ಹಾಸ್ಯ ಮಸಾಲಾ ಚಿತ್ರದಲ್ಲಿ ಗಟ್ಟಿ ಕಥೆ ಐಚ್ಛಿಕ. ಸುಲಭ ಕಥೆಯ ಜೊತೆಗೆ ಒಂದಷ್ಟು ಘಟನೆಗಳನ್ನು ಸರಾಗವಾಗಿ, ಸ್ವಾಭಾವಿಕವಾಗಿ ಮೂಡಿಸಲು ಸಾಧ್ಯವಾದರೆ ಪ್ರೇಕ್ಷಕರನ್ನು ಮನರಂಜಿಸುವುದಕ್ಕೆ ಅಷ್ಟು ಸಾಕು. 'ಸುಂದರಾಂಗ ಜಾಣ'ನಲ್ಲಿಯೂ ಅಂತಹ ಕಾಡುವ ಕಥೆಯೇನು ಇಲ್ಲ ಅಥವಾ ಬಹುಮುಖ್ಯವಾದ ಸಂಘರ್ಷವು ಇಲ್ಲ. ಬಹಳ ಪ್ರೆಡಿಕ್ಟಿಬಲ್ ಕಥೆ. ಸಣ್ಣ ಐಬು ಹೊಂದಿರುವ ಯುವಕನಿಗೆ ಕೆಲವರು ಮಣೆ ಹಾಕುವುದಿಲ್ಲ ಎಂಬ ಅತಿ ತೆಳುವಿನ ಸಂಘರ್ಷ ಬಿಟ್ಟರೆ, ಅದು ಕೂಡ ಅವನಿಗೆ ವರವಾಗುವ-ಅನುಕೂಲವಾಗುವ ರೀತಿಯಲ್ಲಿಯೇ ಸಿನೆಮಾ ಕಥೆ ಹೆಣೆದಿರುವುದರಿಂದ ಆ ಸಂಘರ್ಷ ಕೂಡ ನೆನೆಗುದಿಗೆ ಬಿದ್ದ ಹಾಗೆ. ಇನ್ನು ಸಿನೆಮಾ ಹಾಸ್ಯದ ಮನರಂಜನೆಯನ್ನು ಯಥೇಚ್ಛವಾಗಿ ನೀಡಿದೆಯೇ ಎಂಬ ಪ್ರಶ್ನೆಗೆ, ಅಲ್ಲಲ್ಲಿ ಪ್ರೇಕ್ಷಕರಿಗೆ ಮಂದಹಾಸ ಬೀರಲು ಸಹಕರಿಸಿದ್ದರು, ಬಹಳಷ್ಟು ಕಡೆಗೆ ನಿರಾಶೆಯನ್ನು ಮೂಡಿಸುತ್ತದೆ. ಪೋಣಿಸಿರುವ ಘಟನೆಗಳು ಕೂಡ ಸ್ವಾಭಾವಿಕ ಎನಿಸದೆ, ಮೂಡಿರುವ ಹತ್ತು ಹಲವು ಬಹಳ ಕೃತಕವೆನಿಸುವ ಆಕಸ್ಮಿಕಗಳು ಸಿನೆಮಾ ಸಾಗುವ ಮತ್ತು ಪ್ರೇಕ್ಷಕರು ಹಾಸ್ಯವನ್ನು ಆಹ್ವಾದಿಸುವ ಸರಾಗತೆಗೆ ಬ್ರೇಕ್ ಹಾಕುತ್ತವೆ. ಹಾಸ್ಯ ಚಿತ್ರವಾದರೂ ಅತಿರೇಕದ-ಅಶ್ಲೀಲತೆಯ ಸಂಭಾಷಣೆ ನುಸುಳದಂತೆ ಸಾಕಷ್ಟು ಎಚ್ಚರ ತೆಗೆದುಕೊಂಡಿರುವುದೇ ಸಿನೆಮಾದ ಮುಖ್ಯ ಅಂಶಗಳಲ್ಲಿ ಒಂದು.