ಪ್ರೀತಿಯನ್ನು ನಿವೇದಿಸಿಕೊಳ್ಳುವ ದಿನವೇ ತನ್ನ ಪ್ರೇಯಸಿ ಕನ್ನಿಕಾ (ಸುಶ್ಮಿತಾ ಜೋಶಿ) ಮತ್ತೊಬ್ಬನ ಜೊತೆಗೆ ಪ್ರಣಯಿಸುತ್ತಿರುವುದನ್ನು ಕಾಣುವ ಮಾಜಿ ಸೈನಿಕನ ಮಗ ದೇಶಭಕ್ತ ಆಂಟನಿಗೆ (ವಿನಯ್ ರಾಜಕುಮಾರ್) ದಿಕ್ಕು ತೋರುವುದು ಬಹುಮಹಡಿ ಕಟ್ಟಡ. ಅಲ್ಲಿಂದ ಬಿದ್ದರೂ ಜಾಲರಿಗೆ ಸಿಕ್ಕಿ ಉಳಿದುಕೊಂಡು, ಆತ್ಮಹತ್ಯೆ ವಿಫಲವಾದಾಗ ರೈಲು ಹಳಿ ಕಾಣುತ್ತದೆ. ಚಿತ್ತವಿಲ್ಲದ ಮದುವೆಯಿಂದ ತಪ್ಪಿಸಿಕೊಂಡು ಓಡಿ ಬಂದಿರುವಂತೆ ಕಾಣುವ (ಆಕೆ ಧರಿಸಿರುವ ಬಟ್ಟೆಯಿಂದಲೇ ನಾಯಕನಟ ಪತ್ತೆಹಚ್ಚುತ್ತಾನೆ!), ತನ್ನ ಪ್ರಿಯತಮನನ್ನು ಅರಸುತ್ತಿರುವ ಯಶು (ರುಕ್ಷರ್ ಮೀರ್) ಕಾಣಸಿಗುವದು ಕೂಡ ರೈಲ್ವೆ ನಿಲ್ದಾಣದಲ್ಲಿಯೇ. ಅವಳನ್ನು ಕೈಚೀಲ ಕಳ್ಳರಿಂದ ತಪ್ಪಿಸಿದ ನಂತರ ಸಂತ್ರಸ್ತ ನಾಯಕನಿಗೆ ಕೆಲವೇ ನಿಮಿಷಗಳಲ್ಲಿ ಹೊಸ ಹುಡುಗಿಯ ಮೇಲೆ ಪ್ರೀತಿ ಹೂಂಕರಿಸುತ್ತದೆ. ಹೀಗೆ ಮೊದಲಾರ್ಧ ಕನಸಿನ ಹಾಡುಗಳಿಂದ, ಮುಗ್ಧ-ಸಭ್ಯ ಆಂಟನಿ ಮತ್ತು ಯಶು ನಡುವೆ ಒಂದಷ್ಟು ಸಂಭಾಷಣೆ ಮೂಲಕ ಮಧ್ಯಂತರದವರೆಗೆ ಮುಂದುವರೆಯುವ ಸಿನೆಮಾ, ಮಧ್ಯಂತರಕ್ಕೆ ಪ್ರೇಕ್ಷಕನಿಗೆ ಒಂದು ಅನಿರೀಕ್ಷಿತ-ಭಾರಿ ತಿರುವು ನೀಡುತ್ತದೆ.