ದೆವ್ವ ಭೂತಗಳ ಭ್ರಾಂತಿನ ಮೂಲಕ ಸೇಡಿನ 'ರಣತಂತ್ರ'.. ಅತಂತ್ರ!

ತನ್ನ ಮೇಲೆ ಹಲ್ಲೆ ನಡೆಸಿದ ಮಹಿಳೆಯರ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವ ಎಲ್ ಐ ಸಿ ಏಜೆಂಟ್ ಯುವಕ ಸಂಸ್ಕೃತಿ ಬಗ್ಗೆ ಉದ್ದದ ಭಾಷಣ ಬಿಗಿಯುವ ಮೂಲಕ ಸಿನೆಮಾ ಮುಕ್ತಾಯವಾಗುತ್ತದೆ.
ರಣತಂತ್ರ ಸಿನೆಮಾ ವಿಮರ್ಶೆ
ರಣತಂತ್ರ ಸಿನೆಮಾ ವಿಮರ್ಶೆ

ತನ್ನ ಮೇಲೆ ಹಲ್ಲೆ ನಡೆಸಿದ ಮಹಿಳೆಯರ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವ ಎಲ್ ಐ ಸಿ ಏಜೆಂಟ್ ಯುವಕ ಸಂಸ್ಕೃತಿ ಬಗ್ಗೆ ಉದ್ದದ ಭಾಷಣ ಬಿಗಿಯುವ ಮೂಲಕ ಸಿನೆಮಾ ಮುಕ್ತಾಯವಾಗುತ್ತದೆ. ಅವರು ನಡೆಸಿದ ಹಲ್ಲೆಗಿಂತಲೂ, ಮಹಿಳೆಯರು ರಂಗೋಲಿ ಬಿಡುವ ಕೈನಲ್ಲಿ ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದೇ ತನ್ನ ಸೇಡಿಗೆ ಕಾರಣ ಎಂಬ ರೀತಿಯಲ್ಲಿ ಭಾಷಣ ಮಾಡುವ ಯುವಕ ಸತ್ತ ಮೇಲೂ ದೆವ್ವವಾಗಿ ಇಂತಹ 'ಕಲ್ಚರಲ್ ಕ್ರಿಮಿನಲ್ಸ್'ಗಳನ್ನು (ಸಾಂಸ್ಕೃತಿಕ ಅಪರಾಧಿಗಳು) ಕೊಲ್ಲುತ್ತೇನೆ ಎಂದು ಪಣ ತೊಡುತ್ತಾನೆ. ಹೀಗೆ ಸಂಕುಚಿತ ಸಂಸ್ಕೃತಿ, ಮಹಿಳೆಯರು ಮಾತ್ರ ಚಟಗಳನ್ನು ಬೆಳೆಸಿಕೊಳ್ಳಬಾರದೆಂಬ ಪುರುಷ ದುರಭಿಮಾನ ಮತ್ತು ಬಡ ಯುವಕನ ಅಸಹಕಾಯತೆಗಳ ನಡುವೆ ವಿಚಿತ್ರ-ವಿಕ್ಷಿಪ್ತ ಸಂಬಂಧ ಬೆಸೆಯಲು ಪ್ರಯತ್ನಿಸಿರುವ ನಿರ್ದೇಶಕ ಆದಿರಾಂ ಅವರ 'ರಣತಂತ್ರ' ಸಿನೆಮಾದಲ್ಲಿ ಇನ್ನೇನಿದೆ?

ಮೊದಲ ನೋಟಕ್ಕೆ ಸ್ವರ್ಣಳ (ಹರಿಪ್ರಿಯಾ) ಜೊತೆಗೆ ಲವ್ವಿಗೆ ಬೀಳುವ ಗೌತಮ್ (ವಿಜಯ್ ರಾಘವೇಂದ್ರ) ಅವಳನ್ನು ಒಲಿಸಿಕೊಳ್ಳುತ್ತಾನೆ. ಸ್ವರ್ಣಾಳ ತಂದೆಯ(ಸತ್ಯಜಿತ್) ವಿರೋಧದ ನಡುವೆ, ಓಡಿಸಿಕೊಂಡುಹೋಗಿ ಮದುವೆಯಾಗಿ, ಹನಿಮೂನ್ ಗಾಗಿ ಗೆಳೆಯನ ಒಡೆತನದ ದ್ವೀಪದ ಬಂಗಲೆಯೊಂದಕ್ಕೆ ತೆರಳುತ್ತಾನೆ. ಅಲ್ಲಿ ಎಲ್ಲವೂ ನಿಗೂಢ, ಭಯಂಕರ ಮತ್ತು ಅಲೌಖಿಕ ಅನುಭವಗಳು. ಅಲ್ಲಿಂತ ಹೊರಬರಲು ಸಾಧ್ಯವಾಗದೇ ಹೋಗುತ್ತದೆ. ಇದಕ್ಕೆ ಕಾರಣವೇನು?

ಸಿನೆಮಾದ ಪಾತ್ರಗಳಾಗಲೀ, ರೋಮ್ಯಾನ್ಸ್ ಘಟನೆಗಳು-ದೃಶ್ಯಗಳಾಗಲೀ, ನಾಯಕ ಮತ್ತು ನಾಯಕಿಯ ಪ್ರೀತಿಗೆ/ಮದುವೆಗೆ ಬರುವ ಕಂಟಕ-ಘರ್ಷಣೆಯಾಗಲೀ ಎಲ್ಲವೂ ಈ ಹಿಂದೆ ಬಹಳಸ್ಟು ಸಿನೆಮಾಗಳಲ್ಲಿ ಇನ್ನಿಲ್ಲದಂತೆ ಬಳಕೆಯಾಗಿರುವ ಕ್ಲೀಶೆಯಿಂದ ಹೊರಬರಲು ನಿರ್ದೇಶಕನಿಗೆ ಸಾಧ್ಯವಾಗಿಲ್ಲ. ಇವುಗಳ ಹೊರತಾಗಿಯೂ, ನಾಯಕ ನಟ ಜೋಡಿ ಹನಿಮೂನ್ ಗಾಗಿ ಭೂತದ ಬಂಗಲೆ ಹೊಕ್ಕಿದ ಮೇಲೆ, ಅಲ್ಲಿ ನಡೆಯುವ ಭಯ-ಭೀತಿಯ ಘಟನೆಗಳಿಗೆ ಕಾರಣ 'ಏನಿರಬಹುದು' ಎಂಬ ಸಣ್ಣ ಕುತೂಹಲವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದ್ದರೂ, ಅಂತ್ಯಕ್ಕಾಗಿ ಹೊಸೆಯುವ ಹೊಚ್ಚ ಹೊಸ ಕಥೆ ಈ ಕುತೂಹಲವನ್ನು ಸಂಪೂರ್ಣವಾಗಿ ಹಾಳುಗೆಡವುತ್ತದೆ. ಇಲ್ಲಿಗೆ ಹಾರರ್ ಸಿನೆಮಾ ಸೇಡಿನ ಕಥೆಯಾಗಿ ಕ್ಲೈಮ್ಯಾಕ್ ಕಾಣುತ್ತದೆ! ಆದರೆ ಸೇಡು ತೀರಿಸಿಕೊಳ್ಳುವ 'ರಣತಂತ್ರ'ದ ಯೋಜನೆಗಳ ಬಗ್ಗೆ ಯಾವುದೇ ವಿವರಗಳಿಲ್ಲದೆ ಆ ಭಾಗದ ಕಥೆ ಅತಂತ್ರವಾಗಿದೆ. ಮೊದಲಾರ್ಧದಲ್ಲಿ ನಡೆಯುವ ಘಟನೆಗಳು, ದ್ವಿತೀಯಾರ್ಧದ ಕಥೆಗೆ ಗೊಂದಲ ಮೂಡಿಸಲಷ್ಟೇ ಹೊಸೆದಿರುವುದರಿಂದ, ಸಿನೆಮಾದ ಅವಧಿ ಅಗತ್ಯಕ್ಕಿಂತಲೂ ಲಂಬಿತವಾಗಿದೆ. ಲೀನಿಯರ್ ನಿರೂಪಣೆಯಿಂದ ತುಸು ಆಚೀಚೆ ಹೊರಳಿದ್ದರೆ ಇನ್ನಷ್ಟು ರೋಚಕತೆಯನ್ನು ಮೂಡಿಸಲು ಸಾಧ್ಯವಾಗುತ್ತಿತ್ತೇನೋ! ಹಿನ್ನಲೆ ಸಂಗೀತ ಭಯಭೀತಿಯ ದೃಶ್ಯಗಳಿಗೆ ಪೂರಕವಾಗಿ ಮೂಡಿ ಬಂದಿದ್ದರೂ, ಇನ್ನುಳಿದಂತೆ ಬೇಸರ ಮೂಡಿಸುತ್ತದೆ. ಎಂ ಕಾರ್ತಿಕ್ ಸಂಗೀತ ನಿರ್ದೇಶನಲ್ಲಿ ಮೂಡಿ ಬಂದಿರುವ ಹಾಡುಗಳು ಕೇಳುವುದಕ್ಕೂ ಹಿತವಾಗಿರದೆ, ಸಿನೆಮಾದ ಮೂಡ್ ಗೂ ಪೂರಕವಾಗದೆ ಸಿನೆಮಾದ ಅವಧಿಯನ್ನು ಮತ್ತಷ್ಟು ಲಂಬಿಸಿವೆ. ನಟನೆಯಲ್ಲಿ ವಿಜಯ್ ರಾಘವೇಂದ್ರ, ಹರಿಪ್ರಿಯಾ ಮತ್ತಿತರ ನಟರು ತಮ್ಮ ಪಾತ್ರಗಳಲ್ಲಿ ಚೊಕ್ಕವಾಗಿ ನಟಿಸಿದ್ದರು, ಛಾಯಗ್ರಹಣ ಮತ್ತು ಸಂಕಲನ ಕೂಡ ಚೊಕ್ಕವಾಗಿದ್ದರೂ, ತಾಜಾತನವಿಲ್ಲದ ಕಥೆ ಮತ್ತು ಪಾತ್ರಗಳು, ಲೀನಿಯರ್ ನಿರೂಪಣೆಯ ಶೈಲಿ, ಮತ್ತು ಸಂಸ್ಕೃತಿಯ ಬಗೆಗಿನ ವಕ್ರ ದೃಷ್ಟಿಯ ಧೋರಣೆ ಮತ್ತು ಅಂತಹ ಹಾಡಿನೊಂದಿಗೆ ಮುಕ್ತಾಯ ಇವೆಲ್ಲವೂ ಸಿನೆಮಾಗೆ ಹಿನ್ನಡೆಯಾಗಿ ಪರಿಣಮಿಸಿದ್ದು, ಆದಿರಾಂ 'ರಣತಂತ್ರ' ಕೈಕೊಟ್ಟು ಅತಂತ್ರವಾಗಿದೆ ಎನ್ನಬಹುದು.

ಪುರುಷ ದುರಭಿಮಾನ (ಮೇಲ್ ಚವನಿಸಂ) ಇತ್ತೀಚಿಗೆ ಕನ್ನಡ ಸಿನೆಮಾಗಳಲ್ಲಿ ಹೇರಳವಾಗಿ ನುಸುಳಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ. ಸಮಾಜವನ್ನು ಕಿತ್ತು ತಿನ್ನುತ್ತಿರುವ ಈ ನೈತಿಕ ಪೊಲೀಸ್ ಗಿರಿ ಸಿನೆಮಾಗಳ ಮೂಲಕ ಅಧಿಕೃತತೆ ಪಡೆದುಕೊಳ್ಳುತ್ತಿರುವುದು, ಪ್ರೇಕ್ಷಕರಿಗೆ ತಪ್ಪು ಸಂದೇಶ ರವಾನಿಸುವುದು ಕಳವಳಕಾರಿ. ಈ ನಿಟ್ಟಿನಲ್ಲಿ ನಿರ್ದೇಶಕರು ತುಸು ಉದಾರಿಗಳಾಗುವುದು ದೃಶ್ಯ ಮಾಧ್ಯಮದ ದೃಷ್ಟಿಯಿಂದ ಹಿತಕರ. ಸಮಾಜಕ್ಕೂ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com