ಅಪಹಾಸ್ಯ, ಅತಿರೇಕ, ಅತಾರ್ಕಿಕತೆಯನ್ನು ಜೂಮ್ ಮಾಡಿದಾಗ!

ಜಾಹಿರಾತು ಉದ್ದಿಮೆ ಹಿನ್ನಲೆಯಲ್ಲಿ ಹಾಸ್ಯಮಯ ಕಥೆ ಹೆಣೆದಿರುವುದಾಗಿ ಪ್ರಚಾರ ಪಡೆದು ತೆರೆ ಕಂಡಿರುವ ಪ್ರಶಾಂತ್ ರಾಜ್ ನಿರ್ದೇಶನದ, ಗಣೇಶ್-ರಾಧಿಕಾ ಪಂಡಿತ್ ಅಭಿನಯದ 'ಜೂಮ್' ಚಿತ್ರ
ಜೂಮ್ ಸಿನೆಮಾ ವಿಮರ್ಶೆ
ಜೂಮ್ ಸಿನೆಮಾ ವಿಮರ್ಶೆ
ಜಾಹಿರಾತು ಉದ್ದಿಮೆ ಹಿನ್ನಲೆಯಲ್ಲಿ ಹಾಸ್ಯಮಯ ಕಥೆ ಹೆಣೆದಿರುವುದಾಗಿ ಪ್ರಚಾರ ಪಡೆದು ತೆರೆ ಕಂಡಿರುವ ಪ್ರಶಾಂತ್ ರಾಜ್ ನಿರ್ದೇಶನದ, ಗಣೇಶ್-ರಾಧಿಕಾ ಪಂಡಿತ್ ಅಭಿನಯದ 'ಜೂಮ್' ಚಿತ್ರ ಪಡೆದ ಪ್ರಚಾರದಾಚೆಗೂ ಪ್ರೇಕ್ಷಕನಿಗೆ ಮನರಂಜನೆಯ ಪರಿಚಾರಿಕೆ ಮಾಡಲು ಸಾಧ್ಯವಾಗಿದೆಯೇ? 
ಜಾಹಿರಾತು ಏಜೆನ್ಸಿಯೊಂದರಲ್ಲಿ ಪ್ರಮುಖ ಸ್ಥಾನದಲ್ಲಿರುವ ಸಂತೋಷ್ (ಗಣೇಶ್) ತನ್ನ ಗ್ರಾಹಕರ ದೌರ್ಬಲ್ಯವನ್ನು ಪತ್ತೆ ಹಚ್ಚಿ, ಅಡ್ಡ ದಾರಿ ಹಿಡಿದು ಅನೈತಿಕ ಮಾರ್ಗಗಳಿಂದ ಒಪ್ಪಂದಗಳನ್ನು ಗೆಲ್ಲುವವವನು. ವಿರೋಧಿ ಜಾಹಿರಾತು ಏಜೆಸ್ಸಿಯ ನಯನ (ರಾಧಿಕಾ ಪಂಡಿತ್) ವೃತ್ತಿಪರ ನೀತಿಗಳ ಜೊತೆಗೆ ನಿಂತು ನೇರ ಮಾರ್ಗದಲ್ಲಿ ನಡೆಯುವವಳು. ಸಂತೋಷ್ ನ ವಾಮಮಾರ್ಗದಿಂದ, ದೊಡ್ಡ ಜಾಹಿರಾತು ಡೀಲ್ ಒಂದು ತಪ್ಪಿ ಹೋಗಿ ಅವನನ್ನು ಹಣಿಯಲು ವಿವಿಧ ರೀತಿಗಳಲ್ಲಿ ನಯನ ಪ್ರಯತ್ನಿಸಿದರೆ, ಸಂತೋಷ್ ಸಮಸ್ಯೆಯೊಂದರಿಂದ ಪಾರಾಗಲು ಅಸ್ತಿತ್ವದಲ್ಲೇ ಇಲ್ಲದ ಸರ್ವಶಕ್ತಿ ಕಾಮೋದ್ರೇಕ ಉತ್ಪನ್ನವೊಂದಕ್ಕೆ ಜಾಹಿರಾತು ನೀಡಿ ಅದು ಅಚಾತುರ್ಯದಿಂದ ಪ್ರಸಾರವು ಆಗಿ, ಸಂಸ್ಥೆ ಮತ್ತು ತನ್ನನ್ನು ಕಾಪಾಡಿಕೊಳ್ಳಲು ಉತ್ಪನ್ನವನ್ನು ಸೃಷ್ಟಿಸುವ ಜರೂರಿಗೆ ಬೀಳುತ್ತಾನೆ. ಅಂತಹ ಉತ್ಪನ್ನ ಸೃಷ್ಟಿಸುವ ಸಾಮರ್ಥ್ಯವುಳ್ಳ ನಿಷೇಧಿತ ವಿಜ್ಞಾನಿ ಧೂಮಕೇತು (ಕಾಶಿನಾಥ್) ಹುಡುಕಿ ಇಟಲಿಗೆ ಸಂತೋಷ್ ಪ್ರಯಾಣ ಬೆಳೆಯಿಸದರೆ ಇದಕ್ಕೆ ಅಡ್ಡಗಾಲು ಹಾಕಲು ನಯನಳೂ ಅಲ್ಲಿಗೆ ತೆರಳುತ್ತಾಳೆ. ಸಂತೋಷ್ ನನ್ನು ವಿಜ್ಞಾನಿ ಧೂಮಕೇತು ಎಂದು ತಪ್ಪು ತಿಳಿವ ನಯನಾ ಅವನನ್ನು ಪ್ರೀತಿಸುತ್ತಾಳೆ. ಮುಂದೊಂದಷ್ಟು ಅಚಾತುರ್ಯಗಳು ನಡೆದು ಕಥೆ ಮುಂದುವರೆಯುತ್ತದೆ..
ಜಾಹಿರಾತು ಲೋಕದ ಕಥೆಯನ್ನು (ವೃತ್ತಿಪರ ನೀತಿ ಮತ್ತು ಅಡ್ಡ ದಾರಿಗಳ ಸಂಘರ್ಷವನ್ನು) ಗಂಭೀರವಾಗಿ-ತಾರ್ಕಿಕವಾಗಿ -ಸಕಾರಣವಾಗಿ ಹೆಣೆಯಬಲ್ಲಬಹುದಾಗಿದ್ದರು, ಹಾಸ್ಯರೀತಿಯಲ್ಲಿ ಕಥೆ ಹೇಳುವುದಕ್ಕೆ ಮುಂದಾಗಿ ಸೂತ್ರ ಸಂಬಂಧವೇ ಇಲ್ಲದೆ ಅಡ್ಡಾದಿಡ್ಡಿಯಾಗಿ ಕಥೆ ಬೆಳೆಸಿ ಅತಾರ್ಕಿಕ ನಿರೂಪಣೆಯನ್ನು ಮೆರೆಸಿ, ಕೊನೆಗೆ ಹಾಸ್ಯವನ್ನು ಕೂಡ ಇಲ್ಲವಾಗಿಸುತ್ತಾರೆ ನಿರ್ದೇಶಕ. ಹತ್ತರಲ್ಲಿ ಹನ್ನೊಂದರಂತಿರುವ ಸಿನೆಮಾದ ಪ್ರಾರಂಭವೇ ಪ್ರೇಕ್ಷಕನಿಗೆ ನೀರಸ ಅನುಭವ ನೀಡುತ್ತದೆ. ಒಂದು ಕೆಲಸಕ್ಕೆ ಬಾರದ ಫೈಟ್ ಅದು ಮುಗಿದ ಕ್ಷಣವೇ ಉಸಿರಾಡಲೂ ಸಮಯ ನೀಡದೆ ಅದೇ ವೇಗದಲ್ಲಿ ಮತ್ತೊಂದು ಹಾಡು! ತಲೆ ಚಿಟ್ಟು ಹಿಡಿಸುವ ಮಾತು, ಎಲ್ಲಿಯೂ ಗಮನಾರ್ಹ ಎನ್ನಲಾಗದ ಸಂಭಾಷಣೆ, ಪುರುಷ ದುರಭಿಮಾನದ ಹಾಗೂ ಬಹುತೇಕ ಅಪಹಾಸ್ಯಕ್ಕೀಡಾಗುವ ಹಾಸ್ಯ ಇವುಗಳೇ ತುಂಬಿರುವ ಈ ಸಿನೆಮಾ ಕ್ಷಣ ಕ್ಷಣಕ್ಕೂ ತನ್ನ ಅತಿರೇಕದಿಂದ ಅಸಹನೀಯವಾಗುತ್ತಾ ಮುಂದುವರೆಯುತ್ತದೆ. 
ಪಾತ್ರಗಳ ಸೃಷ್ಟಿ ಒಂದು ಮಟ್ಟಕ್ಕೆ ಸರಿಯಾಗಿದ್ದರು, ಕಥನ ಕಲ್ಪನೆ-ಬೆಳವಣಿಗೆ ಮತ್ತು ನಿರೂಪಣೆಯಲ್ಲಿ ಎಡವಿರುವಾಗ ವಿವಿಧ ನಂತರ ನಟನೆಯಲ್ಲಿಯೂ ಗಮನಾರ್ಹವಾಗಿ ಗುರುತಿಸುವಂತಹಾದ್ದೂ ಏನಿಲ್ಲ. ನಟ ಗಣೇಶ್ ಅವರಷ್ಟೇ ಸ್ಕ್ರೀನ್ ಸಮಯ ಪಡೆಯುವ ಸಾಧು ಕೋಕಿಲಾ ಎಲ್ಲೋ ಕೆಲವೊಮ್ಮೆ ನಗಿಸುವಂತೆ ಕಂಡರು, ತಮ್ಮ ಹಿಂದಿನ ಸಿನೆಮಾಗಳ ಅತಿರೇಕದ ಪೋಲಿ ಹಾಸ್ಯವನ್ನು ಮತ್ತೆ ಮತ್ತೆ ಪುನರಾವರ್ತಿಸುವುದರಿಂದ ಕರ್ಕಷವೆನಿಸುತ್ತಾರೆ. ಸಮಗ್ರ ಕಥೆಯ ದೃಷ್ಟಿಯಿಂದ ಚಂದದ ಸಂಘರ್ಷ ಇದ್ದರು, ಅದನ್ನು ಪೋಷಿಸದೆ, ಈ ಅಪಹಾಸ್ಯ, ಅತಿರೇಕ, ಅತಾರ್ಕಿಕ ನಿರೂಪಣೆ ನುಂಗಿ ನೀರುಕುಡಿಯುತ್ತದೆ. ಗಣೇಶ್ ಮತ್ತು ರಾಧಿಕಾ ಪಂಡಿತ್ ನಟನೆ ಸಾಧಾರಣ. ಬಹಳ ದಿನಗಳ ನಂತರ ಕಾಣಿಸಿಕೊಂಡಿರುವ ಕಾಶಿನಾಥ್ ಅವರಿಗೂ ಅಂತಹ ಪ್ರಮುಖ ಪಾತ್ರವೇನಿಲ್ಲ. ಎಸ್ ತಮನ್ ಅವರ ಸಂಗೀತವಾಗಲಿ ಅಥವಾ ಇನ್ನುಳಿದ ತಾಂತ್ರಿಕ ಆಯಾಮಗಳಲ್ಲಾಗಲಿ ಹೆಚ್ಚುಗಾರಿಕೆಯೇನಿಲ್ಲ. ಈ ಹಿಂದೆಯೂ ಸಿನೆಮಾಗಳನ್ನು ನಿರ್ದೇಶಿರುವ ನಿರ್ದೇಶಕ ಪ್ರಶಾಂತ್ ರಾಜ್, ಕಥೆ-ನಿರೂಪಣೆ-ಸಂಭಾಷಣೆ ಯಾವುದನ್ನು ಉತ್ತಮಪಡಿಸುವುದಕ್ಕೆ ಸೊಪ್ಪು ಹಾಕದೆ ಕಳಪೆ ಜೋಕುಗಳ ಜೋಕಾಲಿಗೆ ನೇತುಬಿದ್ದು ಇದನ್ನು ನಿರ್ದೇಶಿಸಿರುವುದು ಕನ್ನಡ ಪ್ರೇಕ್ಷಕನಿಗೆ ಅಘಾತವೇ ಸರಿ.  
ಸಿನೆಮಾದ ಅಂತ್ಯದಲ್ಲಿ ನಾಯಕ ನಟಿ ಮತ್ತು ನಾಯಕ "ಸಗಣಿ ಸ್ವಲ್ಪ ತಿಂದರು ಅಥವಾ ಹೆಚ್ಚು ತಿಂದರು ಸಗಣಿಯೇ" ಎಂಬ ಸಂಭಾಷಣೆಯನ್ನು ಪರಸ್ಪರ ಬದಲಾಯಿಸಿಕೊಳ್ಳುವ ಹೊತ್ತಿಗೆ, ಅಲ್ಲಿಯವರೆಗೂ ಕಷ್ಟ ಸಹಿಸಿ ಅಂತ್ಯ ನೋಡಲು ಕಾದು ಕುಳಿತ ಪ್ರೇಕ್ಷನಿಗೆ ಸಗಣಿ-ತಿಪ್ಪೆ ಎಲ್ಲವೂ ಕಂಡಂತಾಗಿ ಸರಸರನೆ ಹೊರನಡೆದು ಹೋಗಬೇಕಿನ್ನಿಸುವ ಅವಸರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com