ದೊಣ್ಣೆವರೆಸೆ-ಆಕ್ಷನ್-ಪ್ರೀತಿ ಕಲಸೋಗರದ ಮಾರ್ನಾಮಿ ಹಬ್ಬ

ರಾಜಕಾರಣಿಯ ಮತ್ತೊಬ್ಬ ಪುತ್ರನ ಸಿನೆಮಾ ಪ್ರವೇಶಿಕೆ ಆಗಿದೆ. 'ಹ್ಯಾಪಿ ಬರ್ತ್ ಡೇ' ಸಿನೆಮಾದ ಮೂಲಕ ರಾಜಕೀಯ ಮುಖಂಡ ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್ ಹೀರೊ ಆಗಿ ನಟಿಸಿದ್ದರೆ,
'ಹ್ಯಾಪಿ ಬರ್ತ್ ಡೇ' ಸಿನೆಮಾ ವಿಮರ್ಶೆ
'ಹ್ಯಾಪಿ ಬರ್ತ್ ಡೇ' ಸಿನೆಮಾ ವಿಮರ್ಶೆ
ರಾಜಕಾರಣಿಯ ಮತ್ತೊಬ್ಬ ಪುತ್ರನ ಸಿನೆಮಾ ಪ್ರವೇಶಿಕೆ ಆಗಿದೆ. 'ಹ್ಯಾಪಿ ಬರ್ತ್ ಡೇ' ಸಿನೆಮಾದ ಮೂಲಕ ರಾಜಕೀಯ ಮುಖಂಡ ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್ ಹೀರೊ ಆಗಿ ನಟಿಸಿದ್ದರೆ, ನಟಿ ಸಂಸ್ಕೃತಿ ಶೆಣೈ ಕೂಡ ಪಾದಾರ್ಪಣೆ ಮಾಡಿದ್ದಾರೆ. ಮಹೇಶ್ ಸುಖಧರೆ ನಿರ್ದೇಶನದ 'ಹ್ಯಾಪಿ ಬರ್ತ್ ಡೇ' ಸಂಭ್ರಮ ಹೇಗಿದೆ?
ತನಗೆ ಸಿಗದ ಹುಡುಗಿಯನ್ನು ಕೊಲ್ಲಲು ಹೊರಟಿರುವ ಭಗ್ನ ಪ್ರೇಮಿಯೊಬ್ಬ (ಶ್ರೀನಗರ ಕಿಟ್ಟಿ) ಬರೆದ "ಎಣ್ಣೆ ಸಿಗರೇಟ್-ಕಿತ್ತೋಗಿರೋ ಹಾರ್ಟ್-ಪ್ರೀತ್ಸಿದ್ ಹುಡುಗಿ ಕೊಡೊ ಗಿಫ್ಟ್" ಎಂಬ ಗೋಡೆ ಬರಹ ಓದಿ, ಅವನಿಗೆ ಕರೆ ಮಾಡಿ, ಮಂಡ್ಯಾಗೆ ಲಿಫ್ಟ್ ಕೊಡುವುದಾಗಿ, ಬೈಕ್ ನ ಹಿಂಬದಿಯಲ್ಲಿ ಕೂರಿಸಿಕೊಂಡು ಸಚಿನ್ (ಸಚಿನ್) ತನ್ನ ಪ್ರೇಮ ಕಥೆ ಹೇಳುತ್ತಾನೆ. ತಂದೆ-ತಾಯಿಯಿಲ್ಲದ, ಅಣ್ಣ-ಅತ್ತಿಗೆ ಆಶ್ರಯದಲ್ಲಿ, ಪ್ರೀತಿಯ ನಂದನವನದಲ್ಲಿ ಬೆಳೆಯುವ ಸಚಿನ್ ತನ್ನ 24 ವಯಸ್ಸಿಗಾಗಲೇ 26 ಕೆಲಸಗಳನ್ನು ಮಾಡಿ ಬಿಟ್ಟಿರುವ ಹೀರೊ, ಕೊನೆಗೆ ಆಟೋ ಡ್ರೈವರ್ ಕೂಡ ಆಗಿ, ಕೆಲವು ರೌಡಿಗಳನ್ನು ಪುಡಿಗುಟ್ಟುತ್ತಾನೆ. ದ್ವೇಷಕ್ಕೆ ಆಟೋ ಸುಟ್ಟು ಹಾಕುವ ರೌಡಿಗಳನ್ನು ಬೀದಿಗಳಲ್ಲಿ, ಮನೆಯ ಮಾಳಿಗೆಗಳ ಮೇಲೆ ಅಟ್ಟಾಡಿಸಿಕೊಂಡು ಸೈಕಲ್ ಮೇಲೇರಿ ವೀಲಿಂಗ್ ಮಾಡಿಕೊಂಡು ಎದುರಾಳಿಗಳ ಮೈಮುರಿಯುತ್ತಾನೆ. ಎಣ್ಣೆ ಮೇಷ್ಟ್ರು ವೀರಾಸ್ವಾಮಿಯನ್ನು ಮನೆಗೆ ತಲುಪಿಸಿ ಬರುವಾಗ ಅವಳ ಮಗಳನ್ನು ನೋಡಿದಾಕ್ಷಣ "ಎಣ್ಣೆ ಕಿಕ್ ಗಿಂತ, ಹೆಣ್ಣಿನ ಕಿಕ್ ಸೂಪರ್" ಎಂದು ಪ್ರೀತಿಗೆ ಬೀಳುತ್ತಾನೆ. ಅಂಜಲಿ (ಸಂಸ್ಕೃತಿ ಶೆಣೈ) ಕೂಡ ತಾಯಿಯಿಲ್ಲದೆ ಬೆಳೆದವಳು. ಜೆರಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡುವ ಈಕೆ, ಮೊದಲಿಗೆ ತನ್ನನ್ನು ಹಿಂಬಾಲಿಸುವ ಸಚಿನ್ ನನ್ನು ತರಾಟೆಗೆ ತೆಗೆದುಕೊಂಡರು ನಂತರ ಪ್ರೀತಿಯನ್ನು ಒಪ್ಪಿ, ಅವನಿಗೆ ಉದ್ಯೋಗ ಕೊಡಿಸುವ ಸಲುವಾಗಿ ತನ್ನ ಉಳಿತಾಯದ 1 ಲಕ್ಷ ನೀಡುತ್ತಾಳೆ. ಇಲ್ಲಿಯವರೆಗೂ ಯಾವುದೇ ಏರುಪೇರುಗಳಿಲ್ಲದೆ ನಡೆದುಕೊಂಡು ಹೋಗುವ ಕಥೆ, ಹೀರೊಯಿಸಂ ನಿರೂಪಣೆಗೇ ಹೆಚ್ಚು ಒತ್ತು ಕೊಡುತ್ತದೆ. 
ಅಂಜಲಿ ತಂದೆ ವೀರಾಸ್ವಾಮಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಆ ಒಂದು ಲಕ್ಷವನ್ನು ಕಳೆದುಕೊಳ್ಳುವ ಸಚಿನ್, ತನ್ನ ಸ್ಥಿತಿಯನ್ನು ಮಗಳಿಗೆ ತಿಳಿಸದಂತೆ ವೀರಾಸ್ವಾಮಿ ವಚನ ತೆಗೆದುಕೊಳ್ಳುವುದರಿಂದ ಸಂದಿಗ್ಧಕ್ಕೆ ಬೀಳುತ್ತಾನೆ. ಈ ಸಂದಿಗ್ಧ ಪರಿಸ್ಥಿತಿಯಿಂದ ಅಂಜಲಿ ಜೊತೆಗೆ ವಿರಸ ಮೂಡುತ್ತದೆ. ಕೊನೆಗಾಲದಲ್ಲಿರುವ ವೀರಾಸ್ವಾಮಿಯವರ ಬಯಕೆಗಳನ್ನು ಪೂರೈಸಲು ಸಚಿನ್ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾನೆ. ದೊಣ್ಣೆ ವರಸೆಯಲ್ಲಿ ದೊರೆಯಾಗಿದ್ದು, ತನ್ನ ಪತ್ನಿಯ ಅಕಾಲಿಕ ಸಾವಿನ ನಂತರ ಅದನ್ನು ತೊರೆದು ಕುಡುಕನಾಗಿರುವ ವೀರಾಸ್ವಾಮಿ ತನ್ನ ಕೊನೆಯ ಆಸೆಯಾಗಿ ತನ್ನ ಬದ್ಧ ವಿರೋಧಿ ಜಂಬೂರನನ್ನು ಸೋಲಿಸಲು ಸಚಿನ್ ನನ್ನು ಅಣಿಗೊಳಿಸುತತ್ತಾನೆ. ಸಚಿನ್ ತನ್ನ ಪ್ರೀತಿ ಮತ್ತು ಆಟವನ್ನು ಗೆಲ್ಲುತ್ತಾನೆಯೇ? 
ಗಟ್ಟಿಯಾದ ಸಂಘರ್ಷವಿಲ್ಲದ, ಕಮರ್ಷಿಯಲ್ ಚೌಕಟ್ಟಿನಲ್ಲಿ ಬೇಕು ಬೇಡದ್ದನ್ನೆಲ್ಲಾ ಸೇರಿಸಿ ಕಲಸೋಗರ ಮಾಡಿ ನೀಡಿರುವ ಕಥೆಯಲ್ಲಿ ಆಪ್ತವಾಗುವ ಅಂಶಗಳು ಕೆಲವಿದ್ದರೆ ಇನ್ನಷ್ಟು ಬೇಸರಿಸುತ್ತವೆ. ಕೌಟುಂಬಿಕ ಚಿತ್ರವಾಗಿ, ಕುಟುಂಬಕ್ಕೆ ಅಗತ್ಯವಾದ ಆಪ್ತತೆ-ಪ್ರೀತಿಯ ವಿಷಯಗಳು ಮನಮುಟ್ಟುವಂತೆ ಚಿತ್ರೀಕರಣಗೊಂಡಿವೆ. ತಂದೆ ತಾಯಿಯಿಲ್ಲದ ಮಗುವನ್ನು (ಹೀರೊ) ಅಣ್ಣ-ಅತ್ತಿಗೆ ಪೋಷಿಸುವುದು, ತಾಯಿಯಿಲ್ಲದ, ಕುಡುಕ ಅಪ್ಪನೊಂದಿಗೆ ಬೆಳೆಯುವ ಮಗಳು (ನಾಯಕನಟಿ) ಸ್ವತಂತ್ರ ಚಿಂತನೆಯೊಂದಿಗೆ ಬೆಳೆದು ತನ್ನ ಆಯ್ಕೆಗಳನ್ನು ಪರಿಣಾಮಕಾರಿಯಾಗಿ ಮಾಡುವುದು, ಆಪ್ತ ಸಂಬಂಧಿಕರಿಲ್ಲದೆ, ಕನ್ನಡಿಯೊಂದಿಗೆ ಮಾತನಾಡುವ ನಾಯಕನಟಿ ಹೀಗೆ ಕೆಲವು ಅಂಶಗಳು ಭಾವನಾತ್ಮವಾಗಿ ಕಾಡುತ್ತವೆ. ಈ ನಿಟ್ಟಿನಲ್ಲಿ ನಟಿ ಸಂಸ್ಕೃತಿ ಶೆಣೈ ಚೊಚ್ಚಲ ಸಿನೆಮಾದಲ್ಲಿಯೇ ಗಮನಾರ್ಹವಾಗಿ ಪ್ರದರ್ಶನ ನೀಡಿದ್ದರೆ, ತಂದೆಯ ಪಾತ್ರದಲ್ಲಿ ಅಚ್ಯುತ್ ಕುಮಾರ್ ಭಾವನಾತ್ಮಕವಾಗಿ ಮನಗೆಲ್ಲುತ್ತಾರೆ. ಹೀರೋವಾಗಿ ಸಚಿನ್ ಹೆಚ್ಚಿನ ಸ್ಕ್ರೀನ್ ಸಮಯವನ್ನು ಪಡೆದಿದ್ದರು- ಒಂದು ಮಟ್ಟಿಗೆ ತೊಡಗಿಸಿಕೊಂಡಿದ್ದರು, ಸಂಭಾಷಣೆಯನ್ನು ದಾಟಿಸುವಲ್ಲಿ ಮತ್ತು ಭಾವನಾತ್ಮಕ ನಟನೆ ನೀಡುವಲ್ಲಿ ಇನ್ನು ಹೆಚ್ಚಿನ ಪರಿಶ್ರಮ ಬೇಕಿತ್ತು. ಆಕ್ಷನ್ ದೃಶ್ಯಗಳು ಕೆಲವೊಮ್ಮೆ ಅನಗತ್ಯವಾಗಿ ಲಂಬಿಸಿದ್ದು, ಅನಗತ್ಯವಾದ ಕಾಮಿಡಿ ದೃಶ್ಯಗಳು ಕಿರಿಕಿರಿಯುಂಟು ಮಾಡುತ್ತವೆ. ಸಾಧುಕೋಕಿಲಾ ಬಂದು ಹೋಗುವ, ಬುಲೆಟ್ ಪ್ರಕಾಶ್ ಅವರನ್ನು ಒಳಗೊಂಡ ಹಲವು ದೃಶ್ಯಗಳು ಮತ್ತು ಚಿಕ್ಕಣ್ಣ ವಿವಾಹಿತ ಮಹಿಳೆಯೊಂದಿಗೆ ನಡೆಸುವ ಸಂಭಾಷಣೆಯ ದೃಶ್ಯಗಳು ಇತ್ತ ಹಾಸ್ಯವನ್ನು ಸೃಷ್ಟಿಸದೆ, ಸಿನೆಮಾಗೂ ಪೂರಕವಾಗದೆ ತಲೆಚಿಟ್ಟು ಹಿಡಿಸುತ್ತವೆ. ರಾಜೇಶ್ ನಟರಂಗ್ ಮತ್ತು ಉಳಿದ ಪೋಷಕ ನಟರ ನಟನೆ ಚೆನ್ನಾಗಿದೆ. 
ಮಂಡ್ಯಾದಲ್ಲಿ ನಡೆಯುವ ಸಿನೆಮಾದ ಕಥೆಗೆ ಭಾಷೆಯ ಬಳಕೆ ಪ್ರಾದೇಶಿಕ ಸೊಗಡನ್ನು ಒಳಗೊಂಡು ಗಮನ ಸೆಳೆದರೆ, ಸಂಭಾಷಣೆ ಇನ್ನೂ ಹೆಚ್ಚು ಪಾಲಿಶ್ ಆಗಬೇಕಿತ್ತು. ಮಂಡ್ಯ ಮೈಸೂರಿನ ಸುತ್ತಮುತ್ತಲ ಜಾಗಗಳನ್ನು, ಮೈಸೂರು ದಸರಾ, ಹಲವಾರು ದೇವಾಲಯಗಳನ್ನು ಒಳಗೊಳ್ಳಲು ಛಾಯಾಗ್ರಹಣ ಕಸರತ್ತು ನಡೆಸಿದ್ದರು, ಇನ್ನು ವಿವರಗಳಿದ್ದರೆ ಹೆಚ್ಚು ಆಪ್ತವಾಗುತ್ತಿತ್ತೇನೋ. ಡ್ರೋನ್ ಚಿತ್ರೀಕರಣದ ಶಾಟ್ ಗಳು ಅನಗತ್ಯವಾಗಿ ಆಗಾಗ ಮೂಡುತ್ತಿರುತ್ತವೆ. ಹರಿಕೃಷ್ಣ ಅವರ ಸಂಗೀತ ಕೂಡ ಆಪ್ತವಾಗಿದ್ದು, 'ಹೋಗುಮೆ ಹೋಗುಮೆ' ಹಾಡು ಸಾಹಿತ್ಯ-ಗಾಯನ ಮತ್ತು ಟ್ಯೂನ್ ಗಾಗಿ ಪ್ರೇಕ್ಷಕನ್ನು ಆವರಿಸಿಕೊಳ್ಳುತ್ತದೆ. 'ಏನ್ ವರಸೆ' ಹಾಡು ತಮಿಳು ಸಿನೆಮಾ 'ಸುಬ್ರಮಣ್ಯಪುರ'ದ 'ಕಣ್ಗಳ್ ಇರಂದಾ' ಹಾಡನ್ನು ನೆಪಿಸುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಇನ್ನು ಸರಾಗವಾಗಿ ಚಲಿಸುವಂತೆ ಮಾಡಬಲ್ಲ ಅವಕಾಶವನ್ನು ಸಂಕಲನಕಾರ ಪರಿಣಾಮಕಾರಿಯಾಗಿ ಮೂಡಿಸಬಹುದಿತ್ತು. 
ಕಥೆಯಲ್ಲಿ ಮತ್ತು ಕಥೆಯಲ್ಲಿ ಮೂಡುವ ಸಂಘರ್ಷದಲ್ಲಿ ಹೊಸತನವಿಲ್ಲದಿದ್ದರು, ಇನ್ನು ಅಚ್ಚುಕಟ್ಟಾಗಿ ಮಂಡ್ಯಾದ ಸೊಗಡಿನ ಪ್ರೇಮಕಥೆಯನ್ನು-ಕೌಟುಂಬಿಕ ಚಿತ್ರಣವನ್ನು, ಇನ್ನಷ್ಟು ಆಪ್ತ ಘಟನೆಗಳಿಂದ-ವಿವರಗಳಿಂದ, ಅತಿರೇಕಗಳನ್ನು ಮರೆಮಾಚಿ ಕಟ್ಟಿಕೊಟ್ಟಿದ್ದರೆ ಸಿನೆಮಾ ಇನ್ನಷ್ಟು ಆಪ್ತವಾಗುತ್ತಿತ್ತೇನೋ. ನಿರ್ದೇಶಕ ಮಹೇಶ್ ಸುಖಧರೆ ಇದರಲ್ಲಿ ಬಾಗಶಃ ಯಶಸ್ವಿಯಾಗಿದ್ದಾರಷ್ಟೇ. 
ಉಳಿದಂತೆ: 'ಹ್ಯಾಪಿ ಬರ್ತ್ ಡೇ' ಎಂದರೆ ಮಂಡ್ಯಾ ಭಾಗದಲ್ಲಿ 'ನಿನ್ಗೆ ಸರಿಯಾಗಿ ಮಾಡ್ತೀನಿ ಬರ್ಲಾ'ಎಂಬರ್ಥದಲ್ಲಿ 'ಸ್ಲ್ಯಾಂಗ್' ಆಗಿ ಬದಲಾಗಿದೆಯಂತೆ. ಈ ಅರ್ಥದಲ್ಲಿ 'ಹ್ಯಾಪಿ ಬರ್ತ್ ಡೇ' ಪದೇ ಪದೇ ಸಿನೆಮಾದಲ್ಲಿ ಹಲವಾರು ಬಾರಿ ಬಳಕೆಯಾಗಿ ಎಣಿಸುವ ಪ್ರೇರೇಪಣೆ ನೀಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com