ಜಾಗತೀಕರಣದ ಬಿಸಿಯಲ್ಲಿ, ಬಹುರಾಷ್ಟ್ರೀಯ ಲಾಭಕೋರ ಸಂಸ್ಥೆಗಳು ದೇಶೀ ತಳಿಯ ಜಾನುವಾರು, ಸಸ್ಯ, ಧಾನ್ಯಗಳ ಮೇಲೆ ಪ್ರಹಾರ ಮಾಡಿ, ದೂರದೃಷ್ಟಿಯಿಲ್ಲದ-ವಿವೇಕವಿಲ್ಲದ ಜನರ ಅಲ್ಪತನದ ಆಸೆಯಿಂದ, ದೇಶೀ ತಳಿಗಳು, ಜೊತೆಗೆ ಮಾನವ ಸಂಬಂಧಗಳ ಪ್ರೀತಿ ಮತ್ತು ನಂಬಿಕೆ ಕೂಡ ನಶಿಸುತ್ತಿರುವ ಸಾಮಾಜಿಕ ಸಂದರ್ಭದ ಹಿನ್ನಲೆಯಲ್ಲಿ, ಸಿನೆಮಾದಲ್ಲಿ ಮೂಡಿರುವ ಈ ಸಂಘರ್ಷ ಮತ್ತು ಕಾಣುವ ಅಂತ್ಯ ಅರ್ಥಗರ್ಭಿತವಾಗಿ ಕಂಡರೂ, ಪಾತ್ರಗಳ ಸಂಭಾಷಣೆಯ ಆರ್ಭಟ, ಅತಿರೇಕದ ನಟನೆಯ ನಡುವೆ ಅದು ಸವಕಲಾಗಿಬಿಡುತ್ತದೆ. ಅತಿ ಆದರ್ಶಪ್ರಾಯ ಹಿರೋಯಿಕ್ ಪಾತ್ರವೊಂದನ್ನು ಒಂದು ಕಡೆ ಸೃಷ್ಟಿಸಿ ಅದಕ್ಕೆ ಪ್ರತಿಯಾಗಿ ಅಷ್ಟೇ ತೀವ್ರವಾದ ಕೆಡುಕನ್ನು ಸೃಷ್ಟಿಸುವ ಮಾಮೂಲಿ ತಂತ್ರದಿಂದ ಹೊರಬರಲು ನಿರ್ದೇಶಕರಿಗೆ ಸಾಧ್ಯವೇ ಆಗಿಲ್ಲ. ಎಂದಿನಂತೆ ಪ್ರೀತಿ ಮತ್ತು ಮುಗ್ಧತೆಯ ಪಾಠವನ್ನು ನಿರ್ದೇಶಕ ಮುಖ್ಯಪಾತ್ರಧಾರಿಯಿಂದ ಬೋಧಿಸುವುದು ಇಲ್ಲಿ ಕೂಡ ಮುಂದುವರೆದಿದೆ.