ಸಾಂಪ್ರದಾಯಿಕ ಹುಡುಗಿಯ ಹುಡುಕಾಟದ ದುಃಸ್ವಪ್ನ

ಚಲನಚಿತ್ರದ ಆರಂಭದಲ್ಲೇ ಹೀರೋನ ಜೊತೆಗಾರನೊಬ್ಬ ವಿಲನ್ ಗೆ ಹೇಳುವ ಮಾತು "ನೀನು ಫೀಲ್ಡ್ ಗೆ ಇಳಿದ ಮೇಲೆ ಬ್ಯಾಟ್ ಹಿಡಿದವನು, ಆದರೆ ಈ ಜಗ್ಗು ಬ್ಯಾಟ್ ಹಿಡಿದ ಕಡೆ ಫೀಲ್ಡ್ ಕ್ರಿಯೇಟ್ ಆಗುತ್ತೆ"
ಜಗ್ಗು ದಾದ ಸಿನೆಮಾ ವಿಮರ್ಶೆ
ಜಗ್ಗು ದಾದ ಸಿನೆಮಾ ವಿಮರ್ಶೆ

ಚಲನಚಿತ್ರದ ಆರಂಭದಲ್ಲೇ ಹೀರೋನ ಜೊತೆಗಾರನೊಬ್ಬ ವಿಲನ್ ಗೆ ಹೇಳುವ ಮಾತು "ನೀನು ಫೀಲ್ಡ್ ಗೆ ಇಳಿದ ಮೇಲೆ ಬ್ಯಾಟ್ ಹಿಡಿದವನು, ಆದರೆ ಈ ಜಗ್ಗು ಬ್ಯಾಟ್ ಹಿಡಿದ ಕಡೆ ಫೀಲ್ಡ್ ಕ್ರಿಯೇಟ್ ಆಗುತ್ತೆ" - ಇದರ ಘನಾರ್ಥ ಏನಿರಬಹುದು ಎಂದು ಪ್ರೇಕ್ಷಕನಿಗೆ ತಲೆ ಬಿಸಿಯಾಗಬಹುದು. ಊಹು! ದುಃಸ್ವಪ್ನಗಳಿಗೆ ಅರ್ಥ-ವ್ಯರ್ಥದ ವ್ಯಾಖ್ಯಾನವುಂಟೇ? ರಾಘವೇಂದ್ರ ಹೆಗಡೆ ಅವರ ಚೊಚ್ಚಲ ನಿರ್ದೇಶನದ-ಕನ್ನಡ ಚಿತ್ರರಂಗದ ಜನಪ್ರಿಯ ನಟ ದರ್ಶನ್ ಅವರ 'ಜಗ್ಗು ದಾದಾ' ನೋಡಿ ಚಿತ್ರಮಂದಿರದಿಂದ ಹೊರಬಿದ್ದ ಮೇಲೂ ಜೊತೆಗೆ ಕೊಂಡೊಯ್ಯಬಹುದಾದ ಅಂಶಗಳೇನಾದರೂ ಇವೆಯೇ?

ಶಂಕರ್ ದಾದ (ರವಿಶಂಕರ್) ಬೆಂಗಳೂರಿನ ಭಾರಿ ಭೂಗತ ದೊರೆ. ವಿರೋಧಿಯಿಂದ ಗುಂಡೇಟು ತಿಂದು ೧೫ ವರ್ಷ ಕೋಮಾದಲ್ಲಿದ್ದು ಹೊರಬರುವ ವೇಳೆಗೆ ಮಗ (ಶರತ್ ಲೋಹಿತಾಶ್ವ) ಬೆಂಗಳೂರಿನ ಡಾನ್ ಆಗಿರುತ್ತಾನೆ. ಮೊಮ್ಮಗನನ್ನು ಡಾನ್ ಮಾಡುವತ್ತ ಗುರಿಯಿಟ್ಟ-ಚಿತ್ತ ನೆಟ್ಟ ಸೊಸೆ (ಊರ್ವಶಿ). ಕೋಮಾದಿಂದ ಜ್ಞಾನೋದಯವಾಗಿ ಒಳ್ಳೆಯ ವ್ಯಕ್ತಿಯಾಗಿರುವ ಶಂಕರ್ ದಾದಾನಿಗೆ ಮೊಮ್ಮಗನನ್ನು ಒಳ್ಳೆಯ ವ್ಯಕ್ತಿಯನ್ನಾಗಿಸುವ ತವಕ. ಅಮ್ಮ ಮತ್ತು ತಾತ ಇಬ್ಬರ ಆಸೆಯನ್ನೂ ನೆರವೇಸುತ್ತೇನೆ ಎಂದು ತಾನನಿಗೆ ಹೇಳುವ ಮೊಮ್ಮಗ. ಇಷ್ಟು ಹರವಿನ ಕಥೆ ಕ್ಷಣಗಣನೆಯಲ್ಲಿ ಮುಗಿದು, ಚಿಂದಿ ಉಡಾಯಿಸುವ ಫೈಟ್ ಮೂಲಕ ಹೀರೋ ಪ್ರವೇಶಕ್ಕೆ ಫೀಲ್ಡ್ ಸಿದ್ಧವಾಗುತ್ತದೆ.

ಮೊಮ್ಮಗ ಈಗ ಜಗ್ಗು ದಾದಾ (ದರ್ಶನ್) ಆಗಿ ಡಾನ್ ಪರಂಪರೆಯನ್ನು ಜೀವಂತವಾಗಿರಿಸಿದ್ದಾನೆ. ಇವನಿಗೆ ಬಾರ್ ಡ್ಯಾನ್ಸರ್ ಚಂಪಾ ಜೊತೆಗೆ ಮದುವೆ ಮಾಡಿಸಲು ತಾಯಿಯ ಅಚಲ ಬಯಕೆ. ಆದರೆ ತಾತ ಶಂಕರ್ ಗೆ ತನ್ನ ಮೊಮ್ಮಗ, ಧಾರ್ಮಿಕ-ಸಾಂಪ್ರದಾಯಿಕ ಹುಡುಗಿಯನ್ನು ಮದುವೆಯಾಗಬೇಕೆಂಬ ಮಹದಾಸೆ. ಇದೇ ಹೆಬ್ಬಯಕೆಯನ್ನು ಮೊಮ್ಮಗನಿಗೆ ತಿಳಿಸಿ, ಅವನಿಂದ ವಚನ ತೆಗೆದುಕೊಂಡು ಕಣ್ಣುಮುಚ್ಚಿಕೊಳ್ಳುತ್ತಾನೆ. ಆದರೆ ಇದರ ಬಗ್ಗೆ ನಿರ್ಲಕ್ಷ್ಯ ತಾಳುವ ಮೊಮ್ಮಗನನ್ನು ದೆವ್ವವಾಗಿ ಕಾಡಿ ಮೊಮ್ಮಗ ನೀಡಿದ ವಚನದ ಬಗ್ಗೆ ಮತ್ತೆ ಮತ್ತೆ ನೆನಪಿಸುತ್ತಾ ಇರುತ್ತಾನೆ. ತನ್ನನ್ನು ಕಂಡರೆ ಸದಾ ಹೆದರಿ ಸಾಯುವವರು ಕೂಡ ಮದುವೆ ಮಾಡಿಕೊಳ್ಳಲು ಮಗಳನ್ನು ಕೇಳಿದಾಗ ಮಾತ್ರ ಜೀವದ ಹಂಗು ತೊರೆದು ನಿರಾಕರಿಸುವುದನ್ನು ಕಂಡು ಬೇಸರಗೊಳ್ಳುವ ಜಗ್ಗುದಾದ, ಉದ್ಯಮಿಯ ವೇಷ ಹಾಕಿ ವಧು ಅನ್ವೇಷಣೆಗೆ (ಅವರ ಪ್ರಕಾರ ಡೀಲ್ ಮಾಡಲು) ಮುಂಬೈಗೆ ಬರುತ್ತಾನೆ. ಈ ಟ್ಯಾಸ್ಕ್ ನಲ್ಲಿ ಜಗ್ಗು ದಾದಾ ಯಶಸ್ವಿಯಾಗುತ್ತಾನೆಯೇ?

ಜಗ್ಗು ದಾದಾನಿಗೆ ಮಹತ್ವದ ತಿರುವು ನೀಡುವ ಈ ಹಂತದಲ್ಲಿ, ಬಹುಷಃ ಚಿತ್ರರಂಗದ ಇತಿಹಾಸದಲ್ಲೇ ಈ ಸಿನೆಮಾ ಒಂದು ಪ್ರತಿಗಾಮಿ ಕಥೆ ಎಂದು ಗಮನಕ್ಕೆ ಬರುವುದು ಉತ್ಪ್ರೇಕ್ಷೆಯಲ್ಲ. ಮಾಜಿ ಭೂಗತ ದೊರೆ ತಾತ ಶಂಕರ್ ತನ್ನ ಈ ಸ್ಥಿತಿಗೆ, ಮತ್ತು ಮಗನ ದುಸ್ಥಿತಿಗೆ ತಾವು ಕಟ್ಟಿಕೊಂಡ ಹೆಂಡತಿಯರೇ ಕಾರಣ, ಆದುದರಿಂದ ಬಾರ್ ನೃತ್ಯಕಾರ್ತಿ ಮೊಮ್ಮಗನಿಗೆ ಒಳ್ಳೆಯ ವಧುವಲ್ಲ, ಧಾರ್ಮಿಕ-ಸಾಂಪ್ರದಾಯಿಕ ವಧುವನ್ನು ಮೊಮ್ಮಗ ಹುಡುಕಿಕೊಳ್ಳಬೇಕು ಎಂಬ ಸನ್ನಿವೇಶ-ಸಂಭಾಷಣೆಗಳು ಪ್ರೇಕ್ಷಕನನ್ನು ದಶಕಗಳ ಹಿಂದಕ್ಕೆ ಕರೆದೊಯ್ಯುವುದಲ್ಲದೆ, ಇಂತಹ ಚಿಂತನೆಗಳನ್ನು ವಿಜೃಂಭಿಸುವ ನಿರ್ದೇಶಕನ-ಕಥೆಗಾರನ ಮತ್ತು ಇಡೀ ಸಿನೆಮಾದ ಮೇಲೆ ಆಕ್ರೋಶ ತರಿಸುತ್ತವೆ. ಮಗನನ್ನು ಕೆಟ್ಟ ದಾರಿಯಲ್ಲೇ ಮುನ್ನಡೆಸಬೇಕೆನ್ನುವ ತಾಯಿಯ ಪಾತ್ರ ಕೂಡ ನಿರ್ದೇಶಕ ಕಲ್ಪನೆ ನೆಲ ಕಚ್ಚಿರುವುದಕ್ಕೆ ಸಾಕ್ಷಿಯಾಗಿದೆ.

ರಿಯಾಲಿಟಿ ಟಿ ವಿ ಕಾರ್ಯಕರ್ಮದ ಟ್ಯಾಸ್ಕ್ ನಂತೆ ಮುಂದುವರೆಯುವ ಚಿತ್ರಕಥೆ, ವಧು ಹುಡುಕುವ ಪುನರಾವರ್ತಿತ ದೃಶ್ಯಗಳು, ತಾತ ದೆವ್ವವಾಗಿ ಕಾಡುವ ದೃಶ್ಯಗಳು ಪ್ರೇಕ್ಷಕನಿಗೆ ಎಂದೂ ಮುಗಿಯದ ಧಾರಾವಾಹಿಯ ಎಪಿಸೋಡ್ ಗಳಂತೆ ಭಾಸವಾದರೆ ಇದು ಬಹುಶಃ ನಿರ್ದೇಶಕ ಧಾರಾವಾಹಿಗಳಲ್ಲಿ ಕೆಲಸ ಮಾಡಿರುವುದರ ಫಲ ಇರಬಹುದು. ಮುಂಬೈನಲ್ಲಿ ಮದುವೆ ದಲ್ಲಾಳಿ-ಸಾಂಪ್ರದಾಯಿಕ ಯುವತಿ (ಹೀಗಂದರೇನೆಂಬುದು ಪ್ರೇಕ್ಷಕನಿಗೆ ಎಂದಿಗೂ ಸ್ಪಷ್ಟವಾಗುವುದಿಲ್ಲ!) ಗೌರಿಯನ್ನು (ದೀಕ್ಷಾ ಸೇಥ್) ಭೇಟಿಯಾಗುವ ಜಗ್ಗು ದಾದಾ ತನ್ನ ಮೂಲ ಗುರುತನ್ನು ಮುಚ್ಚಿಟ್ಟು, ಅವಳನ್ನು ಪ್ರೀತಿಸುತ್ತಾನೆ. ಅಲ್ಲಿ ಮುಂಬೈನ ಮತ್ತದೇ ಕ್ಲೀಷೆಯ ಭೂಗತ ಲೋಕ ಮತ್ತು ಒಂದಷ್ಟು ವಿಕ್ಷಿಪ್ತ ಪಾತ್ರಗಳನ್ನು ಮುಂದಿಡುವ ನಿರ್ದೇಶಕ, ಅಪಹರಣ-ಸೇಡು ಇಂತಹವೇ ಒಂದಷ್ಟು ಘಟನೆಗಳನ್ನು ಮುಂದುಮಾಡಿ ನಾಯಕನಟನಿಂದ ಮುಂಬೈ ಭೂಗತ ದೊರೆಗಳನ್ನೆಲ್ಲಾ ಪುಡಿಗುಟ್ಟಿಸುತ್ತಾನೆ. ಜಗ್ಗು ದಾದಾ ಗುರುತಿನ ಗುಟ್ಟಿನ ನಿಜಾಂಶ ತಿಳಿಯುವ ನಾಯಕಿಯನ್ನು ಒಲಿಸಿಕೊಳ್ಳಲು ಕಥೆಯನ್ನು ಇನ್ನಷ್ಟು ಜಗ್ಗಿ ಪ್ರೇಕ್ಷಕನನ್ನು ಹೈರಾಣ ಮಾಡಿ ಸುಖಾಂತ್ಯ ಕಾಣಿಸುವ ಹೊತ್ತಿಗೆ ಬ್ಯಾಟು ಬೇಡ-ಫೀಲ್ಡೂ ಬೇಡ ಎಂದೆನಿಸಿ ಜಗ್ಗುದಾದಾನಿಂದ ತನಗೇ ಒದೆ ಬಿದ್ದ ಅನುಭವ ಪ್ರೇಕ್ಷಕನದ್ದು!

ಇವೆಲ್ಲದರ ಹೊರತಾಗಿ ಪ್ರೇಕ್ಷನನ್ನು ಸ್ವಲ್ಪ ಮಟ್ಟಿಗಾದರೂ ಹಿಡಿದಿಡಬಲ್ಲ ಮತ್ಯಾವುದಾದರೂ ಸಂಗತಿಗಳಿವೆಯೇ ಎಂದು ಕೇಳಿಕೊಂಡರೆ ಅಲ್ಲೂ ನಿರಾಸೆ ಮೂಡುತ್ತದೆ. ವಿದೇಶದಲ್ಲಿ ಚಿತ್ರೀಕರಿಸಿರುವ ಒಂದು ಹಾಡು, ಸುಂದರ ತಾಣವನ್ನು ನೋಡಿ ಒಮ್ಮೆ ಅಬ್ಬ ಎಂದು ಪ್ರೇಕ್ಷಕ ಉದ್ಘಾರ ಹೊರಡಿಸಬಹುದೇ ಹೊರತು, ಹರಿಕೃಷ್ಣ ಸಂಗೀತದಲ್ಲಿ ಮುದ ನೀಡುವಂತಹ ಅಥವಾ ಚಿತ್ರಕಥೆಗೆ ಪೂರಕವಾಗುವಂತಹ ಯಾವುದೇ ಅಂಶವಿಲ್ಲ. ಛಾಯಾಗ್ರಹಣದಲ್ಲು ಅಂತಹ ವಿಶೇಷತೆಯೇನಿಲ್ಲ. ಯಾರ ನಟನೆಯೂ ಉತ್ತಮ ಎಂದೆನಿಸುವುದಿಲ್ಲ. ಇದಕ್ಕೆ ಪಾತ್ರದ ಪರಿಕಲ್ಪನೆಯಲ್ಲಿ ಎಡವಿರುವುದು ಮಹತ್ವದ ಕಾರಣ. ಸತ್ವವೇ ಇಲ್ಲದ ಪ್ರತಿಗಾಮಿ ಕಥೆ, ಒಂದಷ್ಟು ಕ್ಲೀಶೆಯ ಪಾತ್ರಗಳು-ಘಟನೆಗಳು, ಅರ್ಥವಿಲ್ಲದ ಸಂಭಾಷಣೆ, ಧಾರಾವಾಹಿ ರೀತಿಯ ಜಗ್ಗಿದ ನಿರೂಪಣೆ ಹೀಗೆ ಪ್ರೇಕ್ಷಕನಿಗೆ ದುಃಸ್ವಪ್ನವಾಗಿ ಕಾಡಿ ಹೈರಾಣಾಗಿಸಬಲ್ಲ ಎಲ್ಲ ಅಂಶಗಳನ್ನೂ ಒಳಗೊಂಡ ಈ ಸಿನೆಮಾವನ್ನು ನಿರ್ದೇಶಿಸಿ ಮುಗಿಸಿದ್ದಾರೆ ರಾಘವೇಂದ್ರ ಹೆಗಡೆ.

ಇತ್ತೀಚಿಗೆ ಕಮರ್ಷಿಯಲ್ ಸಿನೆಮಾಗಳ ಹಳೆಯ ಜಾಡನ್ನು ಮುರಿದ ಕೆಲವು ಕನ್ನಡ ಚಿತ್ರಗಳು ಕನ್ನಡ ಪ್ರೇಕ್ಷಕರಿಗೆ ಹೊಸ ಅನುಭವ ಕಟ್ಟಿಕೊಟ್ಟು ಆರ್ಥಿಕವಾಗಿಯೂ ಒಳ್ಳೆಯ ಗಳಿಕೆ ಕಾಣುತ್ತಿರುವ ಸಂದರ್ಭದಲ್ಲಿ, ಅಪಾರ ಅಭಿಮಾನಿಗಳನ್ನು ಹೊಂದಿರುವ ನಟನನ್ನು ಪ್ರಧಾನ ಪಾತ್ರಕ್ಕೆ ಆಯ್ಕೆ ಮಾಡಿ, ಸ್ವತಃ ಮುಂಬೈನಲ್ಲೇ ಜೀವಿಸಿದ್ದರು, ನಿರ್ದೇಶಕ ರಾಘವೇಂದ್ರ ಹೆಗಡೆ ಬಾರ್ ನೃತ್ಯಕಾರ್ತಿಯರ ಬಗೆಗೆ ಅಕಾರಣವಾಗಿ ಕೀಳು ಅಭಿಪ್ರಾಯ ರೂಪಿಸುವಂತಹ ಚಿತ್ರಕಥೆ ಹೊಂದಿರುವ ಕಳಪೆ ಸಿನೆಮಾ ನಿರ್ದೇಶಿಸಿ ಬಿಡುಗಡೆಗೆ ಮುಂದಾಗಿರುವುದನ್ನು ಕಂಡರೆ ಈ ಚಿತ್ರತಂಡ ಕನ್ನಡ ಪ್ರೇಕ್ಷಕನನ್ನು ಕೇವಲವಾಗಿ ಪರಿಗಣಿಸಿರುವ ಸಂಶಯ ಮೂಡದೆ ಇರದು!
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com