ಅಸ್ತಿತ್ವದ ಹುಡುಕಾಟದಲ್ಲಿ ಸೈಕೋಪಾತ್ ವಿಜೃಂಭಣೆ

ತಾಯಿಯ ಮದುವೆಯಾಚೆಗಿನ ಸಂಬಂಧ ತಿಳಿಯುವ, ಓದಿನಲ್ಲಿ ಅತಿ ಚುರುಕಿನ ಬಾಲಕ ರಾಮ್, ಈ ವಿಷಯವನ್ನು ತಂದೆಗೆ ತಿಳಿಸಿದಾಗ, ಪೋಷಕರ ನಡುವೆ ತೀವ್ರ ಕಲಹವುಂಟಾಗಿ ತಂದೆ
ಅಸ್ತಿತ್ವ ಸಿನೆಮಾ ವಿಮರ್ಶೆ
ಅಸ್ತಿತ್ವ ಸಿನೆಮಾ ವಿಮರ್ಶೆ
Updated on
ತಾಯಿಯ ಮದುವೆಯಾಚೆಗಿನ ಸಂಬಂಧ ತಿಳಿಯುವ, ಓದಿನಲ್ಲಿ ಅತಿ ಚುರುಕಿನ ಬಾಲಕ ರಾಮ್, ಈ ವಿಷಯವನ್ನು ತಂದೆಗೆ ತಿಳಿಸಿದಾಗ, ಪೋಷಕರ ನಡುವೆ ತೀವ್ರ ಕಲಹವುಂಟಾಗಿ ತಂದೆ ನೇಣಿಗೆ ಶರಣಾಗುತ್ತಾನೆ. ಇದರಿಂದ ಮಾನಸಿಕವಾಗಿ ತೊಂದರೆಗೆ ಒಳಗಾಗುವ ರಾಮ್, ತಾಯಿ ಮತ್ತು ಪ್ರಿಯಕರನನ್ನು ತನ್ನ ಮನೆಯಲ್ಲೇ ಸೀಮೆಎಣ್ಣೆ ಸುರಿದು ಸುಟ್ಟುಹಾಕಿ ರಿಮ್ಯಾಂಡ್ ಹೋಮ್ ಸೇರುತ್ತಾನೆ. ಇಂತಹುದೊಂದು ಭಾರಿ ಆಘಾತಕಾರಿ ಸನ್ನಿವೇಶವನ್ನು ಪ್ರಾರಂಭದಲ್ಲಿಯೇ ಪ್ರೇಕ್ಷಕರ ಮುಂದಿಡುವ ನಿರ್ದೇಶಕ, ಈ ಕಥೆಯನ್ನು/ ಸನ್ನಿವೇಶವನ್ನು ಹೇಗೆ ಮುಂದುವರೆಸಬಹುದು ಎಂಬ ಕುತೂಹಲವನ್ನು ಉಳಿಸಿದರು, ಎಲ್ಲೋ ಮಾನಸಿಕ ಅಸ್ವಸ್ಥತೆಯನ್ನು ವಿಜೃಂಭಿಸುವ ಅಪಾಯವು ಇರಬಹುದೇನೋ ಎಂಬ ಸಂದೇಹವನ್ನು ಉಳಿಸುತ್ತಾರೆ. 
ರಿಮ್ಯಾಂಡ್ ಹೋಮ್ ನಿಂದ ಸುಧಾರಿತನಾದಂತೆ ಕಾಣುವ ರಾಮ್ (ಯುವರಾಜ್), ಚಿಕ್ಕಮ್ಮನ ಅವಮಾನ ತಾಳಲಾರದೆ, ಕೊಲೆಗಾರ ಎಂಬ ಹಣೆಪಟ್ಟಿಯೊಂದಿಗೆ ನೊಂದು ಬೆಂಗಳೂರಿನ ಬಸ್ಸು ಹತ್ತುತ್ತಾನೆ. ಬಸ್ಸು ಅಪಘಾತವಾಗಿ ಸಹ ಪ್ರಯಾಣಿಕ ಮೊಹಮದ್ ರಹೀಮ್ ಮೃತಪಡುತ್ತಾನೆ. ಅವನ ಸೂಟ್ಕೇಸ್ ಹೊತ್ತು ತರುವ ರಾಮ್, ಮೃತನ ಪದವಿ ಪ್ರಮಾಣಪತ್ರಗಳನ್ನು ಬಳಸಿ ತಾನೇ ರಹೀಮ್ ಆಗಿ ಬದಲಾಗಿ, ಅವನ ಜೀವನವನ್ನೇ ನಕಲು ಮಾಡಿ, ಬದುಕಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಾನೆ. ಅಲ್ಲಿ ಕ್ರಿಶ್-ಕೃಷ್ಣ ಎಂಬ ಸಿರಿವಂತನ ಗೆಳೆತನವಾಗಿ ಅವನ ಮನೆಯಲ್ಲಿಯೇ ವಾಸಿಯುತ್ತಾನೆ. ಇವನ ಮೂಲ ಐಡೆಂಟಿಟಿ ಬಗ್ಗೆ ಕೃಷ್ಣನಿಗೆ ಸಂದೇಹ ಮೂಡಿದಾಗ ಇಬ್ಬರಿಗೂ ಕಲಹವಾಗಿ ಕೃಷ್ಣ ಆಕಸ್ಮಿಕವಾಗಿ ಮೃತಪಡುತ್ತಾನೆ. ಕೃಷ್ಣನನ್ನು ಹೂತುಹಾಕಿ, ಕೃಷ್ಣನಾಗಿ ಬದುಕಿ ಅವನ ಪ್ರೇಯಸಿ, ಗೆಳೆಯ, ಪೋಷಕರಿಗೂ ಸುಳ್ಳು ಹೇಳುತ್ತಾನೆ. ಇದರಿಂದ ತಪ್ಪಿಸಿಕೊಳ್ಳಲು ಕೃಷ್ಣನ ಗೆಳೆಯ ವಿಕ್ಕಿಯ ಕೊಲೆ ಮಾಡುತ್ತಾನೆ. ನಂತರ ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳುತ್ತಾನೆ? 
ಮಾನಸಿಕ ಅಸ್ವಸ್ಥನ ಥ್ರಿಲರ್ ಕಥೆಯಾಗಿ ಬಿಗಿ ನಿರೂಪಣೆಯಿಂದ ಪ್ರೇಕ್ಷಕನಿಗೆ ಒಂದು ರೀತಿಯ ಉದ್ವೇಗ ಮೂಡಿಸುತ್ತಾ ಮುಂದುವರೆಯುವ ಸಿನೆಮಾ ಕೆಲವು ದೋಷಗಳನ್ನು ಕಡೆಗಣಿಸಿ ನೋಡುವಂತೆ ಪ್ರೇಕ್ಷಕನಿಗೆ ಉತ್ತೇಜನ ನೀಡಿದರು, ಇಡೀ ಸಿನಾಮಾದ ಟೋನ್ ನಲ್ಲಿ ಮಾನಸಿಕ ಅಸ್ವಸ್ಥತೆಯ ವಿಜೃಂಭಣೆ ಕಾಣುವಂತಿದ್ದು, ಅಹಿತಕರವಾದ ಭಾವನೆ ಮೂಡಿಸುತ್ತದೆ. ಈಗಾಗಲೇ ಹಲವಾರು ಸಿನೆಮಾಗಳಲ್ಲಿ ಮೂಡಿರುವ - ಒಬ್ಬನೇ ವ್ಯಕ್ತಿ - ಎರಡು ವ್ಯಕ್ತಿತ್ವಗಳಾಗಿ ಬದುಕುವ - ತನ್ನ ಅನುಕೂಲಕ್ಕಾಗಿ ಈ ಎರಡು ವ್ಯಕ್ತಿತ್ವಗಳು ದೈಹಿಕವಾಗಿ ಹೊಡೆದಾಡುವ ಸನ್ನಿವೇಶ/ದೃಶ್ಯಗಳು ಇಲ್ಲಿಯೂ ಯಶಸ್ವಿಯಾಗಿ ಪುನರ್ಬಳಕೆಯಾಗಿದೆ. ತಾನು ಮಾಡಿದ ಕೊಲೆಗಳಿಂದ ತಪ್ಪಿಸಿಕೊಳ್ಳಲು ಆಲಿಬೈ ಸೃಷ್ಟಿಸುವ  ಸನ್ನಿವೇಶಗಳು ಕೂಡ ಹಲವಾರು ಚಿತ್ರಗಳನ್ನು ನೆನಪಿಗೆ ತರುತ್ತವೆ. ಹೀಗೆ ಪ್ರೇಕ್ಷಕರನ್ನು ಹಿಡಿದಿಡುವ ಕೆಲವು ಘಟನೆಗಳ ಮೂಲಕ ಥ್ರಿಲ್ಲರ್ ಸಿನೆಮಾವಾಗಿ ಮೂಡಿಬಂದಿದೆ. 
ಬಿಗಿ ನಿರೂಪಣೆಯ ಸಿನೆಮಾದಲ್ಲಿ ಸೊರಗಿರುವ ಮತ್ತೊಂದು ಅಂಶ ಎಂದರೆ ನಟನೆ. ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಯುವರಾಜ್ ಅವರ ಮುಖಭಾವವಾಗಲಿ, ಆಂಗಿಕ ಅಭಿನಯವಾಗಲಿ ಯಾವುದೂ ಖಚಿತತೆಗೆ ಹತ್ತಿರವಾಗಿಲ್ಲ. ಕ್ರಿಶ್ ಪಾತ್ರದ ಮಧುಸೂಧನ್ ಆಗಲಿ ಅವನ ಪ್ರೇಯಸಿಯ ಪಾತ್ರದಲ್ಲಿರುವ ಪ್ರಜ್ವಲ್ ಪೂವಯ್ಯ ಅವರಾಗಲಿ ಯಾರು ಗಮನೀಯ ನಟನೆ ನೀಡುವಲ್ಲಿ ಸಫಲರಾಗಿಲ್ಲ. ಅನಗತ್ಯವಾದ ಕನಸಿನ ಹಾಡುಗಳು ಅಥವಾ ಹಾಸ್ಯ ಟ್ರ್ಯಾಕ್ ಇಲ್ಲದೆ ಇರುವದು ಸಮಾಧಾನ. ಹಿನ್ನಲೆಯಲ್ಲಿ ಬರುವ ಹಾಡುಗಳು ಮತ್ತು ಹಿನ್ನಲೆ ಸಂಗೀತ ಪರವಾಗಿಲ್ಲ. ದೃಶ್ಯಗಳ ಸಂಯೋಜನೆ ಮತ್ತು ಛಾಯಾಗ್ರಹಣ ಕೂಡ ಥ್ರಿಲ್ಲರ್ ಸಿನೆಮಾಗೆ ಪೂರಕವಾಗಿವೆ. 
ಸಿನೆಮಾ ತಾಂತ್ರಿಕ ಕಲೆಯೆಷ್ಟೋ, ಕಥನ ಕಾರಣ-ನಿರೂಪಣೆ ಕೂಡ ಅಷ್ಟೇ ಮುಖ್ಯವಾದದ್ದು. ಮತ್ತು ಆ ಕಥೆಯನ್ನು ಪ್ರೇಕ್ಷಕನಿಗೆ ದಾಟಿಸುವ ರೀತಿ ಕೂಡ ಅಷ್ಟೇ ಪ್ರಮುಖ. ತಾಯಿಯ ಮದುವೆಯಾಚೆಗಿನ ಸಂಬಂಧವಷ್ಟೇ ಒಬ್ಬ ಬಾಲಕನ ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಹುದೇ? ಅದೇ ಕಾರಣವಾಗಿದ್ದರು, ಆ ಮಾನಸಿಕ ಅಸ್ವಸ್ಥತೆಯ ವಿಜೃಂಭಣೆಯನ್ನು ಅನುಭವಿಸಿ, ನಾಯಕ ನಟ ತನ್ನ ಅಸ್ತಿತ್ವಕ್ಕಾಗಿ ಮಾಡಿದ ಸಣ್ಣ ದ್ರೋಹವಷ್ಟೇ ಎಂಬ ಹುಸಿ ನೈತಿಕ ದೃಷ್ಟಿಕೋನಕ್ಕೆ ಪ್ರೇಕ್ಷಕರು ಶಿಳ್ಳೆ ಹೊಡೆಯಬೇಕೆ? ಮಾಡಿದ ತಪ್ಪಿಗಾಗಿ ಪಶ್ಚಾತಾಪವನ್ನು ಕೂಡ ಸೃಷ್ಟಿಸಿದ್ದರೆ ಥ್ರಿಲ್ಲರ್ ಕಥೆಗೆ ಕುಂದಾಗುತ್ತಿತ್ತೇ? ಇಂತಹ ಕೆಲವೊಂದಷ್ಟು ಪ್ರಶ್ನೆಗಳನ್ನು ಕೇಳಿಕೊಂಡಿದ್ದಾರೆ ಸಿನೆಮಾ ಮತ್ತಷ್ಟು ಆಪ್ತವಾಗುತ್ತಿತ್ತೇನೋ?
2012 ರ ಸೈಕೋಪಾಥ್ ಥ್ರಿಲ್ಲರ್ ತಮಿಳು ಸಿನೆಮಾ 'ನಾನ್' ಕನ್ನಡಕ್ಕೆ ಅಸ್ತಿತ್ವವಾಗಿ ಬಂದಿದೆ. ನಿರ್ದೇಶಕ ನೂತನ್ ಉಮೇಶ್ ತಮಿಳಿನಿಂದ ಕನ್ನಡಕ್ಕೆ ಯಥಾವತ್ತಾಗಿ ದೃಶ್ಯಗಳನ್ನು-ಕಥೆಯನ್ನು  ತರುವಲ್ಲಿ ಯಶಸ್ವಿಯಾಗಿದ್ದರು, ನಟನೆಯ ದೃಷ್ಟಿಯಲ್ಲಿ ಸಿನೆಮಾ ಹಿಂದೆ ಬಿದ್ದಿದೆ. ಇನ್ನು ಉತ್ತಮಪಡಿಸಿಕೊಳ್ಳುವ ವಿಪುಲ ಅವಕಾಶಗಳನ್ನು ನಿರ್ದೇಶಕ ಕೈಚೆಲ್ಲಿ ಸಾಧಾರಣ ರಿಮೇಕ್ ಒಂದನ್ನು ಕನ್ನಡಕ್ಕೆ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com