
ನಾಯಕ ನಟ ಪ್ರೀತಿಗೆ ಬಿದ್ದ ೧೪ನೆಯ ದಿನ ಹೂ ಕೊಳ್ಳಲು ಹೋದಾಗ, ಹೂವು ಮಾರುವ ಮಹಿಳೆ ಮಲ್ಲಿಗೆ ಹೂವು ಕೊಳ್ಳಲು ಹೇಳುತ್ತಾಳೆ. ಮಲ್ಲಿಗೆ ಹೂವು ಕಾಮದ ಸಂಕೇತ, ರೋಸ್ ಪ್ರೀತಿಯ ಸಂಕೇತ ಎಂದು ಭಾಷಣ ಬಿಗಿಯುವ ನಾಯಕನಿಗೆ, ಮಲ್ಲಿಗೆ ಹೂವು ಕೊಂಡು ಪಲ್ಲಂಗದ ಮೇಲೆ ಗಂಡಸಾಗ್ತೀಯೋ ಅಥವಾ ಗುಲಾಬಿ ಹಿಡಿದು ಗೆಣಸಾಗ್ತೀಯೋ ಯೋಚನೆ ಮಾಡು ಎನ್ನುವ ಮಹಿಳೆಯ ಮಾತುಗಳು ಸಿನೆಮಾಗೆ ಮೂಡ್ ಸೆಟ್ ಮಾಡುತ್ತವೆ. ಅಲ್ಲಿಂದ ಪ್ರಾರಂಭವಾಗುವ 'ಹಾಫ್ ಮೆಂಟ್ಲು' ನಾಯಕ ನಟನ ಸ್ವಗತಕ್ಕೆ, ಹುಚ್ಚು ಪ್ರೀತಿಗೆ ಮೊದಲೆಲ್ಲಿ ಕೊನೆಯೆಲ್ಲಿ?
ಶಿವು (ಸಂದೀಪ್) ಸಿನೆಮಾದಲ್ಲಿ ಹೊಡೆಯುವ ಡೈಲಾಗ್ ಒಂದರಂತೆ, ಇತರ ಹೆಣ್ಣುಮಕ್ಕಳ ಬಗ್ಗೆ ಆತ ಜೆಂಟಲ್ ಆದರೆ ತನ್ನ ಹುಡುಗಿಯ ಬಗ್ಗೆ ಹಾಫ್ ಮೆಂಟಲ್! ಯುವತಿಯೊಬ್ಬಳ ಜೊತೆಗೆ ಅನುಚಿತವಾಗಿ ವರ್ತಿಸುವ ಯುವಕರನ್ನು ಬಡಿಯುವ ಸಲುವಾಗಿ ಮಧು (ಸೋನು ಗೌಡ) ಕೊಂಡೊಯ್ಯುತ್ತಿದ್ದ ಫೋಟೋ ಒಂದನ್ನು ಶಿವು ಒಡೆದು ಹಾಕುತ್ತಾನೆ. ಈ ಅಪರಾಧಿ ಭಾವ ಮಧುವಿನೊಂದಿಗೆ ಪ್ರೀತಿಗೆ ತಿರುಗುತ್ತದೆ. ಆದರೆ ಈ ಪ್ರೀತಿ ನಿವೇದನೆಯನ್ನು ಮಧು ಒಪ್ಪುತ್ತಾಳೆಯೇ?
ಒಂದು ಉಡಾಳ ಪಾತ್ರ ಸೃಷ್ಟಿಸಿ, ಅಮಾಯಕತೆಯನ್ನು-ಮುಗ್ಧತೆಯನ್ನು ಮತ್ತು ಹಲವು ಒಳ್ಳೆಯ ಗುಣಗಳನ್ನು ಆರೋಪಿಸಿ ಅವನು ಆಕಸ್ಮಿಕವಾಗಿ ಒಬ್ಬಳನ್ನು ಗಾಢವಾಗಿ ಪ್ರೀತಿಸುತ್ತಾನೆ ಎಂಬ ಸವಕಲು ಕಥೆಯ ಎಳೆಯನ್ನಿಟ್ಟುಕೊಂಡು, ಅದನ್ನು ಇನ್ನಿಲ್ಲದಂತೆ ಜಗ್ಗಿ, ನಿರ್ದೇಶಿಸಿರುವ ಈ ಸಿನೆಮಾದ ಯಾವ ಆಯಾಮದಲ್ಲೂ ಹಿತವಾಗಲೀ, ತಾಜಾತನವಾಗಲೀ ಇಲ್ಲ. ಕೆಲಸ ಕಾರ್ಯ ಇಲ್ಲ ಎಂದು ನಾಯಕಿ, ನಾಯಕನ ಪ್ರೀತಿಯನ್ನು ನಿರಾಕರಿಸುವುದಾಗಲೀ, ನಾಯಕ ಮತ್ತು ಅವನ ತಾಯಿಯ ಭಾವನಾತ್ಮಕ ಸಂಬಂಧಗಳಾಗಲಿ ಅಥವಾ ಸಿನೆಮಾದಲ್ಲಿ ನಡೆಯುವ ಇನ್ನಿತರ ಘಟನೆಗಳಾಗಲೀ ಎಲ್ಲವನ್ನೂ ಹಲವಾರು ಸಿನೆಮಾಗಳಲ್ಲಿ ನೋಡಿರುವಂತವೇ! ಅಲ್ಲದೆ ಸವಕಲು ಪಂಚಿಂಗ್ ಡೈಲಾಗ್ ಗಳಿಗೆ, ಹುಡುಗಿಯನ್ನು ಪ್ರೀತಿ ಮಾಡಿ ಸಂತ್ರಸ್ತಾನಾದೆ ಎಂಬ ಭಾವನೆಯ ಪಳೆಯುಳಿಕೆಯ ಸಂಭಾಷಣೆಗಳಿಗೆ ಹೇರಳವಾಗಿ ಜಾಗ ಮಾಡಿಕೊಟ್ಟಿದ್ದು ಪ್ರೇಕ್ಷಕನ ತಾಳ್ಮೆಯನ್ನು ಸಿನೆಮಾ ಪ್ರತಿ ಕ್ಷಣವೂ ಪರೀಕ್ಷೆ ಮಾಡುತ್ತಾ ಸಾಗುತ್ತದೆ. ನಾಯಕ ನಟನಾಗಿ ಮೊದಲ ಬಾರಿಗೆ ನಟಿಸುತ್ತಿರುವ ನಟ ಸಂದೀಪ್, ಬಹುತೇಕ ಸ್ಕ್ರೀನ್ ಸಮಯವನ್ನು ಆಕ್ರಮಿಸಿಕೊಂಡು ಅವರ ಸ್ವಗತ ಮತ್ತು ನಟ ವಿಜಯ್ ದುನಿಯಾ ಸಿನೆಮಾದಲ್ಲಿ ಮಾತನಾಡಿರುವ ರೀತಿಯನ್ನು ಅನುಕರಿಸುವ ರೀತಿ ಎಲ್ಲವೂ ಗಾಯಕ್ಕೆ ಉಪ್ಪು ಸುರಿದಂತಹ ಅನುಭವ. ಸೋನು ಗೌಡ ನಟನೆಯೂ ಪರಿಣಾಮಕಾರಿ ಎನ್ನುವಂತಾದ್ದೇನಿಲ್ಲ. ಇಡಿ ಸಿನೆಮಾದ ಹೈಲೈಟ್ ಎಂದರೆ ಮಳೆಯಲ್ಲಿ ನಡೆಸಿರುವ ಚಿತ್ರೀಕರಣ! ಸಿನೆಮಾದುದ್ದಕ್ಕೂ ಬೀಳುವ ಮಳೆ, ಪ್ರೀತಿ-ಪ್ರೇಮದ ಕಥೆಗೆ ಮೂಡಿಸುವ ಮೂಡ್ ಅನ್ನು ಕಥೆಯಾಗಲೀ, ನಟನೆಯಾಗಲಿ, ಸಂಬಾಷಣೆಯಾಗಲೀ ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗಿಲ್ಲ. ಆ ಮಟ್ಟಕ್ಕೆ ಛಾಯಾಗ್ರಹಣವೊಂದು ಗೆದ್ದಿದೆ ಎನ್ನಬಹುದು. ಭರತ್ ಸಂಗೀತ ನಿರ್ದೇಶನದಲ್ಲಿ ಒಂದೆರಡು ಹಾಡುಗಳು ಬಹಳ ಹಿತವಾಗಿ ಮೂಡಿ ಬಂದಿದ್ದರು, ಸಮಯವಲ್ಲದ ಸಮಯದಲ್ಲೂ ಧುತ್ತೆಂದು ನುಗ್ಗಿ ಬಂದಾಗ ಕನಿವಿಸಿಯಾಗುತ್ತದೆ! ಹಿನ್ನಲೆ ಸಂಗೀತವೂ ಪರವಾಗಿಲ್ಲ. ಒಟ್ಟಿನಲ್ಲಿ ಪರಿಪಕ್ವವಾಗಿ ಬೇಯಿಸದ ಕಥೆಯನ್ನು, ಪಾತ್ರಗಳನ್ನು 'ಹಾಫ್ ಮೆಂಟ್ಲಾ'ಗಿ ಪರಿವರ್ತಿಸಿರುವ ನಿರ್ದೇಶಕ ಲಕ್ಷ್ಮಿ ದಿನೇಶ್ ಕಥೆ-ಸ್ಕ್ರಿಪ್ಟ್ ಹೆಣೆಯುವ ಸಮಯದಲ್ಲಿ ತುಸು ಸಾವಧಾನ ತೋರಬೇಕಿತ್ತಷ್ಟೇ!
ಪ್ರಖ್ಯಾತ ತಾರೆಯರು ಮುಖ್ಯ ಪಾತ್ರದಲ್ಲಿ ನಟಿಸದ ಇಂತಹ ಸಿನೆಮಾ ನಿರ್ದೇಶಿಸುವಾಗ, ಕನ್ನಡ ಚಿತ್ರೋದ್ಯಮವನ್ನು ಕಿತ್ತು ತಿನ್ನುತ್ತಿರುವ 'ಹಿರೋಯಿಸಂ'ಗೆ ತಿಲಾಂಜಲಿ ಇಟ್ಟು ಒಂದು ಮ್ಯಾಜಿಕಲ್ ಎನ್ನಬಹುದಾದ ಒಂದು ಅತ್ಯುತ್ತಮ ಪಾತ್ರವನ್ನೂ, ಒಂದು ಒಳ್ಳೆಯ ಕಥೆಯನ್ನೋ ಸೃಷ್ಟಿಸುವ ಅವಕಾಶ ಇರುತ್ತದೆ. ಆದರೆ ಇಂತಹ ಸಿನೆಮಾದಲ್ಲಿ ಕೂಡ, ಅದೇ 'ಹಿರೋಯಿಸಂ' ಟ್ರ್ಯಾಪ್ ಗೆ ಬೀಳುವ ನಿರ್ದೇಶಕರು, ಅದೇ ಅಸಂಬದ್ಧ ತಾರ ವರ್ಚಸ್ಸನ್ನು, ಅಪರಿಮಿಕ ಶಕ್ತಿಯನ್ನು, ಅಮಾಯಕತೆಯನ್ನು, ಪಕ್ವವಿಲ್ಲದ ಒಳ್ಳೆಯತನವನ್ನು, ಪಂಚಿಂಗ್ ಡೈಲಾಗ್ ಗಳನ್ನು ಮುಖ್ಯ ಪಾತ್ರಕ್ಕೆ ಆರೋಪಿಸಿ, ಈಗಾಗಲೇ ತುಳಿದ ಜಾಡನ್ನೇ ಹಿಂಬಾಲಿಸಿ, ಪೊಳ್ಳುತನ ಪ್ರದರ್ಶಿಸಿ ಹತ್ತರೋಲ್ಲಿ ಹನ್ನೊಂದು ಆಗುವದ ಬದಲು ಉತ್ತಮ ಕಲಾಕೃತಿಯ ಸೃಷ್ಟಿಗೆ ಮನಸ್ಸು ಮಾಡುವುದೊಳಿತು!
Advertisement