ಹಾವಿನ ವೇಷ - ಗ್ರಾಫಿಕ್ಸ್ ರೋಷ - ವಿಷ್ಣು ಒಂಭತ್ತು ನಿಮಿಷ - ಬಹುತೇಕ ನೀರಸ!

ಕನ್ನಡದ ಮೇರು ನಟ ದಿವಂಗತ ಡಾ. ವಿಷ್ಣುವರ್ಧನ್ ಅವರಿಗೆ ಗ್ರಾಫಿಕ್ಸ್ ನಲ್ಲಿ ಮರುಜೀವ ನೀಡಿ ತೆರೆಗೆ ತಂದಿದ್ದೇವೆ ಎಂಬ ಪ್ರಚಾರದೊಂದಿಗೆ, ಅವರ 201 ನೇ ಚಿತ್ರ ಎಂದು ಕೂಡ ಹೇಳಿಕೊಂಡು...
ನಾಗರಹಾವು ಸಿನಿಮಾ ವಿಮರ್ಶೆ
ನಾಗರಹಾವು ಸಿನಿಮಾ ವಿಮರ್ಶೆ
ಕನ್ನಡದ ಮೇರು ನಟ ದಿವಂಗತ ಡಾ. ವಿಷ್ಣುವರ್ಧನ್ ಅವರಿಗೆ ಗ್ರಾಫಿಕ್ಸ್ ನಲ್ಲಿ ಮರುಜೀವ ನೀಡಿ ತೆರೆಗೆ ತಂದಿದ್ದೇವೆ ಎಂಬ ಪ್ರಚಾರದೊಂದಿಗೆ, ಅವರ 201 ನೇ ಚಿತ್ರ ಎಂದು ಕೂಡ ಹೇಳಿಕೊಂಡು ಸಹಜ ಕುತೂಹಲ ಮೂಡಿಸಿದ್ದ ಕೋಡಿ ರಾಮಕೃಷ್ಣ ನಿರ್ದೇಶನದ 'ನಾಗರಹಾವು' ಪ್ರೇಕ್ಷಕನನ್ನು ನಿಜಕ್ಕೂ ಕಾಡುತ್ತದೆಯೇ?  
ಹೀಗೇನೋ ಒಂದು ಅಡಗೂಲಜ್ಜಿ ಕಥೆ: ಯಾವುದೋ ಗತಕಾಲದಲ್ಲಿ ಗ್ರಹಣ ಸಮಯದಲ್ಲಿ ದೇವಿಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುವುದರಿಂದ, ತಮ್ಮ ಶಕ್ತಿಯನ್ನೆಲ್ಲಾ ಒಂದು ಕಳಶದಲ್ಲಿ ಬಂಧಿಸಿ ಭೂಲೋಕದಲ್ಲಿ ಇರಿಸುತ್ತಾರೆ. ಗ್ರಹಣದ ಸಮಯದಲ್ಲಿ ರಾಕ್ಷಸ ಶಕ್ತಿಗಳು ಮೇಲುಗೈ ಪಡೆದು ಆ ಕಳಶವನ್ನು ತಮ್ಮದಾಗಿಸುವ ಹುನ್ನಾರ ನಡೆಸುತ್ತಾರೆ. ನಡುವೆ ಮತ್ಯಾವುದೋ ಒಂದು ಕಾಲದಲ್ಲಿ ಶಿವಭಕ್ತರಾದ ಶಿವಪ್ಪ ಮತ್ತು ಪುತ್ರಿ ನಾಗನಿಕಮ್ಮ ಅದನ್ನು ರಕ್ಷಿಸುತ್ತಾ ಬಂದಿದ್ದಾರೆ. ಒಟ್ಟಿನಲ್ಲಿ ಇಂತಹ ಮಹತ್ತರವಾದ ತೊಂದರೆಯೊಂದು ಕಾಲಗಳಿಂದ ಉಳಿದು ಬಂದಿದೆ. ಕಲಿಗಾಲದಲ್ಲೂ! 
ಕಲಿಗಾಲದ ಕಥೆ: ಇನ್ನು ವಸ್ತುಸಂಗ್ರಹಾಲಯದಲ್ಲಿ ಉಳಿದಿರುವ ಮೇಲಿನ ಕಳಶವನ್ನು, ದೂರದೂರಿನಲ್ಲಿ ನಡೆಯಲಿರುವ ರಾಕ್ ಸಂಗೀತ ಸ್ಪರ್ಧೆಯೊಂದರಲ್ಲಿ ಗೆದ್ದ ಬ್ಯಾಂಡ್ ಗೆ ಪ್ರಶಸ್ತಿಯಾಗಿ ನೀಡಲಾಗುತ್ತದೆ. ಈ ಪ್ರಶಸ್ತಿ ಗೆಲ್ಲಲು ನಾಗಾಚರಣ್ (ದಿಗಂತ್) ಮುಂದಾಳತ್ವದ ಬ್ಯಾಂಡ್ ಇದಕ್ಕೆ ಸಿದ್ಧತೆ ನಡೆಸಿದ್ದರೆ, ಇತ್ತ ಖಳನಾಯಕರಾದ ಒಂದು ಪಡೆ ಕೂಡ ಕಳಶದ ಪ್ರಾಚೀನತ ತಿಳಿದು ಅದನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿದೆ. ಈ ಸಮಯದಲ್ಲಿ ಎಲ್ಲಿಂದಲೋ ಆಗಮಿಸುವ ಮಾನಸ (ರಮ್ಯಾ) ಅಕಾ ನಾಗಕನ್ಯೆ (ಅತಿಮಾನುಷ ಶಕ್ತಿಯುಳ್ಳ) ಮಾನಸಪುರ್ತಿಯಾಗಿ ನಾಗಾಚರಣ್ ಅವರ ಮನೆ ಹೊಕ್ಕುತ್ತಾಳೆ, ಅವನ ಬ್ಯಾಂಡ್ ಸದಸ್ಯಳಾಗಿಯೂ ಸೇರುತ್ತಾಳೆ. ಇವಳ ವಿರೋಧಿ ಕಪಾಲಿ ಭಕ್ತ ಒಬ್ಬ ಕೂಡ ಇರುತ್ತಾನೆ! ಆ ಕಳಶಕ್ಕೆ ಮುಂದೇನಾಗುತ್ತದೆ?
ಇಂತಹ ಒಂದು ವಿವೇಚನಾರಹಿತ ಅಥವಾ ಕಳೆಕಟ್ಟದ ಒಂದು ಕಳಶದ ಕಥೆಯ, ಮೂರ್ನಾಲ್ಕು ಕಾಲಘಟ್ಟಗಳಲ್ಲಿ ನಡೆಯುವ ಒಂದಷ್ಟು ಸನ್ನಿವೇಶಗಳನ್ನು ಸ್ವಲ್ಪವೂ ಸ್ಪಷ್ಟತೆಯಿಲ್ಲದೆ ಹಿಂದಕ್ಕೂ ಮುಂದಕ್ಕೂ ಜಗ್ಗಿ ಪ್ರೇಕ್ಷಕರನ್ನು ಹೈರಾಣಾಗಿಸುವ ಈ ಸಿನೆಮಾಗೆ ತುದಿ ಮೊದಲಿಲ್ಲ. ಆರಂಭದಲ್ಲಿ ವಿಷ್ಣುವರ್ಧನ್ ಅವರಿಗೆ ಗೌರವ ಸೂಚಿಸವ ನಟ ದರ್ಶನ ಅವರನ್ನು ಒಳಗೊಂಡ ಹಾಡನ್ನು ತುರುಕಿರುವುದಕ್ಕೂ ಸಿನೆಮಾದ ಕಥೆಗೂ ಸೂತ್ರ ಸಂಬಂಧವಿಲ್ಲ. ಇನ್ನು ಅಂತ್ಯದವರೆಗೂ ವಿಷ್ಣು ಅವರನ್ನು ಮರೆತಂತೆ ಸಿನೆಮಾ ಮುಂದುವರೆಯುತ್ತದೆ. ಕೆಡುಕು-ಒಳಿತಿನ ಕ್ಯಾರಿಕೇಚರ್ಡ್ ಸಂಘರ್ಷ ಅಡಗೂಲಜ್ಜಿ ಕಥೆಗಳಿಂದ ಹಿಡಿದು, ಬಹುತೇಕ ಸಿನಿಮಾಗಳಲ್ಲೂ ಬಂದು ಮೂಡಿ ಮರೆಯಾಗಿರುವ ಕ್ಲೀಷೆ. ಇದನ್ನೂ ಕೂಡ ಮೊದಲೇ ವಾಚ್ಯವಾಗಿ ಹೇಳಿ ಎಲ್ಲ ಕುತೂಹಲವನ್ನು ಪ್ರೇಕ್ಷಕನ ಮನಸ್ಸಿನಿಂದ ತೊಡೆದುಹಾಕಲಾಗುತ್ತದೆ. ಇನ್ನು ವಿವಿಧ ಕಾಲಘಟ್ಟಗಳಲ್ಲಿ ನಡೆಯುವ ಸನ್ನಿವೇಶಗಳನ್ನು ಮನಬಂದಂತೆ ಬದಲಿಸಿ, ಅನಗತ್ಯ ಗೊಂದಲ ಮೂಡಿಸುವ ನಿರೂಪಣೆ ಶಿವನೇ ಮೆಚ್ಚಬೇಕು. ಇನ್ನು ಒಂದು ದೃಶ್ಯದಲ್ಲಿ ರಂಗಾಯಣ ರಘು ಬಂದು, ಸಾಧು ಕೋಕಿಲಾ ಅವರ ಜೊತೆ ಕುಣಿದು ಮಾಯವಾಗುವುದು ಏಕೆ ಎಂಬುದು ಅರ್ಥವಾಗುವುದೇ ಇಲ್ಲ. ಹಿತವೂ ಅನ್ನಿಸುವುದಿಲ್ಲ! ಈ ಮಧ್ಯದಲ್ಲಿ ಕಳಶ ಕಾಯುವ ಶಿವಪ್ಪ (ಸಾಯಿಕುಮಾರ್) ಅಘೋರಾಧಿಪತಿ ಜೊತೆಗೆ ಕಾದಾಡುತ್ತಾನೆ. ಜೊತೆಗೆ ಇವಳ ಮಗಳು ನಾಗನಿಕೆ ಕೂಡ ಹೊಡೆದಾಡುತ್ತಾಳೆ ಮತ್ತು ಇದ್ದಕ್ಕಿದ್ದಂತೆ ಅವಳು ರೂಪ ಬದಲಾಗಿರುತ್ತದೆ(ರಮ್ಯಾ ಕಾಣಿಸಿಕೊಳ್ಳುತ್ತಾರೆ- ಬಹುಶಃ ಇದು ವಯಸ್ಸಾದ ನಂತರ ರೂಪ ಎಂದುಕೊಳ್ಳಬೇಕೇನೋ!). ಇಂತಹ ಅಂಸಂಬದ್ಧಗಳ ಉಗ್ರಾಣವನ್ನು ಸಹಿಸಿಕೊಳ್ಳಲಾಗದ ಪ್ರೇಕ್ಷಕ ಈ ಹೊತ್ತಿಗೆ ಉಗ್ರರೂಪಿಯಾಗಿರುತ್ತಾನೆ. 
ವಿವಿಧ ಕಾಲಘಟ್ಟಗಳಲ್ಲಿ ವಿವಿಧ ಪಾತ್ರಗಳನ್ನೂ ಪೋಷಿಸಿರುವ ರಮ್ಯಾ ಅವರನ್ನು ಬಿಟ್ಟರೆ ಇನ್ಯಾವ ಪಾತ್ರಗಳಿಗೂ ಇಲ್ಲಿ ಅಂತಹ ಹೆಚ್ಚು ಪ್ರಾಮುಖ್ಯತೆ ಇಲ್ಲ. ಕಳಶ ಕಾಯುವ ಉಗ್ರ ರೂಪಿಯ ಮಹಿಳೆಯಾಗಿ ಉತ್ತಮ ಅಭಿನಯವನ್ನು ನೀಡಿದ್ದಾರೆ ರಮ್ಯಾ. ದಿಗಂತ್ ಅವರಿಗೆ ಹೊಂದಿಕೊಳ್ಳದ ಪಾತ್ರವನ್ನು ಸೃಷ್ಟಿಸಿರುವುದರಿಂದ ಅವರು ನಟನೆಯಲ್ಲಿ ತಿಣುಕಾಡಿದ್ದರೆ, ಅಘೋರಾಧಿಪತಿ ಪಾತ್ರಧಾರಿಯಂತೂ ಅತಿರೇಕವಾಗಿ ನಟಿಸಿ ಬೇಸರಿಸುತ್ತಾರೆ. ರವಿಕಾಳೆ, ಮುಕುಲ್ ದೇವಾ ಉಳಿದಂತೆ ಉಳಿದ ಖಳ ನಾಯಕ ಪಾತ್ರಗಳು ಕೂಡ ಎಂದಿನಂತೆ ಅರುಚಿ ನಟಿಸಿದ್ದಾರೆ. ರಮೇಶ್ ಭಟ್, ಸಾಧು ಕೋಕಿಲಾ ಮುಂತಾದವರು ಅಲ್ಲಲ್ಲಿ ಕಾಣಿಸಿಕೊಂಡರು ಪರಿಣಾಮಕಾರಿಯಾಗಿಲ್ಲ. 
ಅತೀವ ಗ್ರಾಫಿಕ್ಸ್ ನಿಂದ ಮೂಡಿರುವ ಅತಿ ಉದ್ದನೆಯ ಹಾವು, ನಾಗರಹಾವಿನ ಹೆಡೆ ಹೊತ್ತ ಪ್ಲಾಸ್ಟಿಕ್-ರಬ್ಬರ್ ಅನಕೊಂಡದಂತೆ ಕಂಡರೆ, ಝಗಮಗಿಸಿಯುವ ಕಿಡಿಯಂತೆ ಆಗಾಗ-ಅಲ್ಲಲ್ಲಿ  ಮೂಡುವ ಬೆಳಕು ಕೂಡ ಪುರಾಣ ಯುಗವನ್ನು ಹೊಸ ದೃಷ್ಟಿಯಿಂದೇನು ಕಟ್ಟಿಕೊಡುವುದಿಲ್ಲ. ಗ್ರಾಫಿಕ್ಸ್ ನಲ್ಲಿ ಮೂಡಿರುವ ನಟರಾಜನ ವಿಗ್ರಹ ಮಾತ್ರ ಮನಸ್ಸಿನಲ್ಲುಳಿಯುತ್ತದೆ. ಗ್ರಾಫಿಕ್ಸ್ ನಲ್ಲಿ ಮೂಡಿರುವ ವಿಷ್ಣುವರ್ಧನ್ ಕೂಡ ರೋಮಾಂಚನ ಮೂಡಿಸುವುದಿಲ್ಲ. ಅವರ ತುಟಿ ಚಲನೆ ಮತ್ತು ಮಾತುಗಳಿಕೆ ಹೊಂದಾಣಿಕೆಯೇ ಆಗದಂತೆ ಮಾಡಿ ಮುಗಿಸಿದ್ದಾರೆ.  ಗುರುಕಿರಣ್ ಸಂಗೀತದಲ್ಲಿ ಸಾಕಷ್ಟು ಅಬ್ಬರವಿದ್ದರೂ ಒಂದೆರಡು ಹಾಡುಗಳು ಚಿತ್ರಕ್ಕೆ ಹೊಂದಿಕೊಳ್ಳುತ್ತವೆ.
ಪ್ರಾರಂಭದಲ್ಲಿ ಗೌರವ ಸೂಚಿಸುವ ಒಂದು ಹಾಡು ಮತ್ತು ಅಂತ್ಯದಲ್ಲಿ ಗ್ರಾಫಿಕ್ಸ್ ನಲ್ಲಿ ಮೂಡಿಸಿದ ವಿಷ್ಣು ಅವರ ಒಂದು ಆಕ್ಷನ್ ದೃಶ್ಯವನ್ನು ಬಲವಂತವಾಗಿ ಸೇರಿಸಿ ದಂತಕತೆ ವಿಷ್ಣುವರ್ಧನ್ ಅವರ ಹೆಸರನ್ನು ಪ್ರಚಾರಕ್ಕಾಗಿಯೇ ಬಳಸಿದ್ದಾರೇನೋ ಎಂಬ ಸಂದೇಹ ಕೂಡ ಮೂಡದೇ ಇರದು. ಒಟ್ಟಿನಲ್ಲಿ ಸಾಧಾರಣ ಸಂಘರ್ಷದ ಸವಕಲು ಕಥೆಯೊಂದನ್ನು, ಅತಿ ನೀರಸ ಪಾತ್ರಗಳೊಂದಿಗೆ,  ಮತ್ತು ಕೆಟ್ಟ ನಿರೂಪಣಾ ತಂತ್ರದೊಂದಿಗೆ ಹೊಸೆದ, ಒಳ್ಳೆಯ ನಟನೆ ಅಥವಾ ಘಟನೆಗಳು ಕಾಣದ ಸಿನೆಮಾ ನಾಗರಹಾವು ಹೆಡೆ ಬಿಚ್ಚುವುದೇ ಇಲ್ಲ! 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com