ಪ್ರಾರಂಭವೇ ಇಡೀ ಸಿನೆಮಾಗೆ ಒಂದು ತಾತ್ವಿಕ ಆಯಾಮ ಸೃಷ್ಟಿಸಿ, ಅದರಲ್ಲೇ ಅದನ್ನು ಬಂಧಿಯಾಗಿಸುತ್ತದೆ. ಇದು ಶಕ್ತಿಯೂ ಹೌದು, ಕುಂದುಕೊರತೆಯೂ! ಅಖಿಲಾ ತನ್ನ ಬಾಲ್ಯದಲ್ಲಿ ಕೇಳಿದ ಅಣ್ಣಮ್ಮಯ್ಯ ಕೀರ್ತನೆ 'ನಾನಾಟಿ ಬ್ರಾಟಕು ನಾಟಕಮು' ಬಗ್ಗೆ ಹೇಳುತ್ತಾ ನಡೆದಂತೆ, ಸಿನಿಮಾದಲ್ಲಿನ ಎಲ್ಲ ಪಾತ್ರಗಳ ಬದುಕು ಕೂಡ ಜನನ ಮತ್ತು ಮರಣದ ನಡುವಿನ ನಾಟಕದಲ್ಲಿ ಬಂಧಿಯಾದಂತೆ ನಿರ್ದೇಶಕ ಕಟ್ಟಿಕೊಡುತ್ತಾರೆ. ಆದರೆ ಈ ಜೀವನ ನಾಟಕದ ಯಾತನೆಗಳನ್ನು ಬಹಳ ಧೈರ್ಯವಾಗಿ-ಶಕ್ತಿಯುತವಾಗಿ ಮೂಡಿಸುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ. ತನ್ನ ದೈಹಿಕ ಸ್ಥಿತಿಯಲ್ಲಿ ಎಲ್ಲವೂ ಸರಿಯಾಗಿದ್ದು, ಮದುವೆಯಾಗಿ ಮೂರೂ ವರ್ಷ ಕಳೆದರೂ, ಮಕ್ಕಳಾಗದ ಕಾರಣಕ್ಕೆ ಪರೀಕ್ಷೆಗೆ ಒಡ್ಡಿಕೊಳ್ಳಲು ಸಿಡುಕುವ ಪತಿ. ತನ್ನ ಪತಿ ಯಾವುದನ್ನು ತನ್ನ ಜೊತೆಗೆ ಗಾಢವಾಗಿ ಚರ್ಚಿಸುವುದಿಲ್ಲ, ತನ್ನ ಮದುವೆ ವಿಫಲವಾಯಿತೇ ಎಂದು ಸ್ವಗತದಲ್ಲಿ ಅಖಿಲಾ ಪ್ರಶ್ನಿಸಿಕೊಳ್ಳುವ ದೃಶ್ಯ ಇಂದಿನ ಜೀವನವನ್ನು ಪ್ರತಿಫಲಿಸುವುದಿಲ್ಲವೇ? ಡ್ರಗ್ ಪೆಡಲಿಂಗ್ ದೃಶ್ಯಗಳು, ಸೈಕೋಪಾತ್ ನ ಪರಿಸರ, ನೃತ್ಯಗಾರ್ತಿ ವಿದ್ಯಾಳ ಆಕಾಂಕ್ಷೆಗಳು ಕೂಡ ಬಹಳ ನೈಜವಾಗಿ ಮೂಡಿರುವುದು ವಿಶೇಷ. 'ಮರಣ'ವನ್ನೇ ಸರಪಳಿಯಲ್ಲಿ ಬಂಧಿಸಿದ್ದಕ್ಕೆ, ಸದಾ ಜಾರಿ ಬೀಳುವ ಗುಂಡುಕಲ್ಲನ್ನು ಬೆಟ್ಟದ ಮೇಲೆ ಮತ್ತೆ ಮತ್ತೆ ಸಾಗಿಸುವ ಶಿಕ್ಷೆ ಪಡೆಯುವ ಗ್ರೀಕ್ ಪುರಾಣದ ಸಿಸಿಫಸ್ ಕಥೆಯನ್ನು ಅಖಿಲಾಳ ಮೂಲಕ ಹೇಳಿಸುವ ಮೂಲಕ, ಆಧುನಿಕ ಮನುಷ್ಯನ ಅಸಂಗತ ಜೀವನವನ್ನು ಕಲ್ಲು ತಳ್ಳುಪ ಪುರಾಣಕ್ಕೆ ತಳುಕು ಹಾಕುವ ಅವಕಾಶವನ್ನು ಜಾಣ್ಮೆಯಿಂದ ಉಪಯೋಗಿಸಿಕೊಳ್ಳುವ ನಿರ್ದೇಶಕ ಪ್ರೇಕ್ಷಕನನ್ನು ಚಿಂತನೆಗೂ ಹಚ್ಚುತ್ತಾರೆ. ಯಾವುದೇ ಪಾತ್ರದ ನೈತಿಕತೆಯನ್ನು ವಾಚಾಳಿಯಾಗಿ ಪ್ರಶ್ನಿಸದೆ, ಪ್ರೇಕ್ಷಕರನ್ನು ಬೇಕಂತಲೇ ಪ್ರಭಾವಿಸದೆ, ವಿವೇಚಿಸಲು ಅವಕಾಶ ನೀಡುತ್ತದೆ ಸಿನೆಮಾ.