ಪ್ರೇ'ತಾತ'ಮಗಳ ನಡುವೆ ಮಾತಿನ ಮಂಟಪದ ಆಸ'..ರೆ'

ಸಿನೆಮಾ ಕೊನೆಯ ಹಂತಕ್ಕೆ ತಲುಪಿದಾಗ, ಪಾಪು (ರಮೇಶ್), ಪ್ರೇತವಾಗಿರುವ ತನ್ನ ತಾತನಿಗೆ (ಅನಂತನಾಗ್) ಒಂದು ಪ್ರಶ್ನೆ ಕೇಳುತ್ತಾನೆ. ಇದೆಲ್ಲಾ (ಜೀವನ) ಪೂರ್ವನಿಯೋಜಿತವೋ,
...ರೆ ಸಿನೆಮಾ ವಿಮರ್ಶೆ
...ರೆ ಸಿನೆಮಾ ವಿಮರ್ಶೆ

ಸಿನೆಮಾ ಕೊನೆಯ ಹಂತಕ್ಕೆ ತಲುಪಿದಾಗ, ಪಾಪು (ರಮೇಶ್), ಪ್ರೇತವಾಗಿರುವ ತನ್ನ ತಾತನಿಗೆ (ಅನಂತನಾಗ್) ಒಂದು ಪ್ರಶ್ನೆ ಕೇಳುತ್ತಾನೆ. ಇದೆಲ್ಲಾ (ಜೀವನ) ಪೂರ್ವನಿಯೋಜಿತವೋ, ಈ ಕ್ಷಣದ ಸತ್ಯವೋ ಅಥವಾ ನಾವೆಂದುಕೊಂಡತೆ ಎಲ್ಲವೂ ನಡೆಯುತ್ತಿದೆಯೋ? ಇದು ಯಕ್ಷಪ್ರಶ್ನೆಯಪ್ಪ ಎನ್ನುತ್ತಾನೆ ತಾತ! ಈ ಹೊತ್ತಿಗೆ ಪ್ರೇಕ್ಷಕನಿಗೆ ಸುನೀಲ್ ಕುಮಾರ್ ದೇಸಾಯಿ ಇದಕ್ಕೂ ಪೂರ್ವದಲ್ಲಿ ನಿರ್ದೇಶಿಸಿದ ಸಿನೆಮಾಗಳ ಮೇಲೆ ಇಟ್ಟ ನಂಬಿಕೆ ಮತ್ತು ಆ ಕ್ಷಣದಲ್ಲಿ ನೋಡುತ್ತಿರುವ ಸಿನೆಮಾ '..ರೆ' ನಡುವಿನ ಅಜಗಜಾಂತರ ಯಕ್ಷಪ್ರಶ್ನೆಯಾಗಿ ಕಾಡುತ್ತದೆ!

ಶೃಂಗೇರಿಯಿಂದ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುವ ಪಾಪು, ಕಾರ್ಯಕ್ರಮ ನಿರ್ವಾಹಕಿ ಪಾರು (ಹರ್ಷಿಕಾ ಪೂಣಚ್ಚ) ಮತ್ತು ಅವರ ತಂದೆ (ರಮೇಶ್ ಭಟ್) ಕಾವಲಾಗಿರುವ ಬಂಗಲೆಯಲ್ಲಿ ಅನಿವಾರ್ಯವಾಗಿ ಉಳಿಯಬೇಕಾಗುತ್ತದೆ. ಅಲ್ಲಿ ಪ್ರೇತಗಳಾದ ಐದು ರಾವ್ ಗಳು (ಲೋಕನಾಥ್, ಶ್ರೀನಿವಾಸ ಪ್ರಭು, ಜಿ ಕೆ ಗೋವಿಂದ ರಾವ್, ಶಿವರಾಂ ಮತ್ತು ಅನಂತನಾಗ್) ಅವರನ್ನು ಕಾಣಲಾಗದೆ ಅವರ ಜೊತೆಗೆ ಮಾತಿನಲ್ಲಿ ವ್ಯವಹರಿಸಬೇಕಾಗುತ್ತದೆ. ಈ ರಾವ್ ಗಳು ತನ್ನ ತಂದೆಯ ಕಡೆಯ ತಾತಂದಿರು ಮತ್ತು ತನ್ನ ಮನೆಗೇ ಹೊಕ್ಕಿರುವುದೆಂದು ನಂತರ ಪಾಪುವಿಗೆ ಅರಿವಾಗುತ್ತದೆ. ಪಾಪು ಮದುವೆಯಾದರೆ ಮಾತ್ರ ಈ ಪ್ರೇತಗಳಿಗೆ ಮುಕ್ತಿ ಅಲ್ಲದೆ ಮನೆಯನ್ನು ಕಸಿದುಕೊಳ್ಳಲು ಹವಣಿಸುತ್ತಿರುವ ದ್ವೇಷಿಯೊಬ್ಬನಿಂದ(ಶರತ್ ಲೋಹಿತಾಶ್ವ) ಉಳಿಸಿಕೊಳ್ಳುವ ಕೆಲಸವೂ ಪಾಪುವಿನ ಮೇಲೆ ಬೀಳುತ್ತದೆ. ತಾತಂದಿರು ಪ್ರೇತ ಜ್ಯೋತಿಷಿಯೊಬ್ಬನ (ಮಾಸ್ಟರ್ ಹಿರಣ್ಣಯ್ಯ) ಭವಿಷ್ಯವಾಣಿಯಂತೆ ಪಾಪುವಿಗೆ ಮದುವೆ ಮಾಡಲು 'ಪ್ರೀತಿ' (ಸುಮನ್ ನಗರ್ಕರ್) ಎಂಬ ಯುವತಿಯನ್ನು ಹುಡುಕುತ್ತಾರೆ. ಪಾಪು ಮದುವೆಯಾಗುತ್ತಾನೆಯೇ? ಪ್ರೇತಗಳಿಗೆ ಮುಕ್ತಿ ಸಾಧ್ಯವಾಗುತ್ತದೆಯೇ? ಮನೆ ಉಳಿಯುತ್ತದೆಯೇ?

ಮಿತಿಯೇ ಇಲ್ಲದ ಪಾತ್ರಗಳು-ಪ್ರೇತಗಳು, ಓತ ಪ್ರೋತವಾಗಿ, ದಿಕ್ಕು ದೆಸೆಯಿಲ್ಲದೆ ಓಡುವ ಕಥೆ ಒಂದು ಹಂತದಲ್ಲಿ ಪ್ರೇಕ್ಷಕನಿಗೆ ಯಾವುದೋ ಕೆಟ್ಟ ನಾಟಕ ನೋಡುತ್ತಿರುವಂತೆ ಭಾಸವಾದರೆ, ಕಲ್ಪನೆಯ ವೈಪರೀತ್ಯ, ಅತಾರ್ಕಿಕತೆ ಮತ್ತು ಅದರ ಕೆಟ್ಟ ನಿರೂಪಣೆ ಪ್ರೇತಗಳಂತೇಯೇ ಪ್ರೇಕ್ಷಕರನ್ನು ಅತಂತ್ರನಾಗಿಸುತ್ತದೆ. ಬಹು ಖ್ಯಾತಿಯ ಬಹು ತಾರಾಗಣ ಸಿನೆಮಾದಲ್ಲಿದೆ ಎಂಬ ಆಶಯದಲ್ಲಿ ನೋಡಲು ಹೊಕ್ಕಿದವರಿಗೆ ಅವರ ನಟನೆಗೆ ವ್ಯಾಪ್ತಿಯೇ ಇಲ್ಲದಿರುವುದು ಬೇಸರ ತರಿಸುತ್ತದೆ. ಐದು ಜನ ರಾವ್ ತಾತಂದಿರಲ್ಲಿ ನಾಲ್ಕು ಜನರನ್ನು ಕಿತ್ತು ಹಾಕಿದ್ದರೆ ಸಿನೆಮಾ ಹೇಳಬೇಕೆಂದಿದ್ದ ಕಥೆಗಾಗಲೀ, ಸಂದೇಶಕ್ಕಾಗಲೀ ಯಾವುದೇ ಕುಂದಾಗುತ್ತಿರಲಿಲ್ಲವೆಲ್ಲ ಎಂದೆನಿಸಿದರೆ ಪಾತ್ರ ಸೃಷ್ಟಿಯಲ್ಲಿ ಕಥೆಗಾರನ ದುಂದುವೆಚ್ಚ ಮತ್ತು ಪ್ರೇಕ್ಷಕನ ಬಳಲಿಕೆ ಅರ್ಥವಾಗುತ್ತದೆ. ಪ್ರೇತಗಳ ಜೊತೆ ಮಾತನಾಡುವುದು ಇಂದಿಗೆ ಕಲ್ಪನೆಯಲ್ಲಿ ಹೊಸದಲ್ಲದೆ ಹೋದರು, ಕೆಲವೊಮ್ಮೆ ನಿರ್ದೇಶಕನ ಜಾಣ್ಮೆ ಅದನ್ನು ಸಹ್ಯವಾಗಿಸಬಹುದು. ಆದರೆ ಇಲ್ಲಿ ತಾತಂದಿರ ಪ್ರೇತಗಳ ಜೊತೆಗೆ ಇನ್ನೂ ಐದಾರು ಪ್ರೇತಗಳು ತಮ್ಮ ಬಯಕೆಯನ್ನು-ವಿಕೃತ ಆಸೆಗಳನ್ನು (ಸಂಭೋಗ ಕ್ರಿಯೆಗಳನ್ನು ಕದ್ದು ನೋಡುವ ಪ್ರೇತಗಳು) ತೀರಿಸಿಕೊಳ್ಳುವುದನ್ನು ಕೂಡ ಜನರು ಸಹಿಸಿಕೊಳ್ಳುವುದು ಬಹುಶಃ ಹಿಂದಿನ ಜನ್ಮದ ಪಾಪವೇನೋ! ಕಥೆಯೇ ಇಲ್ಲದ ಈ ಕಥೆಯ ಮುನ್ನಲೆಯಲ್ಲಿ ತ್ರಿಕೋನ ಪ್ರೇಮದ ಎಳೆಯೊಂದು ಹಾದುಹೋಗುವುದು ಕೂಡ ನಿರ್ದೇಶಕನ ಹಿಂದಿನ ಸಿನೆಮಾಗಳನ್ನು ನೆನಪಿಗೆ ತರುತ್ತದೆ. ಆ ನೆನಪುಗಳಿಂದಷ್ಟೇ ಪ್ರೇಕ್ಷಕರು ತುಸು ಸಮಾಧಾನ ಪಡಬೇಕು! ರಮೇಶ್ ಅರವಿಂದ್ ಮತ್ತು ಅನಂತ ನಾಗ್ ಸಿನೆಮಾದ ಬಹುಪಾಲು ಸಮಯವನ್ನು ಪಡೆದಿದ್ದರು, ವಿಶೇಷವಿಲ್ಲದ ಕಥೆಯಲ್ಲಿ ಹತ್ತರಲ್ಲಿ ಅವರಿಬ್ಬರೂ ಎನ್ನುವಂತಿದ್ದಾರೆ. ಇನ್ನುಳಿದ ತಾರಾವರ್ಗದ ನಟನೆ ಸಮಚಿತ್ತದಲ್ಲಿದ್ದರೂ, ಪಾತ್ರಗಳ ಜೊಳ್ಳುತನ ನಟನೆಯನ್ನು ಹಿಂದಿಕ್ಕಿದೆ. ತಾಂತ್ರಿಕವಾಗಿಯೂ ಸಿನೆಮಾ ಹಿಂದುಳಿದಿದ್ದು, ಹಂಸಲೇಖ ಸಂಗೀತದಲ್ಲಿ ಮೂಡಿಬಂದಿರುವ ಎರಡು ಹಾಡುಗಳಲ್ಲಿ ಯಾವುದೂ ಮನಸ್ಸಿನಲ್ಲಿ ಉಳಿಯುವಂತದ್ದಲ್ಲ. ಛಾಯಾಗ್ರಹಣದಲ್ಲಿ ಲೈಟಿಂಗ್ ಕೊರತೆ ಎದ್ದು ಕಂಡರೆ, ಬಹುತೇಕ ಒಂದೇ ಕೋಣೆಯಲ್ಲಿ ನಡೆಯುವ ಈ ಸಿನೆಮಾದ ಕಲಾ ನಿರ್ದೇಶನದಲ್ಲಾಗಲೀ, ಸಂಕಲನದಲ್ಲಾಗಲೀ ಯಾವ ಹೆಚ್ಚುಗಾರಿಕೆಯನ್ನೂ ತೋರಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಬಹುತೇಕ ನಡೆಯುವ ಜೊಳ್ಳು ಕಥೆ ಹೆಣೆದು, ಮಾತಿನ ಮಂಟಪ ಕಟ್ಟಲು ಹೋಗಿ, ಒಳ್ಳೆಯ ನಾಟಕವೂ ಆಗದೆ, ತಾಂತ್ರಿಕವಾಗಿಯೂ ಉಟ್ಕೃಷ್ಟತೆ ತೋರದೆ ನಿರ್ದೇಶನಕ್ಕೆ ಹಿಂದಿರುಗಿರುವ ಸುನಿಲ್ ಕುಮಾರ್ ದೇಸಾಯಿ ನಿರಾಸೆ ಮೂಡಿಸುತ್ತಾರೆ.

'ದ ಜಂಗಲ್ ಬುಕ್' ಖ್ಯಾತಿಯ ಲೇಖಕ ರಡ್ಯಾರ್ಡ್ ಕಿಪ್ಲಿಂಗ್ ಅವರ 'ಇಫ್' (ಆದರೆ) ಕವನದ ಎರಡು ಸಾಲುಗಳು ಇಂತಿವೆ.

If you can make one heap of all your winnings
    And risk it on one turn of pitch-and-toss,
And lose, and start again at your beginnings
    And never breathe a word about your loss;

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com