ಮತ್ತದೇ ಪ್ರೇಮದ ತೂಗುಯ್ಯಾಲೆ

ಅನಿಲ್ ಕುಮಾರ್ ನಿರ್ದೇಶನದ ತೆಲುಗು ಚಿತ್ರವೊಂದರ ರಿಮೇಕ್ 'ಕೃಷ್ಣ ರುಕ್ಕು' ಇಂದು ಬಿಡುಗಡೆಯಾಗಿದೆ. ತೆಲುಗಿನ 'ಉಯ್ಯಾಲಾ ಜಂಪಾಲ'ದ ಕನ್ನಡ ಅವತರಿಣಿಕೆಯಲ್ಲಿ ಕೃಷ್ಣ
ಕೃಷ್ಣ ರುಕ್ಕು ಸಿನೆಮಾ ವಿಮರ್ಶೆ
ಕೃಷ್ಣ ರುಕ್ಕು ಸಿನೆಮಾ ವಿಮರ್ಶೆ
Updated on

ಅನಿಲ್ ಕುಮಾರ್ ನಿರ್ದೇಶನದ ತೆಲುಗು ಚಿತ್ರವೊಂದರ ರಿಮೇಕ್ 'ಕೃಷ್ಣ ರುಕ್ಕು' ಇಂದು  ಬಿಡುಗಡೆಯಾಗಿದೆ. ತೆಲುಗಿನ 'ಉಯ್ಯಾಲಾ ಜಂಪಾಲ'ದ ಕನ್ನಡ ಅವತರಿಣಿಕೆಯಲ್ಲಿ ಕೃಷ್ಣ ಅಜೇಯ ರಾವ್ ಮತ್ತು ಅಮೂಲ್ಯ ಮುಖ್ಯಭೂಮಿಕೆಯಲ್ಲಿದ್ದು ಈ ರೊಮ್ಯಾಂಟಿಕ್ ಚಿತ್ರ ಪ್ರೇಕ್ಷಕರಿಗೆ ಮೋಡಿ ಮಾಡಲು ಸಾಧ್ಯವಾಗಿದೆಯೇ?

ಬಾಲ್ಯದಿಂದಲೇ ಕೀಟಲೆ, ಕಿತ್ತಾಟಗಳೊಂದಿಗೆ ಒಟ್ಟಾಗಿ ಬೆಳೆಯುವ ರುಕ್ಮಿಣಿ (ಅಮೂಲ್ಯ) ಮತ್ತು ಅವಳ ಮಾವ ಕೃಷ್ಣ (ಅಜೇಯ ರಾವ್) ತಮ್ಮ ಜಗಳಗಳನ್ನು ಹರೆಯದಲ್ಲೂ ಮುಂದುವರೆಸುತ್ತಾರೆ. ರುಕ್ಮಿಣಿ ಮೋಸದ ಪ್ರೇಮದಲ್ಲಿ ಬಿದ್ದು ಮನೆ ತೊರೆದು ಓಡಿ ಹೋದಾಗ, ಅವಳನ್ನು ಕೃಷ್ಣ ರಕ್ಷಿಸುತ್ತಾನೆ. ರುಕ್ಮಿಣಿಗೆ ಇಷ್ಟವಿಲ್ಲದಿದ್ದರೂ ಅವಳ ತಂದೆ ಗೊತ್ತುಮಾಡಿದ್ದ ಮದುವೆಯನ್ನು ಕೃಷ್ಣ ಮುರಿಯುತ್ತಾನೆ. ಆಗ ಮಾವ (ರುಕ್ಮಿಣಿಯ ತಂದೆ) ಮಾಡುವ ಅವಮಾನದಿಂದ ಬೇಸತ್ತು ರುಕ್ಮಿಣಿಗೆ ವರವೊಂದನ್ನು ಹುಡುಕುವ ಸವಾಲು ಹಾಕಿ, ಮದುವೆ ನಿಶ್ಚಯಿಸುತ್ತಾನೆ. ಆದರೆ ರುಕ್ಮಿಣಿ ಇಲ್ಲದೆ ಬದುಕುವುದು ಕೃಷ್ಣನಿಗೆ ಸಾಧ್ಯವೇ? ರುಕ್ಮಿಣಿಯ ಭಾವನೆಗಳೇನು?

ಸರಳಾತಿಸರಳ ಕಥೆ, ಪ್ರೆಡಿಕ್ಟೆಬಲ್ ಪ್ಲಾಟ್ ಉಳ್ಳ ಈ ಸಿನೆಮಾವನ್ನು ರಿಮೇಕ್ ಮಾಡುವ ಉಚಿತತೆ ಒಂದು ಕಡೆಗೆ ಕಾಡಿದರೆ, ಭಾರತೀಯ ಚಿತ್ರರಂಗದಲ್ಲಿ ಪುನರಾವರ್ತಿತವಾಗಿ ಬಳಕೆಯಾಗಿರುವ ಈ ರೀತಿಯ ಕಥೆಯನ್ನು ಮೂಲದಲ್ಲಾದರೂ ಮತ್ತೆ ಹೇಳಿರುವುದೇಕೆ ಎಂಬ ಪ್ರಶ್ನೆ ಕೂಡ ಮೂಡದೆ ಇರದು. ಉಯ್ಯಾಲೆಯನ್ನು ಹಿಂದಕ್ಕೆ ಮುಂದಕ್ಕೆ ಜೀಕಬಹುದಷ್ಟೇ! ಅದು ಓಲಾಡುವ ವೇಗ ಬದಲಾಗಬಹುದು ಆದರೆ ರೀತಿ ಬದಲಾಗುವುದಿಲ್ಲ. ಹದಿಹರೆಯದ ಅವ್ಯಕ್ತ ಪ್ರೇಮ, ಪೋಷಕರ ಘರ್ಷಣೆ, ಕುಟುಂಬಗಳ ವರ್ಗ ಭಿನ್ನತೆಯನ್ನು ಕುರಿತ ಕಥೆಯನ್ನು ನಿರ್ದೇಶಕ ಮತ್ತೆ ಜೀಕಿದ್ದಾರೆ. ನಾಯಕ ತನ್ನ ಜೀವನದ ಬಗ್ಗೆ ಹೇಳಿಕೊಳ್ಳುವ ಸ್ವಗತದಿಂದ ಆರಂಭವಾಗುವ ಚಿತ್ರ ಮೊದಲಾರ್ಧದಲ್ಲಿ ಯಾವುದೇ ಪ್ರಮುಖ ಘಟನೆಗಳಿಲ್ಲದೆ ಮುಂದುವರೆಯುತ್ತದೆ. ಪ್ರೇಕ್ಷಕರು ಸುಲಭವಾಗಿ ನಿರೀಕ್ಷಿಸಿದಂತೆ ಮಧ್ಯಂತರಕ್ಕೆ ಒಂದು ತಿರುವು ಸಿಕ್ಕಿ, ನಾಯಕಿ ನಾಯಕನ ಮನೆ ಹೊಕ್ಕಿ, ನಂತರ ಇನ್ನೊಂದಷ್ಟು ಘಟನೆಗಳು ನಡೆದು ಕೊನೆಗೆ ಎಲ್ಲವೂ ಸುಖಾಂತ್ಯದಲ್ಲಿ ಅಂತ್ಯವಾಗುತ್ತದೆ. ಈ ನಡುವೆ ಮೂಡಿಸಬಹುದಾಗಿದ್ದ ಭಾವನಾತ್ಮಕ ಘರ್ಷಣೆಗಳಿಗೂ ನೀಡಿರುವ ಸಮಯ ಕಡಿಮೆಯೇ! ಬಜಾರಿ ಪಾತ್ರದಲ್ಲಿ ಅಮೂಲ್ಯ ಸೊಗಸಾಗಿ ನಟಿಸಿದ್ದಾರೆ, ಅಜೇಯ ರಾವ್ ಕೂಡ ಎಂದಿನಂತೆ ಲೀಲಾ ಜಾಲವಾಗಿ ನಟಿಸಿದ್ದಾರೆ. ನಾಯಕಿಯ ತಂದೆಯ ಪಾತ್ರದಲ್ಲಿ ಶೋಭರಾಜ್ ಎಂದಿನ ಆರ್ಭಟದ ನಟನೆ ಮುಂದುವರೆಸಿದ್ದು, ಇಷ್ಟೊಂದು ಆರ್ಭಟ ಬೇಕೆ ಎಂದೆನಿಸುತ್ತದೆ. ಹಿನ್ನೆಲೆ ಸಂಗೀತ ಸಿನೆಮಾದುದ್ದಕ್ಕೂ ಬಹುತೇಕವಾಗಿ ಕರ್ಕಶವಾಗಿ ಕೇಳಿಸುವುದಲ್ಲದೆ, ಎಗ್ಗಿಲ್ಲದ ಮಾತಿನ ವರಸೆಗಳಿಂದ ಇಡೀ ಸಿನೆಮಾ 'ಲೌಡ್' ಎಂದೆನಿಸುತ್ತದೆ. ಶ್ರೀಧರ್ ವಿ ಸ್ಂಭ್ರಮ್ ಅವರ ಸಂಗೀತದಲ್ಲಿ ಮೂಡಿರುವ ಹಾಡುಗಳು ಕೂಡ ವಿಪರೀತ 'ಲೌಡ್' ಎನಿಸುವುದಲ್ಲದೆ, ಸಾಹಿತ್ಯ ಕಿವಿಯ ಮೇಲೆ ಬೀಳುವ ಸಂಭವವೇ ಕಡಿಮೆ. ಸಿನೆಮಾಗೆ ತುಸು ಜೀವ ತುಂಬುವುದು ಜಗದೀಶ್ ವಾಲಿ ಅವರ ಸಿನೆಮ್ಯಾಟೋಗ್ರಫಿ ಮತ್ತು ಕೆ ಎಂ ಪ್ರಕಾಶ್ ಅವರ ಸೊಗಸಾದ ಸಂಕಲನ. ಚಿಕ್ಕಮಗಳೂರಿನ ಪ್ರಾಕೃತಿಕ ಸೌಂದರ್ಯ ಸೆರೆಹಿಡಿಯುವುದಲ್ಲಿ ಮತ್ತು ಮೂಡ್ ಗಳಿಗೆ ತಕ್ಕಂತಹ ಚಿತ್ರೀಕರಣ ಮಾಡುವುದರಲ್ಲಿ ಜಗದೀಶ್ ಸಫಲರಾಗಿದ್ದಾರೆ. ಒಟ್ಟಿನಲ್ಲಿ ನಿರ್ದೇಶಕ ಸತ್ವವಿಲ್ಲದ ಕಥೆಯೊಂದನ್ನು ಮರುಸೃಷ್ಟಿಸಲು ಹೋಗಿ, ಅಬ್ಬರವಾಗಿಸಿ ಬೇಸರ ಮೂಡಿಸುತ್ತಾರೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com