ಕಾಲೇಜು ದಿನಗಳ ಸಂತಸದ ಸಂಗತಿಗಳನ್ನು ಬಹಳ ಲವಲವಿಕೆಯಿಂದ ಕಟ್ಟಿಕೊಟ್ಟಿರುವುದು 'ಕಿರಿಕ್ ಪಾರ್ಟಿ'ಯ ಆಪ್ತ ಸಂಗತಿಗಳಲ್ಲೊಂದು. ಸಿನೆಮಾದ ಮೊದಲಾರ್ಧದಲ್ಲಿ ಮಲಯಾಳಂನ 'ಪ್ರೇಮಂ'ನ ದಟ್ಟ ಛಾಯೆ ವ್ಯಕ್ತವಾದರೂ, ಕರ್ಣ ಮತ್ತು ಸಾನ್ವಿಯ ನಡುವಿನ ರೊಮ್ಯಾಂಟಿಕ್ ಕ್ಷಣಗಳು ಪ್ರೇಕ್ಷಕನ ಅನುಭವಗಳು ಕೂಡ ಆಗುತ್ತವೆ. ಆ ಮಟ್ಟಿಗೆ ಈ ದೃಶ್ಯಗಳನ್ನು ಪ್ರೇಕ್ಷಕನಿಗೆ ದಾಟಿಸಲು ಸಿನೆಮಾ ಸಶಕ್ತವಾಗಿದೆ. ಬುದ್ಧಿ ಬಲಿತಂತೆ ಪ್ರಾಯದ ಚೇಷ್ಟೆಗಳನ್ನು ಕಳೆದುಕೊಳ್ಳುವ, ನಂತರ ಮತ್ಯಾರಿಂದಲೋ-ಮತ್ಯಾವುದರಿಂದಲೋ ಅವುಗಳನ್ನು ಕಂಡುಕೊಳ್ಳುವ ಸಂಘರ್ಷದ ನಡುವೆ ಸಾಗುವ ಸಿನೆಮಾ, ದ್ವಿತೀಯಾರ್ಧಕ್ಕೆ ಗಂಭೀರತೆ ಪಡೆದುಕೊಳ್ಳುತ್ತದೆ. ಕರ್ಣ ಗಂಭೀರನಾಗಲು ಆರೋಪಿಸುವ ಕಾರಣ ಮತ್ತು ಆ ಕಾರಣವನ್ನು ಆರೋಪಿಸಿ ಅರ್ಥ ಮಾಡಿಸುವ ನಿರ್ದೇಶಕನ-ಕಥೆಗಾರನ ತವಕ, ಸಿನೆಮಾ ಎಲ್ಲೋ ಹಳಿ ತಪ್ಪಿದಂತೆ ಭಾಸವಾಗಲು ಕಾರಣವಾಗುತ್ತದೆ. ದ್ವಿತೀಯಾರ್ಧ ನಾಯಕನಟ ಕರ್ಣನ ವೈಭವೀಕರಣಕ್ಕೆ ಮೀಸಲಾಗಿ ಹತ್ತರಲ್ಲಿ ಹನ್ನೊಂದನೆಯ ಸಿನೆಮಾವಾಗಿ ಮಾರ್ಪಾಡಾಗುವ ಅಪಾಯಕ್ಕೆ ಸಿಲುಕುತ್ತದೆ. ಕರ್ಣನ ಜೀವನದಲ್ಲಿ ಮತ್ತೊಬ್ಬ ಯುವತಿ ಆರ್ಯಳ (ಸಂಯುಕ್ತ ಹೆಗಡೆ) ಪ್ರವೇಶ, ಕರ್ಣನ ವ್ಯಕ್ತಿತ್ವಕ್ಕಾಗಿ ಅವಳು ತೆಗೆದುಕೊಳ್ಳುವ ಆಸ್ಥೆ, ಕಾಲೇಜು ರಾಜಕಾರಣ ರಣರಂಗದಲ್ಲಿ ಕರ್ಣನ ಸುಲಭ ಜಯಭೇರಿ, ಎದುರಾಳಿಗಳನ್ನು ಪುಡಿಗುಟ್ಟುವುದು, ತನ್ನ ಹಳೆ ಪ್ರೇಯಸಿಯ ನೆನಪು ಮರುಕಳಿಸುವುದು ಹೀಗೆ ಪ್ರೆಡಿಕ್ಟಬಲ್ ಘಟನೆಗಳಿಂದ ತುಂಬಿದ ದ್ವಿತೀಯಾರ್ಧ ತುಸು ನಿರಾಸೆ ತಂದರು, ಬಹುಷಃ ಮತ್ಯಾವ ಅತಿರೇಕದ-ಅನಗತ್ಯ ಹಾಸ್ಯವನ್ನು ಒಳಗೊಳ್ಳದೆ ಇರುವುದು, ಅಲ್ಲಲ್ಲಿ ಮೂಡುವ ನವಯವ್ವನದ ಹಾಡುಗಳು ಈ ನಿರಾಸೆಗೆ ಪರಿಹಾರ ನೀಡುತ್ತವೆ. ನಾಯಕನಟನ ವ್ಯಕ್ತಿತ್ವದ ಬದಲಾವಣೆಗೆ ಅಥವಾ ಅವನ ಅರಿವಿಗೆ ಆ ತೀವ್ರವಾದ ಕಾರಣಗಳನ್ನು ಆರೋಪಿಸದೆಯೂ, ಅದನ್ನು ಬಿಡಿಬಿಡಿಯಾಗಿ ವಿವರಿಸುವ ಗೋಜಿಗೆ ಹೋಗದೆಯು ಇನ್ನು ಸ್ವಾಭಾವಿಕವಾಗಿ ಕಟ್ಟಿಕೊಟ್ಟಿದ್ದಲ್ಲಿ ಸಿನೆಮಾ ಇನ್ನಷ್ಟು ಆಪ್ತವಾಗುತ್ತಿತ್ತೇನೋ!