ಸಿನೆಮಾದಲ್ಲಿ ಸೊರಗಿದ ಮೂಲಕಥೆಯ ಬೆರಗಿನ ಗಯ್ಯಾಳಿಗಳು

ಕನ್ನಡದ ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಥೆ 'ಕಿರಗೂರಿನ ಗಯ್ಯಾಳಿಗಳು' ಆಧರಿಸಿದ ಅದೇ ಹೆಸರಿನ ಸಿನೆಮಾ, ಮೂಲ ಲೇಖಕರ ವರ್ಚಸ್ಸು ಹಾಗೂ ಯುವ ಪೀಳಿಗೆಯ
ಕಿರಗೂರಿನ ಗಯ್ಯಾಳಿಗಳು ಸಿನೆಮಾ ವಿಮರ್ಶೆ
ಕಿರಗೂರಿನ ಗಯ್ಯಾಳಿಗಳು ಸಿನೆಮಾ ವಿಮರ್ಶೆ

ಕನ್ನಡದ ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಥೆ 'ಕಿರಗೂರಿನ ಗಯ್ಯಾಳಿಗಳು' ಆಧರಿಸಿದ ಅದೇ ಹೆಸರಿನ ಸಿನೆಮಾ, ಮೂಲ ಲೇಖಕರ ವರ್ಚಸ್ಸು ಹಾಗೂ ಯುವ ಪೀಳಿಗೆಯ ಮೇಲೆ ಅವರು ಬೀರಿರುವ ಪ್ರಭಾವಕ್ಕೂ, ಹಾಗು ಹಾಲಿ ನಿರ್ದೇಶಕಿ ಸುಮನಾ ಕಿತ್ತೂರು ಹಿಂದಿನ ಸಿನೆಮಾಗಳಲ್ಲಿ ನಿರೂಪಿಸಿರುವ ತಮ್ಮ ನಿರ್ದೇಶನದ ಶಕ್ತಿಯಿಂದಲೂ ಸಾಕಷ್ಟು ಕುತೂಹಲ ಮೂಡಿಸಿದ್ದು ನಿಜ. ಖ್ಯಾತ ಲೇಖಕರ ಕಥೆಯನ್ನು ಸಿನೆಮಾಗೆ ಅಳವಡಿಸುವುದೆಂದರೆ ಎರಡು ಅಲಗಿನ ಕತ್ತಿಯಿದ್ದಂತೆ. ಒಂದು ಕಡೆ ಬಹಳಷ್ಟು ಪ್ರೇಕ್ಷಕರಿಗೆ ಮೂಲ ಕಥೆ ತಿಳಿದು ಹದ್ದಿನ ದೃಷ್ಟಿಯಿಂದ ಸಿನೆಮಾ ನೋಡುವುರಲ್ಲದೆ, ತಮ್ಮ ಕಲ್ಪನೆಯಲ್ಲಿ ಈಗಾಗಲೇ ಮೂಡಿರುವ ಪಾತ್ರಗಳು, ದೃಶ್ಯಗಳು, ನಿರ್ದೇಶಕ ಕಟ್ಟಿಕೊಡುವ ದೃಶ್ಯಗಳು ಮತ್ತು ಪಾತ್ರಗಳ ನಡುವಿನ ಭಿನ್ನತೆ-ವ್ಯತ್ಯಾಸಗಳು ಸಿನೆಮಾದುದ್ದಕ್ಕೂ ಕಾದಾಡುತ್ತಲೇ ಇರುತ್ತವೆ. ಸುಮನಾ ಕಿತ್ತೂರಿನವರ ಈ ಸಾಹಸ ಪ್ರೇಕ್ಷಕನಿಗೆ ನೀಡಬಹುದಾದ ಅನುಭವ ಎಂತಾದ್ದು?

ಕಿರಗೂರು ಒಂದು ಯುಟೋಪಿಯನ್ ಹಳ್ಳಿ. ಬಲಿಷ್ಠ ಒಕ್ಕಲಿಗರ ಸಮುದಾಯ ಮತ್ತು ಹರಿಜನ ಸಮುದಾಯ ಅನ್ಯೋನ್ಯವಾಗಿ ಇರುವಂತಹ ಪ್ರದೇಶ. ಎರಡೂ ಸಮುದಾಯದ ಸಂದರ ಮಹಿಳೆಯರು ಜೊತೆಗೇ ಕೆಲಸ ಮಾಡುವ, ಒಟ್ಟೊಟ್ಟಿಗೆ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಇಲ್ಲಿ ಮಹಿಳೆಯರದೇ ಮೇಲುಗೈ. ಇಂತಹ ಗ್ರಾಮದಲ್ಲಿ ಉಡಾಳ ಒಕ್ಕಲಿಗ ಗಂಡಸರು ಮತ್ತು ಅವರ ಕೆಲಸಗಳನ್ನು ಮಾಡುವ ಹರಿಜನ ಗಂಡಸರ ಮಧ್ಯೆ ವೈಮನಸ್ಯ ಮೂಡುವಂತೆ ಗ್ರಾಮಸೇವಕ ಶಂಕರಪ್ಪ (ಅಚ್ಯುತ್ ಕುಮಾರ್) ಮತ್ತು ಮಂತ್ರವಾದಿ ಹೆಗಡೆ(ಶರತ್ ಲೋಹಿತಾಶ್ವ) ಚಿತಾವಣೆ ಹೂಡುತ್ತಾರೆ. ಈ ಹಿನ್ನಲೆಯನ್ನು ಇನ್ನೂ ಹತ್ತು ಹಲವು ಉಪಕಥೆಗಳನ್ನು ಕಟ್ಟಿಕೊಡುತ್ತಾ ಹೋಗುವ ಸಿನೆಮಾ, ಪೊಲೀಸ್ ಮತ್ತು ಅಧಿಕಾರಶಾಹಿಯ ಮೇಲೆ ಗ್ರಾಮಸ್ಥರ ಭಯ, ಕಾಳೆಗೌಡ (ಕಿಶೋರ್) ಮತ್ತು ಪತ್ನಿ ನಾಗಮ್ಮ (ಸೋನು ಗೌಡ) ದಂಪತಿಗಳಿಗೆ ಮಕ್ಕಳಾಗದೆ ಇರುವುದು, ನಾಗಮ್ಮನನ್ನು ಕಾಳೇಗೌಡ ಸದಾ ದೂಷಿಸುವುದು, ಎರಡನೆ ಮದುವೆ ಆಗಲು ಹವಣಿಸುವುದು, ಬಿದ್ದ ಮರವನ್ನು ಕುಯ್ಯಲು ನೇಮಿಸಿದ್ದ ಊರಿನ ಹರಿಜನರನ್ನು ಬೇಡವೆಂದು, ಪರವೂರಿನ ಸೋನ್ಸು(ಯೋಗಿ) ಮತ್ತು ರಜಾಕ್ ರನ್ನು ಕರೆತರುವುದು, ಇದು ಸೃಷ್ಟಿಸುವ ಸಂಘರ್ಷಗಳು, ಈ ಸಮಯದಲ್ಲಿ ದಿಮ್ಮಿ ಬೆನ್ನ ಮೇಲೆ ಉರುಳಿ ಭೈರಪ್ಪ(ಸುಂದರ್), ಸುಬ್ಬಯ್ಯ ನಂತರ ಕಾಳೇಗೌಡ ಬೆನ್ನು ಉಳುಕಿಸಿಕೊಳ್ಳುವುದು, ನಕಲಿ ವೈದ್ಯ (ಎಸ್ ನಾರಾಯಣ್) ಬಳಿ ಮೋಸ ಹೋಗುವುದು, ಹಿಂದಿನ ವೈಷಮ್ಯದಿಂದ, ಊರಿನಲ್ಲೇ ಉಳುಕು ಬಿಡಿಸುವ ಜನಪ್ರಿಯ ನಾಟಿ ವೈದ್ಯ, ದಲಿತ ಕರಿಯನ ಬಳಿ ಸಹಾಯ ಕೇಳಲು ಮುಜುಗರ ಪಡುವುದು, ಕಾಳೆಗೌಡನ ಹೆಂಡತಿ ನಾಗಮ್ಮ ಮಲೆಯಾಳಿ ವೈದ್ಯನ ಜೊತೆಗೆ ಓಡಿಹೋಗುವುದು, ಇದಕ್ಕೆ ಪಂಚಾಯಿತಿ ಕರೆದು - ಕೊನೆಗೆ ಇದಕ್ಕೆಲ್ಲಾ ಕಾರಣಪುರುಷರಾದ ಶೇಂದಿ ಅಂಗಡಿ ನಡೆಸುವ ಗ್ರಾಮಸೇವಕ ಶಂಕರಪ್ಪ ಮತ್ತು ಮಂತ್ರವಾದಿ ಹೆಗಡೆಯವರಿಗೆ ಸುಬ್ಬಯ್ಯನ ಹೆಂಡತಿ ದಾನಮ್ಮ(ಶ್ವೇತಾ ಶ್ರೀವಾಸ್ತವ್) ಮತ್ತು ಕರಿಯನ ಹೆಂಡತಿ (ಸುಕೃತಾ ವಾಘ್ಲೆ) ಶಾಸ್ತಿ ಮಾಡುವುದು ಮತ್ತು ಊರಿನ ಗಂಡಸರಿಗೆಲ್ಲಾ ದನಕ್ಕೆ ಬಡಿಯುವ ಹಾಗೆ ಬಡಿದು, ಸಾರಾಯಿ ಅಂಗಡಿಯನ್ನು ಸುಡುವುದು ಹೀಗೆ ಹತ್ತಾರು ದಾರಿಯಲ್ಲಿ ನುಗ್ಗುತ್ತದೆ.

ಸಿನೆಮಾದ ಕೇಂದ್ರ ಬಿಂದು ಇದೇ ಎಂಬುದಿಲ್ಲ, ಎಲ್ಲ ಘಟನೆಗಳೂ ಇಲ್ಲಿ ಮುಖ್ಯ ಎನ್ನುವುದೇ ಕಥೆಯ ಗಟ್ಟಿತನವಾದರೂ, ಎರಡೂವರೆ ಘಂಟೆಯ ಅವಧಿಯಲ್ಲಿ ಇಷ್ಟೊಂದು ಕಥೆಗಳನ್ನು-ಘಟನೆಗಳನ್ನು-ಪಾತ್ರಗಳನ್ನು ಒತ್ತೊತ್ತಾಗಿ ತುರುಕಿ ಉಸಿರುರುಗಟ್ಟಿಸುವ ಅನುಭವ ಪ್ರೇಕ್ಷಕನಿಗೆ. ಇದರ ಜೊತೆಗೆ ಈ ಕಥೆ ನಡೆಯುವ ಹಿಂದಿನ ಕಾಲಕ್ಕೆ ಪ್ರೇಕ್ಷಕ ಜಾರಬೇಕಿರುವುದು ಕೂಡ ಒಂದು ತೊಡಕೇ! ಎತ್ತಿನ ಗಾಡಿಯಲ್ಲೇ ಪ್ರಯಾಣಿಸುವ, ರಾಗಿ ಕಣ, ಮೊರದಲ್ಲಿ ರಾಗಿ ಹೊಟ್ಟು ತೂರುವ, ಹೊಳೆಯಲ್ಲಿ ಸ್ನಾನ ಮಾಡುವ ದೃಶ್ಯಗಳಿಂದ ಆ ಕಾಲವನ್ನು ಕಲ್ಪಿಸಿಕೊಳ್ಳಬಹುದಾದರೂ ಬಹುಷಃ ಆ ಹಳ್ಳಿಯನ್ನು ಅದರ ಕೇರಿಗಳ ಮೂಲಕ, ಭೌಗೋಳಿಕ ಪರಿಸರದ ಇನ್ನೂ ಹೆಚ್ಚಿನ ವಿವರಗಳ ಮೂಲಕ ಇನ್ನೂ ಸೂಕ್ಷವಾದ ಎಸ್ಟಾಬ್ಲಿಶ್ಮೆಂಟ್ ಅವಶ್ಯಕತೆ ಇತ್ತು ಎಂದೆನಿಸದೆ ಇರದು. ಹಲವಾರು ಕಥೆಗಳನ್ನು ಹೇಳುವ ತೀವ್ರತೆ, ನಿರೂಪಣೆಯ ಅತಿಯಾದ ವೇಗ, ಅತಿಯಾದ ಕಟ್ ಗಳು ಈ ಅಂಶಕ್ಕೆ ತೊಡಕಾಗಿರುವುದಲ್ಲದೆ ಮೂಲ ಕಥೆಯಲ್ಲಿನ ಯುಟೋಪಿಯನ್ ಗುಣಗಳು ಅಂದರೆ ಗ್ರಾಮವೊಂದರಲ್ಲಿ ಮೇಲ್ಜಾತಿಗಳು ಮತ್ತು ಕೆಳಜಾತಿಗಳು ಅನ್ಯೋನ್ಯವಾಗಿರುವುದು, ಎಲ್ಲ ಮಹಿಳೆಯರೂ ಗಟ್ಟಿಗಿತ್ತಿಯರು ಮತ್ತು ವಿಶಾಲ ಮನೋಭಾವದವರು ಎಂಬ ಸುಂದರ ಕಲ್ಪನೆ ಕೂಡ ನೈಜ ಅನುಭವದ ನಿರೀಕ್ಷೆಗೆ ಪೆಟ್ಟು ನೀಡುತ್ತದೆ. ಇವೆಲ್ಲವುದಕ್ಕಿಂತಲೂ ಅತಿ ದೊಡ್ಡ ಆಘಾತ ಎಂದರೆ ನಟನೆ! ಗಯ್ಯಾಳಿಗಳ ಪಾತ್ರದಲ್ಲಿ ಅತಿ ಹೆಚ್ಚು ಸಮಯ ಪಡೆದಿರುವ ಸುಕೃತಾ ವಾಘ್ಲೆ ಮತ್ತು ಶ್ವೇತಾ ಶ್ರೀವಾಸ್ತವ್, ಹಳ್ಳಿ ಮಹಿಳೆಯರನ್ನು ಅಬ್ಬಬ್ಬಾ ಎಂದರೆ ಇಮಿಟೇಟ್ ಮಾಡುತ್ತಿದ್ದಾರೆ ಎಂದೆನ್ನಬಹುದೇ ಹೊರತು ನಟಿಸಿದ್ದಾರೆ ಎಂದೆನಿಸುವುದಿಲ್ಲ. ಹಳ್ಳಿಯ ಪರಿಸರದಲ್ಲಿನ ಮಹಿಳೆಯರ ಪಾತ್ರವನ್ನು ನಿರ್ವಹಿಸಲು ಇವರು ಸಂಪೂರ್ಣ ಸೋತಿದ್ದು, ಸಹಜವಾಗಿ ಮೂಡಬೇಕಿದ್ದ ಬೈಗುಳಗಳ ಸಂಬಾಷಣೆಗಳನ್ನು ದಾಟಿಸುವ ಅತಿರೇಕದ ರೀತಿ ಕಿರಿಕಿರಿ ಉಂಟು ಮಾಡುತ್ತದೆ. ಕಾಳೇಗೌಡನ ಪಾತ್ರದಲ್ಲಿ ನಟಿಸಿರುವ ಕಿಶೋರ್ ಕೂಡ ನಟನೆಯಲ್ಲಿ ಹಿಂಸಿಸುತ್ತಾರೆ. ಸುಂದರ್ ಮತ್ತು ಇತರ ಪೋಷಕ ನಟರ ನಟನೆ ಪರವಾಗಿಲ್ಲ ಎನ್ನಬಹುದು. ಅಚ್ಯುತ್ ಕುಮಾರ್ ಮತ್ತು ಶರತ್ ಲೋಹಿತಾಶ್ವ ಮಾತ್ರ ಎಂದಿನಂತೆ ಚೊಕ್ಕಟವಾಗಿ ನಟಿಸಿರುವ ರೀತಿ ಸಿನೆಮಾದ ಹೈಲೈಟ್.

ಜಾಗೃತಿ ಮೂಡಿಸುವ ಸಿನೆಮಾವಾಗಿ, ಗಂಡಸರ ದಬ್ಬಾಳಿಕೆ-ಉಡಾಳತನ-ಮೂರ್ಖತನ, ಮಹಿಳೆಯರ ಸಂಯಮ ಮತ್ತು ಶಕ್ತಿ, ಕುಡಿತದ ವಿನಾಶ, ಅಧಿಕಾರಶಾಹಿಯ ದಬ್ಬಾಳಿಕೆ ಉಳುಕು ಬಿಡಿಸಲು ಹೋಗಿ ಕಾಳೇಗೌಡನೇ ಬೆನ್ನು ಉಳುಕಿಸಿಕೊಳ್ಳುವಂತಹ ಹಾಸ್ಯ ಸನ್ನಿವೇಶಗಳು ಇವೆಲ್ಲವೂ ಬಹಳ ಶಕ್ತಿಯುತವಾಗಿ ಮೂಡಿ ಬಂದಿದ್ದರೆ, ನೈಸರ್ಗಿಕ ಶಬ್ದಗಳ ಮೂಲಕ ಹಳ್ಳಿಯ ಪರಿಸರ ಕಟ್ಟಿಕೊಡದೆ ಇರುವುದು, ಬಹುತೇಕ ನಟರ ಕೆಟ್ಟ ನಟನೆ, ಅಷ್ಟೇನೂ ಹಿತವಲ್ಲದ ಹಿನ್ನಲೆ ಸಂಗೀತ, ಪರಿಣಾಮಕಾರಿಯಾಗದ ಛಾಯಾಗ್ರಹಣ ಮತ್ತು ಸಂಕಲನ, ಸಿನೆಮಾದ ವಿಪರೀತ ವೇಗ ಹಿನ್ನಡೆಯಾಗಿ ಪರಿಣಮಿಸಿದ್ದು ನಿರೀಕ್ಷೆಯ ಮಹಾಭಾರವನ್ನು ಹೊತ್ತಿದ್ದ ಸುಮನಾ ಕಿತ್ತೂರು ಭಾಗಶಃ ಯಶಸ್ವಿಯಾಗಿದ್ದಾರೆ ಎಂದಷ್ಟೇ ಹೇಳಬಹುದು.

ಸಿನೆಮಾ ನೋಡಿ ಮುಗಿಸಿದ ಮೇಲೆ ಪ್ರೇಕ್ಷಕರು ಕಿರಗೂರಿನ ಗಯ್ಯಾಳಿಗಳಂತಾಗಿ, ಚಿತ್ರತಂಡದ (ಕಿರುಗೂರಿನ ಗಂಡಸರಂತೆ) ಮೇಲೆ ವಾಕ್ ಪ್ರಹಾರ ನಡೆಸಿದರೆ, ಅದು ಕಿರಗೂರಿನ ಗಯ್ಯಾಳಿಗಳು ತಮ್ಮ ಗಂಡಸರ ಮೇಲೆ ಇಟ್ಟಿದ್ದ ಪ್ರೀತಿ ಮತ್ತು ಕಾಳಜಿತಂತೆಯೇ! ಈ ಚಿತ್ರತಂಡ ಮುಂದೆಯೂ ಇಂತಹ ರಿಸ್ಕ್ ಗಳಿಗೆ ಅಣಿಯಾಗಿ, ಅಸಲಿ ಕಿರಗೂರಿನ ಗಯ್ಯಾಳಿಗಳಂತಾಗಲಿ.

-guruprasad.n@kannadaprabha.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com