ಕನ್ನಡ ಚಿತ್ರೋದ್ಯಮದಲ್ಲಿ ಇತ್ತೀಚೆಗೆ ಹಾರರ್ ಥ್ರಿಲ್ಲರ್ ಗಳದ್ದೇ ಸದ್ದು ಗದ್ದಲ - ಗುಡುಗು ಮಿಂಚು! ಹಾರರ್-ಮಿಸ್ಟರಿ-ಥ್ರಿಲ್ಲರ್ ಸಿನೆಮಾ ಇದು ಎಂಬ ಪ್ರಚಾರದೊಂದಿಗೆ ಕಳೆದ ವಾರ ಪ್ರೇಕ್ಷಕನನ್ನು ಬೆಚ್ಚಿಬೀಳಿಸಿ ರಂಜಿಸಲು ಬಿಡುಗಡೆಯಾಗಿರುವ ಚೊಚ್ಚಲ ನಿರ್ದೇಶಕ ನವನೀತ್ ಅವರ 'ಕರ್ವ' ಶೀರ್ಷಿಕೆಯಿಂದಲಂತೂ ಕುತೂಹಲಕಾರಿಯಾಗಿತ್ತು. ಈ ಕುತೂಹಲವನ್ನು ಸಿನೆಮಾದ ಕಥಾವಸ್ತು-ನಿರೂಪಣೆ ಮತ್ತು ಇತರ ತಾಂತ್ರಿಕ ಆಯಾಮಗಳು ಉಳಿಸಿಕೊಳ್ಳಲು ಸಾಧ್ಯವಾಗಿದೆಯೇ?
ಎರಡು ಸಮಾನಾಂತರ ಹಳಿಗಳಲ್ಲಿ ನಡೆಯುವ ಚಿತ್ರಕಥೆ, ಮೊದಲಿಗೆ ಬಹಳ ಸಾಮಾನ್ಯವಾದ ಮೋಸದ ಮತ್ತು ಭೂತದ ಕಥೆಗಳಂತೆ ಕಂಡರೂ, ಸಮಯ ಕಳೆದಂತೆ ಪ್ರೇಕ್ಷಕನ ಕುತೂಹಲವನ್ನು ಹೆಚ್ಚಿಸುತ್ತಾ, ಅವನ ಊಹೆಗಳನ್ನು ಆಗಾಗ ಅಲುಗಾಡಿಸುತ್ತಾ ಅನಿರೀಕ್ಷಿತ ಅಂತ್ಯದೆಡೆಗೆ ಸಾಗುವ ಸಿನೆಮಾ ಉದ್ದಕ್ಕೂ ಪ್ರೇಕ್ಷಕನ್ನು ತೊಡಗಿಸಿಕೊಳ್ಳುವುದು ಗಮನಾರ್ಹ. ಅಮರೇಶ್ (ಶ್ರೀನಿವಾಸ ಪ್ರಭು) ರಾಜಾ ಬಂಗಲೆಯ ಒಡೆಯ. ನಗರದಿಂದ ಸುಮಾರು ೮೦ ಕಿಲೋ ಮೀಟರ್ ದೂರದಲ್ಲಿರುವ ಈ ಬಂಗಲೆಯಲ್ಲಿ ದೆವ್ವ ಭೂತಗಳಿವೆ ಎಂದು ಗ್ರಾಮಸ್ಥರು ಸುಳ್ಳುಸುದ್ದಿ ಸೃಷ್ಟಿಸಿ, ಹಬ್ಬಿಸಿದ್ದಾರೆ ಎಂದು ಆಪಾದಿಸಿ ಈ ನಿಗೂಢವನ್ನು ಬಯಲು ಮಾಡಲು 'ಹೀಗೂ ಉಂಟೆ' ಕಾರ್ಯಕ್ರಮದ ಮೊರೆ ಹೋಗುತ್ತಾನೆ. ಇಂದು ಕಥೆಯ ಒಂದು ಟ್ರ್ಯಾಕ್ ಆದರೆ, ಧನಿಕ ಉದ್ಯಮಿಯ (ದೇವರಾಜ್) ಮಗ ತಿಲಕ್ (ತಿಲಕ್) ಉಡಾಳ. ಮೈತುಂಬಾ ಸಾಲ ಮಾಡಿಕೊಂಡು ತಂದೆಯ ಉಪೇಕ್ಷೆಗೆ ಒಳಗಾಗಿರುತ್ತಾನೆ. ಉದ್ಯಮಿಯ ಮುದ್ದಿನ ಮಗಳು ಅಮೃತಾಳನ್ನು (ಅನಿಷಾ) ಅಪಹರಿಸುವ ಮೂವರು ಅಪಹರಣಕಾರರು (ರೋಹಿತ್, ಅನು ಪೂವಮ್ಮ, ವಿಜಯ್ ಚೆಂಡೂರ್) ಹಣದ ಬೇಡಿಕೆಯಿಡುತ್ತಾರೆ. ಮಗಳ ಸುರಕ್ಷಿತ ಬಿಡುಗಡೆಗಾಗಿ ಮಗನೊಂದಿಗೆ ೧೦ ಕೋಟಿ ಹಣ ಕಳುಹಿಸುವಂತೆ ಆಗ್ರಹಿಸುತ್ತಾರೆ. ಮುಂದೇನಾಗುತ್ತದೆ?
ಆಸಕ್ತಿದಾಯಕ ಕಥೆ-ಸ್ಕ್ರಿಪ್ಟ್ ಹೆಣೆದಿರುವ ಚೊಚ್ಚಲ ನಿರ್ದೇಶಕ ಅದರ ಬಿಗಿಯನ್ನು ಎಲ್ಲೂ ಸಡಿಲವಾಗದಂತೆ ನಿರೂಪಿಸಿರುವುದು ಕೂಡ ವಿಶೇಷ. ನಿಗೂಢ ಥ್ರಿಲ್ಲರ್ ಗೆ ಅವಶ್ಯಕವಾಗಿರುವ ವೇಗದ ನಿರೂಪಣೆ, ಎರಡು ಹಳಿಗಳಲ್ಲಿ ಚಲಿಸುವ ಕಥೆಗಳು, ಇವೆರಡೂ ಒಂದು ಹಂತದಲ್ಲಿ ಸಂಧಿಸಿ ನೀಡುವ ತಿರುವು ಮತ್ತು ಇವೆಲ್ಲದರ ಜೊತೆಗೆ ಅನವಶ್ಯವಾಗಿ ಸಾಮಾನ್ಯವಾಗಿ ಭಾರತೀಯ ಸಿನೆಮಾಗಳಲ್ಲಿ ಕಂಡುಬರುವ ಕನಸಿನ ಹಾಡುಗಳಗಾಲೀ, ಮತ್ತೊಂದು ಸಮಾನಾಂತರ ಹಾಸ್ಯದ ಟ್ರ್ಯಾಕ್ ಆಗಲೀ, ಅತಿರೇಕದ ಹಿರೋಯಿಸಂ ಆಗಲಿ, ಏಕನಟನನ್ನು ವೈಭವೀಕರಿಸಿ ಅವನ ಸುತ್ತಲಿನ ಸಹನಟರನ್ನು ಕಡೆಗಣಿಸುವ ತಂತ್ರವಾಗಲೀ ಇವ್ಯಾವುದಕ್ಕೂ ಬಲಿಯಾಗದೆ ಇರುವುದು ಕೂಡ ಸಿನೆಮಾದ ಹೆಚ್ಚುಗಾರಿಕೆ.
ಜನಪ್ರಿಯ ಟಿವಿ ಕಾರ್ಯಕಮವೊಂದನ್ನು ಸಿನೆಮಾದ ಸ್ಕ್ರಿಪ್ಟ್ ನ ಭಾಗವಾಗಿ ಬಳಸಿಕೊಂಡ ಸಿನೆಮಾಗಳು ಅತಿ ವಿರಳ ಎನ್ನಬಹುದು. (ಕುಚೋದ್ಯಕ್ಕಾಗಿ ಅವುಗಳನ್ನು ಬಳಸಿಕೊಂಡಿರುವ ಸಿನೆಮಾಗಳು ಹಲವು ಇವೆ). ನಿರ್ದೇಶಕ ಬಿ ಎಂ ಗಿರಿರಾಜ್ ಅವರು 'ಮೈತ್ರಿ'ಯಲ್ಲಿ 'ಕನ್ನಡ ಕೋಟ್ಯಾಧಿಪತಿ' ರಿಯಾಲಿಟಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅದು ಮುಂದುವರೆದಿದೆ ಎಂಬಂತೆ 'ಹೀಗೂ ಉಂಟೆ' ಕಾರ್ಯಕ್ರಮವನ್ನು ಸಿನೆಮಾದ ಪ್ಲಾಟ್ ನ ಭಾಗವಾಗಿ ಇಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದಕ್ಕೆ ಸಿನೆಮಾ ಬಹಳ ಆಪ್ತವಾಗುತ್ತದೆ. ಇದೇ ಮಾತನ್ನು ಕೂಡ ಮಿಮಿಕ್ರಿ ಕಲೆಯನ್ನು ಬಳಸಿಕೊಂಡಿರುವುದಕ್ಕೂ ಹೇಳಬಹುದಾಗಿದೆ. ನಟ ವಿಜಯ್ ಚೆಂಡೂರ್ ಅವರ ಮಿಮಿಕ್ರಿ ಒಂದು ಕಡೆ ಹಾಸ್ಯವಾಗಿ ಮೂಡಿ ಬಂದರೂ ಇದು ಕಥೆಯ ಭಾಗವಾಗಿರುವುದು ವಿಶೇಷ.
ಕಥೆ ಮತ್ತು ನಿರೂಪಣೆಯಲ್ಲಿ ಎಲ್ಲವೂ ನಿಖರ ಎನ್ನಲು ಸಾಧ್ಯವಾಗದೇ ಹೋದರೂ, ಹಾರರ್-ಮಿಸ್ಟರಿ ಸಿನೆಮಾಗಳಲ್ಲಿ ಜನರಿಗೆ ಭಯ ಬೀಳಿಸಲೆಂದೇ ಮ್ಯಾನಿಪ್ಯುಲೇಟ್ ಮಾಡುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದರೂ ಯಾವುದೂ ವಿಪರೀತಕ್ಕೆ ಹೋಗದೆ, ವೇಗದ ನಿರೂಪಣೆ ಮತ್ತು ಉತ್ತಮ ಸಂಕಲನಗಳಿಗೆ, ಅವುಗಳನ್ನು ಮುಚ್ಚಿ ಹಾಕಲು ಸಾಧ್ಯವಾಗಿಸಿದೆ ಅಥವಾ ಆ ನ್ಯೂನತೆಗಳ ಬಗ್ಗೆ ಪ್ರೇಕ್ಷಕ ಹೆಚ್ಚು ಚಿಂತಿಸದಂತೆ ಮುಂದುವರೆಯುತ್ತದೆ. ಕಥೆಯಲ್ಲಿರುವ ಮೋಸ-ವಿಶ್ವಾಸಘಾತುಕತನ-ಭಯ-ಕಿಲಾಡಿತನ ಇವೆಲ್ಲವನ್ನೂ ನಟರ ಭಾವನೆಗಳಲ್ಲಿ ಹೊರತೆಗಯಲು ನಿರ್ದೇಶಕ ಸಫಲರಾಗಿದ್ದಾರೆಯೇ ಎಂಬ ಪ್ರಶ್ನೆಗೂ ಒಪ್ಪಿಕೊಳ್ಳುವುದು ಕಷ್ಟ. ಆದರೆ ಎಲ್ಲ ನಟರಿಗೂ ನಟನೆಯ ಸಮಾನ ಅವಕಾಶ ಸಿಕ್ಕಿ, ತಿಲಕ್, ರೋಹಿತ್, ಅನಿಷಾ, ಅನು ಪೂವಮ್ಮ, ವಿಜಯ್ ಚೆಂಡೂರ್ ಒಂದು ಮಟ್ಟಕ್ಕೆ ನಟನೆಯಲ್ಲಿ ಯಶಸ್ವಿಯಾಗಿದ್ದಾರೆ. ದೇವರಾಜ್, ಶ್ರೀನಿವಾಸ ಪ್ರಭು, ನೆ ಲ ನರೇಂದ್ರಬಾಬು ಮುಂತಾದ ನಟರು ಕೂಡ ಎಂದಿನಂತೆ ತಮ್ಮ ಸಣ್ಣ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಮೋಹನ್ ಅವರ ಚಿತ್ರೀಕರಣ ಕೂಡ ಹಾರರ್ ಸಿನೆಮಾಗೆ ಪೂರಕವಾಗಿದ್ದು, ಭೂತ ಬಂಗಲೆಯ ಸುತ್ತಲಿನ ಪರಿಸರ, ಮತ್ತು ಮನೆಯ ಒಳಾಂಗಣ ದೃಶ್ಯಗಳು ಹಾರರ್ ಸನ್ನಿವೇಶಕ್ಕೆ ಒಗ್ಗುವಂತೆ ನೋಡಿಕೊಂಡಿದ್ದಾರೆ. ಕೆಲವು ಕಡೆ ಹಿನ್ನಲೆ ಪರಿಸರವನ್ನು (ಉದ್ಯಮಿಯ ಭವ್ಯ ಬಂಗಲೆ ತುಸು ನಿರಾಸೆ ಮೂಡಿಸುತ್ತದೆ) ಇನ್ನೂ ಚೆನ್ನಾಗಿ ಕಟ್ಟಿಕೊಡಬಹುದಿತ್ತೇನೋ ಎಂದೆನಿಸದೆ ಇರದು. ರವಿ ಬಸ್ರೂರ್ ಅವರ ಹಿನ್ನಲೆ ಸಂಗೀತ ಕೂಡ ಪೂರಕವಾಗಿ ಮೂಡಿಬಂಡಿದೆ. ಇದು ಹಾರರ್ರಾ ಅಥವಾ ಮಿಸ್ಟರಿಯೇ ಎಂಬ ಊಹೆಗಳನ್ನು ಅಲ್ಲಲ್ಲಿ ಬದಲಿಸುತ್ತಾ, ಮುಂದಿನ ಭಾಗಕ್ಕೆ ಅಣಿಯಾಗುವಂತೆ ಚಿತ್ರವನ್ನು ಅಂತ್ಯಗೊಳಿಸಿರುವುದು ಕೂಡ ಚೊಚ್ಚಲ ನಿರ್ದೇಶಕ ಜಾಣ್ಮೆ ತೋರಿಸಿದೆ ಹಾಗೂ ತಮ್ಮ ಈ ಪಾದಾರ್ಪಣೆಯಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಡ್ಡಿಯಿಲ್ಲ.
ಅತಿಮಾನುಷ ಹಾರರ್ ಸಿನೆಮಾಗಳ ವಿಷಯಕ್ಕೆ ಬಂದಾಗ ಪ್ರೇಕ್ಷಕರು ನೋಡಲು ಹಿಂಜರಿಯುತ್ತಿರುವುದು 'ಇಂದಿನ ಆಧುನಿಕ ದಿನಗಳಲ್ಲಿ ಇವೆಲ್ಲವನ್ನೂ ನಂಬಲು ಸಾಧ್ಯವೇ' ಎಂಬ ಪ್ರಶ್ನೆ! ಈ ಪ್ರಶ್ನೆ 'ಹೀಗೂ ಉಂಟೆ' ಎಂಬ ಜನಪ್ರಿಯ ಟಿವಿ ಕಾರ್ಯಕ್ರಮಕ್ಕೆ ಕೂಡ ಅನ್ವಯವಾದರು, ಸಮಾಜದ ಮುಖ್ಯವಾಹಿನಿಯ ನಂಬಿಕೆ-ಅಧ್ಯಾತ್ಮಿಕತೆಗೆ ಪರ್ಯಾಯವಾಗಿರುವ ಈ ಕಾರ್ಯಕ್ರಮದ ಜನಪ್ರಿಯತೆಯನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ಆದರೆ ಕೇವಲ ಅತಿಮಾನುಷತೆಯನ್ನೇ ವೈಭವೀಕರಿಸಿದೆ, ಅದನ್ನು ಬಳಸಿಕೊಂಡು ಬೇರೆ ಕಥನವನ್ನು ಕಟ್ಟಿಕೊಡುವ ಜಾಣ್ಮೆ ಪ್ರೇಕ್ಷಕನ ಪ್ರಶ್ನೆಗೆ ಸೃಜನಶೀಲ ನಿರ್ದೇಶಕ ನೀಡಬಹುದಾದ ಉತ್ತರವೂ ಸರಿ. ಈ ನಿಟ್ಟಿನಲ್ಲಿ ನಿರ್ದೇಶಕ ನವನೀತ್ ಭಾಗಶಃ ಯಶಸ್ವಿಯಾಗಿದ್ದಾರೆ!
Advertisement