'ತಿಥಿ' ಸೆಂಚುರಿ ಹೊಡೆಯಲಿ!

ನಮ್ಮ ಸುತ್ತಮುತ್ತಲಿನ ಜನ-ಪ್ರದೇಶ ಭಾರತೀಯ/ಕನ್ನಡ ಸಿನೆಮಾಗಳಲ್ಲಿ ಸ್ಥಾನ ಪಡೆಯುವುದಿಲ್ಲ ಏಕೆ? ಹುಟ್ಟಿ, ಬೆಳೆದ, ಜೀವಿಸುತ್ತಿರುವ ಪರಿಸರದಲ್ಲಿ ಕಂಡ ಅಸಂಖ್ಯಾತ ಬೆರಗುಗೊಳಿಸುವ
'ತಿಥಿ' ಸಿನೆಮಾ ವಿಮರ್ಶೆ
'ತಿಥಿ' ಸಿನೆಮಾ ವಿಮರ್ಶೆ

ನಮ್ಮ ಸುತ್ತಮುತ್ತಲಿನ ಜನ-ಪ್ರದೇಶ ಭಾರತೀಯ/ಕನ್ನಡ ಸಿನೆಮಾಗಳಲ್ಲಿ ಸ್ಥಾನ ಪಡೆಯುವುದಿಲ್ಲ ಏಕೆ? ಹುಟ್ಟಿ, ಬೆಳೆದ, ಜೀವಿಸುತ್ತಿರುವ ಪರಿಸರದಲ್ಲಿ ಕಂಡ ಅಸಂಖ್ಯಾತ ಬೆರಗುಗೊಳಿಸುವ (ಸಾಮಾನ್ಯರು ಕೂಡ) ಜನರು ನಾವು ನೋಡುವ ಸಿನೆಮಾಗಳಲ್ಲಿ ಪಾತ್ರ ಪಡೆಯುವುದಿಲ್ಲವೇಕೆ? ಒಂದು ವೇಳೆ ಪೊಲೀಸರ ಪಾತ್ರಗಳೋ ವಕೀಲರ ಪಾತ್ರಗಳೋ ಕಂಡು ಬಂದರೂ, ಅವರ ವರ್ತನೆ ಅತಿರೇಕ-ಅಸಹಜವಾಗಿ ಚಿತ್ರಿಸಿರುವ ಸಿನೆಮಾಗಳನ್ನೇ ನಾವು ನೋಡುವುದೇಕೆ? ಇಂತಹ ಪ್ರಶ್ನೆಗಳು ನಿಮಗೆ ಒಮ್ಮೆಯಾದರೂ ಮೂಡಿರಲಿಕ್ಕೆ ಸಾಕು! ಅತಿ ಸಾಧಾರಣ ಮರ ಸುತ್ತುವ ಪ್ರೇಮಕಥೆಯನ್ನೋ, ಪರ ಭಾಷೆಗಳಿಂದ ಆಮದಾದ ಜನರ ಆಕಾಂಕ್ಷೆಗಳನ್ನು ಮಾರುವ ಟಾಲಿವುಡ್-ಬಾಲಿವುಡ್ ರಿಮೇಕ್ ಗಳನ್ನೂ, ಸುತ್ತಿ ಬಳಸಿ ಒಂದೇ ಮಾದರಿಯ ಭೂಗತ ಸಿನೆಮಾಗಳನ್ನು ಹೇರುತ್ತಿರುವ ಚಿತ್ರರಂಗದಿಂದ ಬೇಸತ್ತವರಿಗೆ, ಬಿರು ಬೇಸಿಗೆಯಲ್ಲಿ ಮಳೆಯ ಸಿಂಚನದಂತೆ ಮೂಡಿ ಬಂದಿದೆ ರಾಮ್ ರೆಡ್ಡಿ ನಿರ್ದೇಶನದ 'ತಿಥಿ'.

ಸರಳ ಕಥಾವಸ್ತು ಆದರೆ ಜೀವಂತವಾದದ್ದು - ಮಂಡ್ಯದ ನುದೆಕೊಪ್ಪಲಿನ ಗ್ರಾಮದ ಜೀವನದ ಒಂದು ಭಾಗ, ನಿಜವಾಗಿ ನಿಮ್ಮ ಕಣ್ಣು ಮುಂದೆ ಬಂದು ಹೋಗುವ ಕಥೆ ಪ್ರಾರಂಭವಾಗುವದು 'ಸೆಂಚುರಿ ಗೌಡ' ಊರಿನ ಆಗುಹೋಗುಗಳ ಬಗ್ಗೆ ಕಮೆಂಟರಿ ನೀಡುತ್ತಾ ಕುಳಿತ ದೃಶ್ಯದಿಂದ. ಈ ಹಾಸ್ಯಮಯ-ಪರಿಪೂರ್ಣ ಮೊದಲ ದೃಶ್ಯವೇ ಪ್ರೇಕ್ಷಕನಿಗೆ ಉಲ್ಲಾಸಕರವಾದ ಮೂಡ್ ಮೂಡಿಸಿ, ಆವರಿಸಿಕೊಂಡುಬಿಡುತ್ತದೆ. ಪ್ರೇಕ್ಷಕ ತಮ್ಮ ಜೀವನದ ಒಂದು ಸಣ್ಣ ಭಾಗವನ್ನು ಹಳ್ಳಿಯಲ್ಲಿ ಕಳೆದಿದ್ದರೆ ಇಂತಹ ಪಾತ್ರವನ್ನು ಕಂಡಿರದೆ ಇರನು ಹಾಗೂ ಸಿನೆಮಾದಲ್ಲಿ ಮೂಡುವ ಉಳಿದ ಪಾತ್ರಗಳನ್ನು ಕೂಡ! ಗ್ರಾಮ ಜೀವನವನ್ನೇ ಕಾಣದವರಿಗೂ ಈ ಪಾತ್ರಗಳು ಮನರಂಜಿಸದೆ, ಕುತೂಹಲಿಸದೆ ಬಿಡವು.

'ಸೆಂಚುರಿ ಗೌಡ' ತೀರಿಹೋಗಿ, ಹನ್ನೊಂದನೆಯ ದಿನಕ್ಕೆ ಈ ಅಜ್ಜನ ಕುಟುಂಬ ತಿಥಿ ಮಾಡುವುದರ ನಡುವೆ ನಡೆಯುವ ಘಟನೆಗಳೇ ಸಿನೆಮಾದ ಜೀವಾಳ. ಸೆಂಚ್ಯುರಿ ಗೌಡನ ಮಗ ಗಡ್ಡಪ್ಪನಿಗೆ ಲೌಖಿಕ ಜೀವನದ ಬಗ್ಗೆ ಅನಾಸಕ್ತಿ, ಗಡ್ಡಪನ ಮಗ ತಮ್ಮಣ್ಣನಿಗೆ ಈ ಸಮಯದಲ್ಲಿ ಆಸ್ತಿ ಕೈತಪ್ಪಿ ಹೋಗುವ ಚಿಂತೆ, ತಮ್ಮಣ್ಣನ ಮಗ ಅಭಿಯ ಹುಡುಗಾಟ ಮತ್ತು ಪಡ್ಡೆ ವಯಸ್ಸಿನ ಚಟುವಟಿಕೆಗಳು ಮತ್ತು ಈ ಮೂವರ ನಡುವಿನ ಅಥವಾ ಈ ಮೂರು ಪೀಳಿಗೆಗಳ ನಡುವಿನ ಅಂತರ-ಘರ್ಷಣೆ ಮೂಡಿ ಬಂದಿರುವ ರೀತಿ ಅನನ್ಯವಾಗಿದೆ. ಇದರ ಜೊತೆಗೇ ಬಹಳ ಸಹಜವಾಗಿ ಮೂಡಿರುವ ಊರೂರಿಗೆ ಗುಳೆ ಹೋಗಿ ಕುರಿ ಸಾಕಾಣೆ ಮಾಡುವ ಉತ್ತರ ಕರ್ನಾಟಕದ ಸಮುದಾಯದ ಕಥೆಯೂ ಸೇರಿಕೊಳ್ಳುತ್ತದೆ ಮತ್ತು ಆ ಸಮುದಾಯದ ಯುವತಿಯೊಂದಿಗೆ ಅಭಿಯ ರೋಮ್ಯಾನ್ಸ್, ಇವೆಲ್ಲಾ ಪ್ರೇಕ್ಷನಿಗೆ ಅಲ್ಲಲ್ಲಿ ಕುತೂಹಲ ಮೂಡಿಸಿ, ರೋಮಾಂಚನಗೊಳಿಸಿ, ಹಾಸ್ಯದ ಮನರಂಜನೆ ಎಲ್ಲೂ ಮಾಸದಂತೆ ನೋಡಿಕೊಂಡು-ಕಚಗುಳಿಯಿಟ್ಟು, ವಿಶಿಷ್ಟ ಭಾವನಾಲೋಕಕ್ಕೆ ಕರೆದೊಯ್ಯುತ್ತದೆ.   

ಪ್ರತಿ ದೃಶ್ಯದ ಸಂಯೋಜನೆ ಜೀವಂತಿಕೆಯಿಂದ-ಸಹಜತೆಯಿಂದ ಕೂಡಿದ್ದು ಸಿನೆಮಾ ಒಂದು ಅನುಭವವಾಗಿ ಮೂಡುತ್ತದೆ. ಒಂದು ಗ್ರಾಮದ ಪರಿಸರದಲ್ಲಿ ದಿನನಿತ್ಯದ ಚಟುವಟಿಕೆಗಳು ಇಲ್ಲಿ ಎಷ್ಟು ಪ್ರಾಧಾನ್ಯತೆ ಪಡೆಯುತ್ತವೆ ಎಂಬುದಕ್ಕೆ ಉದಾಹರಣೆಯಾಗಿ - ಗದ್ದೆಗೆ ನೀರು ಕಟ್ಟುವುದಾಗಲೀ, ಬೋರ್ ವೆಲ್ ಗಳು ತೊಂದರೆಗೀಡಾಗುವುದು, ಪಡ್ಡೆ ಯುವಕರು ಸುಲಭ ಹಣಕ್ಕಾಗಿ ಕದ್ದು ಮರಳು ತೆಗೆಯುವುದು, ತೋಪಿನಲ್ಲಿ ಮರ ಕಡೆಯುವುದು, ಮಕ್ಕಳು ಹುಲಿ ಕುರಿ ಆಟವಾಡುವುದು, ಮಹಿಳೆಯರು ಅಡಿಗೆ-ಸಾರು ಮಾಡಲು ಸೊಪ್ಪು ಕೊಯ್ಯುವುದು, ರಾಗಿ ಬೀಸುವ ಯಂತ್ರ, ಮೂಗು ಚುಚ್ಚಿಸಿಕೊಳ್ಳುವುದು - ಇಂತಹ ಸಣ್ಣ ಸಂಗತಿಗಳು ಕೂಡ ಎಲ್ಲೂ ಪೆಚ್ಚಾಗದೆ ಪರಿಣಾಮಕಾರಿಯಾಗಿ ಮೂಡಿರುವುದು ನಿರ್ದೇಶಕ-ಕಥೆಗಾರ ಆ ಗ್ರಾಮದ ಪರಿಸರವನ್ನು ಸೂಕ್ಷವಾಗಿ ಅಧ್ಯಯನ ಮಾಡಿ ಅವುಗಳನ್ನು ಕಥೆಯಲ್ಲಿ ಒಳಗೊಂಡಿರುವ ಶ್ರಮದ ಪ್ರತಿಫಲವಾಗಿವೆ. ಇದರ ಜೊತೆಗೆ ಕಳೇಬರದ ಜಾತ್ರೆ, ಆ ಯಾತ್ರೆಯಲ್ಲಿ ಸಂಗೀತ ಮೂಡಿಸಲು ಬರುವ ಬ್ಯಾಂಡ್, ಕಳೇಬರ ಸುಡುವ ಸನ್ನಿವೇಶ, ತಿಥಿ, ಬಾಡೂಟದ ತಯ್ಯಾರಿ, ಬಾಡುಟ ಸವಿಯುವ ಸನ್ನಿವೇಶಗಳು, ಹರಿಕಥೆ ಹೀಗೆ ಮುಖ್ಯ ಕಥೆಯ ಖಚಿತತೆಗೂ ಎಲ್ಲೂ ಪೆಟ್ಟು ಬಾರದಂತೆ ಸಿನೆಮಾ ಮುಂದುವರೆಯುತ್ತದೆ.

ಬೆರಗು ಮೂಡಿಸುವ ಸಿನೆಮಾದ ಮತ್ತೊಂದು ಆಯಾಮ ಪರಿಸರದ ಶಬ್ದ ಮತ್ತು ಅದನ್ನು ಹಿನ್ನಲೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ರೀತಿ. 'ಸೆಂಚುರಿ ಗೌಡ' ತೀರಿಕೊಂಡಾಗ ಮೇಕೆ, ಕುರಿ, ಆಕಳುಗಳು ಕೂಗುವುದಾಗಲೀ (ಅದು ಪ್ರತಿಕ್ರಿಯೆಯೂ ಆಗಬಹುದು), ನೀರು ಮೇಲೆತ್ತುವ ಬೋರ್ವೆಲ್ ಶಬ್ದವಾಗಲೀ, ರಾಗಿ ಬೀಸುವ ಯಂತ್ರದ ಶಬ್ದವಾಗಲೀ, ಹೊಳೆಯಲ್ಲಿ ಹರಿಯುವ ನೀರಿನ ಶಬ್ದವಾಗಲೀ ಇವೆಲ್ಲವೂ ಸಿನೆಮಾದಲ್ಲಿ ಬೆರೆತು ಸಿನೆಮಾದ ಅನುಭವವನ್ನು ಇಮ್ಮಡಿಗೊಳಿಸುತ್ತವೆ. ಇದರ ಜೊತೆಗೆ ಕಳೇಬರದ ಜಾತ್ರೆಯ ಸಮಯದಲ್ಲಿ ಮೂಡಿ ಬರುವ ಬ್ಯಾಂಡ್ ಸೆಟ್ ಸಂಗೀತ ಕೂಡ ಥೀಮ್ ಸಂಗೀತದ ರೀತಿಯಲ್ಲಿ ಬಳಸಿಕೊಂಡಿದ್ದು ಸಿನೆಮಾ ಮುಗಿದ ಮೇಲೂ ಅದು ಪ್ರೇಕ್ಷಕನಿಗೆ ಕಾಡುತ್ತದೆ. ಘಟನೆಗಳಿಂದ ಘಟನೆಗಳಿಗೆ, ಸಿನೆಮಾ ಜಾರುವ ರೀತಿ ಎಲ್ಲೂ ತೊಡಕೆನ್ನಿಸದೆ, ಕಂಟಿನ್ಯೂಯಿಟಿ ಕಾಯ್ದುಕೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ವೇಗವಾಗಿ ಬೇಕಾದಾಗ ತುಸು ನಿಧಾವಾಗಿ ಚಲಿಸುವ ಈ ಸಿನೆಮಾದಲ್ಲಿ ಚಿತ್ರೀಕರಣ ಮತ್ತು ಸಂಕಲನ ಅತಿ ಪರಿಣಾಮಕಾರಿಯಾಗಿ ಹೊಂದಾಣಿಕೆ ಮಾಡಿಕೊಂಡಿವೆ.

ಇನ್ನು ಬಹುತೇಕ ಯಾರೂ ವೃತ್ತಿಯಿಂದ ನಟರಲ್ಲದ, ಊರಿನ ಗ್ರಾಮಸ್ಥರನ್ನೇ ತೊಡಗಿಸಿಕೊಂಡು ಅಷ್ಟು ಪರಿಣಾಮಕಾರಿಯಾದ ನಟನೆ ಮತ್ತು ಡಬ್ಬಿಂಗ್ ಮಾಡಿಸಿರುವ ಕೆಲಸ ಶ್ಲಾಘನೀಯ. ನುರಿತ ನಟರಿಗೆ ಸಾಧ್ಯವಾಗದ ಅನಿರೀಕ್ಷಿತತೆ-ಹಾವ ಭಾವ ಇಲ್ಲಿ ಸಾಧ್ಯವಾಗಿರುವುದು ವಿಶೇಷ. ಹೀಗೆ ನದೇಕೊಪ್ಪಲು ಗ್ರಾಮದ ಗ್ರಾಮಸ್ಥರನ್ನು ಬಳಸಿ ಕಥೆ ಹೆಣೆದಿರುವ ಈರೇಗೌಡ ಮತ್ತು ಅದನ್ನು ದೃಶ್ಯಕಾವ್ಯವಾಗಿ ಕಟ್ಟಿಕೊಟ್ಟಿರುವ ರಾಮ್ ರೆಡ್ಡಿ ಚೊಚ್ಚಲ ಪ್ರಯತ್ನದಲ್ಲೇ ಸಂಪೂರ್ಣ ಯಶಸ್ವಿಯಾಗಿದ್ದು ಒಂದು ಸಾಕ್ಷ್ಯಚಿತ್ರವನ್ನು ನೋಡುವ ಅನುಭವವಾಗಿಯೂ, ಅಪರಿಮಿತ ಮನರಂಜನೆಯಾಗಿಯೂ, ಸಹಜ ಅನುಭವವಾಗಿಯೂ ಮತ್ತು ಅಲ್ಲಲ್ಲಿ ತಾತ್ವಿಕ-ಆಧ್ಯಾತ್ಮದ ಚರ್ಚೆಯಾಗಿಯೂ ವಿವಿಧ ಮಜಲುಗಳಲ್ಲಿ ತೆರೆದುಕೊಳ್ಳುವ ಸಿನೆಮಾ ನೀಡಿದ್ದಾರೆ.

ವಿಮರ್ಶಕನಾಗಿದ್ದು ನಂತರ ಫ್ರೆಂಚ್ ಹೊಸ ಅಲೆಯ ಸಿನೆಮಾಗಳ ಖ್ಯಾತ ನಿರ್ದೇಶಕನಾಗಿ ಹೊರಹೊಮ್ಮಿದ ಜಾ-ಲಿಕ್ ಗೊಡಾರ್ಡ್ ಹೇಳುವಂತೆ "ಹೇಗೆ ಎಲ್ಲ ಒಳ್ಳೆಯ ಸಾಕ್ಷ್ಯಚಿತ್ರಗಳು ಒಳ್ಳೆಯ ಕಾಲ್ಪನಿಕ ಸಿನೆಮಾಗಳತ್ತ ಹೊರಳುತ್ತವೋ ಹಾಗೆ ಎಲ್ಲ ಒಳ್ಳೆಯ ಕಾಲ್ಪನಿಕ ಕಥೆಯ ಸಿನೆಮಾಗಳು ಸಾಕ್ಷ್ಯಚಿತ್ರದತ್ತ ಹೊರಳುತ್ತವೆ " ಎಂಬ ಮಾತು 'ತಿಥಿ'ಗೆ ಬಹುತೇಕ ಒಪ್ಪಿಗೆಯಾಗುತ್ತದೆ ಮತ್ತು ಈ ನಿಟ್ಟಿನಲ್ಲಿ ತಿಥಿ ಕನ್ನಡ ಚಿತ್ರೋದ್ಯಮಕ್ಕೆ ಸಂಭ್ರಮ ತಂದ ಘಳಿಗೆ. ಕನ್ನಡ ಚಿತ್ರೋದ್ಯಮಕ್ಕೆ ಮಾದರಿಯಾಗಿ ದಾರಿದೀಪವಾಗಲ್ಲ ಸಿನೆಮಾ ಇದಾಗಿದ್ದು ಈ ಸಿನೆಮಾವನ್ನು ವಾಣಿಜ್ಯ ದೃಷ್ಟಿಯಿಂದ ಗೆಲ್ಲಿಸಲು ಕನ್ನಡ ಸಿನೆಮಾ ಅಭಿಮಾನಿಗಳು ಪಣ ತೊಟ್ಟರೆ ಕನ್ನಡ ಚಿತ್ರೋದ್ಯಮದ ಭವಿಷ್ಯ ಉತ್ತಮ ರೀತಿಯಲ್ಲಿ ಬದಲಾವಣೆ ಕಾಣುವ ಕನಸು ಕಾಣಬಹುದು!

-ಗುರುಪ್ರಸಾದ್ 
guruprasad.n@kannadaprabha.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com