ಅನುಭವಿ ನಿರ್ದೇಶಕ ಗುರು ದೇಶಪಾಂಡೆ ಚಿತ್ರವನ್ನು ನಿರ್ದೇಶಿಸಿದ್ದು, ಮಲಯಾಳಂ ಸಿನೆಮಾವೊಂದನ್ನು ಫ್ರೇಂ ಟು ಫ್ರೇಂ ಭಟ್ಟಿ ಇಳಿಸಿದ್ದು (ರಿಮೇಕ್ ಮಾಡಿದ್ದು) ಕನ್ನಡದ ಸೊಗಡಿಗೆ ಹೊಂದಿಸುವಲ್ಲಿ ಸುಧಾರಣೆ ಕಂಡುಬಂದಿಲ್ಲ. ನಿರ್ದೇಶಕರು ಮಲಯಾಳಂನಲ್ಲಿ ಸೂಪರ್ ಹಿಟ್ ಆದ ಸಿನಿಮಾದ ಅಂಶಗಳನ್ನು ಕದಲಿಸದೇ ಇರುವುದೇ ಉತ್ತಮ ಎಂದುಕೊಂಡರೇ? ಅದಕ್ಕೆ ಅವರೇ ಉತ್ತರಿಸಬೇಕು. ಆದರೆ ನಿಯತ ಅಂತರಗಳಲ್ಲಿ ಪ್ರಸಂಗಗಳ ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಡುತ್ತವೆ. ಒಟ್ಟಾರೆ ಗಂಭೀರ ವಿಷಯಾಧಾರಿತ ಸಿನಿಮಾದಲ್ಲಿ ಸಾಂದರ್ಭಿಕವಾಗಿ ಹಾಸ್ಯ ಪ್ರಸಂಗಗಳಿದೆ. ಹಿನ್ನಲೆ ಸಂಗೀತ ಮತ್ತು ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳಿಗೆ ಸಂತೋಷ್ ರೈ ಪತಾಜೆ ಛಾಯಾಗ್ರಹಣ ಪೂರಕವಾಗಿದೆ. ಅಜಯ್ ರಾವ್, ಮದರಂಗಿ ಕೃಷ್ಣ ಮತ್ತು ಯೋಗಿ ಬಹಳ ಸಾಧಾರಣ ನಟನೆ ನೀಡಿದ್ದಾರೆ. ಶ್ರೀನಿವಾಸ ಮೂರ್ತಿ, ಗಿರಿಜಾ ಲೋಕೇಶ್ ಸೇರಿದಂತೆ ಪೋಷಕ ವರ್ಗದ ನಟನೆ ಸಾಧಾರಣವಾಗಿದೆ. ನಾಯಕನಟಿ ಕಾಮ್ನ ರಣಾವತ್ ಅವರ ಪಾತ್ರವಂತೂ ಅತ್ಯಂತ ಸೀಮಿತವಾಗಿದ್ದು, ಕೇವಲ ಮುಗುಳ್ನಗೆ ಹಾಗೂ ತೂಗಾಡುವ ಕೂದಲಿನೊಂದಿಗೆ ಮುಕ್ತಾಯವಾಗುತ್ತದೆ. ವಿಪರೀತ ಅನಗತ್ಯ ಸಂಭಾಷಣೆಯಿಂದ ಕೂಡಿದ, ಓತಪ್ರೇತದ ನಿರೂಪಣೆಯಿಂದ ಕನ್ನಡ ಸಿನಿರಸಿಕರಿಗೆ, ನೋಡಿ ತಾಳಿಕೊಳ್ಳಿ ಎಂಬ ಸವಾಲೆಸೆದಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ.