ. ದಿನ ರಾತ್ರಿ ಪೊರಕೆ ಕಡ್ಡಿಯ ತಾರಸಿಯ ಮೇಲೆ, ಚಿಕನ್ ಕೊಂಡು ತರುವ ಸೋಡಾ ಬುಡ್ಡಿ, ಅದನ್ನು ಸವಿಯುವ ಪೊರಕೆ ಕಡ್ಡಿ ಇದಕ್ಕೆ ಬದಲಾಗಿ ಸ್ಕಾಚ್ ವಿಸ್ಕಿ ಕುಡಿದು ಟೈಟ್ ಆಗುವ ಸೋಡಾ ಬುಡ್ಡಿ. ಚಿಕನ್ ಪೀಸ್ ಸಂಖ್ಯೆಯಲ್ಲಿ ವ್ಯತ್ಯಾಸವಾದರೆ ಸೋಡಾ ಬುಡ್ಡಿಗೆ ಕೆಟ್ಟ ಕೆಟ್ಟ ಮಾತುಗಳಲ್ಲಿ ಬೈಯ್ಯುವ ಕಡ್ಡಿ-ಇದಕ್ಕೆ ಪ್ರತಿಯಾಗಿ ಕಿಚಾಯಿಸುವ ಬುಡ್ಡಿ ಹೀಗೆ ವಿಚಿತ್ರ ರೋಮ್ಯಾನ್ಸ್ ವಿರಳವಾಗಿ ಕೆಲವೊಮ್ಮೆ ಕಚಗುಳಿ ಇಟ್ಟರೂ ಇನ್ನುಳಿದಂತೆ ರಿಪಿಟಿಶನ್ ನಿಂದಲೂ, ಲೌಡ್ ಎನ್ನಿಸುವ ಹುಚ್ಚುಚ್ಚು ಸಂಭಾಷಣೆಯಿಂದಲೂ, ಸವಕಲು-ಅತಿರೇಕದ ಘಟನೆಗಳಿಂದಲೂ (ಚಿಕನ್ ಪ್ರೀತಿಗಾಗಿ ಚೈನಿನಿಂದ ಕೈಕಟ್ಟಲಾಗಿರುವ ಸೋಡಾ ಬುಡ್ಡಿಯ ಬೆನ್ನು ಕೆರೆಯುವುದರಿಂದ ಇವರಿಬ್ಬರ ನಡುವೆ ಪ್ರೀತಿ ಅಂಕುರವಾಗುವುದು, ವಿಸ್ಕಿ ಕುಡಿದು ಟೈಟ್ ಆಗಿ ಮೂತ್ರಕ್ಕೆ ಹೋಗುವ ದೃಶ್ಯವನ್ನು ಸುಮಾರು ೧೦ ನಿಮಿಷಗಳ ಕಾಲ ಅಸಂಬದ್ಧವಾಗಿ ಲಂಬಿಸುವುದು, ಚಿಕನ್ ತಿಂದ ಮೇಲೆ ಕಾಲು ಕಡಿಯುತ್ತಿದೆ ಎಂದು ಕಡ್ಡಿ, ಬುಡ್ಡಿಯ ಕುಂಡಿಗೆ ಒದೆಯುವುದು, ಚಡ್ಡಿ ಕೊಳ್ಳಲು ಸೋಡಾಬುಡ್ಡಿ ತನ್ನ ತಂದೆಯ ಬಳಿ ದುಡ್ಡು ಕೇಳಲು ವಿಕ್ಷಿಪ್ತವಾಗಿ ಹರಸಾಹಸ ಪಡುವುದು) ಅಸಹನೀಯವಾಗುತ್ತಾ ಮುಂದುವರೆಯುತ್ತದೆ. ಹಾಗೂ ಹೀಗೂ ತಡೆದುಕೊಂಡರೆ, ದ್ವಿತೀಯಾರ್ಧಕ್ಕೆ ಇನ್ನೂ ದೊಡ್ಡ ಶಾಕ್ ಪ್ರೇಕ್ಷನಿಗೆ ಕಾದಿರುತ್ತದೆ. ಹೊಸ ನಾಯಕ ನಟಿಯ ಆಗಮನವಾಗಿ ಕಡ್ಡಿ ಕಾಣೆಯಾಗುತ್ತಾಳೆ.

ದ್ವಿತೀಯಾರ್ಧಕ್ಕೆ ಹೊಸ ನಟಿಯ(ಅನುಷಾ) ಮತ್ತು ಸೋಡಾ ಬುಡ್ಡಿಯ ಲವ್-ರೋಮ್ಯಾನ್ಸ್. ಮೊದಲಾರ್ಧದ ಪ್ರೇಮಕಥೆಗೂ ಹಿಂದಿನದು ಎಂಬತೆ ಗೊಂದಲಮೂಡಿಸಲು ನಿರೂಪಿಸಲಾಗಿದೆ. ಬಚ್ಚಲ ಮನೆಯ ಕಿಟಕಿಯಿಂದ ಇಬ್ಬರೂ ಪ್ರೇಮಿಗಳು ಖಾಲಿ ಹಾಳೆಯ ಮೇಲೆ ಬರೆದು ಮಾತನಾಡುವುದು ಒಂದು ಕ್ಷಣ ಆಪ್ತವೆನಿಸಿದರೂ, ಅದು ಅಲ್ಲಿಗೇ ನಿಲ್ಲದೇ ಮುಂದುವರೆಯುತ್ತಲೇ ಹೋಗುವುದು ಇನ್ನಿಲ್ಲದಂತೆ ಬೋರು ಹೊಡೆಸುತ್ತದೆ. ಪ್ರೀತಿ-ರೋಮ್ಯಾನ್ಸ್ ಕೂಡ ಇಷ್ಟು ಅಸಹನೀಯವಾಗಬಲ್ಲದೇ ಎಂದೆನಿಸದೆ ಇರದು ಪ್ರೇಕ್ಷಕನಿಗೆ. ಮಗ ಸೋಡಾ ಬುಡ್ಡಿಯ ಈ ಪ್ರಲಾಪಗಳನ್ನು ಸಂದೇಹಿಸುವಂತೆ ವರ್ತಿಸುವ ತಂದೆಯ ಪಾತ್ರದಲ್ಲಿ ರಂಗಾಯಣ ರಘು ಅತಿರೇಕದ ನಟನೆಯಿಂದ ಪ್ರೇಕ್ಷಕನಿಗೆ ಇನ್ನೂ ಹೆಚ್ಚಿನ ಕಿರಿಕಿರಿಯುಂಟುಮಾಡುತ್ತಾರೆ. ಇದನ್ನೂ ತಾಳಿಕೊಂಡರೆ ಪ್ರೇಕ್ಷನಿಗೆ ಮತ್ತೊಂದು ದೊಡ್ಡ ಶಾಕ್ ಕ್ಲೈಮ್ಯಾಕ್ಸ್!

ನಿರ್ದೇಶಕನಿಗೆ ತಾನು ಹೇಳಬೇಕೆಂದಿರುವ ಕಥೆಯ ಬಗ್ಗೆ ಸ್ಪಷ್ಟತೆ ಇಲ್ಲವೋ, ಅಥವಾ ಪ್ರೇಕ್ಷನಿಗೆ ಅನಗತ್ಯ ಗೊಂದಲ ತರುವ ಉದ್ದೇಶವೋ, ಈ ಎರಡೂ ಅರ್ಧಗಳನ್ನು ಬೆಸೆಯುವ ಸಲುವಾಗಿ ಇದು ದೆವ್ವಗಳ ಕಲ್ಪನೆ ಎಂದು, ಬಸವಳಿದ ಪ್ರೇಕ್ಷಕರಿಗೆ ತಲೆಸುತ್ತು ಬರಿಸುತ್ತಾರೆ. ಸೋಡಾ ಬುಡ್ಡಿ ಪ್ರಪೋಸ್ ಮಾಡಲು ಬಂದಾಗ ಹೇಗೆ ಪ್ರತಿಕ್ರಿಯಸಬೇಕು ಎಂದು ರಿಹರ್ಸಲ್ ಮಾಡಲು ಬಂದಿದ್ದಾಗ ಕಡ್ಡಿ ಪೊರಕೆ ಕೊಲೆಯಾಗಿರುತ್ತಾಳೆ. ಜೊತೆಗೆ ಅವಳ ಗೆಳತಿಯೊಬ್ಬಳು, ಒಬ್ಬ ನಿರ್ದೇಶಕ (ಅಚ್ಯುತ್ ಕುಮಾರ್) ಮತ್ತೊಬ್ಬ ಬಾಲಕ ಸಾಸಿವೆ ಕೂಡ ಕೊಲೆಯಾಗಿರುತ್ತಾರೆ. ಈ ದೆವ್ವಗಳ ಕಲ್ಪನೆಯೇ ಈ ಕಥೆಯೆಂದು ಹೇಳಿ ಸಿನೆಮಾ ಅಂತ್ಯವಾಗುತ್ತದೆ. ಕೊನೆಗೆ ಸೋಡಾ ಬುಡ್ಡಿಯನ್ನು ಕೂಡ ದೆವ್ವಾಗಿ ಕಾಣಿಸುವ ನಿರ್ದೇಶಕ, ಪ್ರೇಕ್ಷನಿಗೆ ಈ ಕೆಟ್ಟ ಕಥೆಯಿಂದ ಚಳಿ ಜ್ವರ ಬರಿಸುತ್ತಾರೆ!

ನಟಿ ಖುಷಿಯ ಸಮಭಾವದ ನಟನೆ ಮತ್ತು ಡೀಸೆಂಟ್ ಎನ್ನಬಹುದಾದ ಛಾಯಾಗ್ರಹಣ ಹೊರತುಪಡಿಸಿದರೆ ಸಿನೆಮಾದಲ್ಲಿ ನಿರೀಕ್ಷಿಸುವಂತಾದ್ದು ಏನಿಲ್ಲ. ಮೊದಲ ಬಾರಿಗೆ ನಟಿಸಿರುವ ಉತ್ಪಲ್ ಮತ್ತು ಅನುಷಾ ದೊಡ್ಡ ನಿರಾಸೆ! ಅದಕ್ಕಿಂತಲೂ ಕಿರಿಕಿರಿಯೆಂದರೆ ಗೊಂದಲಮಯ-ಗುರಿಯಿಲ್ಲದ  ಕಥೆ, ತಲಬುಡವಿಲ್ಲದ ಘಟನೆಗಳು, ಕೆಟ್ಟ ಡೈಲಾಗ್ ಗಳು, ಅನಗತ್ಯ ಫೈಟ್ಗಳು, ಅತಿ ಎನ್ನಿಸುವ ಹಿನ್ನಲೆ ಸಂಗೀತ, ಸವಕಲು ನಿರೂಪಣೆ, ತಿಕ್ಕಲು ಅಂತ್ಯ! ಒಂದೆರಡು ಹಾಡುಗಳು ಮತ್ತು ತುಸುಮಟ್ಟಿಗೆ ನೃತ್ಯ ಪರವಾಗಿಲ್ಲ ಎನ್ನಬಹುದಾದರೂ ಕಥೆಗೆ ಮೆರುಗು ಮೂಡಿಸಬಲ್ಲವೇನೂ ಅಲ್ಲ ಅವು. ಕಥೆ ಚಿತ್ರಕಥೆ ಸಂಭಾಷಣೆ, ನಿರ್ದೇಶನ ಎಲ್ಲವನ್ನೂ ತಮ್ಮ ತಲೆಯ ಮೇಲೆ ಹಾಕಿಕೊಂಡಿರುವುದಕ್ಕೋ ಏನೋ ಜ್ಯೋತಿರಾವ್ ಮೋಹಿತ್ ತಮ್ಮ ಈ ಪ್ರಯೋಗದಲ್ಲಿ ಅತಿರೇಕಗಳ ಮೂಟೆಯನ್ನೇ ಹೊತ್ತು ತಂದು ಪ್ರೇಕ್ಷಕರ ಮೇಲೆ ಧೊಪ್ಪನೆ ಬಿಸಾಡುತ್ತಾರೆ!

'ದ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ'ಯ ಪ್ರೇಕ್ಷಕನಿಗೆ 'Grate' (ಕಿರಿಕಿರಿಯಾಗಿ ಸಿಟ್ಟು  ತರಿಸುವ ಅಸಹನೀಯ ಶಬ್ದ) ಆಗಿ ಪರಿಣಮಿಸುತ್ತದೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com