ಅರ್ಧವರ್ಷಕ್ಕೆ ಸಂಖ್ಯೆಯಲ್ಲೇನೋ ಸೆಂಚ್ಯುರಿ; ಗುಣಮಟ್ಟ ಮತ್ತು ಪ್ರದರ್ಶನದಲ್ಲಿ?

ಕನ್ನಡ ಚಿತ್ರರಂಗದಲ್ಲಿ ಇಷ್ಟು ವೇಗದಲ್ಲಿ ಸಿನೆಮಾಗಳು ಬಿಡುಗಡೆಯಾಗಿದ್ದು ಇದೆ ಮೊದಲೇನೋ! ಅರ್ಧವರ್ಷದ ಅಂತ್ಯಕ್ಕೆ ಈಗಾಗಲೇ 100 ಕ್ಕೂ ಹೆಚ್ಚು ಸಿನೆಮಾಗಳು ಬಿಡುಗಡೆಯಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕನ್ನಡ ಚಿತ್ರರಂಗದಲ್ಲಿ ಇಷ್ಟು ವೇಗದಲ್ಲಿ ಸಿನೆಮಾಗಳು ಬಿಡುಗಡೆಯಾಗಿದ್ದು ಇದೆ ಮೊದಲೇನೋ! ಅರ್ಧವರ್ಷದ ಅಂತ್ಯಕ್ಕೆ ಈಗಾಗಲೇ 100 ಕ್ಕೂ ಹೆಚ್ಚು ಸಿನೆಮಾಗಳು ಬಿಡುಗಡೆಯಾಗಿವೆ. (2015 ರಲ್ಲಿ ಬಿಡುಗಡೆಯಾದ ಒಟ್ಟು ಚಿತ್ರಗಳ ಸಂಖ್ಯೆ ಸುಮಾರು 137). ಈ ಸಂಖ್ಯೆಯ ಸುಗ್ಗಿಯ ಜೊತೆಗೆ ಗುಣಮಟ್ಟದಲ್ಲಿ ಸುಧಾರಣೆಯಾಗಿದೆಯೇ ಎಂಬ ಪ್ರಶ್ನೆ ಹಾಕಿಕೊಳ್ಳುವುದು ಎಷ್ಟು ಸಮಂಜಸವೋ ತಿಳಿಯದು. ಆದರೆ ಸಿನೆಮಾಗಳ ಸಂಖ್ಯೆ ಹೆಚ್ಚಿದಂತೆ ಸಾರ್ವಕಾಲಿಕತೆ ಉಳಿಸಿಕೊಳ್ಳುವ ಸಿನೆಮಾ ಸಂತತಿ ಹೆಚ್ಚಾದರೆ ಕಲೆಗೂ, ಕಲಾವಿದರಿಗೂ ಹಾಗೂ ಕಲಾರಾಧಾರಕರಿಗೂ ಸುವರ್ಣ ಕಾಲ ಒದಗಿ ಬರಬಹುದೇನೋ ಎಂಬ ನಿರೀಕ್ಷೆಯಲ್ಲಿ ಈ ಅರ್ಧವಾರ್ಷಿಕ ಅವಲೋಕನ.
ಕನ್ನಡ ಚಿತ್ರರಂಕಕ್ಕೆ 2016 ರ ಪ್ರಾರಂಭ ಭಾರಿ ದೊಡ್ಡ ಮಟ್ಟದಲ್ಲಿಯೇ ಆದದ್ದು ಶಿವರಾಜ್ ಕುಮಾರ್ ಅಭಿನಯದ, ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಿಂದ. ಮೊದಲ ಬಾರಿಗೆ ಆರ್ ಜಿ ವಿ ಕನ್ನಡ ಚಲನಚಿತ್ರ ನಿರ್ದೇಶಿಸಿದ್ದಾರೆ ಎಂಬ ಅಪಾರ ಪ್ರಚಾರ ಮತ್ತು ನಿರೀಕ್ಷೆಯ ನಡುವೆ ಸಿನೆಮಾ ಬಿಡುಗಡೆಯಾದರೂ, ಸಾಮಾನ್ಯ ಮಟ್ಟಕ್ಕೆ ಸಿನೆಮಾ ಯಶಸ್ವಿಯಾಯಿತು. ಅದೇ ವಾರ ತೆರೆ ಕಂಡ ಕೋಮಲ್ ಅಭಿನಯದ ತೆಲುಗು ಸಿನೆಮಾದ ರಿಮೇಕ್ 'ಕಥೆ ಚಿತ್ರಕತೆ ನಿರ್ದೇಶನ ಪುಟ್ಟಣ್ಣ' ತುಸು ಗಮನ ಸೆಳೆಯಿತಾದರೂ ಪ್ರದರ್ಶನಕ್ಕೆ ಬಂದಾಗ ಮೋಡಿ ಮಾಡಿದ್ದೇನಿಲ್ಲ. ಜನವರಿ ಮೂರನೇ ವಾರದಲ್ಲಿ ಬಿಡುಗಡೆಯಾದ ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ಅಭಿನಯದ 'ರಿಕ್ಕಿ' ಕಥಾ ವಸ್ತುವಿಗಾಗಿ(ನಕ್ಸಲ್ ಹಿನ್ನಲೆಯ) ಗಮನ ಸೆಳೆಯಿತು. ಗೀತ ಸಾಹಿತಿ ಕವಿರಾಜ್ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ', ಎಸ್ ಡಿ ಅರವಿಂದ್ ನಿರ್ದೇಶನದ 'ಲಾಸ್ಟ್ ಬಸ್' ಸಿನೆಮಾಗಳು ಕೂಡ ಒಂದು ಮಟ್ಟಕ್ಕೆ ಸದ್ದು ಮಾಡಿದ ಚಿತ್ರಗಳು. ಜನಪ್ರಿಯ ನಟ ದರ್ಶನ್ ನಟನೆಯ 'ವಿರಾಟ್' ನಿರೀಕ್ಷೆಯ ಮಟ್ಟಕ್ಕೆ ವಿರಾಜಿಸದೆ ಮರೆಯಾಗಿ ಹೋದದ್ದು ವಿಶೇಷ! ಮೊದಲ ತಿಂಗಳೇ 11 ಸಿನೆಮಾಗಳು ಬಿಡುಗಡೆಯಾಗಿ ಪ್ರಾರಂಭಕ್ಕೆ ಗದ್ದಲ ಸೃಷ್ಟಿಸಿದ್ದು ನಿಜ!
ಫೆಬ್ರವರಿಯಲ್ಲಿ ಮತ್ತೆ ಶಿವರಾಜ್ ಕುಮಾರ್ ಅವರದ್ದೇ ಮಿಂಚಿನ ಓಟ. ಎರಡನೇ ವಾರದಲ್ಲಿ ಬಿಡುಗಡೆಯಾದ 'ಆಪ್ತಮಿತ್ರ' ಖ್ಯಾತಿಯ ವಾಸು ನಿರ್ದೇಶನದ 'ಶಿವಲಿಂಗ' ಮತ್ತದೇ ಶೈಲಿಯ ಚಿತ್ರಕಥೆಗಾಗಿ ವಿಮರ್ಶಕರು ಹೆಚ್ಚೇನೂ ಮೆಚ್ಚದೆ ಹೋದರು ಶಿವಣ್ಣ ಜನಮೆಚ್ಚಿದ ನಟನಾಗಿ ಮುಂದುವರೆದು 'ಶಿವಲಿಂಗ' ಶತದಿನ ಪೂರೈಸಿದ ಸಿನೆಮಾವಾಯಿತು. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದ್ದ ಬಿ ಸುರೇಶ್ ನಿರ್ದೇಶನದ 'ದೇವರ ನಾಡಲ್ಲಿ', ದಿನೇಶ್ ಬಾಬು ನಿರ್ದೇಶನದ 'ಪ್ರಿಯಾಂಕಾ' ಮತ್ತು ದಯಾಳ್ ಪದ್ಮನಾಭ್ ಅವರ 'ಆಕ್ಟರ್' ಬಿಡುಗಡೆ ಕಂಡರೂ ಸಿನಿಮಾಮಂದಿರಗಳಲ್ಲಿ ಜನ ಅವುಗಳನ್ನು ಕಂಡದ್ದು ವಿರಳ. ಕಳೆದ ವರ್ಷ ತಾವೇ ಸಿನೆಮಾವೊಂದನ್ನು ನಿರ್ಮಿಸಿ ಭಾರಿ ಯಶಸ್ಸು ಕಂಡಿದ್ದ ಅಜಯ್ ಕೃಷ್ಣ ರಾವ್ ಅವರ 'ಕೃಷ್ಣ ರುಕ್ಕು' ಸೋಲು ಕಂಡಿತಲ್ಲದೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಕೊನೆಗೂ ಬಿಡುಗಡೆಯ ಭಾಗ್ಯ ಕಂಡ 'ಭಾಗ್ಯರಾಜ್'ಗೆ ಗಳಿಕೆ ಭಾಗ್ಯ ಸಿಗಲಿಲ್ಲ. 29 ದಿನಗಳ ಫೆಬ್ರವರಿಯಲ್ಲಿ 22 ಚಿತ್ರಗಳು ಬಿಡುಗಡೆಯಾದವೆಂದರೆ ಸಂತಸಗೊಳ್ಳಬೇಕೋ-ಆತಂಕಗೊಳ್ಳಬೇಕೋ ತಿಳಿಯದ ವಾತಾವಾರಣ ಸೃಷ್ಟಿಯಾಗಿತ್ತು. ಕಂಡು ಕಾಣೆಯಾದ ಸಿನೆಮಾಗಳಲ್ಲಿ ಎ ಎಂ ಆರ್ ರಮೇಶ್ ನಿರ್ದೇಶನದ, ಅರ್ಜುನ್ ಸರ್ಜಾ ನಟಿಸಿದ್ದ 'ಗೇಮ್' ಕೂಡ ಒಂದು!
ಮಾರ್ಚ್ ಗಾಗಿ ಸಿನೆರಸಿಕರು ಕಾಯುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ. ಕಾರಣ ಸುನಿಲ್ ಕುಮಾರ್ ದೇಸಾಯಿ '..ರೇ' ಮೂಲಕ ಹಿಂದಿರುಗಲಿದ್ದಾರೆ ಎಂಬುದು ಹಾಗು ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆ 'ಕಿರಗೂರಿನ ಗಯ್ಯಾಳಿಗಳು' ಸಿನೆಮಾ ಆಗಿ ಬಿಡುಗಡೆಯಾಗಲಿದ್ದಕ್ಕೆ. ಅನಂತ ನಾಗ್, ರಮೇಶ್, ಲೋಕನಾಥ್ ಹೀಗೆ ಬಹುತಾರಾಗಣವಿದ್ದರೂ ಭರವಸೆ ಮೂಡಿಸಲು ಸುನಿಲ್ ಕುಮಾರ್ ದೇಸಾಯಿ ಅವರು ಸೋತರೆ, ಸುಮನಾ ಕಿತ್ತೂರು ನಿರ್ದೇಶನದ 'ಕಿರಗೂರಿನ ಗಯ್ಯಾಳಿಗಳು' ಮಿಶ್ರ ಪ್ರತಿಕ್ರಿಯೆ ಗಳಿಸಿ, ಪ್ರಮುಖ ಸಿನೆಮಾವಾಗಿ ಹೊರಹೊಮ್ಮಿತು. ವಿನೋದ್ ಪ್ರಭಾಕರ್ ನಟನೆಯ 'ಟೈಸನ್', ಸುನಿ ನಿರ್ದೇಶನದ 'ಸಿಂಪಲ್ ಆಗ್ ಇನ್ನೊಂದ್ ಲವ್ ಸ್ಟೋರಿ', ವಿಜಯ್ ರಾಘವೇಂದ್ರ ನಟನೆಯ 'ರಣತಂತ್ರ', ಗೌರೀಶ್ ಅಕ್ಕಿ ನಿರ್ದೇಶನದ 'ಸಿನೆಮಾ ಮೈ ಡಾರ್ಲಿಂಗ್', ಪವನ್ ಒಡೆಯರ್ ನಿರ್ದೇಶನ 'ಜೆಸ್ಸಿ' ಸಿನೆಮಾಗಳು ತೆರೆ ಕಾಣುವುದಕ್ಕೆ ಮುಂಚಿತವಾಗಿ ಒಳ್ಳೆಯ ಪ್ರಚಾರ ಪಡೆದವಾದರೂ ಬಿಡುಗಡೆಯ ನಂತರದ್ದ ಮಾತು ಮಾತ್ರ ಬೇರೆ. ಫೆಬ್ರವರಿ ತಿಂಗಳಗೆ ಹಿಂದೆ ಬೀಳದೆ ಮಾರ್ಚ್ ತಿಂಗಳಲ್ಲೂ ತೆರೆ ಕಂಡದ್ದು 22 ಚಿತ್ರಗಳು!
ಏಪ್ರಿಲ್ ತಿಂಗಳಲ್ಲಿ ಕೂಡ ನಿರೀಕ್ಷೆಗಳಿಗೆ ನಿರಾಸೆಯ ತಣ್ಣೀರೆರಚಿದ ಸಿನಿಮಾಗಳೇ ಹೆಚ್ಚು. ಟ್ರೇಲರ್ ನಿಂದ ಭರವಸೆ ಮೂಡಿಸಿದ್ದ 'ಹಾಫ್ ಮೆಂಟ್ಲು', 'ಊಟಿ' ಹಾಗೂ ಹಾಸ್ಯದ ನೀರಿಕ್ಷೆಯಲ್ಲಿ ಮೂಡಿ ಬಂದ ಎ ಹರ್ಷ ನಿರ್ದೇಶನದ, ಶರಣ್ ಅಭಿನಯದ 'ಜೈ ಮಾರುತಿ 800' ನಿರೀಕ್ಷೆಯ ಭಾರದಲ್ಲಿ ಕುಸಿದು ಮಾಯವಾದರೆ, ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗಿ ಪರಭಾಷಾ ನಟರಿಂದ ಹಾಡಿಸಿದ್ದನ್ನೇ ಮುಂದು ಮಾಡಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಪುನೀತ್ ರಾಜಕುಮಾರ್ ಅಭಿನಯದ ರಿಮೇಕ್ ಚಿತ್ರ 'ಚಕ್ರವ್ಯೂಹ'ದ ಚಕ್ರ ಕೂಡ ಹೆಚ್ಚು ದಿನ ತಿರುಗಲಿಲ್ಲ ಹಾಗೂ ಪ್ರೇಕ್ಷಕರ ಹಿಂಜರಿಕೆಯನ್ನು ಭೇಧಿಸಿ ಮನದೊಳಗೆ ಹೊಕ್ಕಲೂ ಇಲ್ಲ. 'ದ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ' ಕೂಡ ಪಡೆದುಕೊಂಡ ಪ್ರಚಾರಕ್ಕೆ ಬಿಡುಗಡೆಯಾದ ನಂತರ ಸೊರಗಿ ಹೋಯಿತು!
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಸುವರ್ಣ ಕಾಲ 2016 ರ ಮೇ ಮತ್ತು ಜೂನ್ ತಿಂಗಳುಗಳೇ ಇರಬೇಕು. ಯುವ ಮನಸ್ಸುಗಳ ಕೆಲವು ಗಮನಾರ್ಹ ಸಿನೆಮಾಗಳು ಬಿಡುಗಡೆಯಾಗಿ ಜಾಗತಿಕ ಮನ್ನಣೆ ಪಡೆದದ್ದು ಪ್ರೇಕ್ಷಕರು ಮತ್ತು ಸಿನೆರಸಿಕರು ನಿಟ್ಟಿಸಿರು ಬಿಡುವಂತೆ ಮಾಡಿದೆ. ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ಸಿನೆಮಾದ ಬಿಡುಗಡೆಯಿಂದ ಪ್ರಾರಂಭವಾದ ಈ ಸಂಭ್ರಮ, ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್', ನವನೀತ್ ನಿರ್ದೇಶನದ 'ಕರ್ವ' ಮತ್ತು ಹೇಮಂತ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾಗಳು ದಾಖಲೆ ಪ್ರದರ್ಶನ ಕಾಣುವುದರೊಂದಿಗೆ ಕನ್ನಡದಲ್ಲಿ ಹೊಸ ಅಲೆಯ ಸಿನೆಮಾಗಳು ಎಂಬ ಹಣೆಪಟ್ಟಿ ಪಡೆದುಕೊಂಡದ್ದು ವಿಶೇಷವೇ! ಇದರ ಜೊತೆಗೆ ದೊಡ್ಡೇರಿ ವೆಂಕಟಗಿರಿರಾವ್ ಅವರ ಕಾದಂಬರಿ ಆಧಾರಿತ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಷ್ಟಕಾಮ್ಯ' ಕೂಡ ಒಂದು ಮಟ್ಟಿಗೆ ಗಮನ ಸೆಳೆದ ಸಿನೆಮಾ. ಪ್ರಯೋಗಾತ್ಮಕ ಎಂಬ ಹೆಸರಿನಲ್ಲಿ ಎರೆಡೆರಡು ಬಾರಿ ಬಿಡುಗಡೆ ಮಾಡಿದರು ರವಿಚಂದ್ರನ್ ಅವರ 'ಅಪೂರ್ವ'ವನ್ನು ಪ್ರೇಕ್ಷಕರು ಮನಸ್ಸಿಗೆ ಹಾಕಿಕೊಳ್ಳಲು ನಿರಾಕರಿಸಿದರೆ, ದರ್ಶನ್ ಅಭಿನಯದ 'ಜಗ್ಗು ದಾದಾ' ಮತ್ತು ಹೊಸ ನಟ ಅನೂಪ್ ಅಭಿನಯದ 'ಲಕ್ಷ್ಮಣ' ಈ ಹೊಸ ಅಲೆಯ ಚಿತ್ರಗಳ ನಡುವೆ ಕೊಚ್ಚಿಹೋದವೇನೋ ಎನ್ನಬಹುದು. ತಮಿಳಿನ ಪ್ರಖ್ಯಾತ ಚಿತ್ರ 'ಜಗರ್ಥಂಡ'ದ ಕನ್ನಡ ಅವತರಿಣಿಕೆ ತುಸು ಮಟ್ಟಿಗೆ ಸದ್ದು ಮಾಡಿತಾದರೂ ಇನ್ನುಳಿದ ಚಿತ್ರಗಳು ಮಾಯವಾದವು. 
ಬಿಡುಗಡೆಯಾದ ಚಿತ್ರಸಂಖ್ಯೆಯಲ್ಲಿ ಸೆಂಚ್ಯುರಿ ಹೊಡೆದಾಗಿದೆ. ಈ ಅರ್ಧವರ್ಷದಲ್ಲಿ ನಮಗೆ ಹೆಚ್ಚು ಕಂಡುಬಂದದ್ದು ಹಾರರ್ ಪ್ರಾಕಾರದ ಸಿನಿಮಾಗಳೇ. 20 ಕ್ಕೂ ಹೆಚ್ಚು ಈ ಪ್ರಾಕಾರದ ಸಿನೆಮಾಗಳಲ್ಲಿ 'ಶಿವಲಿಂಗ', 'ಲಾಸ್ಟ್ ಬಸ್', 'ಯು ಟರ್ನ್', 'ಕರ್ವ' ಮುಂತಾದ ಕೆಲವು ಜನರಿಗೆ ಬೆಚ್ಚಿಬೀಳಿಸಿ ರಂಜನೆ ನೀಡಿ ಯಶಸ್ವಿಯೆನಿಸಿಕೊಂಡರೆ, ಕೊನೆಗೆ ಜನರ ಮಾತಿನಲ್ಲಿ-ಮನಸ್ಸಿನಲ್ಲಿ ಉಳಿದು ನೆಲೆ ಮಾಡಿದ್ದು ಯುವ ಮನಸ್ಸುಗಳು ಶ್ರಮವಹಿಸಿ ನಿರ್ದೇಶಿಸದ 'ತಿಥಿ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಕರ್ವ', 'ಕಿರಗೂರಿನ ಗಯ್ಯಾಳಿಗಳು' ಮತ್ತು 'ಯು ಟರ್ನ್' ಚಿತ್ರಗಳಷ್ಟೇ! 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com