ಕವಿರಾಜಮಾರ್ಗದಲ್ಲಿ ಅನಂತ ಅಚ್ಯುತ ಅಮೂಲ್ಯ

ಒಳ್ಳೆಯ ಬಾಣಸಿಗರು ರುಚಿಕಟ್ಟಾಗಿ, ಪ್ರೀತಿಯಿಂದ ಮಾಡಿ ಬಡಿಸಿರುವ ಈ ಕರೆಯೋಲೆಗೆ ಪ್ರೇಕ್ಷಕರು ಓಗೊಟ್ಟರೆ ಇನ್ನಷ್ಟು ಹೊಸ ಚಿತ್ತಾರಗಳನ್ನು ಕೊಡುವ ನಿರ್ದೇಶಕರಾಗಿ ಕವಿರಾಜ್
ಮದುವೆಯ ಮಮತೆಯ ಕರೆಯೋಲೆ ಸಿನೆಮಾ ವಿಮರ್ಶೆ
ಮದುವೆಯ ಮಮತೆಯ ಕರೆಯೋಲೆ ಸಿನೆಮಾ ವಿಮರ್ಶೆ

ಗೀತರಚನಕಾರನಾಗಿ ಪ್ರಖ್ಯಾತರಾದ ಕವಿರಾಜ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಮದುವೆಯ ಮಮತೆಯ ಕರೆಯೋಲೆ' ಇಂದು ಬಿಡುಗಡೆಯಾಗಿದ್ದು, ನಿರ್ಮಾಪಕರು ಭರವಸೆ ಮೂಡಿಸಿದ್ದ ಭೂರಿ ಭೋಜನದ ಸವಿ ಹೇಗಿದೆ? ಹೊಸದಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಮದುಮಗ ಸೂರಜ್ ಗೌಡ ಭರವಸೆ ಮೂಡಿಸುತ್ತಾರೆಯೇ?

ಎರಡು ಅನ್ಯೋನ್ಯ  ಕುಟುಂಬಗಳು. ಒಂದು ನಿವೃತ್ತ ಪ್ರಾಧ್ಯಾಪಕ ಕೃಷ್ಣೇಗೌಡರದ್ದು (ಅನಂತ್ ನಾಗ್) ಮತ್ತೊಂದು ಆರ್ ಟಿ ಒ ಅಧಿಕಾರಿ ಚಂದ್ರಶೇಖರ್ ಪಾಟಿಲ್ (ಅಚ್ಯುತ್ ಕುಮಾರ್) ಅವರದ್ದು. ಈ ಎರಡು ಕುಟುಂಬಗಳು ನಡೆಸುವ ಹಿತ ಪಿತೂರಿಗೆ, ಪ್ರೀತಿಯಿಂದಲೇ ಬಲಿಯಾಗುವ ಕುಟುಂಬದ ಮಕ್ಕಳಾದ ಖುಷಿ (ಅಮೂಲ್ಯ) ಮತ್ತು ಸೂರಜ್ (ಸೂರಜ್ ಗೌಡ) ಪ್ರೀತಿಯಲ್ಲಿ ಬೀಳುತ್ತಾರೆ. ನಿಶ್ಚಿತಾರ್ಥವು ಮುಗಿಯುತ್ತದೆ. ಆದರೆ ಒಂದು ಸಣ್ಣ ಅಹಮಿಕೆಯ ಘರ್ಷಣೆಯಿಂದ ಉಂಟಾಗುವ ಭಿನ್ನಾಭಿಪ್ರಾಯದಿಂದ ಎರಡು ಕುಟುಂಬಗಳ ನಡುವೆ ಬಿರುಕು ಮೂಡಿ ನಿಶ್ಚಿತಾರ್ಥ ಮುರಿದು ಬೀಳುತ್ತದೆ. ಕೃಷ್ಣೇಗೌಡ ತನ್ನ ಮಗಳು ಖುಷಿಗೆ ಬೇರೆ ಸಂಬಂಧ ನೋಡಿ ಮದುವೆ ನಿಶ್ಚಯ ಮಾಡುತ್ತಾನೆ. ಮುಂದೇನಾಗುತ್ತದೆ? ಈ ಭಿನ್ನಾಭಿಪ್ರಾಯಗಳಿಗೆ ಕಾರಣಗಳೇನು?

ಕುಟುಂಬಗಳ ಬಗ್ಗೆ ಪರಿಚಯ ಮಾಡಿಕೊಡುವ ರಮೇಶ್ ಅರವಿಂದ್ ಅವರ ಕಂಠದಲ್ಲಿ ಮೂಡುವ ಮಾತುಗಳಿಂದ ಆರಂಭವಾದ ಕೆಲವು ಕ್ಷಣಗಳ ನಂತರ ಇದೊಂದು ಅತಿ ಸರಳ, ಪ್ರೆಡಿಕ್ಟೆಬಲ್, ಕ್ಲೀಶೆಯುಕ್ತ ಕಥೆಯ ಸಿನೆಮಾ ಎಂಬ ಅಭಿಪ್ರಾಯ ಮೂಡಿದರೂ, ಇದನ್ನು ಮೀರಿ ಪ್ರೇಕ್ಷಕನ್ನು ಹಿಡಿದಿಡುವ ಶಕ್ತಿ ಹೊಂದಿರುವುದೇ ಸಿನೆಮಾದ ಹೆಗ್ಗಳಿಕೆ.  ಎರಡು ಕುಟುಂಬಗಳ ಮುಖ್ಯಸ್ಥರ ಪಾತ್ರಗಳಲ್ಲಿ ನಟಿಸಿರುವ ಅನಂತನಾಗ್ ಮತ್ತು ಅಚ್ಯುತ್ ಕುಮಾರ್ ಪ್ರೇಕ್ಷಕರನ್ನು ತಮ್ಮ ನಟನೆಯಿಂದ  ಆವರಿಸಿಕೊಂಡುಬಿಡುತ್ತಾರೆ. ಸದಾ ತಮ್ಮ ಗತಕಾಲದ ಕಥೆಗಳಿಂದ ಉಳಿದವರ ತಲೆ ಕೊರೆಯುವ, ಕಾರು ಓಡಿಸುವುದನ್ನು ಕಲಿಯಲು ಪೇಚಾಡಿ ಚಾಲನಾ ಪರೀಕ್ಷೆ ಫೇಲಾಗುವ ಈ ಪ್ರೊಫೆಸರ್ ತಮ್ಮ ಸುಲಲಿತ, ಸುಂದರ ಅಭಿನಯದ ಮೂಲಕ ನಿರ್ದೇಶಕನ ಉಳಿದೆಲ್ಲ ಸಣ್ಣ ಪುಟ್ಟ ತಪ್ಪುಗಳನ್ನು ಕಡೆಗಣಿಸುವಂತೆ ಮಾಡುತ್ತಾರೆ. ಅನ್ಯೋನ್ಯ ಗೆಳೆತನ, ಭಿನಾಭಿಪ್ರಾಯ, ಮತ್ತೆ ಒಂದಾಗುವ ಭಾವನಾತ್ಮಕ  ನಟನೆಯಲ್ಲಿ ಅನಂತನಾಗ್ ಜೊತೆ ಜಿದ್ದಿಗೆ ಬಿದ್ದಿರುವಂತೆ ನಟಿಸಿರುವ ಅಚ್ಯುತ್ ಕುಮಾರ್ ಸಿನೆಮಾದ ಮತ್ತೊಂದು ಆಧಾರ ಸ್ಥಂಬ. ಪಾಟಿಲ್ ಅವರ ಹೆಂಡತಿಯನ್ನು, ಕೃಷ್ಣೇಗೌಡ ಚಾಲನೆ ಮಾಡಿಕೊಂಡು ಆಸ್ಪತ್ರೆಗೆ ಕರೆದೊಯ್ಯುವ ಘಟನೆ ಎಲ್ಲೋ ಸ್ವಲ್ಪ ಜಗ್ಗಿದ್ದಾರಲ್ಲಾ ಎಂದೆನಿಸಿದರೂ ಈ ಇಬ್ಬರ ಮೇರು ನಟರ ನಟನೆಗೆ  ಅದನ್ನು ಮರೆಸಿಬಿಡುವ ಮಾಂತ್ರಿಕ ಶಕ್ತಿ ಇದೆ. ಸಿನೆಮಾಗೆ ಮತ್ತೆರಡು ಅಧಾರಸ್ಥಂಭಗಳಾಗಬೇಕಿದ್ದ ಅಮೂಲ್ಯ ಮತ್ತು ಸೂರಜ್ ಇವರುಗಳಲ್ಲಿ ಅಮೂಲ್ಯ ಪರವಾಗಿಲ್ಲ ಎಂದರೆ ಸೂರಜ್ ತಮ್ಮ ಚೊಚ್ಚಲ ಸಿನೆಮಾದಲ್ಲಿ ಈ ಮೇರು ನಟರ ಮುಂದೆ ಭಯಗೊಂಡಿದ್ದಾರೋ ಎನೋ ಬೇಸರ ಮೂಡಿಸುತ್ತಾರೆ. ಉಳಿದಂತೆ ಶರತ್ ಲೋಹಿತಾಶ್ವ, ಸುಂದರ್, ಶಾಲಿನಿ ಹಾಗು ಉಳಿದೆಲ್ಲ ಹಿರಿಯ ಪೋಷಕ ನಟರು ಅಧ್ಬುತ ನಟನೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವಾಲಗದ ಹಿತವಿಲ್ಲದ ಬೇಸರ ತರಿಸುವ ಹರಿಕೃಷ್ಣ ಸಂಗೀತದಲ್ಲಿ ಮೂಡಿರುವ ಸಂಗೀತ ನಿರಾಸೆ ತಂದರೂ ಇದನ್ನು ಸರಿದೂಗಿಸುವುದು ಕೆ ಎಸ್ ಚಂದ್ರಶೇಖರ್ ಅವರ ಅತ್ಯುತ್ತಮ ಸಿನೆಮ್ಯಾಟೋಗ್ರಫಿ. ಕವಿರಾಜ್ ಕಥೆಯ ಆಯ್ಕೆಯಲ್ಲಿ ತುಸು ಎಡವಿದ್ದಾರೆ ಎಂದೆನಿಸಿದರು, ಕುಟುಂಬಗಳ ನಡುವಿನ ಘರ್ಷಣೆಗೆ ಇನ್ನೂ ಒಳ್ಳೆಯ ಘಟನೆ-ಕಾರಣ ಹೆಣೆಯಬಹುದಿತ್ತು ಎಂಬೆಲ್ಲಾ ಕೊರತೆಗಳ ನಡುವೆಯೂ, ಅತ್ಯುತ್ತಮ ಸಂಭಾಷಣೆ ಮತ್ತು ಒಳ್ಳೆಯ ಹಾಸ್ಯ ಹೆಣೆಯುವ ಮೂಲಕ, ಯಾವುದನ್ನು ಅತಿರೇಕಕ್ಕೆ ಕೊಂಡೊಯ್ಯದೆ ಪ್ರೀತಿಯ ಕಥೆ ಹೇಳುವ ಕವಿರಾಜ್ ತಮ್ಮ ಚೊಚ್ಚಲ ಸಿನೆಮಾದಲ್ಲಿ ಯಶಸ್ವಿಯಾಗಿದ್ದಾರೆ.

ದೊಡ್ಡ ದೊಡ್ಡ ಮದುವೆ ಸಮಾರಂಭಗಳೇ ಹಾಗೆ. ಮದುವೆ ಗಂಡು-ಹೆಣ್ಣಿಗಿಂತಲೂ ಮದುವೆ ಮಾಡುವ ಕುಟುಂಬಗಳು, ಆ ಕುಟುಂಬಗಳ ಹಿರಿ ತಲೆಗಳ-ಮುಖ್ಯಸ್ಥರ ನಿರ್ಧಾರಗಳು, ಅವರ ಜಬರ್ದಸ್ತಿಗಳೇ ಮುಖ್ಯವಾಗಿಬಿಡುತ್ತವೆ. ಈ ಸಿನೆಮಾದಲ್ಲೂ ಎರಡು ಹಂತಗಳಲ್ಲಿ ಇದು ನಡೆದಿದೆ. ಒಂದು ಹಂತದಲ್ಲಿ ಸಿನೆಮಾದ ಸ್ಕ್ರಿಪ್ಟ್, ನಟನೆ, ನಿರೂಪಣೆಯಲ್ಲಿ ನಾಯಕ ನಾಯಕಿಯರಿಗಿಂತಲೂ ಅವರ ಪೋಷಕರ ಪಾತ್ರ ಮಾಡಿರುವ ಅನಂತ್ ನಾಗ್ ಮತ್ತು ಅಚ್ಯುತ್ ಕುಮಾರ್ ಸ್ಕ್ರೀನ್ ಸಮಯದ ಸಿಂಹಪಾಲು ಪಡೆದಿರುವುದು ಸಿನೆಮಾ ಗುಟ್ಟಮಟ್ಟದ ದೃಷ್ಟಿಯಿಂದ ಅತ್ಯುತ್ತಮ ಮಾರ್ಗದಲ್ಲಿ ಸಾಗಿದೆ ಹಾಗೂ  ಮತ್ತೊಂದು ಹಂತದಲ್ಲಿ ಸೃಷ್ಟಿಕರ್ತ-ನಿರ್ದೇಶಕ ಕವಿರಾಜ್ ಸಿನೆಮಾ ಇದು ಎನ್ನುವುದಕ್ಕಿಂತಲೂ ದರ್ಶನ್ ಅವರ ನಿರ್ಮಾಣ ಸಂಸ್ಥೆ ಇದನ್ನು ನಿರ್ಮಿಸಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಪ್ರಚಾರದ ದೃಷ್ಟಿಯಿಂದ ಒಳ್ಳೆಯ ಮಾರ್ಗವೇ. ಎಲ್ಲರ ಮದುವೆಯ ಊಟವು ಒಂದೇ ರೀತಿಯದ್ದು ವಿವಿಧ ಭಕ್ಷ್ಯ  ಭೋಜನಗಳಿರುತ್ತವೆ ಎಂದಷ್ಟೇ ಆದರೂ, ಒಳ್ಳೆಯ ಬಾಣಸಿಗರು ರುಚಿಕಟ್ಟಾಗಿ, ಪ್ರೀತಿಯಿಂದ ಮಾಡಿ ಬಡಿಸಿರುವ ಈ ಕರೆಯೋಲೆಗೆ ಪ್ರೇಕ್ಷಕರು ಓಗೊಟ್ಟರೆ  ಇನ್ನಷ್ಟು ಹೊಸ ಚಿತ್ತಾರಗಳನ್ನು ಕೊಡುವ ನಿರ್ದೇಶಕರಾಗಿ ಕವಿರಾಜ್ ಬೆಳೆಯುವುದರಲ್ಲಿ ಅನುಮಾನವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com