ಲೈವ್ ಮರ್ಡರ್ ಸಿದ್ಧಾಂತಿ, ಸೇಡಿನ ಸೂಪರ್ ಹೀರೊ 'ಜಾಗ್ವಾರ್' ಪುರಾಣ

ಹಾಗೆ ನೋಡಿದರೆ, ಕನ್ನಡ ಚಿತ್ರರಂಗ-ಬಾಲಿವುಡ್-ಹಾಲಿವುಡ್ ಮತ್ತಿತರ ಚಿತ್ರರಂಗಳ ಕಮರ್ಷಿಯಲ್ ಚಿತ್ರಗಳ ನಾಯಕನಟರ ಪಾತ್ರಗಳು, ಸಾಮಾನ್ಯರಿಗಿಂತಲೂ ಅತಿಶಯದ ಶಕ್ತಿಗಳಿರುವ ಸೂಪರ್
'ಜಾಗ್ವಾರ್' ಸಿನೆಮಾ ವಿಮರ್ಶೆ
'ಜಾಗ್ವಾರ್' ಸಿನೆಮಾ ವಿಮರ್ಶೆ
ಟಿವಿ ವಾಹಿನಿಯೊಂದನ್ನು ಹ್ಯಾಕ್ ಮಾಡಿ, ಕೊಲೆಯೊಂದನ್ನು ನೇರಪ್ರಸಾರ ಮಾಡುವುದಾಗಿ ಒಂದು ಸಂದೇಶ ತೆರೆಯ ಮೇಲೆ ಮೂಡಿದರೂ, ಚಾನೆಲ್ ಮಾಲೀಕ ಶೌರಿ ಪ್ರಸಾದ್ ಟಿ ಆರ್ ಪಿಗೋಸ್ಕರ ಅದನ್ನು ತಡೆಯದೆ ನೇರಪ್ರಸಾರವಾಗುವಂತೆ ನೋಡಿಕೊಳ್ಳುತ್ತಾನೆ. ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ನ್ಯಾಯಾಧೀಶನನ್ನು ಕೊಲೆ ಮಾಡುತ್ತಾನೆ. ಸುಳಿವೇ ಸಿಗದಂತೆ ಮಿಂಚಿ ಮಾಯವಾಗುತ್ತಾನೆ. ಇದರ ತನಿಖೆ ಮಾಡುವ ಸಿಬಿಐ ಅಧಿಕಾರಿ (ಜಗಪತಿ ಬಾಬು), ಕೊಲೆಗಾರನನ್ನು 'ಜಾಗ್ವಾರ್' (ನಿಖಿಲ್ ಕುಮಾರ್) ಎಂದು ಹೆಸರಿಸುತ್ತಾನೆ.
ಹಾಗೆ ನೋಡಿದರೆ, ಕನ್ನಡ ಚಿತ್ರರಂಗ-ಬಾಲಿವುಡ್-ಹಾಲಿವುಡ್ ಮತ್ತಿತರ ಚಿತ್ರರಂಗಳ ಕಮರ್ಷಿಯಲ್ ಚಿತ್ರಗಳ ನಾಯಕನಟರ ಪಾತ್ರಗಳು, ಸಾಮಾನ್ಯರಿಗಿಂತಲೂ ಅತಿಶಯದ ಶಕ್ತಿಗಳಿರುವ ಸೂಪರ್ ಹೀರೋಗಳೇ! ಮಾಮೂಲಿ ಹೀರೋಗಳಿಗಿಂತ ಹೆಚ್ಚಿನ ಮತ್ತು ಅತಿಮಾನುಷ ಶಕ್ತಿಗಳೂ ಇರುವ ಮುಸುಕುಧಾರಿ ಸೂಪರ್ ಹೀರೋಗಳು ಕೂಡ ಹಾಲಿವುಡ್-ಬಾಲಿವುಡ್ ಗಳಲ್ಲಿ ಬಂದು ಹೋಗಿವೆ. ಅಂತಹ ಒಂದು ಸೂಪರ್ ಹೀರೊ ಪಾತ್ರವನ್ನು ಕನ್ನಡ ಚಿತ್ರರಂಗದಲ್ಲಿ ಕಥೆಗಾರ ವಿಜಯೇಂದ್ರ ಪ್ರಸಾದ್ ಸೃಷ್ಟಿಸಿದ್ದಾರೆಯೇ ಎಂಬ ಸಣ್ಣ ಕುತೂಹಲ ನಡುವೆ ಸಿನೆಮಾ ಪ್ರಾರಂಭವಾಗುತ್ತದೆ. ಆದರೆ ಆ ಕುತೂಹಲ ಕೊನೆಯವರೆಗೂ ಉಳಿಯುತ್ತದೆಯೇ?
ವೈದ್ಯಕೀಯ ಕಾಲೇಜಿನ ಸೀನಿಯರ್ ಗಳನ್ನು ರ್ಯಾಗಿಂಗ್ ಮಾಡಿ ಎಂದು ಗೋಗರೆವ, ಕಾಲೇಜಿನ ವಿದ್ಯಾರ್ಥಿನಿಯರ ಜೊತೆಗೆ ಸುಲಭವಾಗಿ ಲಲ್ಲೆ ಹೊಡೆಯುವ, ಅನಾಥ ಹುಡುಗ ಎಂದು ಹೇಳಿಕೊಳ್ಳುವ ಮಾಮೂಲಿ ಹೀರೊ ಎಸ್ ಎಸ್ ಕೃಷ್ಣ ನ ಆಗಮನವಾಗುತ್ತದೆ. ಅಂಧರ ನೋವನ್ನು ಅರ್ಥ ಮಾಡಿಕೊಳ್ಳಲು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪಾರ್ಕಿನಲ್ಲಿ ಅರ್ಧ ಘಂಟೆ ನಡೆದಾಡುವ ಪ್ರಿಯಾಳನ್ನು (ದೀಪ್ತಿ ಸತಿ) ನೋಡಿದ ಮೊದಲ ನೋಟಕ್ಕೆ ಲವ್ ನಲ್ಲಿ ಬೀಳುತ್ತಾನೆ. ದೀಪ್ತಿಯ ಅಣ್ಣ ಆರ್ಯ ಕಾಲೇಜು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ. ಶೌರಿಯ ತಮ್ಮ ಕಾಲೇಜಿನ ಛೇರ್ಮನ್. ಛೇರ್ಮನ್ ಮಗ ಅಜಯ್ ನ ಉಪಟಳ ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಯುತ್ತಿರುವ ಮೋಸ-ದ್ರೋಹ-ದೌರ್ಜನ್ಯವನ್ನು ವಿರೋಧಿಸಿ ಪ್ರತಿಭಟನೆಗೆ ನಿಂತು, ಶೌರಿ ಮತ್ತು ಛೇರ್ಮನ್ ಕೆಂಗಣ್ಣಿಗೆ ಅಜಯ್ ಗುರಿಯಾಗುತ್ತಾನೆ. ಅಜಯ್ ನನ್ನು ಕೊಲ್ಲಿಸಲು ಎನಕೌಂಟರ್ ಸ್ಪೆಷಲಿಸ್ಟ್ ಪೊಲೀಸ್ ಅಧಿಕಾರಿ ಸುಂದರ್ ನನ್ನು ನೇಮಿಸಲಾಗುತ್ತದೆ. ಆದರೆ ಮತ್ತೆ 'ಜಾಗ್ವಾರ್' ಸುಂದರ್ ನನ್ನು ಟಿವಿ ನೇರಪ್ರಸಾರದ ಜೊತೆಗೆ ಕೊಲೆ ಮಾಡಿ ತಪ್ಪಿಸಿಕೊಳ್ಳುತ್ತಾನೆ. ಹಿಡಿಯಲು ಬಂದ ಸಿಬಿಐ ಅಧಿಕಾರಿಯನ್ನು ಉಳಿಸಿ ಅವನ ಸಿಂಪತಿ ಗಿಟ್ಟಿಸಿಕೊಳ್ಳುತ್ತಾನೆ. ತನ್ನ ಮುಂದಿನ ಗುರಿ ಯಾರು ಎಂದು ತನ್ನನ್ನು ಒಳಗೊಂಡಂತೆ ನಾಲ್ಕು ಜನರ ಫೋಟೋಗಳನ್ನು ಅಜಯ್ ಫೋನಿನಿಂದ ಅಧಿಕಾರಿಗೆ ಕಳುಹಿಸಿ ಗೊಂದಲ ಮೂಡಿಸುತ್ತಾನೆ. ಮುಂದೇನಾಗುತ್ತದೆ?
ವಿಜೇಯೇಂದ್ರ ಪ್ರಸಾದ್ ಅವರ ಕಲ್ಪನೆಯ ಮಾಮೂಲಿ ಸೇಡಿನ ಕಥೆಯೊಂದನ್ನು, ತೆರೆಯ ಮೇಲೆ ಮೂಡಿಸಲು ಇನ್ನಿಲ್ಲದ ಹರಸಾಹಸ ಪಟ್ಟಿದ್ದಾರೆ ನಿರ್ದೇಶಕ ಎ ಮಹದೇವ. ಕಾಲೇಜು ವಾತಾವರಣದಲ್ಲಿ ಮೂಡಿ ಬರುವ ಮೊದಲಾರ್ಧದ ಘಟನೆಗಳು ತುಂಬಾ ಪೇಲವವಾಗಿವೆ. ಇನ್ನು ಹೆಚ್ಚು ಲವಲವಿಕೆಯಿಂದ, ಹಾಸ್ಯಮಯವಾಗಿ, ತಾಜಾತನವಾಗಿ ಮೂಡಿಸುವ ವಿಫುಲ ಅವಕಾಶಗಳಿದ್ದರೂ, ಮತ್ತದೇ ಹಿರೋಯಿಸಂಗೆ ಜೋತುಬಿದ್ದಿರುವ ನಿರ್ದೇಶಕ ಅತ್ತ ಗಟ್ಟಿ ಕಥೆಯು ಇಲ್ಲದ, ಇತ್ತ ಮೈನವಿರೇಳಿಸುವ ಅಥವಾ ಮನಮುಟ್ಟುವ ಸಂಭಾಷಣೆ-ಭಾವನಾತ್ಮಕ ಸನ್ನಿವೇಶಗಳು-ಘಟನೆಗಳು ಇಲ್ಲದೆ ಬೇಸರಿಸುತ್ತಾರೆ. ಆಸ್ಪತ್ರೆಯಲ್ಲಿ ತನ್ನ ಗಂಡನನ್ನು ಉಳಿಸಿಕೊಡಿ ಎಂದು ಗೋಳಿಡುವ ಮಹಿಳೆ, ಹಣಕ್ಕಾಗಿ ಪರಿತಪಿಸುವ ವೈದ್ಯರು, ಮಾನವೀಯತೆ ಮೆರೆಯುವ ವೈದ್ಯಕೀಯ ವಿದ್ಯಾರ್ಥಿಗಳು ಇಂತಹ ಒಂದು ಘಟನೆ ಆದರ್ಶಪ್ರಾಯವಾಗಿದ್ದರು, ಈಗಾಗಲೇ ಅದನ್ನು ಸಾವಿರಾರು ಬಾರಿ ನೋಡಿರುವಂತೆ ಭಾಸವಾಗಿ ಮತ್ತು ಅದಕ್ಕೆ ಹೆಚ್ಚೇನೂ ಮಹತ್ವವು ಸಿಗದೆ, ಫಿಲ್ಲರ್ ರೀತಿಯ ದೃಶ್ಯಗಳಾಗಿ ಮಾಯವಾಗುತ್ತವೆ. 
ನಿರೂಪಣೆಯಲ್ಲಿ ಕುತೂಹಲಭರಿತ ತಿರುವುಗಳು ಕೂಡ ಇಲ್ಲ. ಹಿನ್ನಲೆಯ ಕಥೆಯೊಂದನ್ನು ಹೊರತುಪಡಿಸಿದರೆ ಎಲ್ಲವು ಸೀದಾ ಸಾದವಾಗಿ ಮುಂದುವರೆಯುತ್ತದೆ. ಆ ಹಿನ್ನಲೆಯ ಕಥೆ ಕೂಡ 80 ರ ದಶಕದ ಸಂಘರ್ಷವನ್ನು ನೆನಪಿಸುತ್ತದೆಯೇ ಹೊರತು, ಇಂದಿನ ಆಧುನಿಕ ಯುಗದ ತಲ್ಲಣಗಳನ್ನು ಹಿಡಿಯುವ ಯಾವುದೇ ಪ್ರಯತ್ನ ನಿರ್ದೇಶಕ-ಕಥೆಗಾರ ಮಾಡಿಲ್ಲ. ವೈದ್ಯಕೀಯ ಲೋಕದಲ್ಲಿ ನಡೆಯುವ ಮೋಸ ಕೂಡ ಕಥೆಯಲ್ಲಿ ಗೌಣವಾಗಿಬಿಡುತ್ತದೆ. ಸಂಪೂರ್ಣ ಆಕ್ಷನ್ ತಳಹದಿಯ ಮೇಲೆ ಅಮೆಚ್ಯುರಿಶ್ ಕಥೆ ಮತ್ತು ನಿರೂಪಣೆಗೆ ತೃಪ್ತಿ ಪಟ್ಟಿಕೊಂಡಿದ್ದಾರೆ.
ತಾಂತ್ರಿಕವಾಗಿ ಸಿನೆಮಾ ರಿಚ್ ಆಗಿ ಕಾಣಿಸಿಕೊಂಡಿರುವುದು ಆಕ್ಷನ್-ಸೂಪರ್ ಹೀರೊ ಚಿತ್ರಕ್ಕೆ ಪೂರಕವಾಗಿದೆ. ಆ ನಿಟ್ಟಿನಲ್ಲಿ ಸಿನೆಮ್ಯಾಟೋಗ್ರಾಫಿ ಮತ್ತು ಸಾಹಸ ನಿರ್ದೇಶನ ಯಶಸ್ವಿ. ಚೊಚ್ಚಲ ಅಭಿನಯದಲ್ಲಿ ನಿಖಿಲ್ ಕುಮಾರ್ ಆಕ್ಷನ್ ದೃಶ್ಯಗಳಲ್ಲಿ ಮತ್ತು ನೃತ್ಯಗಳಲ್ಲಿ ಪರಿಣಾಮಕಾರಿಯಾಗಿ ನಟಿಸಿದ್ದರು, ಭಾವನಾತ್ಮಕ ದೃಶ್ಯಗಳಲ್ಲಿ, ಮಾತಿನ ದೃಶ್ಯಗಳಲ್ಲಿ ಇನ್ನು ಪಳಗಬೇಕಿದೆ. ದೀಪ್ತಿ ಸತಿ ಆಗಾಗ ಕಂಡು ಮಾಯವಾಗುತ್ತಾರೆ. ಎಸ್ ಎಸ್ ತಮನ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಯಾವುವು ಮನಸ್ಸಿನಲ್ಲಿ ಉಳಿಯುವುದಿಲ್ಲ. ಎಂದಿನಂತೆ ಹಾಸ್ಯನಟ ಸಾಧುಕೋಕಿಲಾ ನಗಿಸುವ ಭರದಲ್ಲಿ, ಅತಿರೇಕವನ್ನು ಮೆರೆದಿದ್ದಾರೆ. ಇನ್ನುಳಿದ ತಾರಾಗಣದ ನಟನೆ ಕೂಡ ಪರವಾಗಿಲ್ಲ.   
ಅತಿ ಮಾನವ-ಸೂಪರ್ ಹ್ಯೂಮನ್ ಸಿದ್ಧಾಂತವನ್ನು 19ನೆಯ ಶತಮಾನದ ಜರ್ಮನ್ ತತ್ವಶಾಸ್ತ್ರಜ್ಞ ಫ್ರೀಡ್ರಿಚ್ ನೀಚ ಅವರಿಗೆ ಆರೋಪಿಸಲಾಗುತ್ತದೆ. ತನ್ನ ಭಾವೋದ್ವೇಗಗಳ ಅರಾಜಕತೆಯನ್ನು ವ್ಯವಸ್ಥಿತವಾಗಿ ಸಂಘಟಿಸಿ, ಅದಕ್ಕೆ ಒಂದು ವಿಭಿನ್ನ ಶೈಲಿ ನೀಡಿ, ಸೃಜನಶೀಲವಾಗಿ ಕೆಲಸ ಮಾಡುವ ಮನುಷ್ಯ, ಮಾನವನ ಸಾಮಾನ್ಯತೆಯನ್ನು ಮೀರುತ್ತಾನೆ ಎಂಬ ಅರ್ಥದಲ್ಲಿ ನೀಚ ವಾದ ಮಾಡಿದ್ದ ಎನ್ನಲಾಗುತ್ತದೆ. ಇದರ ಆಧಾರದಲ್ಲೇ ಸೂಪರ್ ಮ್ಯಾನ್, ಬ್ಯಾಟ್ ಮ್ಯಾನ್ ಮುಂತಾದ ಸೂಪರ್ ಹೀರೊ ಕಾಮಿಕ್ ಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಬಹು ಪ್ರಖ್ಯಾತವಾಗಿದ್ದವು. ಪ್ರಖ್ಯಾತ ನಿರ್ದೇಶಕ ಕ್ರಿಸ್ಟಫರ್ ನೋಲನ್, ಬ್ಯಾಟ್ ಮ್ಯಾನ್ ಸರಣಿ ಚಿತ್ರಗಳನ್ನು ನಿರ್ದೇಶಿಸಿ, ಆ ಸೂಪರ್ ಹೀರೊ ಪಾತ್ರದ ಸುತ್ತ ಒಂದು ಮಾನವೀಯ ಮತ್ತು ಗಹನವಾದ ತತ್ವವನ್ನು ಕೂಡ ಹೆಣೆದಿದ್ದರು. ಇದು ಕೂಡ ಸಿನೆಮಾ ಲೋಕದಲ್ಲಿ ಸಂಚಲನ ಮೂಡಿಸಿದ್ದ ಪಾತ್ರ ಮತ್ತು ಚಿತ್ರ!
ಇಂತಹ ಮಾನವೀಯ ಸೂಪರ್ ಹೀರೊವನ್ನು ಅರಸಿ ಹೊರಟರೆ 'ಜಾಗ್ವಾರ್' ನಿಂದ ನಿರಾಸೆ ಕಟ್ಟಿಟ್ಟಬುತ್ತಿ. ಇಲ್ಲಿನ ಸೂಪರ್ ಹೀರೊ ತತ್ವ, ತನ್ನ ಕುಟುಂಬದವರಿಗೆ ಅನ್ಯಾಯ ಎಸಗಿದವರ ವಿರುದ್ಧ ಸೇಡು ಮಾತ್ರ, ಅದು ಕೊಲೆಯ ರೀತಿಯಲ್ಲಿ. ತಾನು ಸೂಪರ್ ಹೀರೊ ಆಗುವ ನಿಟ್ಟಿನಲ್ಲಿ ಮಾಡಿಕೊಂಡ ಯಾವ ಸಿದ್ಧತೆಗಳು ಕೂಡ ಸಿನೆಮಾದಲ್ಲಿ ಕಾಣುವುದಿಲ್ಲ! ಕಾನೂನು ವ್ಯವಸ್ಥೆಯ ಬಗ್ಗೆ ಎಲ್ಲ ನಂಬಿಕೆ ಕಳೆದುಕೊಂಡ, ಕೊಲೆಯನ್ನು ಹಸಿಹಸಿಯಾಗಿ ನೇರಪ್ರಸಾರ ಮಾಡಬೇಕು ಎಂದು ಹವಣಿಸುವ, ಅತಿ ಸಾಮಾನ್ಯ ಮನಸ್ಸಿನ ಸೂಪರ್ ಹೀರೊ ಜಾಗ್ವಾರ್. ಅನನುಭವಿ ಎ ಮಹದೇವ್ ಈ ಸೂಪರ್ ಹೀರೋನನ್ನು ತಮ್ಮ ಕೈಲಾದ ಮಟ್ಟಕ್ಕೆ ವೈಭವೀಕರಿಸಿ ಕನ್ನಡ ಮತ್ತು ತೆಲುಗು ಸಿನೆಮಾವನ್ನು ಪ್ರೇಕ್ಷಕರ ಮುಂದಿರಿಸಿದ್ದಾರೆ. ಆಕ್ಷನ್ ಮತ್ತು ನೃತ್ಯ ನೆಚ್ಚಿಕೊಂಡವರಷ್ಟೇ ಮೆಚ್ಚಬಹುದೇನೋ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com