'ಬದ್ಮಾಶ್' ಬಡಿತಕ್ಕೆ, ಅವನ ಮಾತಿನ ಬರೆಗೆ ಸರ್ವವೂ ತತ್ತರ

ರಾಜಕೀಯ ಥ್ರಿಲ್ಲರ್ ಎಂಬ ಪ್ರಚಾರದೊಂದಿಗೆ ತೆರೆಗೆ ಬಂದ ಧನಂಜಯ್ ನಟನೆಯ 'ಬದ್ಮಾಶ್', ರಾಜಕೀಯಗಳ ಚದುರಂಗದಾಟವನ್ನು ದೃಶ್ಯಮಾಧ್ಯಮದಲ್ಲಿ ಕಟ್ಟಿಕೊಟ್ಟಿರಬಹುದೇನೋ
'ಬದ್ಮಾಶ್' ಸಿನೆಮಾ ವಿಮರ್ಶೆ
'ಬದ್ಮಾಶ್' ಸಿನೆಮಾ ವಿಮರ್ಶೆ
ರಾಜಕೀಯ ಥ್ರಿಲ್ಲರ್ ಎಂಬ ಪ್ರಚಾರದೊಂದಿಗೆ ತೆರೆಗೆ ಬಂದ ಧನಂಜಯ್ ನಟನೆಯ 'ಬದ್ಮಾಶ್', ರಾಜಕೀಯಗಳ ಚದುರಂಗದಾಟವನ್ನು ದೃಶ್ಯಮಾಧ್ಯಮದಲ್ಲಿ ಕಟ್ಟಿಕೊಟ್ಟಿರಬಹುದೇನೋ ಎಂಬ ಕಾರಣಕ್ಕೆ ಕುತೂಹಲ ಕೆರಳಿಸಿದ್ದ ಸಿನೆಮಾ. ಚೊಚ್ಚಲ ನಿರ್ದೇಶಕ ಆಕಾಶ್ ಶ್ರೀವತ್ಸ ಈ ಕುತೂಹಲವನ್ನು ಉಳಿಸಿಕೊಳ್ಳುವ ಸಿನೆಮಾ ಕಟ್ಟಿಕೊಡಲು ಯಶಸ್ವಿಯಾಗಿದ್ದಾರೆಯೇ? 
ಅವನು ಮೂರನೇ ತರಗತಿಯಲ್ಲಿದ್ದಾಗಲೇ ತನ್ನ ಗೆಳೆತಿಗಾಗಿ ಹೊಡೆದಾಡಿ-ಡೈಲಾಗ್ ಹೊಡೆದು 'ಬದ್ಮಾಶ್' (ಧನಂಜಯ್) ಎನಿಸಿಕೊಂಡವನಿಗೆ ಆ ಹೆಸರು ಬೆಳೆದ ಮೇಲೆಯೂ ಉಳಿದುಕೊಂಡುಬಿಡುತ್ತದೆ. ಈಗ ಬೆಟ್ಟಿಂಗ್ ದಂಧೆಯಲ್ಲಿ ಒಂದು ಪಾರ್ಟಿಯ ಹುಡುಗರನ್ನು ಹೊಡೆದು ಮತ್ತೊಂದು ಪಾರ್ಟಿಗೆ ಹಣ ತಂದುಕೊಡುವಂತಹ ಕೆಲಸಗಳನ್ನು ಮಾಡುತ್ತಿರುತ್ತಾನೆ. ಈ ಸಮಯದಲ್ಲಿ ಅಚಾನಕ್ಕಾಗಿ ಪಾರ್ಕ್ ಬೆಂಚಿನ ಮೇಲೆ ಆರ್ ಜೆ ಪ್ರಿಯಾಳನ್ನು(ಸಂಚಿತ ಶೆಟ್ಟಿ) ಕಂಡು ಲವ್ವಾಗುತ್ತದೆ. ಸಂಪರ್ಕ ಕಡಿದುಹೋದ ತನ್ನ ಬಾಲ್ಯದ ಗೆಳತಿ ಅವಳೇ ಎಂದು ತಿಳಿಯುವ ಹೊತ್ತಿಗೆ, ನಯವಂಚಕ ಗೃಹ ಸಚಿವ ಕಿಂಗ್ ರಾಜಶೇಖರ (ಅಚ್ಯುತ್ ಕುಮಾರ್), ಜ್ಯೋತಿಷಿಯೊಬ್ಬರ ಮಾತುಕೇಳಿ ಬದ್ಮಾಶ್ ನ ಪ್ರೀತಿಗೆ ಮುಳುವಾಗುತ್ತಾನೆ. ಮುಂದೇನಾಗುತ್ತದೆ? 
ಈ ಕಥೆ ರಾಜಕಾರಿಣಿಯ ಪಾತ್ರವೊಂದನ್ನು ಒಳಗೊಂಡಿದೆ ಎಂಬುದನ್ನು ಬಿಟ್ಟರೆ, ಸಮಕಾಲೀನ ಅಥವಾ ಇತಿಹಾಸದ ರಾಜಕಾರಣವನ್ನು ಗಟ್ಟಿಯಾಗಿ-ಪರಿಣಾಮಕಾರಿಯಾಗಿ  ಹಿಡಿದಿಡುವ ಯಾವುದೇ ಪ್ರಯತ್ನ ಮಾಡುವುದಿಲ್ಲ. ಜ್ಯೋತಿಷ್ಯವನ್ನು-ಮಾಧ್ಯಮಗಳ ಹುಚ್ಚಾಟವನ್ನು ಅಪಹಾಸ್ಯ ಮಾಡುವ, ಕೆಡುಕಿನ ರಾಜಕಾರಣಿಯ ಪಾತ್ರವನ್ನು ಚಿತ್ರಿಸುವ ಮಾಮೂಲಿ ಕಥಾ ಹಂದರವನ್ನು ಹೊಂದಿರುವ ಈ ಸಿನೆಮಾ ಹೀರೊ ವೈಭವೀಕರಣ ಮತ್ತು ಅವನನ್ನು ಅತಿರೇಕದಿಂದ ಬಿಂಬಿಸುವುದರಿಂದ ಕೂಡ ಹಿಂದುಳಿಯದೆ, ಒಂದು ಮಸಾಲ ಸಿನೆಮಾವಾಗಿ ಮೂಡಿ ಬಂದಿದೆ. ಆ ಮಾಸಾಲಾ ಚಿತ್ರಣದಲ್ಲೂ ಹಲವಾರು ಹುಳುಕುಗಳಿದ್ದು, ನೀರಸತೆಯಿಂದ ನಿದ್ದೆಗೆ ಜಾರಿಸುವ ಶಕ್ತಿ ಇದೆ ನಿರೂಪಣೆಗೆ. ರಾಜಕೀಯ ಥ್ರಿಲ್ಲರ್ ಎಂಬ ವಿಶೇಷಣವಂತೂ ದೂರದ ಮಾತಾಯಿತು ಬಿಡಿ!
ಒಂದು ಒಳ್ಳೆಯ ಮಸಾಲ ಚಿತ್ರದ ಮನರಂಜನಾತ್ಮಕ ಗುಣಗಳು ಕೂಡ ಇಲ್ಲಿ ಗೌಣವಾಗಿವೆ. ಜಾಳು ಜಾಳಾಗಿ ಪೋಣಿಸಿರುವ ಘಟನೆಗಳಲ್ಲಿ ನಿರಂತರತೆಯ ಕೊರತೆ ಎದ್ದು ಕಾಣಿಸುತ್ತದೆ. ಉದಾಹರಣೆಗೆ ನಾಯಕ ನಟಿಯ ಜೊತೆಗೆ ರಾಮಾಯಣ-ಕವಿಗಳ ಪ್ರಶ್ನೆಗಳನ್ನು ಕೇಳುವ ದೃಶ್ಯ ಧುತ್ತೆಂದು ಮೂಡಿ ಬಂದು ಮರೆಯಾಗುತ್ತದೆ. ಇಂತಹ ಅನವಶ್ಯಕ ಘಟನೆಗಳು ಯಥೇಚ್ಛವಾಗಿದ್ದರೆ, ಅದೇ ಒಂದು ಅರ್ಥವಿಲ್ಲದ-ಸೂತ್ರ ಸಂಬಂಧವಿಲ್ಲದ ಫೈಟ್ ನಿಂದ ನಾಯಕನ ಪರಿಚಯ, ನಂತರ ಮೂಡುವ ಒಂದು ಹಾಡು, ನಾಯಕಿಯನ್ನು ಕಾಣುವುದು ಹೀಗೆ ಮಾಮೂಲಿ ಕ್ಲೀಷೆಯ ಕ್ರಮವನ್ನು ಚಾಚು ತಪ್ಪದೆ ಪಾಲಿಸಿದ್ದು, ಎಲ್ಲಿಯೂ ಹೊಸತನ ಕಾಣುವುದಿಲ್ಲ. ಇನ್ನು ಕುತೂಹಲಕ್ಕಾಗಿ ಮತ್ತು ತಿರುವುಗಳಿಗಾಗಿ ಹೆಣೆದಿರುವ ಕಾಗೆ-ಗುಬ್ಬಕ್ಕ ಡೈಮಂಡ್ ಕಥೆ ಕೂಡ ಎಲ್ಲಿಯೂ ಪ್ರೇಕ್ಷಕನನ್ನು ಮೈನವಿರೇಳಿಸುವುದಿಲ್ಲ. ಇನ್ನು ಜ್ಯೋತಿಷ್ಯ, ಮಾಧ್ಯಮಗಳ ಹುಚ್ಚಾಟಗಳನ್ನು ಗೇಲಿ ಮಾಡಲು ಪ್ರಯತ್ನಿಸಿದ್ದರು ಯಾವುವು ಅಷ್ಟು ಪರಿಣಾಮ ಬೀರುವುದಿಲ್ಲ. ಆಯಿಲ್ ಕುಮಾರ್ (ಪ್ರಕಾಶ್ ಬೆಳವಾಡಿ) ಎಂಬ ಪಾತ್ರವನ್ನು ವಿಜಯ್ ಮಲ್ಯ ರೂಪದಲ್ಲಿ ಕಟ್ಟಿಕೊಡಲು ಕೂಡ ನಿರ್ದೇಶಕ ಅನಾವಶ್ಯಕವಾಗಿ ಹೆಣಗಾಡಿದ್ದಾರೆ. ಒಟ್ಟಿನಲ್ಲಿ ಯಾವುದೇ ಪಾತ್ರವಾಗಲಿ, ಯಾವುದೇ ಘಟನೆಯಾಗಲಿ ತಾಜಾತನವಿಲ್ಲದೆ, ಮನಸ್ಸಿನಲ್ಲಿ ನಿಲ್ಲುವುದಿಲ್ಲ. 
ನಟ ಧನಂಜಯ್ ಉದ್ದುದ್ದ ಡೈಲಾಗ್ ಗಳನ್ನು ಹೊಡೆದಿದ್ದಾರೆ, ಒಂದಷ್ಟು ಫೈಟ್ ಗಳನ್ನೂ ಮಾಡಿದ್ದಾರೆ ಎಂಬುದನ್ನು ಹೊರತುಪಡಿಸಿದರೆ, ಪಾತ್ರದ ಪರಿಕಲ್ಪನೆಯಲ್ಲಿನ ತೊಂದರೆಯೂ ಇರಬಹುದು, ಅವರ ನಟನೆಯಲ್ಲಿ ಯಾವುದೇ ಹೆಚ್ಚುಗಾರಿಕೆಯಿಲ್ಲ. ಸಂಚಿತ ಶೆಟ್ಟಿ ಅವರದ್ದು ಕೂಡ ಸಾಧಾರಣ ನಟನೆ. ಸಿನೆಮಾಗೆ ಸ್ವಲ್ಪ ಜೀವ ತುಂಬುವುದೆಂದರೆ ಅಚ್ಯುತ್ ಕುಮಾರ್ ಅವರ ನಟನೆ. ನಯವಂಚಕ-ಕೇಡಿ ಗೃಹಮಂತ್ರಿಯ ಮಾಮೂಲಿ ಪಾತ್ರವನ್ನು ಕೂಡ ತಮ್ಮ ಉತ್ತಮ ಅಭಿನಯದಿಂದ ತುಸು ತಾಜಾ ಎಂಬಂತೆ ಕಾಣಿಸಲು ಸಹಕರಿಸಿದ್ದಾರೆ. ಉಳಿದಂತೆ ಶ್ರೀನಿವಾಸ ಪ್ರಭು, ಪ್ರಕಾಶ್ ಬೆಳವಾಡಿ, ರಮೇಶ್ ಭಟ್, ಬಿ ಸುರೇಶ, ಸುಚೇಂದ್ರ ಪ್ರಸಾದ್ ಮುಂತಾದ ಪೋಷಕ ನಟರು ಎಂದಿನಂತೆ ಸಹಕರಿಸಿದ್ದಾರೆ. ಜುಡಾ ಸ್ಯಾಂಡಿ ಅವರ ಅಬ್ಬರದ ಸಂಗೀತದಲ್ಲಿ ಮೂಡಿರುವ ಹಾಡುಗಳು, ಇತ್ತ ಸಿನೆಮಾ ಮೂಡಿಸುವ ಬೇಸರದಿಂದ ಬ್ರೇಕ್ ನೀಡಿ ಪ್ರೇಕ್ಷಕನಿಗೆ ತಾತ್ಕಾಲಿಕ ಸಂತಸ ನೀಡಲು ಕೂಡ ವಿಫಲವಾಗಿದೆ. ಇತರ ತಾಂತ್ರಿಕ ಆಯಾಮಗಳು ಕೂಡ ಸಿನೆಮಾವನ್ನು ಎತ್ತಿಹಿಡಿಯಲು ವಿಫಲವಾಗಿವೆ. 
ತಮ್ಮ ಚೊಚ್ಚಲ ಸಿನೆಮಾದಲ್ಲಿ ತಾಜಾತನದಿಂದ ಕುಡಿದ ಯಾವುದನ್ನೂ ಹೇಳಲು ಸಾಧ್ಯವಾಗದೆ, ಮಸಾಲ ಸಿನೆಮಾದ ನಿರೂಪಣಾ ತಂತ್ರಕ್ಕೆ ಮೊರೆ ಹೋಗಿ, ಅಲ್ಲಿ ಕೂಡ ಲಲವಿಕೆಯಿಂದ ಕೂಡಿರದ ಸಿನೆಮಾವನ್ನು ನೀರಸವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಆಕಾಶ್ ಶ್ರೀವತ್ಸ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com