ಆರ್ ಜಿ ವಿ ಕೊಂದ ವೀರಪ್ಪನ್

ಆರ್ ಜಿ ವಿ ಎಂಬ ಕಲಾವಿದನನ್ನು (ಭೌತಿಕವಾಗಲ್ಲ) ದಿವಂಗತ ವೀರಪ್ಪನ್ ಕೊಂದಿದ್ದರೆ ಹಾಗೆಯೇ ಆರ್ ಜಿ ವಿ ಕೂಡ ವೀರಪ್ಪನ್ ನನ್ನು ತನ್ನದೇ ಸಿನಿಮೀಯ ರೀತಿಯಲ್ಲಿ ಕೊಂದಿದ್ದಾರೆ
ಕಿಲ್ಲಿಂಗ್ ವೀರಪ್ಪನ್ ಸಿನೆಮಾ ವಿಮರ್ಶೆ
ಕಿಲ್ಲಿಂಗ್ ವೀರಪ್ಪನ್ ಸಿನೆಮಾ ವಿಮರ್ಶೆ

ವೀರಪ್ಪನ್ ಬಗೆಗೆ ಕನ್ನಡದಲ್ಲಿ ಈಗಾಗಲೇ ಎರಡು ಸಿನೆಮಾಗಳು ಬಂದುಹೋಗಿವೆ. ಅದರಲ್ಲಿ ಎ ಎಂ ಆರ್ ರಮೇಶ್ ಅವರ 'ಅಟ್ಟಹಾಸ' ಗಟ್ಟಿಯಾಗಿ ನಿಂತ ಚಿತ್ರ. ಇವುಗಳ ಸಾಲಿಗೆ ಈಗ ಹೊಸ ಸೇರ್ಪಡೆ ರಾಮ್ ಗೋಪಾಲ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್'. ಬಾಲಿವುಡ್ ನಲ್ಲಿ ಸತತ ವಿಫಲ ಪ್ರಯತ್ನಗಳಿಂದ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಆರ್ ಜಿ ವಿ ಅವರಿಗೆ ಶಿವರಾಜ್ ಕುಮಾರ್ ನಾಯಕತ್ವದ ಈ ಚಿತ್ರ ಕೈ ಹಿಡಿಯುವುದೇ? ವೀರಪ್ಪನ್ ಬಗೆಗೆ ಇತರ ಚಿತ್ರಗಳು ನೀಡದ ಥ್ರಿಲ್-ರೋಚಕತೆಯನ್ನು 'ಕಿಲ್ಲಿಂಗ್ ವೀರಪ್ಪನ್'ಗೆ ನೀಡಲು ಸಾಧ್ಯವಾಗಿದೆಯೇ?

ಇಲ್ಲಿಯವರೆಗೂ ವೀರಪ್ಪನ್ ನನ್ನು ಹಿಡಿಯಲು ಹಲವಾರು ತಂಡಗಳು ವಿಫಲವಾಗಿರುವಾಗ ಈಗ ವಿಶೇಷವಾಗಿ ನಿಯೋಜನೆಯಾಗಿರುವ ಎಸ್ ಟಿ ಎಫ್ ಅಧಿಕಾರಿಗೆ (ಶಿವರಾಜ್ ಕುಮಾರ್), ವೀರಪ್ಪನ್ ನನ್ನು ಕಾಡಿಗೆ ನುಗ್ಗಿ ಹೊಡೆಯಲು ಅಸಾಧ್ಯ, ಅವನನ್ನು ನಾಡಿಗೆ ಕರೆಸಿ ಹೊಡೆಯಬೇಕು ಎಂಬ ಅರಿವು ಮೂಡಿದಾಗ ವೀರಪ್ಪನನ್ನು ಹೇಗೆ ಹತ್ಯೆಗಯ್ಯುತ್ತಾನೆ?

ಈಗಾಗಲೇ ರಮೇಶ್ ಅವರ 'ಅಟ್ಟಹಾಸ' ನೋಡಿದ ಪ್ರೇಕ್ಷಕನಿಗೆ ಆರ್ ಜಿ ವಿ ಅವರ 'ಕಿಲ್ಲಿಂಗ್ ವೀರಪ್ಪನ್' ನಿರಾಸೆ ಹುಟ್ಟಿಸದೆ ಇರದು. ರಮೇಶ್ ಅವರ ಸಿನೆಮಾವಾಗಲೀ ಆರ್ ಜಿ ವಿ ಅವರ ಸಿನೆಮಾವಾಗಲೀ, ನೈಜ ಕಥನವೆಂಬುದಿಲ್ಲ ಎಂದು ತಿಳಿದ ಮೇಲೆಯೂ, ಅಟ್ಟಹಾಸ ಹೆಚ್ಚು ನೈಜ ಎನಿಸುವುದು ಆ ನಿರ್ದೇಶಕನ ಶಕ್ತಿ. ಅಟ್ಟಹಾಸದಲ್ಲಿ ನಮ್ಮ ಅಪನಂಬಿಕೆಯನ್ನು ಹೊಡೆಯುವಂತಹ ನಿರೂಪಣೆ ಮತ್ತು ಕಥೆ ಇದ್ದರೆ ಅಪನಂಬಿಕೆಯನ್ನು ಹೆಚ್ಚಳ ಮಾಡುವ ಕಥೆ ಹೆಣೆದು, ಅತಿ ಹೆಚ್ಚಿನ ಪಾತ್ರಗಳನ್ನು ಸೃಷ್ಟಿಸಿ, ನಿರೂಪಣೆಯಲ್ಲಿ ಹಿರೋಯಿಸಂ ವೈಭವೀಕರಿಸಿ, ಕಲ್ಪನೆ, ವಾಸ್ತವ ಮತ್ತು ನಂಬಿಕೆಯ ಅಂತರವನ್ನು ದೂರ ಮಾಡುತ್ತಾ ಹೋಗುತ್ತಾರೆ ಆರ್ ಜಿ ವಿ. ವೀರಪ್ಪನ್ ಪಾತ್ರಧಾರಿ (ಸಂದೀಪ್ ಭಾರದ್ವಾಜ್) ಅವರ ಮೇಕೋವರ್ ಮತ್ತು ಹಾವ ಭಾವಗಳು ಸಿನೆಮಾದ ಗಟ್ಟಿ ಅಂಶಗಳಾದರೂ, ಅವರು ಸಂಬಾಷಣೆ ದಾಟಿಸುವ ದಾಟಿ ಮಾತ್ರ ಸಪ್ಪೆ! ಎಸ್ ಟಿ ಎಫ್ ಅಧಿಕಾರಿಯಾಗಿ ಶಿವರಾಜ್ ಕುಮಾರ್ ಒಳ್ಳೆಯ ಪ್ರದರ್ಶನ ನೀಡಲು ಪ್ರಯತ್ನ ಪಟ್ಟಿದ್ದರು, ಮತ್ತೆ ಅವರಿಗೆ ಬರೆದ ಸಂಭಾಷಣೆ ಕೆಲವೊಮ್ಮೆ ಅನಗತ್ಯ ಮತ್ತು ಪೇಲವ ಎನಿಸುತ್ತದೆ. ಪೊಲೀಸ್ ಇನ್ಫಾರ್ಮರ್ ಶ್ರೇಯಾ(ಪರುಲ್ ಯಾದವ್) ಪಾತ್ರ ಕೂಡ ಪ್ರೇಕ್ಷಕನಿಗೆ ಕನ್ವಿನ್ಸ್ ಮಾಡಲು ವಿಫಲವಾಗುತ್ತದೆ. ಪ್ರತಿ ಕಾರ್ಯಾಚರಣೆಯಲ್ಲೂ ದೃಷ್ಟಿ ಬೊಂಬೆಯಂತ ಕಾಣಿಸಿಕೊಳ್ಳುವ ಈ ಪಾತ್ರ ಪ್ರೇಕ್ಷಕನಿಗೆ ಹಾಸ್ಯಮಯವಾಗಿ ಕಂಡರೆ ಆಶ್ಚರ್ಯವಿಲ್ಲ. ಸಿನೆಮಾದ ಹಲವೆಡೆಗಳಲ್ಲಿ ಹಿನ್ನಲೆ ಸಂಗೀತ ಪ್ಲಸ್ ಎನಿಸಿದರೆ, ಕಾಡಿನ ಜೀವಂತಿಕೆಯನ್ನು ಇನ್ನೂ ಚೆನ್ನಾಗಿ ತೋರಿಸಬಹುದಿತ್ತೇನೋ ಎಂದೆನಿಸುತ್ತದೆ. ವೀರಪ್ಪನ್ ನನ್ನು ಕೊಲ್ಲುವ ಕೊನೆಯ ಕಾರ್ಯಾಚರಣೆಯ ಸೂಕ್ಷ್ಮ ವಿವರಗಳೂ ಕೂಡ ಕಾಣೆಯಾಗಿವೆ ಎಂದೆನಿಸುವುದಲ್ಲದೆ, ವೀರಪ್ಪನ್ ನನ್ನು ಕೊಲ್ಲುವಾಗ ಎಸ್ ಟಿ ಎಫ್ ಅಧಿಕಾರಿಗಳು ಟೀ ಕುಡಿಯುತ್ತ ಕೂತು ವೀಕ್ಷಿಸುವುದು ಆರ್ ಜಿ ವಿ ಅವರ ವಿಪರೀತ ಕಲ್ಪನೆಯನ್ನು ಎತ್ತಿ ತೋರಿಸುತ್ತದೆ!

ಇಷ್ಟೆಲ್ಲದರ ನಡುವೆಯೂ 'ಅಟ್ಟಹಾಸ' ಸಿನೆಮಾಗಿಂತಲೂ ವಿಭಿನ್ನವಾದ ಒಂದು ದೃಷ್ಟಿಕೋನವನ್ನು ಆರ್ ಜಿ ವಿ ಒಳಗೊಳ್ಳಲು ಸಾಧ್ಯವಾಗಿರುವುದೇ ಸಿನೆಮಾದ ನಿಜ ಗಟ್ಟಿತನ. ವೀರಪ್ಪನ್ ನಂತೆಯೇ ಪೊಲೀಸರು ನಡೆಸಿದ ಕೆಲವು ಅನೈತಿಕ ಕೊಲೆಗಳನ್ನು ಅಲ್ಲಲ್ಲಿ ಹೈಲೈಟ್ ಮಾಡುತ್ತಾ ಹೋಗುತ್ತಾರೆ. ಮುಸ್ಲಿಂ ಭೂಗತ ದೊರೆಯೊಬ್ಬ ಇಬ್ಬರೂ (ಪೊಲೀಸ್ ಮತ್ತು ವೀರಪ್ಪನ್) ಕೊಲೆಗಾರರೇ ಎಂದು ಹೇಳುವ ಸನ್ನಿವೇಶ, ವೀರಪ್ಪನ್ ಕಾರ್ಯಾಚರಣೆಯಲ್ಲಿ ಪೊಲೀಸರು ಮುಗ್ಧರ, ಆದಿವಾಸಿಗಳ ಮೇಲೆ ನಡೆಸಿದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಸೂಕ್ಷ್ಮವಾಗಿ (ಅದನ್ನು ಪ್ರತ್ಯೇಕವಾಗಿ ಹೇಳಲು ಸಾಧ್ಯವಾಗಿಲ್ಲ) ಹೇಳಲು ಪ್ರಯತ್ನಿಸಿದ್ದರು, ನಾಯಕನ ಮಾತಿನಿಂದ ಅದನ್ನು ಸಮರ್ಥಿಕೊಳ್ಳುವ ರೀತಿಯಿಂದ ಇದನ್ನು ಪ್ರೇಕ್ಷಕ ಗ್ರಹಿಸಲು ಸಾಧ್ಯವಾಗದ ಅಪಾಯವನ್ನು ಕೂಡ ಒಳಗೊಂಡಿದೆ. ಛಾಯಾಗ್ರಹಣ ಕೂಡ ಸಿನೆಮಾಗೆ ಪೂರಕವಾಗಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ಇವುಗಳ ಹೊರತಾಗಿಯೂ ಹಿರೋಯಿಸಂ ಭಾರದಲ್ಲಿ ನರಳಿ ಮತ್ತು ಆರ್ ಜಿ ವಿ ಕಲ್ಪನೆಯ ವೈಪರೀತ್ಯದಿಂದ ಒಳ್ಳೆಯ ಸಿನೆಮಾ ಅನುಭವವನ್ನು ಹಾಳುಗೆಡುವುತ್ತದೆ.

ನೂರಾರು ಆನೆಗಳನ್ನು, ಪೋಲಿಸರನ್ನು ಕೊಂದ ವೀರಪ್ಪನ್ ಹತ್ಯೆಯಾದ ನಂತರವೂ ಇನ್ನೇನು ಕೊಲ್ಲಬಹುದು ಎಂಬ ವಿಚಿತ್ರ ಪ್ರಶ್ನೆಯನ್ನು ನಾವು ಹಾಕಿಕೊಂಡರೆ  ಆರ್ ಜಿ ವಿ ಎಂಬ ಕಲಾವಿದನನ್ನು (ಭೌತಿಕವಾಗಲ್ಲ) ದಿವಂಗತ ವೀರಪ್ಪನ್ ಕೊಂದಿದ್ದರೆ ಹಾಗೆಯೇ ಆರ್ ಜಿ ವಿ ಕೂಡ ವೀರಪ್ಪನ್ ನನ್ನು ತನ್ನದೇ ಸಿನಿಮೀಯ ರೀತಿಯಲ್ಲಿ ಕೊಂದಿದ್ದಾರೆ. ಇವೆರಡರಿಂದ ಪ್ರೇಕ್ಷಕನ ಸಿನೆಮಾ ಅನುಭವ ಕೂಡ ಹತನಾಗುತ್ತದೆ!



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com